2010 ರಿಂದ ಪಶ್ಚಿಮ ಬಂಗಾಳದಲ್ಲಿ ನೀಡಲಾಗುತ್ತಿರುವ ಹಲವಾರು ಜಾತಿಗಳ OBC ಸ್ಥಾನಮಾನವನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ತೀರ್ಪುವನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಹಲವಾರು ಅರ್ಜಿಗಳ ವಿಚಾರಣೆ ವೇಳೆ, ಮೀಸಲಾತಿಯು ಧರ್ಮದ ಆಧಾರದ ಮೇಲೆ ಇರಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ. ಹೈಕೋರ್ಟ್‌ನ ಮೇ 22 ರ ತೀರ್ಪನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ ಅರ್ಜಿ ಸೇರಿದಂತೆ ಹಲವು ಅರ್ಜಿಗಳು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದವು.
“ಮೀಸಲಾತಿ ಧರ್ಮದ ಆಧಾರದ ಮೇಲೆ ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ‘‘ಇದು ಧರ್ಮದ ಆಧಾರದಲ್ಲಿ ಅಲ್ಲ, ಹಿಂದುಳಿದಿರುವಿಕೆಯ ಆಧಾರದಲ್ಲಿ ನೀಡಲಾಗಿದೆ’’ ಎಂದು ಹೇಳಿದ್ದಾರೆ. 2010 ರಿಂದ ಪಶ್ಚಿಮ ಬಂಗಾಳದಲ್ಲಿ ಹಲವಾರು ಜಾತಿಗಳಿಗೆ ನೀಡಲಾಗಿದ್ದ OBC ಸ್ಥಾನಮಾನವನ್ನು ಹೈಕೋರ್ಟ್ ರದ್ದುಗೊಳಿಸಿ, ಸಾರ್ವಜನಿಕ ವಲಯದ ಉದ್ಯೋಗಗಳು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಾನೂನುಬಾಹಿರವೆಂದು ಪರಿಗಣಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತೀರ್ಪಿನ ವೇಳೆ ಹೈಕೋರ್ಟ್, “ಈ ಸಮುದಾಯಗಳನ್ನು ಒಬಿಸಿಗಳು ಎಂದು ಘೋಷಿಸಲು ಧರ್ಮವು ಏಕೈಕ ಮಾನದಂಡವಾಗಿದೆ ಎಂದು ತೋರುತ್ತದೆ” ಎಂದು ಹೇಳಿತ್ತು. 77 ವರ್ಗದ ಮುಸ್ಲಿಮರನ್ನು ಹಿಂದುಳಿದವರೆಂದು ಆಯ್ಕೆ ಮಾಡಿರುವುದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಹೈಕೋರ್ಟ್ ಹೇಳಿತ್ತು.
2012ರ ರಾಜ್ಯದ ಮೀಸಲಾತಿ ಕಾನೂನಿನ ನಿಬಂಧನೆಗಳು ಮತ್ತು 2010 ರಲ್ಲಿ ನೀಡಲಾದ ಮೀಸಲಾತಿಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಬಗ್ಗೆ ತೀರ್ಪು ನೀಡಿದ್ದ ಹೈಕೋರ್ಟ್, ಈಗಾಗಲೇ ಸೇವೆಯಲ್ಲಿದ್ದ ಅಥವಾ ಮೀಸಲಾತಿಯ ಪ್ರಯೋಜನ ಪಡೆದಿರುವ ಅಥವಾ ರಾಜ್ಯದ ಯಾವುದೇ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ವಿಯಾದ ಬಡ ವರ್ಗಗಳ ನಾಗರಿಕರ ಸೇವೆಗಳಿಗೆ ತೀರ್ಪಿನಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು.
ಒಟ್ಟಾರೆಯಾಗಿ, ಏಪ್ರಿಲ್, 2010 ಮತ್ತು ಸೆಪ್ಟೆಂಬರ್, 2010 ರ ನಡುವೆ ನೀಡಲಾದ 77 ವರ್ಗಗಳ ಮೀಸಲಾತಿಯನ್ನು ಹೈಕೋರ್ಟ್ ರದ್ದುಗೊಳಿಸಿತು. ಇದೇ ವೇಳೆ, ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಕಾಯಿದೆ-2012 ರ ಅಡಿಯಲ್ಲಿ ನೀಡಲಾದ OBC ಮೀಸಲಾತಿ ಪಡೆದಿದ್ದ 37 ವರ್ಗಗಳನ್ನು ಕೂಡಾ ರದ್ದು ಮಾಡಿದೆ.
ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ, ಪ್ರಕರಣದ ಬಗ್ಗೆ ಅವಲೋಕನವನ್ನು ನೀಡುವಂತೆ ಪ್ರಕರಣದಲ್ಲಿ ಹಾಜರಾದ ವಕೀಲರಿಗೆ ಸುಪ್ರೀಂ ಕೋರ್ಟ್ ಹೇಳಿದೆ. ಹೈಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ ಸಿಬಲ್, “ಕಾಯ್ದೆಯ ನಿಬಂಧನೆಗಳನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ಇದು ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಪಡೆಯಲು ಬಯಸುವ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಗಳನ್ನು ಬಯಸುವ ಜನರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದ್ದಾರೆ.
ಆದ್ದರಿಂದ ಕೆಲವು ಮಧ್ಯಂತರ ಆದೇಶವನ್ನು ಜಾರಿಗೊಳಿಸಬೇಕು ಮತ್ತು ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು ಎಂದು ಸಿಬಲ್ ಪೀಠವನ್ನು ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ಕೆಲವು ಪ್ರತಿವಾದಿಗಳನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲ ಪಿ.ಎಸ್. ಪಟ್ವಾಲಿಯಾ ಸೇರಿದಂತೆ ಇತರ ವಕೀಲರ ಸಲ್ಲಿಕೆಗಳನ್ನು ಪೀಠವು ಆಲಿಸಿತು. ಜನವರಿ 7 ರಂದು ವಿವರವಾದ ಅರ್ಜಿಗಳನ್ನು ಆಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ಬಹು ಸಂಖ್ಯಾತರ ಇಚ್ಛೆಯಂತೆ ದೇಶ ನಡೆಯಲಿದೆ ; ‘ಕಠ್‌ಮುಲ್ಲಾಗಳು’ ದೇಶ ವಿರೋಧಿಗಳು : ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ!


