ಭಾರತದ ರಾಷ್ಟ್ರ ಧ್ವಜವನ್ನು ಕೇಸರಿ ಧ್ವಜಕ್ಕೆ ಬದಲಾಯಿಸಬೇಕು ಎಂಬ ಬಿಜೆಪಿ ಹಿರಿಯ ನಾಯಕ ಹಾಗೂ ರಾಷ್ಟ್ರೀಯ ಮಂಡಳಿಯ ಮಾಜಿ ಸದಸ್ಯ ಎನ್. ಶಿವರಾಜನ್ ಅವರ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕೇರಳದ ಪಾಲಕ್ಕಾಡ್‌ನ ಅಂಚುವಿಲಕ್ಕು ಜಂಕ್ಷನ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಪ್ರತಿಭಟನೆಯ ಸಂದರ್ಭದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಎರಡೂ ‘ಭಾರತ ಮಾತೆಯನ್ನು’ ಅವಮಾನಿಸಿವೆ ಎಂದು ಬಿಜೆಪಿ ಆರೋಪಿಸಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಪಾಲಕ್ಕಾಡ್ ಪುರಸಭೆಯ ಬಿಜೆಪಿ ಹಾಲಿ ಕೌನ್ಸಿಲರ್ ಆಗಿರುವ ಶಿವರಾಜನ್, “ರಾಜಕೀಯ ಪಕ್ಷಗಳು ರಾಷ್ಟ್ರದ ತ್ರಿವರ್ಣ ಧ್ವಜವನ್ನು ಹೋಲುವ ಧ್ವಜಗಳನ್ನು ಬಳಸುವುದನ್ನು ನಿಷೇಧಿಸಬೇಕು ಎಂದಿದ್ದಾರೆ.
ಕಾಂಗ್ರೆಸ್ ಹಾಗೂ ಎನ್‌ಸಿಪಿಯನ್ನು ಗುರಿಯಾಗಿಸಿಕೊಂಡು ಮತ್ತಷ್ಟು ವಾಗ್ದಾಳಿ ನಡೆಸಿದ ಶಿವರಾಜನ್, ಈ ಎರಡು ಪಕ್ಷಗಳು ವಿಭಿನ್ನ ಧ್ವಜಗಳನ್ನು ಬಳಸಬೇಕು. ಈ ಪೈಕಿ ಕಾಂಗ್ರೆಸ್ ಹಸಿರು ಧ್ವಜ ಬಳಸಬೇಕು ಎಂದು ವ್ಯಂಗ್ಯವಾಗಿ ಸಲಹೆಯನ್ನೂ ನೀಡಿದ್ದಾರೆ. ಭಾರತದ ಚರಿತ್ರೆಯ ಬಗ್ಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಏನೂ ತಿಳಿದಿಲ್ಲ ಎಂದು ಹೇಳಿದ ಅವರು, ತ್ರಿವರ್ಣ ಧ್ವಜದ ಬದಲು ಅವರು ಇಟಲಿಯ ಧ್ವಜವನ್ನು ಹಾರಿಸಬೇಕು ಎಂದೂ ಗೇಲಿ ಮಾಡಿದ್ದಾರೆ.
ಕೇರಳದ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿಯನ್ನು ಶವನ್ ಕುಟ್ಟಿ (ಮೃತ ಮಗು) ಎಂದು ಹೇಳುವ ಮೂಲಕ ಶಿವರಾಜನ್ ಅವಮಾನಿಸಿದ್ದಾರೆ.
ಶಿವರಾಜನ್ ವಿವಾದಾತ್ಮಕ ಭಾಷಣದ ಬೆನ್ನಲ್ಲೇ ನಗರದಲ್ಲಿ ಮೊದಲಿಗೆ ಕಾಂಗ್ರೆಸ್ ಕಾರ್ಯಕರ್ತರು, ನಂತರ ಸಿಪಿಎಂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಪಾಲಕ್ಕಾಡ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಿ.ವಿ ಸತೀಶನ್ ಈ ಸಂಬಂಧ ದೂರು ದಾಖಲಿಸಿದ್ದು, ಶಿವರಾಜನ್ ವಿರುದ್ಧ ದೇಶದ್ರೋಹ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕು ಆಗ್ರಹಿಸಿದ್ದಾರೆ. ಈ ದೂರನ್ನು ಪಾಲಕ್ಕಾಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಲಾಗಿದೆ.
ಶಿವರಾಜನ್ ಹೇಳಿಕೆಯನ್ನು ಪಾಲಕ್ಕಾಡ್ ಜಿಲ್ಲೆಯ ಎಡರಂಗ ಮತ್ತು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದು, ಇದು ರಾಷ್ಟ್ರಧ್ವಜಕ್ಕೆ ಮಾಡಿದ ನೇರ ಅವಮಾನ ಮತ್ತು ದೇಶದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಬೆದರಿಕೆ ಎಂದಿದ್ದಾರೆ.
ಭಾರತದ ಮಿತ್ರ ಇರಾನ್ ಮೇಲಿನ ಅಮೆರಿಕ ದಾಳಿಗೆ ಮೋದಿ ಮೌನವೇಕೆ? | ಕಾಂಗ್ರೆಸ್, ಸಿಪಿಐ ಪ್ರಶ್ನೆ


