ಗುಜರಾತ್‌ನ ಜಾಮ್‌ನಗರದಲ್ಲಿರುವ ತನ್ನ ಸಂಸ್ಕರಣಾಗಾರಕ್ಕೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ರಿಲಯನ್ಸ್ ಇಂಡಸ್ಟ್ರೀಸ್ ಗುರುವಾರದಿಂದ (ನವೆಂಬರ್ 20) ನಿಲ್ಲಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿಗಳ ಸಮೂಹವು, ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ಹಿನ್ನೆಲೆ, ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಹೇರಿರುವ ನಿರ್ಬಂಧಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ. ಆದರೆ, ಈಗಿರುವ ತೈಲ ಸರಬರಾಜುದಾರರೊಂದಿಗಿನ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಹೇಳಿದೆ ಎಂದು ವರದಿ ತಿಳಿಸಿದೆ.
ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ಫೆಬ್ರವರಿ 2022ರಿಂದ ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ರಷ್ಯಾದ ವ್ಯವಹಾರಗಳ ಮೇಲೆ, ವಿಶೇಷವಾಗಿ ತೈಲ ರಫ್ತುದಾರರ ಮೇಲೆ ಸರಣಿ ನಿರ್ಬಂಧಗಳನ್ನು ವಿಧಿಸಿವೆ. ಈ ನಿರ್ಬಂಧಗಳು ರಷ್ಯಾ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಉಕ್ರೇನ್ ಜೊತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸುವ ಉದ್ದೇಶವನ್ನು ಹೊಂದಿವೆ ಎಂದು ಹೇಳಲಾಗ್ತಿದೆ.
ಕಳೆದ ಅಕ್ಟೋಬರ್‌ನಲ್ಲಿ, ಅಮೆರಿಕ ರಷ್ಯಾದ ಎರಡು ದೊಡ್ಡ ಇಂಧನ ಸಂಸ್ಥೆಗಳು ಮತ್ತು ತೈಲ ರಫ್ತುದಾರರಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್‌ಗಳನ್ನು ಗುರಿಯಾಗಿಸಿಕೊಂಡು ಹೊಸ ನಿರ್ಬಂಧಗಳನ್ನು ವಿಧಿಸಿತ್ತು.
ಭಾರತ ಸೇರಿದಂತೆ ವಿವಿಧ ದೇಶಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ರಷ್ಯಾದ ಯುದ್ಧಕ್ಕೆ ಉತ್ತೇಜನ ನೀಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಆರೋಪಿಸುತ್ತಿದ್ದಾರೆ.
ಆಗಸ್ಟ್‌ನಲ್ಲಿ, ಟ್ರಂಪ್ ಆಡಳಿತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಟ್ರಂಪ್ ಆಡಳಿತ ಪರಸ್ಪರ ಸುಂಕ ಎಂಬ ನೀತಿಯ ಅಡಿಯಲ್ಲಿ ಭಾರತದ ಸರಕುಗಳ ಮೇಲೆ ಅಮೆರಿಕ ಈಗಾಗಲೇ ಶೇಕಡ 25ರಷ್ಟು ಸುಂಕ ವಿಧಿಸಿದೆ.
ಅಮೆರಿಕದ ಹೆಚ್ಚುವರಿ ಸುಂಕಕ್ಕೆ ಪ್ರತಿಕ್ರಿಯಿಸಿದ್ದ ಭಾರತ, ಅಮೆರಿಕವು ಭಾರತದ ಮೇಲೆ ಹೆಚ್ಚುವರಿ ಸುಂಕ ಹೇರಲು ನಿರ್ಧರಿಸಿರುವುದು ಅತ್ಯಂತ ದುರದೃಷ್ಟಕರ. ಭಾರತ ಮಾಡುತ್ತಿರುವ ಕೆಲಸವನ್ನು ಬೇರೆ ಅನೇಕ ದೇಶಗಳು ಕೂಡ ತಮ್ಮ ಸ್ವಂತ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಮಾಡುತ್ತಿವೆ. ಆದರೂ, ಕೇವಲ ಭಾರತವನ್ನು ಮಾತ್ರ ಗುರಿಯಾಗಿಟ್ಟುಕೊಂಡು ಶಿಕ್ಷಾ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ ಎಂದಿತ್ತು.
ರಷ್ಯಾದಿಂದ ತೈಲ ಆಮದಿನ ಮರುಮಾಪನ ಪ್ರಕ್ರಿಯೆ ಈಗಲೂ ಪ್ರಗತಿಯಲ್ಲಿದೆ. ನಾವು ಭಾರತ ಸರ್ಕಾರದ ಮಾರ್ಗಸೂಚಿಗಳಿಗೆ ಸಂಪೂರ್ಣವಾಗಿ ಬದ್ಧರಾಗಿರುತ್ತೇವೆ ಎಂದು ಅಕ್ಟೋಬರ್ 23ರಂದು ರಿಲಯನ್ಸ್ ಇಂಡಸ್ಟ್ರೀಸ್ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಹೇಳಿತ್ತು.
ಡಿಸೆಂಬರ್ 1,2025ರಿಂದ ಜಾಮ್‌ನಗರ ರಿಫೈನರಿಯಲ್ಲಿ ರಷ್ಯಾದ ಕಚ್ಚಾ ತೈಲವನ್ನು ಬಳಸಿ ಯಾವುದೇ ಉತ್ಪನ್ನ ತಯಾರಿಸುವುದಿಲ್ಲ. ಅಲ್ಲಿಂದ ರಫ್ತು ಮಾಡುವ ಎಲ್ಲಾ ಪೆಟ್ರೋಲ್, ಡೀಸೆಲ್, ಇತ್ಯಾದಿ ಉತ್ಪನ್ನಗಳು ರಷ್ಯಾ-ಮುಕ್ತವಾಗಿರುತ್ತವೆ ಎಂದು ರಿಲಯನ್ಸ್ ಸಮೂಹದ ವಕ್ತಾರ ಗುರುವಾರ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಜನವರಿ 21, 2026ರಿಂದ ಪಾಶ್ಚಿಮಾತ್ಯ ದೇಶಗಳು ಹೊಸತಾಗಿ ಹೇರಲಿರುವ ಕಠಿಣ ನಿರ್ಬಂಧಗಳಿಗೆ ಸಂಪೂರ್ಣವಾಗಿ ಅನುಗುಣವಾಗಿರಲು ರಿಲಯನ್ಸ್ ರಷ್ಯಾದಿಂದ ತೈಲ ಆಮದು ನಿಲ್ಲಿಸಿದೆ. ಅಮೆರಿಕ ಸರ್ಕಾರ ರಷ್ಯಾದ ತೈಲ ವ್ಯವಹಾರಗಳನ್ನು ನಿಲ್ಲಿಸಲು ಕಂಪನಿಗಳಿಗೆ ಕೊನೆಯ ಗಡುವಾಗಿ ಈ ಶುಕ್ರವಾರವನ್ನು ನಿಗದಿಪಡಿಸಿದೆ. ಆದರೆ, ರಿಲಯನ್ಸ್ ಆ ಗಡುವಿಗಿಂತಲೂ ಮೊದಲೇ ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಿ ಹೊಸ ವ್ಯವಸ್ಥೆಗೆ ಬದಲಾಯಿಸಿಕೊಂಡಿದೆ ಎಂದು ವರದಿ ಹೇಳಿದೆ.
ರಾಯಿಟರ್ಸ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ರಷ್ಯಾದ ರೋಸ್‌ನೆಫ್ಟ್ ಕಂಪನಿಯಿಂದ ದಿನಕ್ಕೆ ಸುಮಾರು 500,000 ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಲು ದೀರ್ಘಾವಧಿಯ ಒಪ್ಪಂದವನ್ನು ಮಾಡಿಕೊಂಡಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅತಿದೊಡ್ಡ ಇಂಧನ ರಫ್ತುದಾರ ಮತ್ತು ರಷ್ಯಾ ತೈಲದ ಭಾರತದ ಅತಿದೊಡ್ಡ ಆಮದುದಾರ. ಭಾರತದ ಒಟ್ಟು ರಷ್ಯಾ ತೈಲ ಆಮದಿನ ಅರ್ಧದಷ್ಟು ರಿಲಯನ್ಸ್ ಮಾಡುತ್ತಿದೆ.
ರಾಯಿಟರ್ಸ್ ಪ್ರಕಾರ, ರಿಲಯನ್ಸ್‌ನ ತೈಲ ರಫ್ತಿನಲ್ಲಿ ಯುರೋಪ್ ಶೇ. 28 ರಷ್ಟು ಪಾಲನ್ನು ಹೊಂದಿದೆ.


