ಪತ್ರಕರ್ತ, ಸ್ವರಾಜ್ ಇಂಡಿಯಾ ರಾಜ್ಯ ಕಾರ್ಯದರ್ಶಿ, ಜನಪರ ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಿಡುಗಡೆಗೆ ಆಗ್ರಹಿಸಿ ಇಂದು ರಾಯಚೂರು, ನಂಜನಗೂಡಿನಲ್ಲಿ ಪ್ರತಿಭಟನೆಗಳು ಜರುಗಿವೆ.
ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ರಾಯಚೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ 200ಕ್ಕೂ ಅಧಿಕ ಪ್ರಜ್ಞಾವಂತರು ಭಾಗವಹಿಸಿ ಸರ್ಕಾರದ ಫ್ಯಾಸಿಸ್ಟ್ ಧೋರಣೆಯನ್ನು ಖಂಡಿಸಿದರು.
ಸಿಪಿಐ-ಎಂಎಲ್ ಪಕ್ಷದ ಮುಖಂಡರಾದ ಆರ್ ಮಾನಸಯ್ಯನವರು ಮಾತನಾಡಿ “ಸರ್ಕಾರ ಕಾನೂನು, ಪ್ರಜಾತಂತ್ರ, ಸಂವಿಧಾನವನ್ನು ಬಿಟ್ಟು ಹೊರಟಿದೆ. ಬಿಜೆಪಿ ಕೈಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿರುವುದರಿಂದ ಸರ್ವಾಧಿಕಾರವನ್ನು ಹೇರುತ್ತಿದೆ. ಇದನ್ನು ನಾವು ಖಂಡತುಂಡವಾಗಿ ವಿರೋಧಿಸುತ್ತೇವೆ. ಜನಪರ ಹೋರಾಟಗಾರ, ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ಏಕೆ ಬಂಧಿಸಿದ್ದೀರಿ ಎಂದು ಪ್ರಭುತ್ವವನ್ನು ಪ್ರಶ್ನಿಸಲು ನಾವಿಲ್ಲಿ ಸೇರಿದ್ದೇವೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಫ್ಯಾಸಿಸ್ಟರು ಮತ್ತು ಪ್ರಜಾತಂತ್ರವಾದಿಗಳ ನಡುವಿನ ಹೋರಾಟ ಇದಾಗಿದೆ. ರೈತರು, ಕಾರ್ಮಿಕರು ತಲ್ಲಣಿಸುತ್ತಿದ್ದಾರೆ. ದಲಿತರ ಮೀಸಲಾತಿ ಅಪಾಯದಲ್ಲಿದೆ. ಇದೇ ರೀತಿಯ ದಮನ ಮುಂದುವರೆದರೆ ಪ್ರಭುತ್ವದ ವಿರುದ್ಧ ಒಂದಾಗಿ ಹೋರಾಡುತ್ತೇವೆ ಎಂದರು.
ಇದು ಕೇವಲ ನರಸಿಂಹಮೂರ್ತಿ ಒಬ್ಬರ ಬಂಧನವಲ್ಲ. ಇಡೀ ಸ್ವತಂತ್ರ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಂಧನವಾಗಿದೆ. ಹಾಗಾಗಿಯೇ ರಾಜ್ಯದ ಪ್ರಜಾತಂತ್ರವಾದಿಗಳೆಲ್ಲಾ ಹೋರಾಟಕ್ಕೆ ಧುಮುಕಬೇಕೆಂದು ಕರೆ ನೀಡಿದರು.
ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯಧ್ಯಕ್ಷ ಚಾಮರಸ ಮಾಲೀಪಾಟಿಲ್, ಕರ್ನಾಟಕ ಜನಶಕ್ತಿ ಕುಮಾರ್ ಸಮತಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರು.
ಇನ್ನು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಜನಸಂಗ್ರಾಮ ಪರಿಷತ್ ವತಿಯಿಂದ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು.
ಹೋರಾಟಗಾರ ನಗಲೇ ವಿಜಯ್ ಕುಮಾರ್ ಮಾತನಾಡಿ 2-3 ದಶಕದಿಂದ ನಾಡಿ ಎಲ್ಲಾ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿದ್ದ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರನ್ನು ತಲೆಮರೆಸಿಕೊಂಡಿದ್ದರು ಎನ್ನುವುದು ಸರ್ಕಾರಕ್ಕೆ ನಾಚಿಕೆಗೇಡಿನ ವಿಚಾರ. ಅವರು ಗೌರಿ ಲಂಕೇಶ್ ಪತ್ರಿಕೆಯಲ್ಲಿ ತೊಡಗಿಸಿಕೊಂಡು ಗೌರಿಯವರು ಆಶಯವನ್ನು ಮುಂದುವರೆಸುತ್ತಿದ್ದರು. ಹಾಗಾಗಿ ಅವರ ಬಂಧನವಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ನಂಜನಗೂಡು ತಹಶೀಲ್ದಾರ್‌ರವರ ಮೂಲಕ ರಾಜ್ಯಪಾಲರಿಗೆ ಹಕ್ಕೊತ್ತಾಯಪತ್ರವನ್ನು ಕಳಿಸಿಕೊಡಲಾಯಿತು.


