Homeಮುಖಪುಟಚಂಪಾ ಸ್ಮರಣೆ: ನೆನೆ ನೆನೆ ಆ ದಿನಗಳನು

ಚಂಪಾ ಸ್ಮರಣೆ: ನೆನೆ ನೆನೆ ಆ ದಿನಗಳನು

- Advertisement -

1980-90ರ ದಶಕ ಹೋರಾಟದ ಯುಗ. ತುರ್ತು ಪರಿಸ್ಥಿತಿ ಬಂದುಹೋಗಿತ್ತು. ಇಂಗ್ಲಿಷ್ ಅಧ್ಯಾಪಕರಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲ ಮುಂತಾದ ಬುದ್ಧಿಜೀವಿಗಳನ್ನು ಬಂಧಿಸಲಾಗಿತ್ತು. ಕರ್ನಾಟಕದಾದ್ಯಂತ ಜಯಪ್ರಕಾಶ ನಾರಾಯಣ ಸಂಚರಿಸಿ ದೇಶದ ನವನಿರ್ಮಾಣದ ಬಗ್ಗೆ ಜನರ ಗಮನ ಸೆಳೆದಿದ್ದರು. ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಜನತಾ ಪಕ್ಷವನ್ನು ಕಟ್ಟಿ ಇಂದಿರಾಗಾಂಧಿಯವರ ಸರ್ವಾಧಿಕಾರಕ್ಕೆ ಸವಾಲನ್ನೊಡ್ಡಿದ್ದರು. ಅವರು ಕಟ್ಟಿದ ಜನತಾಪಕ್ಷ 2 ವರ್ಷ ಎಂಟು ತಿಂಗಳಷ್ಟೆ ಅಧಿಕಾರ ನಡೆಸಿತು. ಜನಸಂಘದವರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನಿಷ್ಠೆ ತೋರಿಸಹತ್ತಿದಾಗ
ಜನತಾಪಕ್ಷದ ಮಧುಲಿಮೆಯ ಮುಂತಾದ ಹಿಂದಿನ ಸಮಾಜವಾದಿಗಳು ಅದನ್ನು ವಿರೋಧಿಸಿದರು. ಹೀಗೆ ಶುರುವಾದ ಆಂತರಿಕ ಕಲಹ ಜನತಾಪಕ್ಷವನ್ನು ಒಡೆದು ಹಾಕಿತ್ತು. ಜನಸಂಘವೆಂಬ ಹೆಸರು ಕಳಕೊಂಡು ಭಾರತೀಯ ಜನತಾ ಪಕ್ಷವಾಗಿ ರೂಪಗೊಂಡ ಬಿಜೆಪಿ ಬಾಬ್ರಿ ಮಸೀದಿ ರಾಮಮಂದಿರದ ಭಾವನಾತ್ಮಕ ವಿಷಯದ ಕಡೆ ಜನರ ಗಮನ ಸೆಳೆದು ಜಾತ್ಯತೀತ ತತ್ವಕ್ಕೆ ಧಕ್ಕೆ ತಂದಿತು.

ಉತ್ತರದಲ್ಲಾದ ಬದಲಾವಣೆಯು ದಕ್ಷಿಣದಲ್ಲಿಯೂ ಆಗುತ್ತಿತ್ತು. ಎಸ್‌ಎಸ್‌ಎಲ್‌ಸಿಯಲ್ಲಿ ಸಂಸ್ಕೃತ ಒಂದು ವಿಷಯವಾಗಿ ಆರಿಸಿಕೊಂಡ ವಿದ್ಯಾರ್ಥಿಗಳು ರ್‍ಯಾಂಕ್ ಬರುತ್ತಿದ್ದರು. ಇದರ ವಿರುದ್ಧ ಕನ್ನಡ ಚಳವಳಿ ಶುರುವಾಗಿ, ಮಾಧ್ಯಮವಾಗಿ, ಆಡಳಿತ ಭಾಷೆಯಾಗಿ ಕನ್ನಡಕ್ಕೆ ಅಗ್ರಪಟ್ಟ ಸಿಗಬೇಕೆಂಬ ಹೋರಾಟ ತೀವ್ರವಾಯಿತು. ಆಗ ಆಡಳಿತದಲ್ಲಿದ್ದ ಗುಂಡೂರಾಯರ ಸರಕಾರ ವಿ.ಕೃ ಗೋಕಾಕರ ಅಧ್ಯಕ್ಷತೆಯಲ್ಲಿ ಒಂದು ಭಾಷಾ ಸಮಿತಿಯನ್ನು ನೇಮಿಸಿ ಪರಿಹಾರಕ್ಕೆ ಒಂದು ವರದಿ ಕೊಡಲು ಸೂಚಿಸಿತು. ಗೋಕಾಕರು ಹೋದೆಡೆ ’ಗೋಕಾಕ್ ಗೋ ಬ್ಯಾಕ್’ ಎಂಬ ಘೋಷಣೆ ಕೇಳಿಬಂತು. ಈ ಘೋಷಣೆ ಮೊಟ್ಟಮೊದಲು ಹಾಕಿದವರು ಚಂಪಾ ಮತ್ತು ಅವರ ಗೆಳೆಯರು. ಚಂಪಾ ಅವರು ಗೋಕಾಕರ ಶಿಷ್ಯರು. ಗೋಕಾಕರು ಶಿಷ್ಯವಾತ್ಸಲ್ಯದಿಂದ ಚಂಪಾ ಬಗ್ಗೆ ಒಂದು ಅಪರೂಪದ ಪದ್ಯ ಬರೆದಿದ್ದಾರೆ. ಕನ್ನಡ ಭಾಷೆಗೆ ಅತ್ಯುನ್ನತ ಸ್ಥಾನ ಸಿಗಬೇಕೆಂಬ ಚಂಪಾ ಧೋರಣೆ ಅವರ ಗುರುವನ್ನೂ ಅನುಮಾನದಿಂದ ನೋಡುವಂತೆ ಮಾಡಿತ್ತು.

ವಿ.ಕೃ ಗೋಕಾಕ

ಆದರೆ ಗೋಕಾಕರು ಕನ್ನಡಪರವಾಗಿ ವರದಿಯನ್ನು ಸರಕಾರಕ್ಕೆ ನೀಡಿದರು. ಅದನ್ನು ಜಾರಿಗೊಳಿಸಲು ಕೇಂದ್ರ ಕನ್ನಡ ಕ್ರಿಯಾಸಮಿತಿಯ ಹೋರಾಟ ಧಾರವಾಡದಲ್ಲಿ ವಿದ್ಯಾವರ್ಧಕ ಸಂಘದ ಹಿಂಭಾಗದಲ್ಲಿ ಪ್ರಾರಂಭವಾಯ್ತು. ಪತ್ರಕರ್ತ ಪಾಟೀಲ ಪುಟ್ಟಪ್ಪ ಸಮಿತಿಯ ಅಧ್ಯಕ್ಷರಾದರೆ ಪ್ರೊ. ಚಂದ್ರಶೇಖರ ಪಾಟೀಲ, ಡಾ. ಎಂ.ಎಂ ಕಲಬುರ್ಗಿ, ಡಾ. ಬಿ.ವಿ ಗುಂಜಟ್ಟಿ ಅವರು ಕಾರ್ಯದರ್ಶಿಗಳು. ಅವರೆಲ್ಲಾ ಕ್ರೀಯಾಶೀಲರಾಗಿ ಹಿರಿಯ ವಿದ್ವಾಂಸ ಶಂ.ಬಾ ಜೋಶಿ, ಬಸವರಾಜ ಕಟ್ಟೀಮನಿ ಮುಂತಾದವರನ್ನು ಕರೆತಂದು ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಪತ್ರಿಕೆಗಳಲ್ಲಿ ಕನ್ನಡ ಕ್ರಿಯಾ ಸಮಿತಿಯ ಧರಣಿ ಸತ್ಯಾಗ್ರಹದ ಸುದ್ದಿ ಗಮನ ಸೆಳೆಯುವಂತೆ ಪ್ರಕಟವಾಗಿತ್ತು. ಕನ್ನಡಪ್ರಭ ಪತ್ರಿಕೆಯ ಸಂಪಾದಕರಾದ ಖಾದ್ರಿಶಾಮಣ್ಣನವರು ಮೊದಲ ಪುಟದಲ್ಲಿಯೇ ಸಂಪಾದಕೀಯ ಬರೆಯುವುದನ್ನು ಪ್ರಾರಂಭಿಸಿದರು. ಚಿಕ್ಕಚಿಕ್ಕದಾಗಿದ್ದ ಸಂಪಾದಕೀಯ ಜನಮನವನ್ನು ಮತ್ತು ಸರಕಾರವನ್ನು ಮುಟ್ಟಿತು. ಕನ್ನಡದ ಅಂದಿನ ಜನಪ್ರಿಯ ಮೇರು ನಟ ಡಾ|| ರಾಜ್‌ಕುಮಾರರನ್ನು ಕನ್ನಡ ಚಳವಳಿಗೆ ಇಳಿಯಬೇಕೆಂದು ಕೇಂದ್ರ ಕನ್ನಡ ಕ್ರಿಯಾಸಮಿತಿ ಕರೆಕೊಟ್ಟಾಗ ಅದನ್ನು ಅಂಗೀಕರಿಸಿ ಅವರು ಕನ್ನಡ ನಾಡಿನುದ್ದಕ್ಕೂ ಸಂಚರಿಸಿ ಸಂಚಲನವನ್ನುಂಟುಮಾಡಿದರು. ನಾಡಿನುದ್ದಕ್ಕೂ ಕನ್ನಡ ಕ್ರಿಯಾಸಮಿತಿಗಳು ರಚನೆಯಾದವು.

ಕೊಪ್ಪಳದಲ್ಲಿ ಕೇಂದ್ರ ಕ್ರಿಯಾಸಮಿತಿ ಜೊತೆಗೂಡಿ ಕೊಪ್ಪಳ ತಾಲೂಕು ಕನ್ನಡ ಕ್ರಿಯಾಸಮಿತಿ ರಚನೆಯಾಗಿ ಡಾ. ಶಂಕರಗೌಡ ಸಿಂಗಟಾಲೂರ ಅಧ್ಯಕ್ಷರಾಗಿ, ವಿಠ್ಠಪ್ಪ ಗೋರಂಟ್ಲಿ ಉಪಾಧ್ಯಕ್ಷರಾಗಿ, ನಾನು ಮತ್ತು ಪ್ರಹ್ಲಾದ ಬೆಟಗೇರಿ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿ ಧಾರವಾಡದ ಕೇಂದ್ರ ಕನ್ನಡ ಕ್ರಿಯಾಸಮಿತಿ ಆದೇಶದಂತೆ ಕೆಲಸ ಮಾಡಿದೆವು. ಚಂಪಾ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನನ್ನ ಗುರುಗಳು. ನಾನು ಕನ್ನಡ ವಿಭಾಗದಲ್ಲಿದ್ದರೂ ಅಲ್ಲಿಯೇ ಮಹಡಿಯಲ್ಲಿದ್ದ ಇಂಗ್ಲಿಷ್ ವಿಭಾಗಕ್ಕೆ ಹೋಗಿ ಅವರ ಮಾರ್ಗದರ್ಶನ ಪಡೆಯುತ್ತಿದ್ದೆ. ರಾಜಶೇಖರ ಕೋಟಿಯವರ ’ಆಂದೋಲನ’ ಪತ್ರಿಕೆ ಪ್ರಾರಂಭವಾಗಿತ್ತು. ನನ್ನ ’ಸಂಸ್ಕೃತ’ ಎಂಬ ಕವಿತೆಯನ್ನು ಅಲ್ಲಿ ಪ್ರಕಟವಾಗುವಂತೆ ಮಾಡಿದರು. ನನಗೆ ಕಾವ್ಯ ಬರೆಯಲು ಕಲಿಸಿದ ಡಾ. ಬುದ್ದಣ್ಣ ಹಿಂಗಮಿರೆ ತಮ್ಮ ’ದಲಿತ’ ಪತ್ರಿಕೆಯಲ್ಲಿ ನನ್ನ ’ದೆಹಲಿ ಒಂದಿಷ್ಟು ನೋಡು’ ಕವಿತೆ ಪ್ರಕಟ ಮಾಡಿದರು. ಕರ್ನಾಟಕ ಕಾಲೇಜಿನ ಮ್ಯಾಗ್‌ಝಿನ್‌ನಲ್ಲಿ ನನ್ನ ’ಕಲಂಗುಟೆಯ ಕಡಲತೀರದ ಹಿಪ್ಪಿಗಳು’ ಎಂಬ ಕವಿತೆ ಪ್ರಕಟಿಸಿ ಬೆನ್ನು ತಟ್ಟಿದರು. ಆಕಾಶವಾಣಿಯಲ್ಲಿ ಅವಕಾಶ ಕೊಡಿಸಿದರು. ಡಾ. ಸೋಮಶೇಖರ ಇಮ್ರಾಪೂರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕವನಸಂಕಲನ ಪ್ರಕಟಿಸಿ ಬೆಂಬಲಿಸಿದರು. ಅದೇ ಹೊತ್ತಿಗೆ ಬೂಸಾ ಚಳವಳಿ ನಡೆಯಿತು. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಕನ್ನಡ ವಿಭಾಗದಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡೆ. ನಂತರ ಅವರು ಟೀಕಿಸಿದ್ದು ಒಳ್ಳೆಯದೇ ಆಯಿತು. ದಲಿತ ಸಂಘರ್ಷ ಸಮಿತಿ ಬೆಳೆಯಿತು, ರೈತಸಂಘ ಬೆಳೆಯಿತು. 1979ರ ಮಾರ್ಚ್ 10, 11ರಂದು ಬೆಂಗಳೂರಿನ ದೇವಾಂಗ ಛತ್ರದಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ರಾಯಚೂರಿನ ಚೆನ್ನಣ್ಣ ವಾಲೀಕಾರ, ಜಂಬಣ್ಣ ಅಮರಚಿಂತ, ಬೋಳಬಂಡೆಪ್ಪ ಮುಂತಾದವರು ಪತ್ರಿಕೆಗಳ ಪತ್ರ ವಿಭಾಗಗಳಿಗೆ ಪತ್ರ ಬರೆದು ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಗೋಷ್ಠಿ ಇಡಬೇಕೆಂದು ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಂಪಾನ ಅವರನ್ನು ಒತ್ತಾಯಿಸಿದರು. ಆಗ ಹಂಪಾನ ಸಾಹಿತ್ಯದಲ್ಲಿ ದಲಿತ-ಬಲಿತ-ಕಲಿತ ಅನ್ನುವುದು ಇರುವುದಿಲ್ಲವೆಂದು ಅವರ ವಿಚಾರವನ್ನು ತಳ್ಳಿಹಾಕಿದಾಗ ಚಂಪಾ, ಬರಗೂರು ರಾಮಚಂದ್ರಪ್ಪ, ಕಾಳೇಗೌಡ ನಾಗವಾರ, ಚೆನ್ನಣ್ಣ ವಾಲೀಕಾರ, ಜಂಬಣ್ಣ ಅಮರಚಿಂತ ಮುಂತಾದವರು ಸೇರಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಕಟ್ಟಿದರು. ಡಿ.ಆರ್ ನಾಗರಾಜ ಮತ್ತು ಶೂದ್ರ ಶ್ರೀನಿವಾಸ ಅವರು ಭಿನ್ನಮತದಿಂದ ದೂರ ಉಳಿದರು.

ವಿದ್ಯಾವರ್ಧಕ ಸಂಘ

’ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬುದು ಬಂಡಾಯದ ಘೋಷವಾಕ್ಯವಾಯ್ತು. ಧರ್ಮಸ್ಥಳದಲ್ಲಿ ಆಡಂಬರದಿಂದ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಜನ ವಿರೋಧಿ ಧೋರಣೆಯನ್ನು ಬಂಡಾಯದ ಬರಹಗಾರರು ಪ್ರಶ್ನಿಸಿದರು. ಮುಂದೆ ಬಂಡಾಯಕ್ಕೆ 10 ವರ್ಷಗಳು ತುಂಬಿದಾಗ ಅದೇ ಕಸಾಪ ತನ್ನ ಧೋರಣೆ ಬದಲಾಯಿಸಿ ದೊಡ್ಡ ಕಾರ್ಯಕ್ರಮವನ್ನೇರ್ಪಡಿಸಿತು. ಪ್ರೊ. ಚಂದ್ರಶೇಖರ ಪಾಟೀಲ ಒಮ್ಮೆ ಕಸಾಪದ ಅಧ್ಯಕ್ಷರಾದರು. ಅಂದಿನಿಂದ ಕಸಾಪದ ದೃಷ್ಟಿಯೂ ಬದಲಾಯಿತು. ಕಸಾಪದ ಕಾರ್ಯಕ್ರಮಕ್ಕೆ ಬಂಡಾಯ ಬರಹಗಾರರು ಹೋದರೆ ಕ್ಷಮೆ ಕೇಳಿದ ಉದಾಹರಣೆಗಳಿವೆ. ಬೆಳಗಾವಿ ಸಾಹಿತ್ಯ ಸಮ್ಮೇಳನಕ್ಕೆ ಹೋದ ಮಿತ್ರ ಗವಿಸಿದ್ದ ಎನ್. ಬಳ್ಳಾರಿ ಕ್ಷಮೆ ಕೇಳಿದ್ದುಂಟು. ಅನೇಕ ಬರಹಗಾರರು ಎಲ್ಲಿಗೇ ಹೋಗಲಿ ತಮ್ಮ ನಿಲುವು, ವಿಚಾರ ಬಿಡಬಾರದೆಂಬ ನಿರ್ಣಯವಾಯಿತು. ಕಾಲಕ್ಕೆ ತಕ್ಕಂತೆ ಆಂತರಿಕ ಚಿಂತನೆ ಮಾಡಿ ಬಂಡಾಯ ಬದಲಾಗುತ್ತ ಬಂತು. ಸರಕಾರದ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದವುಗಳಲ್ಲಿ ಭಾಗವಹಿಸಿ ಬಂಡಾಯದ ನಿಲುವು ಉಳಿಸಿಕೊಂಡು ಹೋಗಬೇಕೆಂದು ನಿರ್ಣಯಿಸಿದಂತೆ ಚಂಪಾ, ಬರಗೂರು ರಾಮಚಂದ್ರಪ್ಪ, ಕಾಳೇಗೌಡ ನಾಗವಾರ, ಬಿ.ಟಿ ಲಲಿತನಾಯಕ್, ಎಲ್ ಹನುಮಂತಯ್ಯ, ಸತೀಶ ಕುಲಕರ್ಣಿ, ಸರಜು ಕಾಟ್ಕರ್ ನಾನು ಮುಂತಾದವರು ಮಾಡಿದ ಕಾರ್ಯಗಳು ಜನರ ಮುಂದಿವೆ.

ಚಂಪಾ ಕಸಾಪ ಅಧ್ಯಕ್ಷರಾಗಿ ನಿಸಾರ ಅಹಮದ್‌ರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ನೋಡಿಕೊಂಡರು. ಕಲ್ಯಾಣ ಕರ್ನಾಟಕದ ಶಾಂತರಸರನ್ನು ಬೀದರ್ ಸಮ್ಮೇಳನಕ್ಕೆ ಆಯ್ಕೆಯಾಗುವಂತೆ ನೋಡಿಕೊಂಡರು. ಕಸಾಪ ಕರೆದ ಅತಿಥಿಗಳನ್ನು ಬದಲಾಯಿಸಲು ಯಡಿಯೂರಪ್ಪ ಸೂಚಿಸಿದಾಗ ಚಂಪಾ ದಿಟ್ಟವಾಗಿ ನಿರಾಕರಿಸಿದರು. ಪೊಲೀಸರ ರಕ್ಷಣೆಯಲ್ಲಿ ಶಿವಮೊಗ್ಗದಲ್ಲಿ ಕಾರ್ಯಕ್ರಮ ಮಾಡಿದರು. ಕುಮಾರಸ್ವಾಮಿಗಳಿಗೆ ಆಮಂತ್ರಿಸಿದ್ದರೂ ಸೆಟಗೊಂಡಿದ್ದರು. ಅದನ್ನೆಲ್ಲ ಚಂಪಾ ದಿಟ್ಟವಾಗಿ ಎದುರಿಸಿ ಕಸಾಪದ ಸ್ವಾಯತ್ತತೆ ಎತ್ತಿ ಹಿಡಿದರು. ಕಸಾಪದಿಂದ ಪುಸ್ತಕ ಸಂತೆ ಪ್ರಾರಂಭಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಇಡೀ ನಾಡನ್ನು ಸುತ್ತಿ ಕಚೇರಿ, ಕಾರ್ಖಾನೆಗಳನ್ನು ಪರಿಶೀಲಿಸಿ ಕನ್ನಡ ಬಳಕೆಗೆ ಒತ್ತಡ ಹೇರಿದರು. ನಾನು ಚಂಪಾ ಕಾಲಘಟ್ಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ಅಂದಿನ ರಾಯಚೂರು ಜಿಲ್ಲೆಯಲ್ಲಿದ್ದ ಒಂಭತ್ತು ತಾಲೂಕುಗಳ ಎಲ್ಲ ಸರಕಾರಿ ಕಚೇರಿಗಳಿಗೆ ಭೇಟಿಕೊಟ್ಟು ಕನ್ನಡ ಬಳಕೆ ಪರಿಶೀಲಿಸಿ, ಅಧ್ಯಕ್ಷರಾಗಿದ್ದ ಚಂಪಾ ಅವರಿಗೆ ವರದಿ ಕಳಿಸುತ್ತಿದ್ದೆ. ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಉಳಿದ ಸದಸ್ಯರು ನನ್ನಂತೆ ಪ್ರತ್ಯೇಕವಾಗಿ ಕಚೇರಿ ಪರಿಶೀಲಿಸಲಿಲ್ಲ. ನನ್ನ ಕಾರ್ಯವನ್ನು ಚಂಪಾ ಪ್ರಶಂಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಮೈಸೂರಲ್ಲಿ ಮಾತನಾಡಿದಾಗ ನನ್ನ ಗ್ರಾಂಥಿಕ ಕನ್ನಡವನ್ನು ನಯವಾಗಿ ಟೀಕಿಸಿದ್ದರು. ಕನ್ನಡ ಅಧ್ಯಾಪಕನಾಗಿದ್ದ ನಾನು ಉಪನ್ಯಾಸದಲ್ಲಿ ಗ್ರಾಂಥಿಕ ಕನ್ನಡ ಬಳಸುವುದು ಅನಿವಾರ್ಯವಾಗಿತ್ತು. ಧಾರವಾಡದ ಬೇಂದ್ರೆ, ಚಂಪಾ, ಕಣವಿ, ಕಲಬುರ್ಗಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಸೋಮಶೇಖರ ಇಮ್ರಾಪೂರ ಮುಂತಾದ ಲೇಖಕರು ಅಲ್ಲಿಯ ದೇಶಿಯನ್ನು ಬೆರೆಸಿಯೇ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಅವರೆಲ್ಲರ ನಡೆ ನನಗೆ ಪ್ರಿಯವಾದದ್ದು.

ಕಸಾಪ

ಬರಗೂರು ರಾಮಚಂದ್ರಪ್ಪನವರು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಉಪಸಂಸ್ಕೃತಿಯ ಪುಸ್ತಕಗಳನ್ನು ಹೊರ ತಂದದ್ದು ಗಮನಾರ್ಹ ಕೆಲಸ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಪ್ರತಿಶತ ಐದರಷ್ಟು ಮೀಸಲಾತಿ ತಂದರು. ಶಾಸಕರಾಗಿ ಸಿದ್ಧಲಿಂಗಯ್ಯ ವಿಧಾನ ಪರಿಷತ್ತಿನಲ್ಲಿ ಸಾಮಾಜಿಕ ನ್ಯಾಯ ಎತ್ತಿಹಿಡಿದಿದ್ದಾರೆ. ಅಕಾಡೆಮಿಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಂಡಾಯದ ಬರಹಗಾರರು ಗಮನಾರ್ಹ ಕೆಲಸ ಮಾಡಿದ್ದಾರೆ.

ಚಂಪಾ ಕನ್ನಡದ ಹೋರಾಟಗಾರರಾದಂತೆ ಕನ್ನಡದ ಮುಖ್ಯ ಬರಹಗಾರರೂ ಹೌದು. ಮಧ್ಯಬಿಂದುವಿನಿಂದ ಶಾಲ್ಮಲಾವರೆಗೆ ಅನೇಕ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅನೇಕ ಅಸಂಗತ ನಾಟಕಗಳು, ಪೂರ್ಣ ಪ್ರಮಾಣದ ಗೋಕರ್ಣದ ಗೌಡಶಾನಿ ನಾಟಕಗಳು ಗಮನ ಸೆಳೆದಿವೆ. ಅವರ ’ಗಾಂಧೀ ಸ್ಮರಣೆ’ ಮತ್ತೆ ಮತ್ತೆ ಓದಿಕೊಳ್ಳಬೇಕಾದ ಸಂಕಲನ. ಅವರು ತಮಗೆ ಪ್ರಿಯವಾದ ಕೆಲವು ಕವಿತೆ ಆರಿಸಿಕೊಂಡು ರಸ ವಿಮರ್ಶೆ ಬರೆದಿದ್ದಾರೆ. ’ಸಂಕ್ರಮಣ’ ಸಾಹಿತ್ಯ ಪತ್ರಿಕೆಯನ್ನು ಗಿರಡ್ಡಿ ಗೋವಿಂದರಾಜು, ಸಿದ್ಧಲಿಂಗ ಪಟ್ಟಣಶೆಟ್ಟಿ ಅವರೊಡಗೂಡಿ ಪ್ರಾರಂಭಿಸಿ ನಂತರ ತಾವೇ 2008ರವರೆಗೆ ನಡೆಸಿದ್ದಾರೆ. ನಾಡಿನ ಅನೇಕ ಯುವಪ್ರತಿಭೆಗಳನ್ನು ಹೊರ ತಂದಿದ್ದಾರೆ. ’ಸಂಕ್ರಮಣ’ ಸಂಪುಟಗಳು ಅವರು ಮಾಡಿದ ಮಹತ್ವದ ಕಾರ್ಯ ಹೇಳುತ್ತಿವೆ.

ಅಲ್ಲಮಪ್ರಭು ಬೆಟ್ಟದೂರು

ಅಲ್ಲಮಪ್ರಭು ಬೆಟ್ಟದೂರು (ಕೊಪ್ಪಳ)
ಕನ್ನಡ ಬಂಡಾಯ ಸಾಹಿತ್ಯದಿಂದ ಪ್ರಭಾವಿತಗೊಂಡ ಲೇಖಕರು. ’ಇದು ನನ್ನ ಭಾರತ’, ’ಕುದುರೆ ಮೋತಿ ಮತ್ತು ನೀಲಗಿರಿ’, ’ಕೆಡಬಲ್ಲರು ಅವರು, ಕಟ್ಟಬಲ್ಲೆವು ನಾವು’, ’ಕಟ್ಟಬಲ್ಲೇವು ನಾವು, ಕೆಡಹಬಲ್ಲೀರು ಅವರು’ ಅವರ ಕವನಸಂಗ್ರಹಗಳಲ್ಲಿ ಕೆಲವು.


ಇದನ್ನೂ ಓದಿ: ಕನ್ನಡದ ಓದು ಕಟ್ಟಿಕೊಟ್ಟ ವೈವಿಧ್ಯತೆಯ, ಸಹನೆಯ, ಬಹುತ್ವದ ವಿವೇಕ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial