ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ, ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿಯ ಪ್ರತಿಮೆಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವುದರ ವಿರುದ್ದ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ” ಸಂಸತ್ ಆವರಣದ ಪ್ರಮುಖ ಸ್ಥಳದಿಂದ ಪ್ರತಿಮೆಗಳನ್ನು ತೆಗೆದು ಹಾಕಲಾಗುತ್ತಿದೆ ಎಂದಿದ್ದಾರೆ.
ಜೈರಾಮ್ ರಮೇಶ್ ಹೇಳಿಕೆಯ ಬಳಿಕ ಈ ವಿಷಯ ದೇಶದಾದ್ಯಂತ ಚರ್ಚೆಗೀಡಾಗಿತ್ತು. ಇತರ ಪಕ್ಷಗಳ ನಾಯಕರು ಕೂಡ ಪ್ರತಿಮೆಗಳ ಸ್ಥಳಾಂತರ ಕುರಿತು ಪ್ರಶ್ನೆಯೆತ್ತಿದ್ದರು.
ಈ ಹಿನ್ನೆಲೆ, ಲೋಕಸಭಾ ಸೆಕ್ರೆಟರಿಯೇಟ್ ಸ್ಪಷ್ಟನೆ ಕೊಟ್ಟಿದ್ದು, “ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಸಂಸತ್ ಆವರಣದ ‘ಪ್ರೇರಣಾ ಸ್ಥಳ’ಕ್ಕೆ ಸ್ಥಳಾಂತರಿಸಲಾಗಿದೆ. ಇದು ಕಳೆದ ವರ್ಷ ಮೇ ತಿಂಗಳಲ್ಲಿ ಉದ್ಘಾಟನೆಗೊಂಡ ಹೊಸ ಸಂಸತ್ ಭವನದ ನಿರ್ಮಾಣದ ನಂತರದ ಅಭಿವೃದ್ಧಿ ಕಾರ್ಯಗಳ ಭಾಗವಾಗಿದೆ” ಎಂದು ತಿಳಿಸಿದೆ.
ಪ್ರತಿಮೆಗಳನ್ನು ತೆರವುಗೊಳಿಸಿಲ್ಲ, ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.
“ಸಂಸತ್ ಸಂಕೀರ್ಣದ ವಿವಿಧ ಸ್ಥಳಗಳಲ್ಲಿ ಪ್ರತಿಮೆಗಳು ಇದ್ದಿದ್ದರಿಂದ ಸಂದರ್ಶಕರಿಗೆ ಅನಾನುಕೂಲವಾಗುತ್ತಿತ್ತು. ಹಾಗಾಗಿ, ಎಲ್ಲಾ ಪ್ರತಿಮೆಗಳನ್ನು ಸಂಸತ್ ಭವನದ ಸಂಕೀರ್ಣದಲ್ಲಿಯೇ ಭವ್ಯವಾದ ಪ್ರೇರಣಾ ಸ್ಥಳದಲ್ಲಿ ಗೌರವಯುತವಾಗಿ ಸ್ಥಾಪಿಸಲಾಗುತ್ತಿದೆ ಎಂದು ಲೋಕಸಭೆ ಸಚಿವಾಲಯ ಹೇಳಿದೆ.
ಇದನ್ನೂ ಓದಿ : ಬಿಜೆಪಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ: ಬೆಂಗಳೂರು ಸಿವಿಲ್ ಕೋರ್ಟಿನಿಂದ ರಾಹುಲ್ ಗಾಂಧಿಗೆ ಜಾಮೀನು


