ಸಿಡಿ ಹಗರಣದಲ್ಲಿ ಸಿಲುಕಿ ಸಚಿವ ಸಂಪುಟದಿಂದ ಹೊರಬಿದ್ದಿರುವ ಮಾಜಿ ಜಲಸಂಪನ್ಮೂಲ ಸಚಿವ ಮತ್ತು ರಾಜ್ಯ ಬಿಜೆಪಿಯ ಪ್ರಭಾವಿ ನಾಯಕ ರಮೇಶ್ ಜಾರಕಿಹೋಳಿ ಸಚಿವ ಸಂಪುಟ ಸೇರ್ಪಡೆಗೆ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಿಡಿ ಹಗರಣದಲ್ಲಿ ಅತ್ಯಾಚಾರ ಆರೋಪ ಆ ಸಂಬಂಧ ತನಿಖೆಯನ್ನು ಎದುರಿಸುತ್ತಿರುವ ರಮೇಶ್ ಜಾರಕಿಹೋಳಿಯವರು ತಮ್ಮ ಬೆಂಬಲಿಗರ ಮೂಲಕ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ ಎಂದು ಬಿಜೆಪಿಯ ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕ ಪ್ರವಾಸದ ಸಂದರ್ಭದಲ್ಲಿ ರಮೇಶ್ ಜಾರಕಿಹೋಳಿ ಸಂಪುಟ ಸೇರ್ಪಡೆ ವಿಷಯವನ್ನು ಪ್ರಸ್ತಾಪಿಸಲಿದ್ದೇವೆ ಎಂದು ಬಿಜೆಪಿಯ ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಜೂನ್ 16 ಬುಧವಾರದಂದು 3 ದಿನಗಳ ಕಾಲ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ರಮೇಶ್ ಜಾರಕಿಹೋಳಿ ವಿಚಾರ, ಮುಖ್ಯಮಂತ್ರಿ ಬದಲಾವಣೆ ಗೊಂದಲ, ಸಚಿವ ಸಂಪುಣ ವಿಸ್ತರಣೆ ಹೀಗೆ ಹಲವು ರಾಜಕೀಯ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಆದರೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ಬೇಡಿಕೆ ಮತ್ತು ದೂರುಗಳಿಗೆ ಹೇಗೆ ಸ್ಪಂದಿಸುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ.
ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ರಮೇಶ್ ಜಾರಕಿಹೋಳಿ ಮಹತ್ವದ ಪಾತ್ರವಹಿಸಿದ್ದಾರೆ. ಈಗ ಅವರ ವಿರುದ್ಧ ಕೇಳಿ ಬಂದಿರುವ ಆರೋಪ ರಾಜಕೀಯ ಪ್ರೇರಿತವಾದದ್ದು ಮತ್ತು ಆರೋಪದಲ್ಲಿ ಯಾವುದೇ ಹುರುಳಿಲ್ಲದಿರುವುದು ಮೇಲ್ನೋಟದಲ್ಲಿಯೇ ಕಂಡುಬರುತ್ತದೆ. ಇದನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿ ಪ್ರಭಾವಿ ನಾಯಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಮುಂಬೈ : ಪೊಲೀಸ್ ಅಧಿಕಾರಿಯ ಮೇಲೆ ಅತ್ಯಾಚಾರ- ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜನ ಶಾಸಕರಲ್ಲಿ ರಮೇಶ್ ಜಾರಕಿಹೋಳಿ ಅತ್ಯಂತ ಮುಖ್ಯವಾದ ವ್ಯಕ್ತಿ. ಹಿಂದೆ ಅವರು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೆಡವಿ ಬಿಜೆಪಿ ಜೊತೆ ಕೈಜೋಡಿಸಿದ್ದರು. ಸಿಡಿ ಹಗರಣದ ನಂತರ ರಮೇಶ್ ಜಾರಕಿಹೋಳಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಆದರೆ ತೆರೆ ಮರೆಯಲ್ಲಿ ಮಾತ್ರ ತಮ್ಮ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿನ ಒಂದು ವರ್ಗ ಮೊದಲಿನಿಂದಲೂ ರಮೇಶ್ ಜಾರಕಿಹೋಳಿ ಅವರ ಸಂಪುಟ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದು ಸಚಿವರಾಗಿರುವ ಅನೇಕರು ಇಂದಿಗೂ ರಮೇಶ್ ಜಾರಕಿಹೋಳಿಯವರನ್ನು ತಮ್ಮ ನಾಯಕರೆಂದೇ ತಿಳಿದಿದ್ದಾರೆ. ವಲಸೆ ನಾಯಕರಲ್ಲಿ ಕೆಲವರು ಮುಖ್ಯಮಂತ್ರಿ ಬಿ.ಎಸ್..ಯಡಿಯೂರಪ್ಪನವರಲ್ಲಿ ಜಾರಕಿಹೋಳಿ ಅವರನ್ನು ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಸಂಬಂಧ ಯಾವುದೇ ಭರವಸೆಗಳನ್ನು ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಸಿಡಿ ಹಗರಣದಿಂದ ಸಾಕಷ್ಟು ಮುಜುಗರವನ್ನು ಅನುಭವಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೋಳಿ ತಮ್ಮ ಸಚಿವ ಸಂಪುಟ ಸೇರ್ಪಡೆಯ ಕುರಿತಾಗಿಯೂ ಪ್ರತಿಕ್ರಿಯಿಸುತ್ತಿಲ್ಲ. ಯಾವುದೇ ಪತ್ರಿಕಾ ಹೇಳಿಕೆಗಳಿಗೆ ಮತ್ತು ಸಂಪರ್ಕಕ್ಕೆ ಸಿಗುತ್ತಿಲ್ಲ. ಆದರೆ ಬಿಜೆಪಿಯ ಮೂಲಗಳ ಪ್ರಕಾರ ರಮೇಶ್ ಜಾರಕಿಹೋಳಿ ಸಂಪುಟ ಸೇರ್ಪಡೆಗೆ ತೆರೆಮರೆಯ ಕಸರತ್ತು ನಡೆಸುತ್ತಿರುವುದಂತು ನಿಜ. ಮೂಲ ಬಿಜೆಪಿಗರ ಆಕ್ಷೇಪ, ವಲಸೆ ಸಚಿವರ ಒತ್ತಡ ಇದರ ನಡುವೆಯಲ್ಲಿ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆಹಾಕುತ್ತದೆ? ಸಚಿವ ಸಂಪುಟ ವಿಸ್ತರಣೆಗೆ ಸದ್ಯದಲ್ಲೇ ದಿನ ನಿಗದಿಯಾಗಲಿದೆಯೇ? ಇದೆಲ್ಲಕ್ಕೂ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರು ಭೇಟಿಯನಂತರವಷ್ಟೆ ಉತ್ತರ ಸಿಗಲಿದೆ.
ಇದನ್ನೂ ಓದಿ: ಜಗತ್ತಿಗೆ ಬೋಧಿಸುವುದನ್ನು ಭಾರತದಲ್ಲಿ ಪಾಲಿಸಿ: ಮೋದಿಗೆ ಪಿ. ಚಿದಂಬರಂ ತಿರುಗೇಟು


