Homeಮುಖಪುಟ2 ಸಾವಿರ ಕೋಟಿ ರೂ ಖರ್ಚಾದರೂ ’ಸ್ಮಾರ್ಟ್‌’ ಆಗದ ತುಮಕೂರು.. ಏಕೆ?

2 ಸಾವಿರ ಕೋಟಿ ರೂ ಖರ್ಚಾದರೂ ’ಸ್ಮಾರ್ಟ್‌’ ಆಗದ ತುಮಕೂರು.. ಏಕೆ?

- Advertisement -
- Advertisement -

ತುಮಕೂರು ಸ್ಮಾರ್ಟ್ ಸಿಟಿ ಎಂಬೋ ‘ಸಮರ್ಥ ನಗರ’ ಅಕ್ಷರಶಃ ಗಬ್ಬೆದ್ದು ಹೋಗಿದೆ. ನಗರದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ರಸ್ತೆಗಳ ಮೇಲೆ ಕಣ್ಣಾಡಿಸಿದರೆ ಸಾಕು ಇದು ಹದಗೆಟ್ಟ ಪರಿಸ್ಥಿತಿಯನ್ನು ಹೇಳುತ್ತವೆ. ಇಂಥಾ ಕೆಟ್ಟ ಪರಿಸ್ಥಿತಿ ಹಿಂದೆಲ್ಲೂ ಕಂಡಿರಲಿಲ್ಲವೆಂದು  ನಾಗರಿಕರು ಪಕ್ಷಾತೀತವಾಗಿ ಛೀಮಾರಿ ಹಾಕುತ್ತಿದ್ದಾರೆ.

ನಗರದ ಮೂಲೆ ಮೂಲೆಗಳಲ್ಲೂ ಅಗೆದ ಗುಂಡಿಗಳು, ಮೇಲೆದ್ದ ಮಣ್ಣಿನ ಗುಡ್ಡೆ, ಮಳೆ ಬಂದು ಕೊರಕಲಾದ ರಸ್ತೆಯ ಎರಡೂ ಬದಿಗಳು ಇವೆಲ್ಲವನ್ನೂ ನೋಡಿ ನರಕಯಾತನೆ ಅನುಭವಿಸುತ್ತಿದ್ದಾರೆ ಜನ. ಜನರಲ್ಲಿ ವ್ಯಕ್ತವಾಗುತ್ತಿರುವ ರೋಷಕ್ಕೆ ಮಿತಿಯೇ ಇಲ್ಲ. ಕಂಡಕಂಡಲ್ಲಿ ಜನ ಪಾಲಿಕೆ ಅಧಿಕಾರಿಗಳನ್ನು ಉಗಿಯುತ್ತಿದ್ದಾರೆ. ಸಮರ್ಥ ನಗರ ಎಂದರೆ ಇದೇನಾ ಎಂದು ಪ್ರಶ್ನಿಸುತ್ತಿದ್ದಾರೆ.

ನಗರದ ಯಾವ ಕಡೆ ಯಾವಾಗ ಗುಂಡಿ ತೋಡುತ್ತಾರೆ. ಯಾವ ಕಾರಣಕ್ಕಾಗಿ ಅಗೆಯುತ್ತಾರೆ. ಯಾವ ಉದ್ದೇಶಕ್ಕಾಗಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ತುಮಕೂರು ಮಹಾನಗರ ಪಾಲಿಕೆಯಿಂದ ಇದಕ್ಕೆ ಪರವಾನಿಗೆ ಪಡೆಯಲಾಗಿದೆಯೇ ಎಂದರೆ ಅದೂ ಕೂಡ ಇಲ್ಲವೆನ್ನುತ್ತಾರೆ ಕೆಲ ಪಾಲಿಕೆ ಸದಸ್ಯರು. ಸ್ಮಾರ್ಟ್ ಸಿಟಿ ನೆಪದಲ್ಲಿ ರಸ್ತೆಗಳನ್ನು ಅಗೆದುಬಗೆದು ಗುಂಡಿಮಾಡುತ್ತಿದ್ದಾರೆ. ಇವರನ್ನು ಕೇಳುವವರೇ ಇಲ್ಲವಾಗಿದೆ.

ಒಂದು ಕಡೆ 24*7 ಕುಡಿಯುವ ನೀರು ಒದಗಿಸಲು ಪೈಪ್ ಲೈನ್ ಅಳವಡಿಸುವ ಕಾಮಗಾರಿ, ಇದು ಮುಗಿಯಿತು ಅಂದರೆ ಜಿಯೋ ನೆಟ್‌ವರ್ಕ್‌ಗೆ ಕೇಬಲ್ ಹಾಕುವ ಕಾಮಗಾರಿ, ಇದು ಮುಗಿಯುತಪ್ಪ ಅನ್ನುವುದರೊಳಗೆ 24*7 ಗ್ಯಾಸ್ ಪೈಪ್ ಗಾಮಗಾರಿ, ಅಯ್ಯೋ ಎಲ್ಲವೂ ಪೂರ್ಣವಾಗಿದೆ ಇನ್ನೇನು ನೆಮ್ಮದಿಯಾಗಿರಬಹುದು ಅಂತೀರಾ. ಇಲ್ಲ ಮತ್ತೆ ಅಗೆತ. ಆ ಕಡೆ ಮತ್ತು ಈ ಕಡೆ ಮನೆಗಳಿಗೆ ಸಂಪರ್ಕ ಕಲ್ಪಿಸಲು ಅಗೆತ. ಹೀಗೆ ಮಾಡಿ ತುಮಕೂರೆಂಬೋ ತುಮಕೂರಿನ ರಸ್ತೆಗಳನ್ನೇ ಹಾಳುಗೆಡವಿದ್ದಾರೆ.

ಮಳೆ ಬಂದರೆ ಕೆಸರು, ಹೆಜ್ಜೆ ಇಡಲು ಆಗದಷ್ಟು ಕೆಸರು. ವಾಹನಗಳು ಸಂಚರಿಸಿದರೆ ಸಾಕು ರಸ್ತೆಯಲ್ಲಿ ನಡೆದುಹೋಗುವವರು ಜೀವ ಹಿಡಿದುಕೊಂಡೇ ಓಡಾಡಬೇಕು. ಕೆಸರು ಮೇಲೆ ರಪ್ ಅಂತ ಎಲ್ಲಿ ಸಿಡಿಯುತ್ತೋ ಅನ್ನುವ ಭಯ. ಭೂಮಿ ನೆನೆದು ಸಿಕ್ಕಿಕೊಳ್ಳುವ ಕಾರುಗಳು, ಲಾರಿಗಳು, ಇದಾದ ಮೇಲೆ ಭೂಮಿ ಒಣಗಿತು ಅನ್ನಿ. ದೂಳು, ವಾಹಗಳು ಬಂದರೆ ಸಾಕು ದೂಳು ಮೈಮೇಲೆ ಸುರಿಯುತ್ತದೆ. ಉಸಿರು ಕಟ್ಟಿದಂತಾಗುತ್ತದೆ. ಪರ್ಟಿಕ್ಯೂಲೇಟ್ ಮ್ಯಾಟರ್ ಅತಿ ಹೆಚ್ಚು ಇದ್ದು ಮಾಲಿನ್ಯ ನಗರವಾಗಿರುವ ತುಮಕೂರು ಅದ್ಹೇಗೆ ಸ್ಮಾರ್ಟ್ ಸಿಟಿ ಅನಿಸಿಕೊಳ್ಳುತ್ತೋ ಆ ಸ್ಮಾರ್ಟ್ ಸಿಟಿ ನಿರ್ಮಾತೃಗಳಿಗೇ ಗೊತ್ತು. ಆದರೆ ಜನರಂತು ಬಾಯಿಗೆ ಬಂದಂತೆ ಕ್ಯಾಕರಿಸುತ್ತಿದ್ದಾರೆ.

ರಸ್ತೆಯ ಎರಡು ಬದಿಯನ್ನು ಅಗೆದವರು ಅದರ ಮೇಲೆ ಟಾರ್ ಮುಖವನ್ನೂ ತೋರಿಸಿ ತೇಪೆ ಹಚ್ಚುವ ಕೆಲಸವನ್ನೂ ಮಾಡಿಲ್ಲ. ಹೀಗಾಗಿ ತುಮಕೂರು ಸ್ಮಾರ್ಟ್ ಸಿಟಿ ಜನರಿಂದ ಗೇಲಿಗೆ ಒಳಗಾಗಿದೆ. ಆದರೆ ನಿತ್ಯವೂ ಪೊಲೀಸರು, ಟ್ರಾಫಿಕ್ ಪೊಲೀಸರು ವಾಹನಗಳನ್ನು ಹಿಡಿದು, ಹೆಲ್ಮೆಟ್ ಧರಿಸಿಲ್ಲ. ಡಿ.ಎಲ್. ಹೊಂದಿಲ್ಲ, ಹೊಗೆ ಪರೀಕ್ಷೆ ನಡೆಸಿಲ್ಲ ಹೀಗೆ ಹಲವು ರೀತಿಯಲ್ಲಿ ಜನರಿಂದ ವಸೂಲಿ ಮಾಡುತ್ತಲೇ ಇದ್ದಾರೆ. ಏನ್ ರಸ್ತೆಗಳು ಹೀಗಿವೆಯಲ್ಲಾ ಎಂದರೆ ಅದರ ಬಗ್ಗೆ ನಮ್ಮನ್ನು ಕೇಳಬೇಡಿ ಅನ್ನುತ್ತಾರೆ. ರಸ್ತೆಗಳ ಉತ್ತಮವಾಗಿರಬೇಕು. ಆಗ ದಂಡ ವಿಧಿಸಿದರೂ ಕಟ್ಟಬಹುದು. ಆದರೆ ನಮ್ಮ ನಗರದ ಯಾವುದೇ ರಸ್ತೆಗಳು ಚನ್ನಾಗಿವೆ ಎಂದು ಹೇಳವುದಕ್ಕೇ ಆಗುವುದಿಲ್ಲ ಎನ್ನುತ್ತಾರೆ ಬೈಕ್ ಸವಾರರು.

ಸಮರ್ಥ ನಗರದ ಅಭಿವೃದ್ದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹತ್ತಿರತ್ತಿರ 2 ಸಾವಿರ ಕೋಟಿ ರೂಪಾಯಿ ನಗರ ಪಾಲಿಕೆಗೆ ಬಂದಿದೆ. ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು, ಪಾರ್ಕ್ ಗಳ ಅಭಿವೃದ್ದಿ, ಬಸ್ ನಿಲ್ದಾಣಗಳ ನಿರ್ಮಾಣ ಹೀಗೆ ಹಲವು ಕಾಮಗಾರಿಗಳನ್ನು ಮಾಡುವ ಮೂಲಕ ಕೋಟಿ ಕೋಟಿ ಲೂಟಿ ಮಾಡುವಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ನಿರತರಾಗಿದ್ದಾರೆ. ಸ್ಮಾರ್ಟ್ ಸಿಟಿ ಅಂದರೆ ಜನ ಬೆಚ್ಚಿ ಬೀಳುತ್ತಿದ್ದಾರೆ. ಅಯ್ಯೋ ಈ ಕಾಮಗಾರಿಗಳು ಎಷ್ಟು ಬೇಗ ಮುಗಿಯುತ್ತೋ ಅಂತ ಕಾಯುತ್ತಿದ್ದಾರೆ. ಆದರೆ ಮಬ್ಬು ಭಕ್ತರು, ಸ್ಮಾರ್ಟಿ ಸಮರ್ಥಕರು ಅಭಿವೃದ್ಧಿ ಕೆಲಸ ನಡೆಯುತ್ತಿದೆ ಅಂದರೆ ಸಹಿಕೊಳ್ಳಬೇಕು ಎಂದು ಮಂಡುವಾದ ಮಾಡುತ್ತಿದ್ದಾರೆ. ಆದರೆ ಜನ ಮಾತ್ರ ಕಾಮಗಾರಿಗಳು ಮುಗಿಯುತ್ತೋ ಇಲ್ಲವೋ? ಎಂಬ ಗೊಂದಲದಲ್ಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...