ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ ನಿರ್ಮಾಣದ ‘ಲಾ’ ಸಿನಿಮಾ ಕಳೆದವಾರವಷ್ಟೇ ಓಟಿಟಿ (ಓವರ್ ದ ಟಾಪ್) ಪ್ಲಾಟ್‌ಫಾರ್ಮ್ನಲ್ಲಿ ರಿಲೀಸ್ ಅಗಿದೆ. ಓಟಿಟಿಯಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಸಿನಿಮಾಗಳಲ್ಲಿ ಇದೂ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. (ಹಿಂದೆ ಆದರ್ಶ್ ಈಶ್ವರಪ್ಪ ನಿರ್ದೇಶನದ ಭಿನ್ನ ಕೂಡ ಓಟಿಟಿಯಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು). ಈಗ ‘ಲಾ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾದ ಮೇಲೆ ಎರಡು ರೀತಿಯ ಚರ್ಚೆಯನ್ನು ಹುಟ್ಟುಹಾಕಿದೆ.
ಒಂದು, ಈ ಸಿನಿಮಾ ಚಿತ್ರಿಸಿರುವ ಕತೆಯ ಚಿತ್ರಣದ ಅಂಕುಡೊಂಕುಗಳಿಂದಾಗಿ, ಥಿಯೇಟರ್‌ಗಳಲ್ಲಿ ಹಣ ಮಾಡಲಾಗದ ಇಂತಹ ಸಿನಿಮಾಗಷ್ಟೇ ಓಟಿಟಿ ಪ್ಲಾಟ್‌ಫಾರ್ಮ್ನಲ್ಲಿ ರಿಲೀಸ್ ಆಗುತ್ತವೆ ಅನ್ನುವುದು.. ಮತ್ತೊಂದು, ಸಿನಿಮಾಗಳನ್ನು ಓಟಿಟಿಗಳಲ್ಲಿ ನೋಡುವುದು ನಿರ್ದೇಶಕರಿಗೆ ಮಾಡುವ ಅವಮಾನ ಎಂಬಂತಹ ಭ್ರಮೆ..
ಮೊನ್ನೆ ಮೊನ್ನೆಯಷ್ಟೇ ಆರಂಭಗೊಂಡ ಎಫ್‌ಯುಸಿ (ಫಿಲ್ಮ್ಮೇರ‍್ಸ್ ಯುನೈಟೆಡ್ ಕ್ಲಬ್) ಎಂಬ ತಂಡ ತಮ್ಮ ವೆಬ್‌ಸೈಟ್‌ನಲ್ಲಿ ಅಂಕಣವೊಂದನ್ನು ಪ್ರಕಟಿಸಿದೆ. ಜನರು ಓಟಿಟಿಗಳಲ್ಲಿ ಸಿನಿಮಾ ನೋಡುವುದರ ಬಗ್ಗೆ ಆ ಅಂಕಣ ಪ್ರಶ್ನೆ ಎತ್ತಿದೆ. ಮನೆಯಲ್ಲಿ ಕುಳಿತು ಸಿನಿಮಾ ನೋಡುವುದರಿಂದಾಗುವ ಸಮಸ್ಯೆಗಳ ಜೊತೆಗೆ, ಸಿನಿಮಾಗಳನ್ನು ಓಟಿಟಿಯಲ್ಲಿ ನೋಡುವುದೇ ನಿರ್ದೇಶಕರಿಗೆ ಮಾಡುವ ಅವಮಾನವೆಂದು ಹೇಳಿದೆ.
ಹಾಗೆ ನೋಡಿದರೆ, ವಿಶ್ವದ ಮೂಲೆಮೂಲೆಗೂ ಸಿನಿಮಾಗಳಿಗೆ ಹೆದ್ದಾರಿ ಮಾಡಿಕೊಡುವ ಓಟಿಟಿಯ ಹಾದಿಗೆ ಕನ್ನಡ ಚಿತ್ರರಂಗ ಈಗಷ್ಟೇ ಕಾಲ್ನಡಿಗೆಯ ಹಾದಿಯನ್ನು ಹುಡುಕುತ್ತಿದೆ. ಹಲವು ವರ್ಷಗಳಿಂದ ಚಾಲ್ತಿಯಲ್ಲಿರುವ ಓಟಿಟಿಗಳಲ್ಲಿ ಕನ್ನಡ ಚಿತ್ರಗಳಿಗೆ ಇತ್ತೀಚೆಗಷ್ಟೇ ಅವಕಾಶಗಳು ಸಿಗುತ್ತಿವೆ. ಆಗಲೇ ಅದರ ವಿರುದ್ಧ ಅಭಿಪ್ರಾಯ ಮೂಡಿಸುವ ಹೊಸ ತಂತ್ರವೂ ಹೆಣೆದುಕೊಳ್ಳುತ್ತಿದೆ.
ಇಡೀ ಜಗತ್ತೇ ಡಬ್ಬಿಂಗ್‌ಗೆ ಓಕೆ ಎಂದಿದ್ದ ಸಂದರ್ಭದಲ್ಲಿಯೂ ಸ್ಯಾಂಡಲ್‌ವುಡ್‌ನ ಕೆಲವರದ್ದು ಇಂತದ್ದೇ ತಗಾದೆ ಇತ್ತು. ಅದೆಲ್ಲವನ್ನು ಬದಿಗೊತ್ತಿ, ಈಗ ಡಬ್ಬಿಂಗ್ ದುನಿಯಾ ಕನ್ನಡ ಚಿತ್ರರಂಗದಲ್ಲಿ ಪಸರಿಸುತ್ತಿದೆ. ಅಂತೆಯೇ ಓಟಿಟಿಯೂ ಈಗಷ್ಟೇ ಕನ್ನಡದಲ್ಲಿ ಚಿಗುರೊಡೆಯಲಾರಂಭಿಸಿದೆ.
‘ಕನ್ನಡ ಚಿತ್ರರಂಗದಲ್ಲಿ ಓಟಿಟಿಗೆ ನೆಲೆಯಿಲ್ಲ – ಓಟಿಟಿಯಲ್ಲಿ ಕನ್ನಡ ಚಿತ್ರಗಳಿಗೂ ಸ್ಥಾನ ಉಳಿಯುವುದಿಲ್ಲ’ ಇದು ಸದ್ಯಕ್ಕೆ ಕನ್ನಡ ಚಿತ್ರರಂಗದ ಯಥಾಸ್ಥಿತಿವಾದಿಗಳ ಅಭಿಪ್ರಾಯ. ಇದಕ್ಕೆ ಹೌದು ಎಂಬಂತೆ, ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿಯೇ ಯಾವ ಸ್ಟಾರ್ ನಟನ ಸಿನಿಮಾಗಳನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಲು ಪ್ರೊಡ್ಯೂಸರ್‌ಗಳು, ಸ್ಟಾರ್ ಆಕ್ಟರ್‌ಗಳೂ ಮುಂದೆ ಬರುತ್ತಿಲ್ಲ. ಬಿಗ್ ಬಜೆಟ್‌ನ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾದರೆ ಹಾಕಿರುವ ಬಂಡವಾಳವನ್ನು ಲಾಭದ ಸಮೇತ ವಾಪಸ್ ಕೊಡುತ್ತವೆ ಎಂಬ ಭರವಸೆ ಯಾರಿಗೂ ಇಲ್ಲ. ಸದ್ಯಕ್ಕೆ ಅದು ಸತ್ಯವೂ ಹೌದು.

ಕಾರಣ, ಓಟಿಟಿ ವೇದಿಕೆಗಳು ಭಾರತೀಯರಿಗೆ ಹೆಚ್ಚಾಗಿ ಪರಿಚಿತವಾಗಿಲ್ಲ. ಬಹುಸಂಖ್ಯಾತ ಜನರನ್ನು ಓಟಿಟಿ ಇನ್ನೂ ರೀಚ್ ಆಗಿಲ್ಲ. ಅಲ್ಲದೆ, ಥಿಯೇಟರ್‌ಗಳಲ್ಲಿ ಸಿನಿಮಾ ನೋಡುವ ಜನರ ಕ್ರೇಜ್ ಓಟಿಟಿ ಎಡೆಗೆ ಇನ್ನೂ ತಿರುಗಿದಂತೆ ಕಾಣುತ್ತಿಲ್ಲ. ಹಾಗೆಂದ ಮಾತ್ರಕ್ಕೆ ಓಟಿಟಿ ಕೇವಲ ಕಡಿಮೆ ಬಜೆಟ್‌ನ ಹಾಗೂ ಡಬ್ಬಾ ಸಿನಿಮಾಗಳಿಗಷ್ಟೇ ಸೀಮಿತವೂ ಆಗಿಲ್ಲ. ಹಾಲಿವುಡ್‌ನ ಜನಪ್ರಿಯ ಸಿನಿಮಾಗಳೂ ಕೂಡ ಓಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಅಂತಹ ಸಿನಿಮಾಗಳಲ್ಲಿ ಸ್ನೈಡರ್ ಕಟ್ ಕೂಡ ಒಂದು. ಈ ಸಿನಿಮಾದ ಟ್ರೈಲರ್ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಸದ್ಯದಲ್ಲೇ ಬಿಡುಗಡೆಗೆ
ರೆಡಿಯಾಗಿದೆ.
ಸಿನಿಮಾ ನೋಡುವಾಗ ಥಿಯೇಟರ್‌ಗಳಲ್ಲಿ ಸಿಗುವ ಮಜಾ ಓಟಿಟಿಯಲ್ಲಿ ಸಿಗುವುದಿಲ್ಲ ಎನ್ನುವ ಮಾತೂ ಇದೆ. ಜೋಷ್ ಇರುವುದಿಲ್ಲ. ಸಿನಿಮಾಗಳನ್ನು ಸಮೂಹದಲ್ಲಿ ನೋಡುವ ಆನಂದವೇ ಬೇರೆ ರೀತಿಯದ್ದು. ಸಿನಿಮಾ ಮುಗಿದು ಥಿಯೇಟರ್‌ನಿಂದ ಹೊರಬರುವಾಗ ಎಂಥದ್ದೂ ಒಂದು ಫೀಲ್ ಮನಸ್ಸಲ್ಲಿ ಮೂಡುತ್ತದೆ. ಅಂತಹ ಫೀಲ್ ಓಟಿಟಿಯಲ್ಲಿ ಹುಟ್ಟಲಾರದು ಎಂಬ ಮಾತುಗಳು. ಆದರೆ, ಸದ್ಯ ಓಟಿಟಿಯಲ್ಲಿ ಸಿಗುತ್ತಿರುವ ಕಂಟೆಂಟ್ (ಗುಣಮಟ್ಟ ಹಾಗೂ ಅದು ಲಭ್ಯವಿರುವ ಮಾದರಿ) ಥಿಯೇಟರ್‌ಗಳಲ್ಲಿ ಸಿಗುತ್ತಿಲ್ಲ ಎಂಬುದು ಅಷ್ಟೇ ಸತ್ಯ.
ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂನಂತಹ ಜಗತ್ತಿನಾದ್ಯಂತ ಹರಡಿರುವ ಓಟಿಟಿ ಪ್ಲಾಟ್‌ಫಾರ್ಮ್ಗಳಲ್ಲಿ ಈಗಷ್ಟೆ ಕನ್ನಡ ಸಿನಿಮಾಗಳಿಗೆ ಸ್ಥಾನ ಸಿಗುತ್ತಿದೆ. ಕನ್ನಡ ಸಿನಿಮಾಗಳು ಎಲ್ಲೆಡೆ ಹರಡುವ ಅವಕಾಶವನ್ನೂ ಉಂಟು ಮಾಡಿದೆ. ಆದರೆ, ಕನ್ನಡ ಚಿತ್ರರಂಗವೇ ಇದಕ್ಕೆ ಇನ್ನೂ ಸಿದ್ದವಾಗಿಲ್ಲ.
ಇದೆಲ್ಲದರ ನಡುವೆ, ಓಕೆ (ಓನ್ಲೀ ಕನ್ನಡ) ಎಂಬ ಕನ್ನಡ ಸಿನಿಮಾಗಳಿಗಷ್ಟೇ ಸೀಮಿತವಾದ ಹೊಸ ಓಟಿಟಿ ಪ್ಲಾಟ್‌ಫಾರ್ಮ್ ಕೂಡ ಆರಂಭವಾಗುತ್ತಿದೆ. ಕನ್ನಡದ ನಾಟಕ, ಸಿನಿಮಾ, ವೆಬ್ ಸೀರಿಸ್‌ಗಳ ನಿರ್ಮಾಣ ಮತ್ತು ಬಿಡುಗಡೆಗಾಗಿ ಇದು ಆರಂಭಗೊಳ್ಳುತ್ತಿದೆ. ಕನ್ನಡದಲ್ಲಿ ಹೊಸದೊಂದು ಪ್ಲಾಟ್‌ಫಾರ್ಮ್ ಕ್ರಿಯೇಟ್ ಮಾಡುವ ಸದಭಿರುಚಿಯೊಂದಿಗೆ ಪ್ರಯೋಗ್ ಸ್ಟುಡಿಯೂ ಮತ್ತು ಮಯೂರ್ ಮೋಷನ್ ಪಿಕ್ರ‍್ಸ್ ಇದಕ್ಕೆ ಮುಂದಾಗಿವೆ.
ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್‌ಗಳು, ಮಲ್ಟಿಪ್ಲೆಕ್ಸ್ಗಳು, ಮಾಲ್‌ಗಳು ಮುಚ್ಚಿರುವುದರಿಂದಾಗಿ ಒಂದಷ್ಟು ಪ್ರಮಾಣದ ಜನರು ಓಟಿಟಿಗಳ ಮೊರೆ ಹೋಗಿದ್ದಾರೆ. ಅದು ಹೀಗೆಯೇ ಇರಲಾರದು. ಹೆಚ್ಚು ಬಂಡವಾಳ ಹಾಕಿ ನಿರ್ಮಾಣ ಮಾಡಿದ ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಅಗಿಯೇ ಬಂಡವಾಳವನ್ನು ಮರಳಿ ತರುವಲ್ಲಿ ಪೈಪೋಟಿ ಎದುರಿಸುತ್ತಿವೆ. ಹೀಗಿರುವಾಗ ಓಟಿಟಿಗಳು ಸಿನಿಮಾಗೆ ಸುರಿದ ಬಂಡವಾಳವನ್ನು ವಾಪಸ್ ನೀಡಬಲ್ಲವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಈ ದೆಸೆಯಲ್ಲಿ ಓಟಿಟಿ ಕಂಪ್ಲೀಟ್ಲಿ ಕಡ್ಳೆಪುರಿ ವ್ಯಾಪಾರವಿದ್ದಂತೆ, ಅದಕ್ಕೆ ಎಂದೂ ಭವಿಷ್ಯವಿಲ್ಲ ಎಂಬುದು ಸದ್ಯಕ್ಕೆ ಕನ್ನಡ ಸಿನಿಮಾ ರಂಗದ ಅಭಿಪ್ರಾಯ.
ಆದರೆ, ಡಿಜಿಟೈಸ್ ಆಗುತ್ತಿರುವ ಜನರು ಓಟಿಟಿಗಳೆಡೆಗೆ ಮುಖ ಮಾಡಿದ್ದಾರೆ. ಮುಂದಿನ ಸಿನಿಮಾಗಳ ಭವಿಷ್ಯ ಓಟಿಟಿಯೇ ಎಂಬುದು ಡಿಜಿಟಲ್ ಕ್ಷೇತ್ರದವರ ಅಭಿಪ್ರಾಯ.
ಇದೆಲ್ಲದರ ನಡುವೆ, ಓಟಿಟಿಯಲ್ಲಿ ರಿಲೀಸ್ ಆದ ‘ಲಾ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಓಟಿಟಿ ಬಗೆಗೆ ಒಂದು ನೆಗೆಟಿವ್ ಅಪ್ರೋಚ್ ಕಟ್ಟಿಕೊಟ್ಟಿದೆ. ನಿರೀಕ್ಷಿತ ಗುಣಮಟ್ಟದಲ್ಲಿ ಸಿನಿಮಾ ಮೂಡದೆ ಇದ್ದದ್ದೂ ಕಾರಣ ಇರಬಹುದು. ಏನೇ ಇರಿಲಿ, ಕನ್ನಡದ ಮಟ್ಟಿಗೆ ಓಟಿಟಿ ಹವಾ ಈಗಷ್ಟೇ ಹಬ್ಬುತ್ತಿದೆ. ಕನ್ನಡ ಸಿನಿಮಾ ಮತ್ತು ಕನ್ನಡದಲ್ಲಿ ಓಟಿಟಿಯ ಭವಿಷ್ಯ ಏನಾಗಲಿದೆ ಎಂಬುದನ್ನು ಸಿನಿಪ್ರೇಮಿಗಳೇ ಮುಂದೆ ತೆರೆದಿಡಲಿದ್ದಾರೆ.
– ಸೋಮಶೇಖರ್ ಚಲ್ಯ
ಓದಿ:
ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್.


