ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ ಮಗ ಸಿದ್ಧಾರ್ಥ ಗಾಡ್ಗೀಳ್ ಗುರುವಾರ (ಜನವರಿ 8, 2026) ಮಾಹಿತಿ ಹಂಚಿಕೊಂಡಿದ್ದಾರೆ.
ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ತಂಡಕ್ಕೆ ಅಧ್ಯಕ್ಷತೆ ವಹಿಸಿದ್ದಕ್ಕೆ ಹೆಚ್ಚು ಪ್ರಸಿದ್ಧರಾಗಿದ್ದ ಮಾಧವ ಗಾಡ್ಗೀಳ್, ಭಾರತದ ಪ್ರಮುಖ ಪರಿಸರ ಚಿಂತಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ಅವರು ಪರಿಸರ ಸಂರಕ್ಷಣೆಗೆ ಸ್ಥಳೀಯ ಸಮುದಾಯಗಳನ್ನು ಕೇಂದ್ರ ಬಿಂದುವಾಗಿಟ್ಟುಕೊಂಡ ವಿಧಾನವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರು.
2010ರಲ್ಲಿ, ಕೇಂದ್ರ ಸರ್ಕಾರ ಗಾಡ್ಗೀಳ್ ಅವರನ್ನು ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ (WGEEP) ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಈ ಸಮಿತಿ ಗಾಡ್ಗೀಳ್ ಆಯೋಗ ಎಂದೇ ಪ್ರಸಿದ್ದಿ ಪಡೆದಿತ್ತು.
ಪರಿಸರ ವಿಜ್ಞಾನದ ದೃಷ್ಟಿಯಿಂದ ದುರ್ಬಲವಾಗಿರುವ ಪಶ್ಚಿಮ ಘಟ್ಟಗಳಲ್ಲಿ ಕಟ್ಟುನಿಟ್ಟಿನ ಪರಿಸರ ಸುರಕ್ಷತೆಯನ್ನು ಕಾಯ್ದುಕೊಳ್ಳುವಂತೆ ಸಮಿತಿಯ ವರದಿಯು ಕರೆ ನೀಡಿತ್ತು. ಈ ವರದಿಯು ಆರು ರಾಜ್ಯಗಳಲ್ಲಿ ತೀವ್ರ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಗೆ ನಾಂದಿ ಹಾಡಿತ್ತು.
2024ರಲ್ಲಿ ಡಾ. ಗಾಡ್ಗೀಳ್ ಅವರಿಗೆ, ಪರಿಸರ ವಿಜ್ಞಾನ ಮತ್ತು ಸಮುದಾಯ ನೇತೃತ್ವದ ಸಂರಕ್ಷಣೆಗೆ ಅವರ ಜೀವಮಾನದ ಕೊಡುಗೆಯನ್ನು ಗುರುತಿಸಿ ವಿಶ್ವಸಂಸ್ಥೆಯು ಪರಿಸರ ಕಾರ್ಯಕ್ರಮದ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ. 2024ರ ಸಮೂಹದ ಆರು ಪ್ರಶಸ್ತಿ ವಿಜೇತರಲ್ಲಿ ಗಾಡ್ಗೀಳ್ ಅವರು ಒಬ್ಬರು.
ಪರಿಸರ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ ಅವರಿಗೆ ವೋಲ್ವೋ ಪರಿಸರ ಪ್ರಶಸ್ತಿ, ಪರಿಸರ ಸಾಧನೆಗಾಗಿ ಟೈಲರ್ ಪ್ರಶಸ್ತಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಗೌರವಗಳು ಕೂಡ ಗಾಡ್ಗೀಳ್ ಅವರಿಗೆ ಲಭಿಸಿದ್ದವು. 1981ರಲ್ಲಿ ಪದ್ಮಶ್ರೀ ಮತ್ತು 2006ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಗಾಡ್ಗೀಳ್ ಪಡೆದಿದ್ದರು.
ಗಾಡ್ಗೀಳ್ ಅವರು ಭಾರತದ ಮೊಟ್ಟ ಮೊದಲ ಜೈವಿಕ ಮೀಸಲು ಪ್ರದೇಶವಾಗಿ (ಬಯೋಸ್ಫಿಯರ್ ರಿಸರ್ವ್) ನೀಲಗಿರಿ ಅರಣ್ಯ ಪ್ರದೇಶವನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಶ್ಚಿಮ ಘಟ್ಟಗಳಲ್ಲಿ ಕಾಲ್ನಡಿಗೆಯಲ್ಲಿ ಸುತ್ತಿ, ಅಲ್ಲಿನ ಆದಿವಾಸಿ ಮತ್ತು ಅರಣ್ಯ ನಿವಾಸಿ ಸಮುದಾಯಗಳೊಂದಿಗೆ ಬೆರೆತು, ಅವರ ಪವಿತ್ರ ಕಾಡುಗಳಲ್ಲಿ ವಾಸಿಸುತ್ತಾ ಪರಿಸರದ ಬಗ್ಗೆ ಆಳವಾದ ಅಧ್ಯಯನವನ್ನು ಗಾಡ್ಗೀಳ್ ಅವರು ಮಾಡಿದ್ದರು. ಈ ಮೂಲಕ ಅರಣ್ಯ ಸಂರಕ್ಷಣೆಗೆ ಮೂಲ ಅಥವಾ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಅವರ ಹಕ್ಕುಗಳನ್ನು ರಕ್ಷಿಸುವುದು ಮುಖ್ಯ ಎಂದು ಗಾಡ್ಗೀಳ್ ಕಂಡುಕೊಂಡಿದ್ದರು.
ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹಾ ಮಂಡಳಿ ಸೇರಿದಂತೆ ಹಲವಾರು ಸರ್ಕಾರಿ ಸಂಸ್ಥೆಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಗಾಡ್ಗೀಳ್ ಅವರು, ಭಾರತದ ಜೈವಿಕ ವೈವಿಧ್ಯತೆ ಕಾಯ್ದೆಯ ಪ್ರಮುಖ ಶಿಲ್ಪಿಗಳಲ್ಲಿ ಒಬ್ಬರಾಗಿದ್ದರು ಮತ್ತು ಅರಣ್ಯ ಹಕ್ಕುಗಳ ಕಾಯ್ದೆಯ ಅನುಷ್ಠಾನಕ್ಕೆ ಕೊಡುಗೆ ನೀಡಿದ್ದರು.
ಗಾಡ್ಗೀಳ್ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಸ್ಥಾಪಕರೂ ಹೌದು, ಈ ಕೇಂದ್ರವು ದೇಶದ ಪ್ರಮುಖ ಪರಿಸರ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿ ರೂಪುಗೊಂಡಿದೆ.


