ಆಂಟಿ-ವೈರಲ್ ರೆಮ್‌ಡೆಸಿವಿರ್ ಇಂಜೆಕ್ಷನ್ ಅನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಆರು ಜನರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಂಗಳವಾರ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ನೇರ ಮೇಲ್ವಿಚಾರಣೆಯಲ್ಲಿ ಆರು ಜನರನ್ನು ಬಂಧಿಸಿದೆ ಮತ್ತು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೆಮ್‌ಡೆಸಿವಿರ್ ಇಂಜೆಕ್ಷನ್‌ನ ಆರು ಬಾಟಲುಗಳನ್ನು ವಶಪಡಿಸಿಕೊಂಡಿದೆ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಬಂಧನಕ್ಕೊಳಗಾದವರಲ್ಲಿ ಲ್ಯಾಬ್ ತಂತ್ರಜ್ಞ, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ ಅಧೀಕ್ಷಕ ಮತ್ತು ಔಷಧಿಕಾರರು ಸೇರಿದ್ದಾರೆ. ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ದೊರೆತ ಹಿನ್ನಲೆಯಲ್ಲಿ ತಂಡವನ್ನು ರಚಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಇಸ್ರೇಲ್: ಫಿರಂಗಿಗಳು ಘರ್ಜಿಸುತ್ತಿರುವಾಗಲೂ ನಡೆಯುತ್ತಿವೆ ಮುಸ್ಲೀಮರು ಮತ್ತು ಯಹೂದಿಗಳ ಸೌಹಾರ್ದ ಕಾರ್ಯಕ್ರಮಗಳು!
ಹೆಚ್ಚುವರಿ ಎಸ್‌ಪಿ ನಾರಾಯಣಸ್ವಾಮಿ, ಸಹಾಯಕ ಎಸ್‌ಪಿ ಸಾಹಿಲ್ ಬಾಗ್ಲಾ, ಡಿವೈಎಸ್‌ಪಿ ಕೆ.ಸಿ.ಗಿರಿ, ಇನ್ಸ್‌ಪೆಕ್ಟರ್ ರಂಗಸಾಮಯ್ಯ ಅವರನ್ನು ಒಳಗೊಂಡ ಸೈಬರ್ ಅಪರಾಧ ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆ ನಡೆಸಿದ್ದರು. ಅವರು ಆರೋಪಿಗಳ ಮೊಬೈಲ್ ಸಂಖ್ಯೆ, ಇತರ ಚಲನವಲನಗಳನ್ನು ಮತ್ತು ಸಂಪರ್ಕಗಳನ್ನು ಟ್ರ್ಯಾಕ್ ಮಾಡಿದ್ದರು.
ಆರೋಪಿಗಳನ್ನು ಲ್ಯಾಬ್ ತಂತ್ರಜ್ಞ ಶಿವ ಕುಮಾರ್, ನರ್ಸಿಂಗ್ ಮೇಲ್ವಿಚಾರಕ ನಾಗರಾಜ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಅವರಿಂದ ರೆಮ್‌ಡೆಸಿವಿರ್‌ನ ನಾಲ್ಕು ಬಾಟಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅದೇ ತಂಡವು ಮತ್ತೊಂದು ಪ್ರಕರಣದಲ್ಲಿ, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಫಾರ್ಮಸಿ ಅಸಿಸ್ಟೆಂಟ್ ಆಗಿರುವ ನಾಗೇಶ್ ಮತ್ತು ನವೀನ್, ಸಂದೀಪ್ ಮತ್ತು ದರ್ಶನ್ ಅವರನ್ನು ಬಂಧಿಸಿ ರೆಮ್‌ಡೆಸಿವಿರ್‌ನ ಎರಡು ಬಾಟಲುಗಳನ್ನು ವಶಪಡಿಸಿಕೊಂಡಿದೆ.
ಆರೋಪಿಗಳು ರೆಮ್‌ಡೆಸಿವಿರ್‌ನ ಒಂದು ಬಾಟಲಿಗೆ 40 ಸಾವಿರ ರೂಗಳಷ್ಟು ದರವನ್ನು ವಿಧಿಸಿದ್ದರು ಎಂದು ಪೊಲೀಸರು ಕಂಡುಹಿಡಿದಿದ್ದಾರೆ.
ಅಕ್ರಮ ಮಾರಾಟವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ತಂಡವನ್ನು ಸೆಂಟ್ರಲ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಎಂ. ಚಂದ್ರಶೇಖರ್ ಶ್ಲಾಘಿಸಿದ್ದಾರೆ. ಅಕ್ರಮ ಮಾರಾಟದ ಹಿಂದಿನ ಸೂತ್ರಧಾರಿಗಳನ್ನು ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಈ ಊರಿನಲ್ಲಿ ಮರವೇ ಕೊರೊನಾ ಕೇಂದ್ರ, ಕೊಂಬೆಗಳಲ್ಲಿ ನೇತಾಡುತ್ತವೆ ಗ್ಲೂಕೋಸ್ ಬಾಟಲ್‌ಗಳು!


