Homeಕರ್ನಾಟಕಪುನೀತ್ ರಾಜಕುಮಾರ್ ನುಡಿನಮನ; ಮುಗ್ಧ ನಗುವೊಂದರ ಕಣ್ಮರೆ

ಪುನೀತ್ ರಾಜಕುಮಾರ್ ನುಡಿನಮನ; ಮುಗ್ಧ ನಗುವೊಂದರ ಕಣ್ಮರೆ

- Advertisement -
- Advertisement -

ಅ. 29, ಶುಕ್ರವಾರ – ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಪರದೆ ಮೇಲೆ ನಮ್ಮನ್ನೆಲ್ಲ ರಂಜಿಸಿದ ಕುಣಿದು ಕುಪ್ಪಳಿಸಿ ನಮ್ಮನ್ನು ಸಂತೋಷಪಡಿಸಿದ ಅಪ್ಪು ನಿಷ್ಕ್ರಿಯರಾಗಿ ಮಲಗಿರುವುದನ್ನು ನೋಡಲಾಗುತ್ತಿಲ್ಲ. ಅವರಿಗನ್ನೂ ಸಣ್ಣ ಪ್ರಾಯ. ನಲವತ್ತಾರು ಸಾಯುವ ವಯಸ್ಸಲ್ಲ. ಆದರೆ ಸಾವು ನಮ್ಮ ಮೇಲೆ ಎರಗಿ ಯಾವಾಗಬೇಕಾದರೂ ಎತ್ತಿಕೊಂಡು ಹೋಗಿಬಿಡಬಹುದು. ಈ ಸಾವೆಂಬ ಸಾವು ಅನಿರೀಕ್ಷಿತವಾಗಿ ತಂದೊಡ್ಡುವ ಆಘಾತವನ್ನು ಸಹಿಸಿಕೊಳ್ಳುವ ವ್ಯಾಕರಣ ಮನುಷ್ಯನಿಗೆ ಇನ್ನೂ ದಕ್ಕಿಲ್ಲ. ಸಾವು ಸೃಷ್ಟಿಸುವ ಶೂನ್ಯ ಮತ್ತು ವಿಷಾದಗಳ ಅಗಾಧತೆ ಯಾವತ್ತೂ ಅನೂಹ್ಯ. ಸಾವುಗಳು ಅನಾವರಣ ಮಾಡುವ ಈ ಖಾಲಿತನ ಶಾಶ್ವತವಾಗಿ ನಮ್ಮ ಜೊತೆಯೇ ಉಳಿದುಬಿಡುತ್ತದೆ. ಈ ಖಾಲಿತನ ಕಾಲ ಚಲಿಸುತ್ತಿದ್ದಂತೆ ನಿರಸನವಾಗುತ್ತದೆ ಎಂದುಕೊಂಡರೂ ಅದು ಮಾಡಿಬಿಡುವ ಗಾಯಗಳು ಯಾವತ್ತೂ ಉಳಿದಿರುತ್ತವೆ.

ಪುನೀತ್ ಎಂಬ ಕಲಾವಿದ ವೃದ್ಧಾಪ್ಯದವರೆಗೆ ಬಾಳಿಬದುಕಿ, ಹಲವು ಪಾತ್ರಗಳಲ್ಲಿ ನಮ್ಮನ್ನು ಖುಷಿಪಡಿಸಿ ಹೊರಟು ಹೋಗಿದ್ದಾಗಲೂ ಈ ತೀವ್ರ ವಿಷಾದ ನಮ್ಮನ್ನು ಮುತ್ತಿ ಹಿಂಸಿಸುತ್ತಿತ್ತು. ಆದರೆ ಚಿಕ್ಕ ವಯಸ್ಸಿನಲ್ಲಿ ಲವಲವಿಕೆಯಿಂದ ತೆರೆಯ ಮೇಲೆ ಮಿಂಚಿತ್ತಿರುವಾಗ ಅಕಾಲಿಕವಾಗಿ ಹೊರಟು ಹೋಗುವುದಿದೆಯಲ್ಲ ಆಗ ಕಾಡುವ ನೋವು ನಮ್ಮ ಕಾಲವನ್ನೇ ನಿಲ್ಲಿಸಿಬಿಡುತ್ತದೆ. ಹೀಗಾಗಿ ಮನುಷ್ಯ ಸದಾ ತನ್ನನ್ನು ಬೆನ್ನಟ್ಟಿ ಬರುವ ಸಾವಿನ ಭಯವನ್ನು ಮೀರಿ ನಿಲ್ಲಲು ಅಧ್ಯಾತ್ಮ, ದೇವರು, ಮುಕ್ತಿ ಎಂಬ ನೆಪಗಳನ್ನು ಹುಡುಕಿಕೊಂಡು ಹೋಗುತ್ತಲೇ ಇರುತ್ತಾನೆ. ಇದನ್ನು ಜಿಡ್ಡು ಕೃಷ್ಣಮೂರ್ತಿ ತಮ್ಮ The Book of Life (ಅನುವಾದ: ಓ. ಎಲ್. ನಾಗಭೂಷಣಸ್ವಾಮಿ) ಕೃತಿಯಲ್ಲಿ ಹೀಗೆ ವಿವರಿಸುತ್ತಾರೆ; ‘ಪ್ರತಿನಿಮಿಷವೂ ಸಾಯುತ್ತಿರುವುದರಿಂದ ಪ್ರತಿನಿಮಿಷವೂ ಮರುಹುಟ್ಟು ಪಡೆಯುತ್ತಿರುತ್ತೀರಿ, ಹೊಸತಾಗುತ್ತೀರಿ. ಆದ್ದರಿಂದಲೇ ಅವ್ಯಕ್ತಕ್ಕೆ ನಿಮ್ಮನ್ನು ತೆರೆದುಕೊಂಡಿರುತ್ತೀರಿ. ವಾಸ್ತವವೇ ಅವ್ಯಕ್ತ. ಸಾವೂ ಅವ್ಯಕ್ತ. ಆದರೆ ಸಾವು ಸುಂದರ, ಸತ್ತ ನಂತರವೂ ನಮ್ಮ ಬದುಕು ಮುಂದುವರೆಯುತ್ತದೆ ಎಂದೆಲ್ಲ ಹೇಳುವುದು ಅವಾಸ್ತವ, ಅಸಂಬಂದ್ಧ. ಸಾವನ್ನು ಅದು ಇರುವಂತೆಯೇ ಕಾಣುವುದು ವಾಸ್ತವ. ಸಾವು ಎಂದರೆ ಕೊನೆಗಾಣುವಿಕೆಯೇ ಹೊರತು ನಿರಂತರತೆಯಲ್ಲ. ಕೊನೆಗಾಣುವುದರಿಂದಷ್ಟೇ ಹೊಸತಾಗುವುದು, ಮರುಹುಟ್ಟು ಪಡೆಯುವುದು ಸಾಧ್ಯ. ಯಾವುದು ನಿರಂತರವೋ ಅದು ಕೊಳೆಯುತ್ತದೆ. ಯಾವುದು ಹೊಸತಾಗಬಲ್ಲ ಶಕ್ತಿ ಪಡೆದಿದೆಯೋ ಅದು ಅನಂತವಾಗಿರುತ್ತದೆ’. ಹೀಗೆ ಸಾವು ತಂದೊಡ್ಡುವ ಆಘಾತದಿಂದ ತಪ್ಪಿಸಿಕೊಳ್ಳಲು ಮತ್ತು ತಕ್ಷಣಕ್ಕೆ ನಮ್ಮನ್ನು ಸಮಾಧಾನಪಡಿಸಿಕೊಳ್ಳಲು ಒದ್ದಾಡುತ್ತೇವೆ. ಆಗ ನಾವು ಪದೇಪದೇ ವೇದಾಂತ ಮತ್ತು ಮನುಷ್ಯ ಬದುಕಿನ ನಶ್ವರತೆಯ ತತ್ವಗಳ ಮೊರೆಹೋಗುತ್ತೇವೆ.

ಮುಗ್ಧ ನಗುವಿನ ಚೆಲುವು
ಪುನೀತ್ ಎಂದಾಕ್ಷಣ ನಮಗೆ ತಟ್ಟನೆ ಮುಗ್ಧ ನಗುವೊಂದು ಮಿಂಚಿ ಆವರಿಸಿಕೊಳ್ಳುತ್ತದೆ. ನಸುಗಪ್ಪು ಬಣ್ಣದ ಈ ಯುವಕನಿಗೆ ಅಪ್ರತಿಮ ಚೆಲುವು ಪ್ರಾಪ್ತವಾಗಿದ್ದೇ ಈ ಅಮಾಯಕ ನಗುವಿನಿಂದ. ಕನ್ನಡದ ಸಂಪ್ರದಾಯಸ್ಥ ಸಿನೆಮಾ ನೋಡುಗರು ಯಾವತ್ತೂ ಬಿಳಿಗೆಂಪು ಮೈಬಣ್ಣದ ನಾಯಕ ನಟರನ್ನು ನೋಡಿ ಮೆಚ್ಚಿದ್ದೇ ಹೆಚ್ಚು. ಈ ಕಾರಣದಿಂದ ಕೆಲ ದಶಕಗಳ ಹಿಂದೆ ಕನ್ನಡದ ಕಪ್ಪು ಮೈಬಣ್ಣದ ಅನೇಕ ಪ್ರತಿಭಾವಂತ ಕಲಾವಿದರು ತಮಿಳು ಸಿನೆಮಾಗಳ ಕಡೆ ನಡೆದುಹೋದರು. ಕಲಾವಿದರ ಈ ವಲಸೆಗೆ ಅವರ ಮೈಬಣ್ಣವೇ ಮುಖ್ಯವಾದ ಕಾರಣಗಳಲ್ಲೊಂದಾಗಿತ್ತು. ಆದರೆ ಈ ಸಂಪ್ರದಾಯವನ್ನು ಜನರ ಮನಸ್ಸಿನಿಂದ ಹೋಗಲಾಡಿಸಿದ್ದು ನಸುಗಪ್ಪು ಬಣ್ಣದ ಡಾ. ರಾಜ್ ಪುತ್ರರು. ಕೇವಲ ಪ್ರತಿಭೆಯೊಂದರಿಂದಲೇ ಅವರು ಕನ್ನಡದ ಪ್ರೇಕ್ಷಕರ ಸಾಂಪ್ರದಾಯಿಕ ನೋಟಕ್ರಮವನ್ನೇ ಬದಲಿಸಿದ್ದರು. ಪುನೀತ್ ಕೇವಲ ಒಬ್ಬ ನಟನಾಗಿ ಜನರ ಮನದಲ್ಲಿರಲಿಲ್ಲ. ನಮ್ಮದೇ ಬೀದಿಯಲ್ಲಾಡುವ ಹುಡುಗನ ತರಹ ಆತನನ್ನು ಎಲ್ಲರೂ ಭಾವಿಸುತ್ತಿದ್ದರು. ಚಲಿಸುವ ಮೋಡಗಳು, ಬೆಟ್ಟದ ಹೂ ಮತ್ತು ಭಕ್ತ ಪ್ರಹ್ಲಾದ ಸಿನೆಮಾದ ಆ ಮುಗ್ಧ ಬಾಲಕ ಜನರ ಮನದಲ್ಲಿ ಇಳಿದುಹೋಗಿದ್ದನು.

ಬೆಟ್ಟದ ಹೂ, ಎರಡು ನಕ್ಷತ್ರಗಳು, ಚಲಿಸುವ ಮೋಡಗಳು ಸಿನೆಮಾದಲ್ಲಿ ಜನರನ್ನು ಆಕರ್ಷಿಸಿದ್ದು ಪುನೀತ್ ಅವರ ನಿಷ್ಕಳಂಕ ನಗು. ‘ಅಪ್ಪು ಸಿನೆಮಾದಿಂದ ಪುನೀತ್ ಹೊಸ ಅಭಿಯಾನ ಶುರು ಮಾಡಿದಾಗಲೂ ಜನರ ಮನಸಲ್ಲಿ ಜೀವಂತ ವಾಗಿದ್ದದ್ದು ‘ಬೆಟ್ಟದ ಹೂ’ ಚಿತ್ರದ ಅದೇ ಅಮಾಯಕ ಹುಡುಗ. ಕಂಠೀರವ ಕ್ರಿಡಾಂಗಣದಲ್ಲಿ ಪುನೀತ್ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆಂದು ಇಟ್ಟಾಗ ಈ ದೃಶ್ಯಗಳನ್ನು ಟಿವಿಯಲ್ಲಿ ನೋಡಿದ ಹಳ್ಳಿಯ ಚಿಕ್ಕಮಗುವೊಂದು ‘ನನಗೆ ಅಪ್ಪು ಬೇಕು…….’ ಎಂದು ಅಳುತ್ತಿತ್ತು. ಪುನೀತ್‌ಗೆ ವಯಸ್ಸಿನ ಭೇದವಿಲ್ಲದೆ ಕೋಟ್ಯಾಂತರ ಅಭಿಮಾನಿಗಳಿದ್ದರು. ತಾನು ನಿರ್ವಹಿಸುತ್ತಿದ್ದ ಪಾತ್ರಗಳಲ್ಲಿ ಪುನೀತ್ ಲೀಲಾಜಾಲವಾಗಿ ನಟಿಸುತ್ತಾ, ಕುಣಿಯುತ್ತ, ವೀರಾವೇಶದಿಂದ ಹೊಡೆದಾಡುತ್ತಿದ್ದಾಗಲೂ ಜನ ಆತನಲ್ಲಿ ಅಮಾಯಕ ಹುಡುಗನನ್ನೇ ಹುಡುಕಿದರು. ಈ ಕಾರಣಕ್ಕಾಗಿಯೇ ಪುನೀತ್ ಕರ್ನಾಟಕದ ಉದ್ದಗಲಕ್ಕೂ ಜನಪ್ರಿಯರಾದರು. ತಾನು ಆರಿಸಿಕೊಳ್ಳುತ್ತಿದ್ದ ಕಥೆಗಳು, ಆ ಕಥೆಗಳನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ತರಲು ಆತ ಹಾಕುತ್ತಿದ್ದ ಶ್ರಮ ಎಲ್ಲರ ಕಣ್ಣಿಗೆ ಕಾಣುತ್ತಿತ್ತು. ಸಿನೆಮಾದ ಮೂಲಕ ಸಮಾಜದಲ್ಲಿನ ವೈಪರಿತ್ಯಗಳನ್ನು ಅನಾವರಣ ಮಾಡುವುದು, ಆ ಮೂಲಕ ಮನರಂಜನೆಯನ್ನು ನೀಡುವುದು, ಜನ ಬಯಸುವ ಪಾತ್ರಗಳನ್ನು ಮಾಡುವ ತುರ್ತುಗಳಲ್ಲಿ ಒಬ್ಬ ಕಲಾವಿದ ಅನೇಕ ಸಂಗತಿಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಪುನೀತ್ ಹೀಗೆ ತನ್ನನ್ನು ತಾನು ಅಣಿಗೊಳಿಸುತ್ತಿದ್ದ ಸಂಗತಿ ಎದ್ದು ಕಾಣುತ್ತಿತ್ತು. ಫಿಟ್ ಆಗಿರಲು, ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ಆರೋಗ್ಯವಾಗಿರಲು ನಿರಂತರವಾಗಿ ಪ್ರಯತ್ನ ಪಡುತ್ತಿದ್ದರು ಎಂಬುದನ್ನು ಅವರು ಅನೇಕ ಸಲ ಹೇಳಿಕೊಂಡಿದ್ದಾರೆ.

ಪರಂಪರೆಯ ಹಂಗು ಮತ್ತು ಬಿಡುಗಡೆ
ತಾನು ಬದುಕಿ ಬಾಳಿದ ಪರಂಪರೆಯ ಆವರಣದ ಒಳಗೆ ಒಬ್ಬ ಸೃಜನಶೀಲನು ರೂಪುಗೊಳ್ಳುತ್ತಾ ಹೋಗುತ್ತಾನೆ. ಅವನ ಅಭಿವ್ಯಕ್ತಿಗೆ ಪಾರಂಪರಿಕವಾದ ಸ್ಮೃತಿಗಳು ಪೋಷಕ ಸಂಗತಿಗಳಾಗುತ್ತವೆ. ಕನ್ನಡದ ರಂಗ ಸಂಪ್ರದಾಯ ಅದರಲ್ಲೂ ಸುಬ್ಬಯ್ಯ ನಾಯ್ಡು, ಗುಬ್ಬಿ ವೀರಣ್ಣ, ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಪರಂಪರೆಯೇ ಒಬ್ಬ ರಾಜಕುಮಾರನನ್ನು ಸೃಷ್ಟಿಸಿತು. ಆದರೆ ರಾಜಕುಮಾರ್ ಅವರು ಪರಂಪರೆಯ ಹಂಗಿನಲ್ಲಿಯೇ ವಿಶ್ರಮಿಸಲಿಲ್ಲ. ಪರಂಪರೆಯ ಸತ್ವವನ್ನು ಹೀರಿಕೊಂಡು ತನ್ನ ಜೀವನಾನುಭವ ಮತ್ತು ಕಲಿಯುವ ಹಠದಿಂದ ಚರಿತ್ರೆಯ ಹಂಗನ್ನು ಮೀರಲು ರಾಜಕುಮಾರ್ ಪ್ರಯತ್ನಿಸುತ್ತಲೇ ಇದ್ದರು. ಮಗುತನದಲ್ಲಿ, ಪ್ರಚ್ಛನ್ನ ಅಮಾಯಕತೆಯಲ್ಲಿ ಸದಾ ಕಲಿಯುವ ಹಠ ಜೀವಂತವಾಗಿರುತ್ತದೆ. ಸದಾ ಕಲಿಯುತ್ತಲೇ ಇರಬೇಕು ಎಂಬ ಈ ಹಠ ನಮ್ಮ ಕ್ರಿಯೆಗಳನ್ನು ಕಲೆಯ ಹಂತಕ್ಕೆ ಕೊಂಡೊಯ್ಯುತ್ತವೆ. ರಾಜಕುಮಾರ್ ತಾವು ಇನ್ನೂರು ಸಿನೆಮಾಗಳಲ್ಲಿ ಅಭಿನಯಿಸಿದ ನಂತರವೂ ‘ನಟನೆಯಲ್ಲಿ ನಾನಿನ್ನೂ ಕಲಿಯುವುದಿದೆ’ ಎನ್ನುತ್ತಲೇ ಇದ್ದರು. ಇದು ಸಾರ್ವಜನಿಕವಾಗಿ ರಾಜಕುಮಾರ್ ಅವರು ತೋರುತ್ತಿದ್ದ ಹುಸಿ ವಿನಯವಾಗಿರಲಿಲ್ಲ. ರಾಜಕುಮಾರ್ ಮಗುತನವನ್ನು ಕಳೆದುಕೊಳ್ಳದೆ ಅಭಿನಯ ಕಲೆಯಲ್ಲಿ ಮುಳುಗಿ ಹೋಗಿದ್ದ ನಿಜ ಅರ್ಥದ ಸೃಜನಶೀಲನಾಗಿದ್ದರು. ಮಗುತನ ಕೊನೆಯಾದ ದಿನ ಸೃಜನಶೀಲನೊಬ್ಬ ನಾಶವಾಗುವ ಪ್ರಕ್ರಿಯೆ ಆರಂಭವಾಗುತ್ತದೆ.

ಪರಂಪರೆಯ ಬಲ ಎಷ್ಟೇ ಇದ್ದರೂ, ಯಾವುದೇ ಸೃಜನಶೀಲ ಪ್ರಕಾರದಲ್ಲಿ ತಲ್ಲೀನನಾಗುವ ಕಲಾವಿದ ತನ್ನ ಜೀವನಾನುಭವ ಮತ್ತು ಸದಾ ಕಲಿಯಲು ಬೇಕಾದ ಅಮಾಯಕತೆಯನ್ನು ಕಾಯ್ದುಕೊಳ್ಳದಿದ್ದಲ್ಲಿ ಹೆಚ್ಚಿನದನ್ನು ಸಾಧಿಸಲಾರ. ರಾಜಕುಮಾರ್ ಅವರ ಮೂರು ಜನ ಮಕ್ಕಳ ಯಶಸ್ಸನ್ನು ನಾವು ಹೀಗೆ
ಅರ್ಥಮಾಡಿಕೊಳ್ಳಬೇಕು. ಪುನೀತ್, ಡಾ. ರಾಜಕುಮಾರ್ ಅವರ ಮಗನಾಗಿದ್ದ ಕಾರಣಕ್ಕಾಗಿ ಆತನ ತಲೆಯ ಮೇಲೆ ಸದಾ ಪರಂಪರೆಯ ಭಾರ ಇದ್ದೇ ಇತ್ತು. ಡಾ. ರಾಜ್ ಲೆಗಸಿಯ ತೂಕ ಸಾಮಾನ್ಯವಾದದ್ದೇನಲ್ಲ. ಆದರೆ ಆ ತೂಕವನ್ನು ಪಾರ್ವತಮ್ಮನವರ ಜೊತೆ ಶಿವಣ್ಣ ಮತ್ತು ಪುನೀತ್ ಲೀಲಾಜಾಲವಾಗಿ ಹೊತ್ತುನಡೆದರು. ಜೊತೆಗೆ, ತಂದೆಯ ಪ್ರಚ್ಛನ್ನ ಪ್ರಭಾವಳಿಯ ಮುಂದೆ ಈ ಇಬ್ಬರು ಕಲಾವಿದರು ಮಂಕಾಗಲೇ ಇಲ್ಲ. ಸ್ವಂತಿಕೆಯನ್ನು ಮೈಗೂಡಿಸಿಕೊಂಡೇ ಚಿತ್ರದಿಂದ ಚಿತ್ರಕ್ಕೆ ತಮ್ಮ ಛಾಪನ್ನು ಮೂಡಿಸುತ್ತಲೇಹೋದರು. ತಂದೆಯ ಸಜ್ಜನಿಕೆ, ವಿನಯ ಮತ್ತು ಸರಳತೆಯನ್ನು ಬಿಟ್ಟುಕೊಡದೆ ತಮ್ಮಲ್ಲಿ ಅಂತರ್ಗತ ಮಾಡಿಕೊಂಡಿದ್ದರು. ಈ ಕಾರಣಕ್ಕಾಗಿಯೇ ರಾಜಕುಮಾರ್ ಅವರ ಮನೆಗೆ ‘ದೊಡ್ಡ ಮನೆ’ ಎಂಬ ಅಭಿದಾನ ಪ್ರಾಪ್ತವಾಯಿತು. ಜನರ ಸಂಪತ್ತನ್ನು ಲೂಟಿ ಹೊಡೆದ ಅನೇಕರು ಎಕರೆಗಟ್ಟಲೆ ಅರಮನೆಗಳನ್ನು ಕಟ್ಟಿಸಿರಬಹುದು. ಆದರೆ ವಿನಯ, ಸಜ್ಜನಿಕೆ, ಕಲಾರಾಧನೆ ಮತ್ತು ಸರಳತೆಗಳಿಂದಲೇ ಕಟ್ಟಿದ ಡಾ. ರಾಜ್ ಮನೆಗೆ ‘ದೊಡ್ಡ ಮನೆ’ ಎಂಬ ಹೆಸರು ಮಾತ್ರ ಅನ್ವರ್ಥ.

ಆದರೆ ಭಾರತದ ಜನತೆಯಾದ ನಮಗೆ ವರ್ತಮಾನದ ಎಲ್ಲವನ್ನೂ ಪರಂಪರೆಯ ಅಳತೆಗೋಲಿನಿಂದ ನೋಡುವ ಚಟ ಜಾಸ್ತಿ. ನಮಗೆ ಹಳಹಳಿಕೆಯೆಂಬುದು (Nostalgia) ಡಿಎನ್‌ಎದಲ್ಲಿಯೇ ಇದ್ದುಬಿಟ್ಟಿದೆ. ಭಾರತ ದೇಶ ಕಂಡ ಅಪ್ರತಿಮ ಕಲಾವಿದ ಡಾ. ರಾಜಕುಮಾರ್ ಅವರಿಗೆ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೊನೆಗೂ ಬರಲಿಲ್ಲ. (ಹಾಡುಗಾರಿಕೆಗೆ ರಾಷ್ಟ್ರ ಪ್ರಶಸ್ತಿ ಬಂತು) ಆದರೆ ಪುನೀತ್ ತನ್ನ ಬಾಲ್ಯದಲ್ಲಿಯೇ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಪುನೀತ್ ಅವರ ‘ಅಪ್ಪು ಸಿನೆಮ ಬಿಡುಗಡೆ ಆದಾಗ ರಾಜಕುಮಾರ್ ಅವರು, ‘ಪುನೀತ್ ಅವರನ್ನು ರಾಜಕುಮಾರ್ ಅವರ ಮಗ ಎಂದು ಭಾವಿಸಿ ಈ ಸಿನೆಮಾ ನೋಡಬೇಡಿ. ಇವನು ನಿಮ್ಮ ಮನೆಯ ಕಂದ ಎಂದು ಭಾವಿಸಿಕೊಂಡು ಸಿನೆಮಾ ನೋಡಿ. ಅವನಲ್ಲಿ ಅಭಿನಯ ಕಲೆ ಇದ್ದಲ್ಲಿ ಬೆಳೆಸಿ, ನನ್ನ ಹೆಸರೇ ಅವನಿಗೆ ಭಾರವಾಗಬಾರದು’ ಎಂದು ಕನ್ನಡದ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಪರಂಪರೆ ಎಂಬುದು ಯಾರಿಗೂ ಭಾರವಾಗಬಾರದು ಎಂಬುದು ಅವರ ಭಾವನೆಯಾಗಿತ್ತೇ? ಗೊತ್ತಿಲ್ಲ.

‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮವನ್ನು ಪುನೀತ್ ನಡೆಸಿಕೊಡಲಾರಂಭಿಸಿದ ದಿನ ನಾವೆಲ್ಲ ಆತನನ್ನು ‘ಕೌನ್ ಬನೇಗ ಕರೋಡ್‌ಪತಿ’ ಕಾರ್ಯಕ್ರಮವನ್ನು ಹಿಂದಿಯಲ್ಲಿ ನಿರೂಪಿಸುತ್ತಿದ್ದ ಅಮಿತಾಬ್ ಬಚ್ಚನ್‌ಗೆ ಹೋಲಿಸಿ ನೋಡಲಾರಂಭಿಸಿದೆವು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಸಂಚಿಕೆಯಿಂದ ಸಂಚಿಕೆಗೆ ಪುನೀತ್ ಬೆಳೆದ ರೀತಿ ನನ್ನಲ್ಲಂತೂ ಬೆರಗು ಹುಟ್ಟಿಸಿತ್ತು. ಅಮಿತಾಬ್ ಅವರ ಪ್ರಬುದ್ಧ ನಿರೂಪಣೆಯೂ ಪುನೀತ್ ಅವರ ಲವಲವಿಕೆಯ ಮುಂದೆ ನೀರಸವೆನಿಸತೊಡಗಿತು. ಈ ಕಾರ್ಯಕ್ರಮದ ನಿರೂಪಣೆಗಾಗಿ ಪುನೀತ್ ಕರ್ನಾಟಕವನ್ನೂ ಒಳಗೊಂಡಂತೆ ಜಗತ್ತಿನ ಆಗುಹೋಗುಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಓದಲು ಶುರು ಮಾಡಿದ್ದರಂತೆ. ಅದಕ್ಕಾಗಿ ಕನ್ನಡದ ಪ್ರಸಿದ್ಧ ಚಿತ್ರ ನಿರ್ದೇಶಕರೊಬ್ಬರು ಮಾರ್ಗದರ್ಶನ ಮಾಡಿದ್ದು, ಪುನೀತ್ ಶಾಲಾ ವಿದ್ಯಾರ್ಥಿಯ ತರಹ ಕಲಿಯಲಾರಂಭಿಸಿದ್ದು ಈಗ ಇತಿಹಾಸ ಮಾತ್ರ. ಕೆಳಮಧ್ಯಮ ವರ್ಗದ ಜನರು ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚುಹೆಚ್ಚು ಹಣ ಗಳಿಸಿಲಿ ಎಂದು ಪುನೀತ್ ಪೇಚಾಡುತ್ತಿದ್ದರು ಎಂದು ಆ ಕಾರ್ಯಕ್ರಮದ ನಿರ್ದೇಶಕ ರಾಘವೇಂದ್ರ ಹುಣುಸೂರು ಹೇಳಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನಜೀವನ, ಅವರ ಕಷ್ಟಗಳು, ರೈತರ ಆತ್ಮಹತ್ಯೆಗಳು, ಜಾತಿ ಅಸಮಾನತೆಗಳು ಪುನೀತ್‌ಗೆ ಅರ್ಥವಾಗತೊಡಗಿದ್ದವು. ರೈತರಿಗೆ, ಬಡವರ ಮಕ್ಕಳಿಗೆ, ಅನಾಥ ರೋಗಿಗಳಿಗೆ ಪುನೀತ್ ನೆರವು ನೀಡಲಾರಂಭಿಸಿದರು. ಈ ಮೂಲಕ ಪುನೀತ್ ತನ್ನ ಮಿತಿಗಳಲ್ಲಿಯೇ ಸಮಾಜದಲ್ಲಿದ್ದ ಸಮಸ್ಯೆಗಳಿಗೆ ಉತ್ತರ ಹುಡುಕಲು ಮತ್ತು ಜನರ ಕಷ್ಟಗಳಿಗೆ ಪರಿಹಾರ ಕಲ್ಪಿಸಲು ಮುಂದಾದರು. ಚಿತ್ರೋದ್ಯಮದಲ್ಲಿ ಯಾವ ಹಿನ್ನೆಲೆಗಳಿಲ್ಲದೆ ಕೆಲಸ ಮಾಡುತ್ತಿದ್ದ ಪ್ರತಿಭಾವಂತರ ಬೆನ್ನಿಗೆ ನಿಂತು ಅವರ ಕೈಲಿ ಸಿನೆಮಾಗಳನ್ನು ಮಾಡಿಸಲು ಮುಂದಾದರು. ಪುನೀತ್ ಒಬ್ಬ ಮನುಷ್ಯನಾಗಿ ಪಡೆದ ಈ ಎಲ್ಲ ಅನುಭವಗಳು ಅವರು ನಟಿಸುತ್ತಿದ್ದ ಪಾತ್ರಗಳಲ್ಲಿ ಅನಾವರಣಗೊಳ್ಳುತ್ತಿರುವಂತೆ ಭಾಸವಾಗುತ್ತಿತ್ತು. ವರ್ತಮಾನದ ಬದುಕಿಗೆ ತೆರೆದುಕೊಂಡ ಕಲಾವಿದನಿಗೆ ಸಜ್ಜನಿಕೆ, ಮಾನವೀಯತೆ, ಪ್ರಬುದ್ಧತೆ ಮತ್ತು ಹೊಸತನಗಳು ಹೀಗೆ ಮೈಗೂಡುತ್ತಲೇ ಹೋಗುತ್ತವೆ.

ನಾನು ರಾಜಕುಮಾರ್, ವಿಷ್ಣುವರ್ಧನ್ ಅವರ ಚಿತ್ರಗಳ ಹೊರತಾಗಿ ಥಿಯೇಟರ್‌ಗೆ ಹೋಗಿ ಸಿನೆಮಾ ನೋಡುವುದನ್ನೇ ಬಿಟ್ಟಿದ್ದೆ. ಆದರೆ ಪುನೀತ್ ಸಿನೇಮಾಗಳನ್ನು ಥಿಯೇಟರ್‌ಗೆ ಹೋಗಿ ನೋಡಲಾರಂಭಿಸಿದೆ. ಪುನೀತ್ ಅಭಿನಯದ ‘ಅಪ್ಪು ನನಗೆ ತುಂಬಾ ಇಷ್ಟವಾಗಿತ್ತು. ಮಂಕಿ ಕ್ಯಾಪ್ ಹಾಕಿಕೊಂಡು ಪೋಲಿಸ್ ಅಧಿಕಾರಿಯನ್ನು ಹೊಡೆಯುವ ಪ್ರಸಂಗವೊಂದಿದೆ, ಅದು ಅನೇಕರಿಗೆ ಬಹಳ ಪ್ರಿಯವಾದ ದೃಶ್ಯವಾಗಿತ್ತು. ಅಸಹಾಯಕ ತಂದೆಯ ಪುಂಡ ಮಗನೊಬ್ಬ ಬಂಡೇಳುವ ಇಂತಹ ಸನ್ನಿವೇಶಗಳು ಎಲ್ಲರ ಬದುಕಲ್ಲೂ ಆಗಿಹೋಗಿರಬಹುದು. ಪುನೀತ್ ಅವರ ಡ್ಯಾನ್ಸ್‌ಗಿಂತ ಅವರು ಲೀಲಾಜಾಲವಾಗಿ ಮಾಡಿ ಮುಗಿಸುತ್ತಿದ್ದ ಫೈಟ್ ಮತ್ತು ಸ್ಟಂಟ್‌ಗಳು ನನ್ನಂತಹ ಅನೇಕರ ಮನಸೆಳೆದಿದ್ದವು. ಆದರೆ ಇತ್ತೀಚಿಗೆ ನಟಿಸಿದ ‘ರಾಜಕುಮಾರ’ ಸಿನೆಮಾ ಅಣ್ಣಾವರನ್ನು ಪದೇಪದೇ ನೆನಪಿಸಿತು. ಪುನೀತ್ ಬೆಳೆದಂತೆಲ್ಲ ಅವರ ಪಾತ್ರ ನಿರ್ವಹಣೆಯಲ್ಲಿ ತೋರುತ್ತಿದ್ದ ತನ್ಮಯತೆ ದಂಗುಬಡಿಸುತ್ತಿತ್ತು. ಇನ್ನೇನು ಕನ್ನಡದ ಸಿನೆಮಾ ಜಗತ್ತಿಗೆ ಅಭಿಜಾತ ಕಲಾವಿದನೊಬ್ಬ ದಕ್ಕಿದ ಎಂದುಕೊಳ್ಳುತ್ತಿರುವಾಗಲೆ ಸಾವು ನಮ್ಮ ಆಸೆಗೆ ಬೆಂಕಿ ಇಟ್ಟಿದೆ. ಎಚ್ಚರವಾಗಿದ್ದಷ್ಟು ಕಾಲ ಮಾಡಬೇಕಾದ ಅತ್ಯುತ್ತಮ ಕೆಲಸಗಳನ್ನು ಮಾಡಿ ಮುಗಿಸಬೇಕು ಎಂಬ ತೀವ್ರತೆಯಲ್ಲಿ ಬದುಕಿದ ಕೆಲ ವ್ಯಕ್ತಿಗಳು ಈ ತಕ್ಷಣಕ್ಕೆ ನನಗೆ ನೆನಪಾಗುತ್ತಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಡಿ.ಆರ್. ನಾಗರಾಜ್, ಸಿನೆಮಾ ರಂಗದಲ್ಲಿ ಶಂಕರ್ ನಾಗ್ ಮತ್ತು ಪುನೀತ್ ಹೀಗೆ ತೀವ್ರವಾಗಿ ಬದುಕಿಹೋದವರು. ಪುನೀತ್ ಯಾವಾಗಲೂ ಫಿಟ್ ಆಗಿರಲು ಬಯಸಿ ತೊಡಗಿಸಿಕೊಳ್ಳುತ್ತಿದ್ದ ವಿಪರೀತ ದೈಹಿಕ ಚಟುವಟಿಕೆಯೇ ಅವರಿಗೆ ಮುಳುವಾಯಿತೇ? ಅತ್ಯುತ್ತಮವಾದದ್ದನ್ನು ನೀಡುವ ಭರದಲ್ಲಿ ಪುನೀತ್ ದೇಹವನ್ನು ವಿಪರೀತ ದಂಡಿಸಿಬಿಟ್ಟರೇ? ಎಲ್ಲವನ್ನೂ ಬೇಗ ಮಾಡಿಮುಗಿಸುವ ಆತುರ ಅವರನ್ನು ಎಳೆದೊಯ್ಯಿತೇ? ಗೊತ್ತಿಲ್ಲ. ಈ ಪ್ರಶ್ನೆಗಳಿಗೆ ಉತ್ತರಿಸಲು ಅಪ್ಪು ಬದುಕಿಲ್ಲ. ಈ ಪ್ರಶ್ನೆಗಳಿಗೆ ಉತ್ತರಗಳೂ ಸಿಗುವುದಿಲ್ಲ. ಆದರೆ ಅವರ ಬದುಕು ನಮಗೆ ಅನೇಕ ಸಂಗತಿಗಳನ್ನು ಅನಾವರಣ ಮಾಡಿದೆ. ಆದರೆ ಅಪ್ಪು ಈಗ ನಮ್ಮ ಜೊತೆಗಿಲ್ಲ. ಆತ ಇಲ್ಲ ಎನ್ನುವ ದುಃಖ ಮತ್ತು ಖಾಲಿತನವನ್ನು ನೀಗಿಕೊಳ್ಳಲು ಈ ಟಿಪ್ಪಣಿಯನ್ನು ಬರೆದಿರುವೆ. ಕನ್ನಡದ ಚಿತ್ರರಂಗವನ್ನು ಮತ್ತು ಅಭಿನಯ ಕಲೆಯನ್ನು ಇನ್ನೊಂದು ಎತ್ತರಕ್ಕೆ ತೆಗೆದುಕೊಂಡು ಹೋಗುವ ಭರವಸೆ ಮೂಡಿಸಿದ್ದ ಅಪ್ಪು ಹೊರಟುಹೋಗಿದ್ದಾರೆ. ಅಮಾಯಕವಾಗಿ ನಗುತ್ತಲೇ ಬದುಕಿದ್ದ ಅಪ್ಪು ಈಗಿಲ್ಲ. ಆತನ ನಗು ಯಾವತ್ತೂ ನಮ್ಮನ್ನು ಕಾಡಲಿದೆ. ಕಾಲ ಇಂತಹ ನಗುವನ್ನು ಮತ್ತೆ ಹಡೆಯಲಿ. ಅಪ್ಪು ನಿಮ್ಮನ್ನು ನಾವು ಸದಾ ಪ್ರೀತಿಸುತ್ತೇವೆ, ನಿಮ್ಮಲ್ಲಿದ್ದ ತೀವ್ರ ಮಾನವೀಯತೆಯನ್ನೂ ಸಹ……

ಡಾ. ಎ ಎಸ್ ಪ್ರಭಾಕರ
ಹಂಪಿ ವಿವಿಯ ಬುಡಕಟ್ಟು ವಿಭಾಗದ ಅಧ್ಯಾಪಕರಾದ
ಡಾ.ಎ.ಎಸ್.ಪ್ರಭಾಕರ, ಮೂಲತಃ ಹರಪನಹಳ್ಳಿಯವರು.
ಕರ್ನಾಟಕದ ಜನಪರ ಚಳವಳಿಗಳ ಸಂಗಾತಿಯೂ ಆಗಿರುವ
ಅವರ ಹೊಸ ಪುಸ್ತಕ ‘ಚಹರೆಗಳೆಂದರೆ ಗಾಯಗಳೂ ಹೌದು’
ಬಿಡುಗಡೆಯಾಗಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...