ತನ್ನ ಆರೈಕೆಯಲ್ಲಿದ್ದ ಶಿಶುವಿನ ಸಾವಿಗೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾಗಿರುವ ಉತ್ತರ ಪ್ರದೇಶದ ನಿವಾಸಿ ಶೆಹಝಾದಿ ಅವರಿಗೆ ಶಿಕ್ಷೆ ಜಾರಿ ಮುಂದೂಡಿಕೆಯಾಗಿದೆ. ಸದ್ಯಕ್ಕೆ ಅವರಿಗೆ ಶಿಕ್ಷೆ ವಿಧಿಸುತ್ತಿಲ್ಲ ಎಂದು ಯುಎಇ ಅಧಿಕಾರಿಗಳು ಭಾರತೀಯ ರಾಯಭಾರ ಕಚೇರಿಗೆ ತಿಳಿಸಿದ್ದಾಗಿ ವರದಿಯಾಗಿದೆ.
ಮೂಲಗಳ ಪ್ರಕಾರ, ಶೆಹಝಾದಿ ಅವರ ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯು ಪ್ರಸ್ತುತ ಪರಿಗಣನೆಯಲ್ಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
‘ಮನೆಗೆ ಕೊನೆಯ ಫೋನ್ ಕರೆ’ ಮಾಡಿದ 24 ಗಂಟೆಯ ಒಳಗೆ ಶೆಹಝಾದಿ ಅವರಿಗೆ ಮರಣದಂಡನೆ ಜಾರಿಯಾಗಲಿದೆ ಎಂದು ವರದಿಯಾಗಿತ್ತು. ಶೆಹಝಾದಿ ಮನೆಗೆ ಕೊನೆಯ ಕರೆ ಮಾಡಿದ್ದಾರೆ ಎಂದು ಭಾರತೀಯ ಮಾಧ್ಯಮಗಳು ನಿನ್ನೆ (ಫೆ.17) ವರದಿ ಮಾಡಿತ್ತು. ಆ ಬಳಿಕ ಈ ಪ್ರಕರಣ ಮನ ಸೆಳೆದಿದೆ.
“ಶೆಹಝಾದಿ ಅವರನ್ನು 24 ಗಂಟೆಯೊಳಗೆ ಗಲ್ಲಿಗೇರಿಸಲಾಗುವುದು ಎಂಬ ವರದಿ ತಪ್ಪಾಗಿದೆ. ಯುಎಇ ಅಧಿಕಾರಿಗಳಿಂದ ರಾಯಭಾರ ಕಚೇರಿ ಇದನ್ನು ದೃಢಪಡಿಸಿದೆ. ಶೆಹಝಾದಿ ಅವರ ಪ್ರಕರಣದಲ್ಲಿ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ. ಅದು ಈಗ ವಿಚಾರಣೆಯ ಹಂತದಲ್ಲಿದೆ” ಎಂದು ಮೂಲಗಳು ತಿಳಿಸಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮತೌಂಧ್ ಪೊಲೀಸ್ ಠಾಣೆ ವ್ಯಾಪ್ತಿಯ ಗೊಯ್ರಾ ಮುಗ್ಲಿ ಗ್ರಾಮದ ನಿವಾಸಿಯಾಗಿರುವ ಶೆಹಝಾದಿ ಬಡ ಕುಟುಂಬದ ಹೆಣ್ಣು ಮಗಳು. ಬಾಲ್ಯದಲ್ಲಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಗೆ ಸುಟ್ಟ ಗಾಯಗಳಾಗಿದ್ದವು. ಈಕೆಗೆ ಆಗ್ರಾದ ನಿವಾಸಿ ಉಝೈರ್ ಎಂಬಾತ ಫೇಸ್ಬುಕ್ ಮೂಲಕ ಪರಿಚಯವಾಗಿದ್ದ. ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. 2021ರಲ್ಲಿ ಆಕೆಯ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡುವುದಾಗಿ ಆಗ್ರಾಕ್ಕೆ ಕರೆದುಕೊಂಡು ಹೋದ ಉಝೈರ್, ಆಕೆಯನ್ನು ತನ್ನ ಸಂಬಂಧಿಕರಾದ ಫೈಝ್ ಮತ್ತು ನಾದಿಯಾ ಎಂಬ ದಂಪತಿಗೆ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗಿದೆ. ಆಕೆಯನ್ನು ದಂಪತಿ ದುಬೈಗೆ ಕರೆದುಕೊಂಡು ಹೋಗಿದ್ದಾರೆ.
ಬಂದಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಅಧಿಕಾರಿಗಳು ಈಗ ದುಬೈನಲ್ಲಿ ನೆಲೆಸಿರುವ ಈ ದಂಪತಿ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಶೆಹಝಾದಿ ಇದ್ದ ಮನೆಯಲ್ಲಿ, ಇದ್ದಕ್ಕಿದ್ದಂತೆ ಒಂದು ದಿನ ಅವರ ಮಗುವಿನ ಆರೋಗ್ಯ ಹದಗೆಟ್ಟು ಮೃತಪಟ್ಟಿದೆ. ಮಗು ಮೃತಪಟ್ಟ ಎರಡು ತಿಂಗಳ ನಂತರ ಮಗುವಿನ ಸಾವಿಗೆ ಶೆಹಝಾದಿ ಕಾರಣ ಎಂದು ಪೋಷಕರು ಆರೋಪಿಸಿ ದೂರು ನೀಡಿದ್ದಾರೆ. ಬಳಿಕ ಅವರ ಬಂಧನವೂ ನಡೆದಿದೆ. ಈ ಕುರಿತ ತನಿಖೆಯ ನಂತರ ದುಬೈ ನ್ಯಾಯಾಲಯವು ಶೆಹಝಾದಿ ತಪ್ಪಿತಸ್ಥೆ ಎಂದು ಮರಣದಂಡನೆ ಶಿಕ್ಷೆ ವಿಧಿಸಿದೆ. ಶೆಹಝಾದಿ ಪ್ರಸ್ತುತ ಅಲ್ಬತ್ವಾ ಜೈಲಿನಲ್ಲಿ ಬಂಧಿಯಾಗಿದ್ದಾರೆ.
ದುಬೈನಲ್ಲಿ ಶೆಹಝಾದಿ ಮರಣದಂಡನೆಗೆ ಗುರಿಯಾದ ನಂತರ, ಆಕೆಯ ತಂದೆ ಶಬ್ಬೀರ್ ಖಾನ್, ಉತ್ತರ ಪ್ರದೇಶದ ಬಂದಾ ಜಿಲ್ಲಾಡಳಿತ, ರಾಜ್ಯ ಸರ್ಕಾರ ಎರಡಕ್ಕೂ ಮಧ್ಯಪ್ರವೇಶಿಸಿ ತನ್ನ ಮಗಳನ್ನು ಉಳಿಸುವಂತೆ ಮನವಿ ಮಾಡಿದ್ದರು.
ಮಗುವಿನ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಶೆಹಝಾದಿ ಮತ್ತು ಆಕೆಯ ತಂದೆ ಹೇಳಿಕೊಂಡಿದ್ದಾರೆ. ಆದರೆ, ದಂಪತಿ ಶೆಹಝಾದಿಯ ಮೇಲೆ ಆರೋಪ ಹೊರಿಸಿದ್ದರು. ಇದು ಆಕೆಯ ವಿರುದ್ಧ ಮೊಕದ್ದಮೆ ಹೂಡಲು ಮತ್ತು ಅಂತಿಮವಾಗಿ ಮರಣದಂಡನೆ ಶಿಕ್ಷೆ ವಿಧಿಸಲು ಕಾರಣವಾಗಿದೆ.
“ಫೆಬ್ರವರಿ 16ರಂದು ಶೆಹಝಾದಿ ಅವರ ಕುಟುಂಬಕ್ಕೆ ದುಬೈನಿಂದ ಕರೆ ಬಂದಿದೆ. ಆಕೆ ತನ್ನ ತಂದೆ, ತಾಯಿಯ ಜೊತೆ ಮಾತನಾಡುತ್ತಾ, ನನ್ನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ನನ್ನನ್ನು ಗಲ್ಲಿಗೇರಿಸುವುದಾಗಿ ಜೈಲಿನ ಕ್ಯಾಪ್ಟನ್ ತಿಳಿಸಿದ್ದಾರೆ” ಎಂದು ಹೇಳಿದ್ದಾಗಿ ವರದಿಯಾಗಿದೆ.
‘ಸಂವಿಧಾನದ ಆಶಯಕ್ಕೆ ವಿರುದ್ಧ’: ತರಾತುರಿಯಲ್ಲಿ ಮುಖ್ಯ ಚು.ಆಯುಕ್ತರ ನೇಮಕಕ್ಕೆ ಕಾಂಗ್ರೆಸ್ ಟೀಕೆ


