ಚೀನಾ ವಿರುದ್ಧ ಹೆಚ್ಚಿನ ಕ್ರಮ ತೆಗೆದುಕೊಳ್ಳಲು ಅಮೆರಿಕಾ ಸಿದ್ಧತೆ ನಡೆಸುತ್ತಿದೆ ಎಂದು ಶ್ವೇತಭವನ ಹೇಳಿದೆ. ಆದರೂ ಅಧ್ಯಕ್ಷೀಯ ಕ್ರಮಗಳು ಏನಾಗಿರಲಿವೆ ಎಂಬುದರ ಬಗ್ಗೆ ಅದು ಸ್ಪಷ್ಟನೆ ನೀಡಿಲ್ಲ.
ಕೊರೊನಾ ಪ್ರಾರಂಭವಾದಾಗಿನಿಂದ ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ಸಂಬಂಧಗಳು ಕ್ಷೀಣಿಸುತ್ತಿವೆ. ಕೊರೊನಾವನ್ನು ಹರಡಿದ್ದಾರೆಂದು ಚೀನಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ.
ಚೀನಾವು ಹಾಂಗ್ ಕಾಂಗ್‌ನಲ್ಲಿ ಹೊಸ ರಾಷ್ಟ್ರೀಯ ಭದ್ರತಾ ಕಾನೂನು ಹೇರಿದೆ. ಅಮೆರಿಕಾದ ಪತ್ರಕರ್ತರ ಮೇಲೆ ಅನೇಕ ನಿರ್ಬಂಧಗಳನ್ನು ಹಾಕಿದೆ. ಉಯ್ಘರ್ಸ್ ಮುಸ್ಲಿಮರ ಚಿಕಿತ್ಸೆ ಮತ್ತು ಟಿಬೆಟ್‌ನಲ್ಲಿನ ಭದ್ರತಾ ಕ್ರಮಗಳ ಬಗ್ಗೆ ಉಭಯ ದೇಶಗಳು ಪರಸ್ಪರ ಕಿಡಿಕಾರಿವೆ.
ಬುಧವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ “ಚೀನಾದ ಬಗ್ಗೆ ನಮ್ಮ ಕ್ರಮಗಳು ಏನೆಂಬುದರ ಬಗ್ಗೆ ಹೇಳುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಚೀನಾಕ್ಕೆ ಸಂಬಂಧಿಸಿದ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಶ್ವೇತಭವನದ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ರಾಜ್ಯ ಕಾರ್ಯದರ್ಶಿ ಸೇರಿದಂತೆ ಉನ್ನತ ಆಡಳಿತ ಅಧಿಕಾರಿಗಳು ಇತ್ತೀಚೆಗೆ ನೀಡಿದ ಹೇಳಿಕೆಗಳಿಗೆ, ಮೆಕ್ ಎನಾನಿ ಪ್ರತಿಕ್ರಿಯಿಸಿದ್ದು, ಮುಂದಿನ ದಿನಗಳಲ್ಲಿ ಅಧ್ಯಕ್ಷರು ಚೀನಾ ವಿರುದ್ಧ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಸುಳಿವು ನೀಡಿದ್ದಾರೆ.
ಹಿಂದಿನ ಬ್ರಿಟಿಷ್ ವಸಾಹತು ಪ್ರದೇಶದ ಹೊಸ ಭದ್ರತಾ ಕಾನೂನನ್ನು ಉಲ್ಲೇಖಿಸಿ ಚೀನಾ ಹಾಂಗ್ ಕಾಂಗ್ ಅನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯೆನ್ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಮುಂಬರುವ ದಿನಗಳು ಮತ್ತು ವಾರಗಳಲ್ಲಿ ನೀವು ಚೀನಾಕ್ಕೆ ಸಂಬಂಧಿಸಿದಂತೆ ಮಹತ್ವದ ಕ್ರಮಗಳನ್ನು ನೋಡಲಿದ್ದೀರಿ ಎಂದು ನಾನು ಭಾವಿಸುತ್ತೇನೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರೀತಿಯಲ್ಲಿ ಚೀನಾದ ವಿರುದ್ಧ ನಿಲ್ಲುವ ಯಾವುದೇ ಅಧ್ಯಕ್ಷರು ಇಲ್ಲ. ಇವರು ವ್ಯಾಪಾರ ಅಸಮತೋಲನವನ್ನು ತಡೆಯಲು ಚೀನಿಯರ ಮೇಲೆ ಹೆಚ್ಚಿನ ಸುಂಕ ವಿಧಿಸಿದ ಮೊದಲ ಅಧ್ಯಕ್ಷರು” ಒಬ್ರಿಯೆನ್ ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರ ಕಳೆದ ವಾರದ ಕಾಮೆಂಟ್‌ಗಳನ್ನು ಉಲ್ಲೇಖಿಸಿ ಒಬ್ರಿಯೆನ್, “ಟಿಕ್‌ಟಾಕ್, ವೀಚಾಟ್ ಮತ್ತು ಅಮೆರಿಕನ್ನರ ವೈಯಕ್ತಿಕ ಮತ್ತು ಖಾಸಗಿ ಡೇಟಾವನ್ನು ಪಡೆಯಲು ಚೀನಾ ಸರ್ಕಾರ ಬಳಸುತ್ತಿರುವ ಕೆಲವು ಇತರ ಅಪ್ಲಿಕೇಶನ್‌ಗಳನ್ನು ಅಮೆರಿಕ ಅಧ್ಯಕ್ಷರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ


