Homeನ್ಯಾಯ ಪಥ’ಅವ ನಮ್ಮವ, ಅವ ನಮ್ಮವ’ ಎಂದ ಕ್ರಾಂತಿಕಾರಿ ಬಸವಣ್ಣನ ಚಿಂತನೆಗಳು ಇಂದಿನ ವಿಷಮತೆಗೆ ಲಸಿಕೆ..: ಜಿ.ಬಿ...

’ಅವ ನಮ್ಮವ, ಅವ ನಮ್ಮವ’ ಎಂದ ಕ್ರಾಂತಿಕಾರಿ ಬಸವಣ್ಣನ ಚಿಂತನೆಗಳು ಇಂದಿನ ವಿಷಮತೆಗೆ ಲಸಿಕೆ..: ಜಿ.ಬಿ ಪಾಟೀಲ್

"ಪ್ರೀತಿಸುವ ಶರಣರ ಮಕ್ಕಳಿಗೆ ಜಾತಿಯ ಸೋಂಕೇಕೆ" ಎಂದ, ದೇವರ ಹೆಸರಿನಲ್ಲಿ ಶೋಷಣೆಗೊಳ್ಳುತ್ತಿದ್ದ ಸಮಾಜಕ್ಕೆ ಹೊಸದಾರಿ ತೋರಿಸಿದ ಬಸವಣ್ಣನವರ ಕುರಿತು ಜಿ.ಬಿ ಪಾಟೀಲ್‌ರವರ ಲೇಖನ...

- Advertisement -
- Advertisement -

’ಅವರವರ ಭಾವಕ್ಕೆ ಅವರವರ ಭಕುತಿಗೆ’ ಎನ್ನುವಂತೆ ಬಸವಣ್ಣನವರು ಕಳೆದ ಎಂಟನೂರ ಐವತ್ತು ವರ್ಷಗಳಲ್ಲಿ ಅನೇಕ ರೂಪ ತಾಳಿದ್ದಾರೆ.

ಬಸವಣ್ಣನವರನ್ನು ಲಕ್ಷ ಲಕ್ಷ ಪುಟಗಳಲ್ಲಿ ವರ್ಣಿಸಿದ್ದರೂ ಪ್ರತಿಯೊಬ್ಬ ಲೇಖಕರಿಗೂ ಅವರು ವಿಭಿನ್ನವಾಗಿ ಕಾಣುತ್ತಾರೆ. ಪುರಾಣಕಾರರಿಗೆ ದೈವಾಂಶಸಂಭೂತನೆಂದು ಕಂಡರೆ ಸಮಾಜವಾದಿಗಳಿಗೆ ಮಾರ್ಕ್ಸವಾದಿಯಂತೆ ಕಾಣುವರು. ಮಂಟೇಸ್ವಾಮಿಯಂತಹ ಜಾನಪದ ಶರಣರಿಗೆ ಅಲ್ಲಮ ಪ್ರಭುವಿನ ಶಿಷ್ಯನಾಗಿ ಕಂಡರೆ, ಸ್ವತಃ ಅಲ್ಲಮಪ್ರಭುವಿಗೆ ಅವರು ಒಬ್ಬ ಸ್ವಯಂಭು ಜ್ಞಾನಿಯಾಗಿ ಕಾಣುತ್ತಾರೆ. (ಲಿಂಗ ಜಂಗಮಪ್ರಸಾದದ ಮಹಾತ್ಮೆಗೆ ಬಸವಣ್ಣನೆ ಆದಿಯಾದನೆಂಬುದನರಿಯ ಸ್ವಯಂಭು ಜ್ಞಾನಿ). ಅನಕೃ, ತರಾಸು, ಬಸವರಾಜ ಕಟ್ಟಿಮನಿ, ಬಿ. ಪುಟ್ಟಸ್ವಾಮಯ್ಯನವರಂತಹ ಕಾದಂಬರಿಕಾರರಿಗೆ ಗಾಂಧೀವಾದಿಯಾಗಿ ಕಂಡರೆ, ಲಂಕೇಶ, ಗಿರೀಶ ಕಾರ್ನಾಡ, ಕಂಬಾರರಂತಹ ನಾಟಕಕಾರರಿಗೆ ಬಸವಣ್ಣ ಒಬ್ಬ ನಿಲುಕಲಾರದ ಸಂಕೀರ್ಣ ವ್ಯಕ್ತಿಯಾಗಿ ಕಾಣುವರು. ಡಾ. ಕಲಬುರ್ಗಿಯವರಿಗೆ ಸಮಾಜ ಸುಧಾರಕರಾಗಿ ಕಂಡರೆ, ಡಾ.ಚಿದಾನಂದ ಮೂರ್ತಿಯವರಿಗೆ ಹಿಂದೂ ಧರ್ಮದ ಸುಧಾರಣವಾದಿಯಾಗಿ ಕಾಣುವರು. ಆಂಗ್ಲ ಬರಹಗಾರರಿಗೆ ಇವರು ಲಿಂಗಾಯತ ಧರ್ಮ ಸ್ಥಾಪಕನಾಗಿ, ವಿಶ್ವಗುರುವಾಗಿ ಕಾಣುತ್ತಾರೆ. ಬಹುಪಾಲು ಬರಹಗಾರರು, ಚರಿತ್ರೆಕಾರರು ನಿಸ್ಸಂಶಯವಾಗಿ ಬಸವಣ್ಣ ಒಬ್ಬ ಧಾರ್ಮಿಕ ಪುರುಷ, ಲಿಂಗಾಯತ ಧರ್ಮ ಸ್ಥಾಪಕ ಎಂದು ಅಭಿಪ್ರಾಯ ಪಡುತ್ತಾರೆ.

ಬಸವಣ್ಣನವರೊಬ್ಬ ಕ್ರಾಂತಿಕಾರಿ, ಸಮಾಜವಾದಿ, ದಾರ್ಶನಿಕ, ವಿಶ್ವಗುರುವಾಗಿ ಕಾಣುವರು. ವಿಶೇಷವಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ದೇವರನ್ನು, ಧರ್ಮವನ್ನು ಬಳಸಿಕೊಂಡ ಮಾನವತಾವಾದಿಯಾಗಿ ಕಾಣುತ್ತಾರೆ. ಅಂದಿನ ಸಮಾಜವನ್ನು ಗಮನಿಸಿದರೆ, ಶೋಷಣೆ ಮಾಡಲು ಇಂದಿನಂತೆ ಅನೇಕ ಮಾರ್ಗಗಳಿರಲಿಲ್ಲ. ವ್ಯಾಪಾರ ವಹಿವಾಟು ವಸ್ತುಗಳ ವಿನಿಮಯ ಪದ್ಧತಿಯಿಂದ (Barter System) ಪೂರೈಸುತಿತ್ತು. ಆಳುವವರಿಗೆ ಕರ (Tax) ವಸ್ತುಗಳ ರೂಪದಲ್ಲಿ ಸಂದಾಯವಾಗುತ್ತಿತ್ತು. ಆಡಳಿತಗಾರರಿಗೆ ಭೂಮಿಯನ್ನು ಹಂಚಿಕೆ ಮಾಡಿ ಅವರ ಸೇವೆಯನ್ನು ಪಡೆಯಲಾಗುತ್ತಿತ್ತು. ದೇಶ ಕಾಯುವ ಸೈನಿಕನನ್ನು ಯುದ್ಧದ ಸಮಯದಲ್ಲಿ ಮಾತ್ರ ಕರೆಯಲಾಗುತ್ತಿತ್ತು. ಇಂತಹ ಸಮಾಜದಲ್ಲಿ ಶೋಷಣೆಗೆ ಅವಕಾಶ ಇರಲಿಲ್ಲ. ಆದರೆ ಶೋಷಣೆ ಇರಲಿಲ್ಲವೆಂದಲ್ಲ, ಒಂದು ಕ್ಷೇತ್ರದಲ್ಲಿ ಮಾತ್ರ ಬೃಹತ್ತಾಗಿತ್ತು. ಅದಾಗುತ್ತಿದ್ದುದು ದೇವರ ಹೆಸರಿನಲ್ಲಿ ಮತ್ತು ದೇವರ ದಲ್ಲಾಳಿಗಳಿಂದ. ದೇವರು, ಧರ್ಮ ಎಂದು ಸಮಾಜವನ್ನು ವಿಂಗಡಿಸಿ ಒಂದು ವರ್ಗಮಾತ್ರ ಅದರ ಲಾಭ ಪಡೆಯುತ್ತಿತ್ತು. ಸರ್ವವ್ಯಾಪಿಯಾದ ದೇವರನ್ನು ನಾಲ್ಕು ಗೋಡೆಗಳಲ್ಲಿ ಬಂಧಿಸಿ, ಅವನಿಗೊಂದು ರೂಪಕೊಟ್ಟು ಶೋಷಣೆಯ ಮೂರ್ತಿಯನ್ನಾಗಿ ಮಾಡಿತ್ತು ಈ ವರ್ಗ. ಅಸಂಖ್ಯಾತ ದೇವರುಗಳನ್ನು ಮರದಿಂದ, ಕಲ್ಲಿನಿಂದ ರೂಪಿಸಿ, ಅವುಗಳ ಪೂಜೆಯ ಹಕ್ಕನ್ನು ಈ ವರ್ಗ ಮಾತ್ರ ಪಡೆದು ಆಳುವ ರಾಜನ ಸಹಿತವಾಗಿ ಬಹುಜನರನ್ನು ಕತ್ತಲಲ್ಲಿರಿಸಿತ್ತು.

ದೇವರ ಹೆಸರಿನಲ್ಲಿ ಶೋಷಣೆಗೊಳ್ಳುತ್ತಿದ್ದ ಸಮಾಜಕ್ಕೆ ಬಸವಣ್ಣ ಹೊಸದಾರಿ ತೋರಿಸಿದ. ಗುಡಿಯಲ್ಲಿದ್ದ ದೇವರನ್ನು ಕಿತ್ತು ತಂದು ಸಾಮಾನ್ಯರ ಕೈಗಿತ್ತ. ಬೃಹದಾಕಾರದ ಕಲ್ಲಿನ ದೇವರನ್ನು ಅಂಗೈಯಲ್ಲಿಟ್ಟು ಇಷ್ಟ ಲಿಂಗದಲ್ಲಿ ಕಾಣಿರೆಂದ. ಇಷ್ಟ ಲಿಂಗ ಹೊಂದಿದ ದೇಹವೆ ದೇವಾಲಯವೆಂದ. ಸ್ಥಾವರವಾಗಿದ್ದ ದೇವಾಲಯಗಳನ್ನು ಚಲಿಸುವ (ಜಂಗಮ) ದೇವಾಲಯಗಳನ್ನಾಗಿ ಮಾಡಿದ. ಇದು ಹನ್ನೆರಡನೆಯ ಶತಮಾನದಲ್ಲಾದ ಕ್ರಾಂತಿ. ಹುಟ್ಟಿನಿಂದಲೆ ಕ್ರಾಂತಿಕಾರಿಯಾಗಿದ್ದ ಬಸವಣ್ಣನ ಚರಿತ್ರೆಯನ್ನು ಹೇಳುವುದೆಂದರೆ ಸಮುದ್ರಮಂಥನ ಮಾಡಿದಂತೆ.

ಬಸವಣ್ಣನ ಅನೇಕ ರೂಪಗಳಲ್ಲಿ ’ಕ್ರಾಂತಿಕಾರಿ ಬಸವಣ್ಣ’ನ ರೂಪ ಬಲು ಅಪರೂಪ. ಜಡ್ಡುಗಟ್ಟಿದ ಸಮಾಜದ ಬ್ರಾಹ್ಮಣ ಕುಟುಂಬದಲ್ಲಿ ಜನ್ಮ ತಳೆದ ಶಿಶು. ಮನೆಯಲ್ಲಿ ಶೈವ ಪರಿಸರ. ಎಲ್ಲವನ್ನು ಆಲೋಚಿಸುವ, ಪರಿಷ್ಕರಿಸುವ, ಚಿಕ್ಸಿತ್ಸಕ ಬುದ್ಧಿಯ ಮಗು ಸಂಗನಬಸವ. ಬಾಲ ಸಂಗಣ್ಣನ ಚಿಕಿತ್ಸಿಕ ಪ್ರಶ್ನೆಗಳಿಗೆ ತನಗೆ ತಿಳಿದಂತೆ ಉತ್ತರಿಸುತ್ತಿದ್ದವಳು ತಾಯಿಯಂತಿದ್ದ ಅಕ್ಕ ನಾಗಮ್ಮ. ಅವಳೇ ಆಗಿರಲೂಬಹುದು ಅವನ ಮೊದಲ ಗುರು. ಬಾಲ್ಯದಲ್ಲಿಯೆ ತಂದೆ ತಾಯಿ ಕಳೆದುಕೊಂಡು ಬೆಳೆದದ್ದು ಸಂಬಂಧಿಗಳ ಕೈಯಲ್ಲಿ. ತನ್ನ ಸುತ್ತಮುತ್ತ ನಡೆಯುವ ಅನಾಚಾರಗಳನ್ನು ನೋಡುತ್ತಿದ್ದ ಸಂಗನಬಸವನಿಗೆ ಬ್ರಾಹ್ಮಣರ ದ್ವಿಮುಖ ನೀತಿ ವಿಚಿತ್ರವೆನಿಸಿತು. “ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ? ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ” ಎಂದು ಹಾರುವರ ದ್ವಿಮುಖ ನೀತಿಯನ್ನು ಖಂಡಿಸಲಾರಂಭಿಸಿದ.

ತನ್ನ ಎಂಟನೆಯ ವರ್ಷದಲ್ಲಿ ನಡೆಯುವ ಉಪನಯನದ ಅಗತ್ಯತೆಯನ್ನು ಪ್ರಶ್ನೆ ಮಾಡಿದ ಬಾಲ ಕ್ರಾಂತಿಕಾರಿ. ತನಗಿಂತ ಮುಂಚೆ ಹುಟ್ಟಿದ ಅಕ್ಕನಿಗೇಕಿಲ್ಲ ಉಪನಯನ ಎಂದು ಪ್ರಶ್ನಿಸಿದ: “ಒಲ್ಲೆನಯ್ಯಾ, ಒಲ್ಲೆನಯ್ಯಾ ನಿಮ್ಮವರಲ್ಲದವರ, ಒಲ್ಲೆನಯ್ಯಾ, ಒಲ್ಲೆನಯ್ಯಾ ಜಗವೆಲ್ಲರಿಯಲು” ಎಂದು ಮನೆಬಿಟ್ಟ ಕೂಡಲ ಸಂಗಮವನ್ನರಸುತ್ತ ಹೊರಟ. ಪುರದ ಯಜಮಾನನಾಗುವ ಅವಕಾಶವನ್ನು ಬದಿಗೊತ್ತಿ ಹೆಚ್ಚಿನ ವ್ಯಾಸಂಗಕ್ಕೆ ದೂರಿನೂರಾದ ಕಪ್ಪಡಿ ಸಂಗಮಕ್ಕೆ ಕಾಲ್ನಡಿಗೆಯಲ್ಲಿ ಸಾಗಿದ ಈ ಕ್ರಾಂತಿಕಾರಿ. “ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಸ್ಥಾವರ ದೈವಕ್ಕೆರಗಲಾರದು” ಎಂಬ ಆಲೋಚನೆಗಳು ದಟ್ಟವಾದವು ಬಸವನ ಮನದಲ್ಲಿ. ಆಗ ಸಿಕ್ಕಿತೊಂದು ತಿರುವು ಬಸವಣ್ಣನ ಜೀವನದಲ್ಲಿ. ರಾಜ ಬಿಜ್ಜಳನ ಆಶ್ರಯದಲ್ಲಿದ್ದ ಸೋದರ ಮಾವ ಬಲದೇವರಸನ ಮಗಳ ಮದುವೆಯ ಪ್ರಸ್ತಾಪ. ’ಕಾಯಕವೇ ಕೈಲಾಸ’ ಎಂಬ ಬಸವಣ್ಣನಿಗೆ ಆಕರ್ಷಕವಾಗಿ ಕಂಡಿತು ರಾಜಧಾನಿಯಲ್ಲಿನ ಕಾಯಕದ ಆಹ್ವಾನ. ಕಾಯಕ ಹಾಗು ಅರ್ಧಾಂಗಿಯಾಗಬೇಕಾದ ನೀಲಗಂಗಳನ್ನು ಒಪ್ಪಿ ಸ್ವೀಕರಿಸಿದ. ಮದುವೆಯ ನಂತರ ಮಂಗಳವೆಡೆಗೆ ಪ್ರಯಾಣ. ಅಲ್ಲಿತ್ತು ಕಲಚುರಿ ವಂಶದ ಬಿಜ್ಜಳನ ರಾಜ್ಯ. ಮಾವ ಬಲದೇವರಸ ಆ ರಾಜ್ಯದ ಮಂತ್ರಿ. ಮಾವ ಅರಿತಿದ್ದ ಅಳಿಯನ ಜ್ಞಾನ. ಭಂಡಾರ ಕಾಯಕದ ಹೊರೆ ಬಸವಣ್ಣನವರ ಮೇಲೆ ಅವರಿಂದ ಅರಸಿ ಬಂತು, ’ಪರಸ್ತ್ರೀ ಪರಧನವೆಂಬ ಜೂಬಿಗಂಜುವೆ’ ಎನ್ನುವ ಬಸವಣ್ಣ ಅಲ್ಲಿ ನಡೆಯುತ್ತಿದ್ದ ಮೋಸದ ಲೆಕ್ಕ ಬಯಲಿಗೆಳೆದು, ರಾಜ ಬಿಜ್ಜಳನ ಕಣ್ಣಿಗೆ ಬಿದ್ದ. ರಾಜ್ಯದ ಬೊಕ್ಕಸವನ್ನು ಪ್ರಜೆಗಳಿಗೆ ಹೊರೆಯಾಗದಂತೆ ಹೆಚ್ಚಿಸಿದ ಸುಪ್ತ ಕ್ರಾಂತಿಕಾರಿ ಆರ್ಥಿಕ ತಜ್ಞ. ಓದು, ಬರಹ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಅಲ್ಲದೆ ರಾಜನೀತಿ, ಅಲಿಪ್ತ ನೀತಿ, ನ್ಯಾಯನೀತಿ ಎಲ್ಲವೂ ಅಂದು ಬ್ರಾಹ್ಮಣರ ಸೊತ್ತಾಗಿತ್ತು ಮತ್ತ ಅದರ ಬಗ್ಗೆ ಅನ್ಯರು ಆಲೋಚನೆ ಮಾಡುವದು ಸಹ ಅಪರಾಧವಾಗಿತ್ತು.
ಧರ್ಮಸ್ಯ ಬ್ರಾಹ್ಮಣೋ ಮೂಲಂ..

ಬ್ರಾಹ್ಮಣಃ ಸಂಭವೇನೈವ ದೇವಾನಾಮಪಿ ದೈವತಂ
ಪ್ರಮಾಣಂ ಚೈವ ಲೋಕಸ್ಯ ಬ್ರಹ್ಮಾತ್ರೈವ ಹಿ ಕಾರಣಂ
“ಬ್ರಾಹ್ಮಣನೇ ಧರ್ಮದ ಮೂಲ. ತನ್ನ ಹುಟ್ಟಿನಿಂದ ಅವನು ದೇವತೆಗಳಿಗೂ ದೇವರಾಗಿದ್ದಾನೆ. ಅವನ ಮಾತು ಜನರಿಗೆ ಪ್ರಮಾಣೀಭೂತವಾತವಾದುದು” (ಛಾಂದಗ್ಯೋಪನಿಷತ್ – ಅನುವಾದ ಪ್ರೊ ಕೆ.ಎಸ್.ಭಗವಾನ್). ಇಂತಹ ಕಾಲದಲ್ಲಿ ಬ್ರಾಹ್ಮಣ್ಯದ ಪ್ರಾಬಲ್ಯವನ್ನು ಮಧ್ಯಕಾಲದ ಇತಿಹಾಸದಲ್ಲಿ ಮೊದಲ ಬಾರಿ ಪ್ರಶ್ನಿಸಿದ ಕ್ರಾಂತಿಕಾರಿ ಬಸವಣ್ಣ. ತಮಗೆ ವಹಿಸಿದ ಕಾಯಕದಲ್ಲಿ ನಿಷ್ಠಾತರಾಗಿದ್ದ ಬಸವಣ್ಣ ಅಭಿವೃದ್ಧಿಯ ಮೆಟ್ಟಿಲುಗಳನ್ನು ಏರುತ್ತ ಹೋದರು. ಆರ್ಥಿಕ ಮಂತ್ರಿಯಾದರು, ನಂತರ ಆ ದೇಶದ ಮಹಾಮಂತ್ರಿಯಾದರು.


ಇದನ್ನೂ ಓದಿ: ಮತ್ತೆ ಹುಟ್ಟಿಬಾ ಅಣ್ಣ ಬಸವಣ್ಣ …….


ವೃತ್ತಿ ಜಾತಿಯಾಗಿ, ಜಾತಿಯು ಧರ್ಮವಾಗಿದ್ದ ಕಾಲವದು. ಡಾ. ಎಂ. ಎಂ. ಕಲಬುರ್ಗಿ ಸುಂದರವಾಗಿ ಹೇಳಿದ್ದಾರೆ “ನಾನು ನನಗಾಗಿ ಎನ್ನುವನು ವ್ಯಕ್ತಿ, ನಾನು ಸಮಾಜಕ್ಕಾಗಿ ಎನ್ನುವನು ಸದಸ್ಯ. ಆದುದರಿಂದ ಲಿಂಗಾಯತದಲ್ಲಿ ನಾನು ನನ್ನ ಉದ್ಧಾರಕ್ಕಾಗಿ ಎನ್ನುವ ವ್ಯಕ್ತಿ ಅಥವಾ ಭಕ್ತರಿಲ್ಲ. ನಾನು ಸಮಾಜದ ಉದ್ಧಾರಕ್ಕಾಗಿ ಎನ್ನುವ ಶರಣರಿದ್ದಾರೆ. ಭಕ್ತನಾಗುವದಕ್ಕಿಂತ ಶರಣನಾಗುವದು ಮುಖ್ಯವೆಂದು ಶರಣರ ಅಭಿಮತ”. ಬಸವಣ್ಣನವರಿಗೆ ಉಳಿದ ಮಹಾಪುರುಷರಂತೆ ತಮ್ಮ ಆತ್ಮೋದ್ಧಾರ ಮಾಡಿಕೊಳ್ಳುವದು ಮುಖ್ಯವಾಗಿರಲಿಲ್ಲ. ಸಮಾಜದ ಸರ್ವತೋಮುಖ ಅಭಿವೃದ್ಧಿ ಅವರ ಗುರಿಯಾಗಿತ್ತು.

ಸಮಾಜೋ- ಧಾರ್ಮಿಕ ತತ್ವದಿಂದ ಭಾರತದ ಉದ್ದಲಗಳಲಿದ್ದ ಕ್ರಾಂತಿಕಾರಿ ಶರಣರ ಸಾಮೀಪ್ಯ ಪಡೆದು, ಅವರನ್ನು ಅನುಭವ ಮಂಟಪದಲ್ಲಿ ಸಂಗಮ ಮಾಡಿದ ಬಹುದೊಡ್ಡ ಕ್ರಾಂತಿಕಾರಿ ಬಸವಣ್ಣ. ವರ್ಣ, ವರ್ಗದ ಜಡ ನೀತಿಯನ್ನು ಸಮಾಜದಿಂದ ತೊಲಗಿಸಲು ನಿರ್ಧರಿಸಿದ ಜಗತ್ತಿನ ಮೊದಲ ಕ್ರಾಂತಿಕಾರಿ.

“ಅಣ್ಣ, ತಮ್ಮ, ಹೆತ್ತಯ್ಯ ಗೋತ್ರವಾದಡೇನು? ಲಿಂಗಸಾಹಿತ್ಯರಲ್ಲದವರ ಎನ್ನವರೆನ್ನೆನಯ್ಯಾ ಎಂದು ಲಿಂಗ ಧರಿಸಿದವರೆಲ್ಲರನ್ನೂ ನನ್ನವರೆಂದ “ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯನೆಂದು ಯಾರನ್ನು ಸಮಾಜ ಅಂತ್ಯಜರೆಂದು ಕರೆದಿತ್ತೋ ಅವರನ್ನು ತನ್ನ ಕುಲಬಾಂಧವರೆಂದು ಅವರನ್ನು ಅಪ್ಪಿಕೊಂಡ.

ಇದನ್ನೂ ಓದಿ: ವಚನಗಳ ಸಾಹಿತ್ಯ ಮೌಲ್ಯ: ಬಸವಣ್ಣನವರ ಉಪಮಾಲೋಕ ಒಂದು ಅದ್ಭುತ ಚಿತ್ರಸೃಷ್ಟಿ

ಮುಂದುವರೆದ ದೇಶಗಳೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ಮೊದಲೇ ಹೆಣ್ಣಿಗೆ ಸಮಾನ ಸ್ಥಾನಮಾನ ನೀಡಿದ ಮೊದಲ ಸಮಾಜವಾದಿ ಕ್ರಾಂತಿಕಾರಿ ಕೂಡ ಅವರು. ಹೆಣ್ಣಿನ ಋತುಚಕ್ರ ಅವಳಿಗೆ ಕಂಟಕವಾಗಿತ್ತು, ಅದರಿಂದ ಸಮಾಜದಲ್ಲಿ ಹೆಚ್ಚು ಉಪೇಕ್ಷೆಗೆ ಒಳಗಾಗಿದ್ದಳು. ಅಕ್ಕನಿಗೇಕಿಲ್ಲ ಉಪನಯನವೆಂದು ತನ್ನ ಬಾಲ್ಯದಲ್ಲಿಯೇ ಪ್ರಶ್ನಿಸಿದ್ದ ಬಸವಣ್ಣನಿಗೆ ಹೆಣ್ಣು ಗಂಡಿನ ವ್ಯತ್ಯಾಸ ಕೇವಲ ದೈಹಿಕ ರಚನೆ ಎಂದು ಮಾತ್ರ ಗೊತ್ತಿತ್ತು. ಅವರ ಗರಡಿಯಲ್ಲಿ ಬೆಳೆದ ಶರಣೆ ಗೊಗ್ಗವ್ವೆ ಹೇಳುತ್ತಾಳೆ: “ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಮೀಸೆ ಕಾಸೆ ಬಂದರೆ ಗಂಡೆಂಬರು, ಒಳಗೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣು ಅಲ್ಲ. ಕುಲೀನ ಮನೆತನವೆಂದು ಸಮಾಜದಿಂದ ಜರಿತಕ್ಕೊಳಗಾದ ಕುಟುಂಬದ ಸ್ತ್ರೀ ಶರಣೆ ಗೊಗ್ಗವ್ವೆ. ಅವಳಂತೆ ಇನ್ನೊಬ್ಬ ಶರಣೆ ಆಯ್ದಕ್ಕಿ ಲಕ್ಕಮ್ಮ ಬರೆಯುತ್ತಾಳೆ: “ಕೂಟಕ್ಕೆ ಸತಿಪತಿಯೆಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ” ಎಂದು. ಹೀಗೆ ಶರಣ ಕ್ರಾಂತಿಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಬಗ್ಗೆಯೂ ಎಚ್ಚರದಿಂದ ಅನುಕರಣಿಯ ನಡೆ ಇಟ್ಟವರು ಬಸವಣ್ಣ.

ಕಾಯಕದಲ್ಲಿ ಮೇಲು ಕೀಳು ಸಲ್ಲ ’ಕಾಯಕವೇ ಕೈಲಾಸ’ ಎಂದ ಕಾಯಕ ಯೋಗಿ ಅವರು. ವೃತ್ತಿ ಜಾತಿಯಾಯಿತು. ವರ್ಗ ಭೇದದ ಮೂಲ ಅಧಿಕಾರ. ಸಮಾಜದ ಮೇಲೆ ಯಾರೊಬ್ಬನ ಅಧಿಕಾರ ಇಲ್ಲ. ಸಮಾಜ ನಿಂತಿರುವದು ಒಬ್ಬರ ಮೇಲಲ್ಲ ಇನ್ನೊಬ್ಬರ ಅವಲಂಬನೆಯ ಆಧಾರದ, ಮತ್ತೊಬ್ಬ ಸಹಕಾರ ತತ್ವದ ಮೇಲೆ, ಆದುದರಿಂದ ಅದನ್ನು ಅಧಿಕಾರ ಎಂದು ಅಳೆಯಬಾರದು ಎಂದರು ಶರಣರು. ಕಾಯಕ ಮಾಡುವರೆಲ್ಲರೂ ಶರಣರು. ಅವರಿಗೆ ಮೇಲುಕೀಳು ಎಂಬ ಭಾವ ಏಕೆ? “ಜಾತಿವಿಡಿದು ಸೂತಕವನರಸುವೆ; ಜ್ಯೋತಿವಿಡಿದು ಕತ್ತಲವನರಸುವೆ ಇದೇಕೊ ಮರಳುಮಾನವಾ? ಜಾತಿಯಲ್ಲಿ ಅಧಿಕನೆಂಬೆ! ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ?” ಎಂದು ಪ್ರಶ್ನೆ ಮಾಡುವರು ಬಸವಣ್ಣನವರು. ಸೂಳೆ ಸಂಕವ್ವೆ, ಬೀದಿ ಕಸ ಹೆಕ್ಕುವ ಸತ್ಯಕ್ಕ, ಅಕ್ಕಮಹಾದೇವಿ, ಅಕ್ಕ ನಾಗಮ್ಮರೆಲ್ಲರೂ ಒಂದೇ ಸಾಲಿನಲ್ಲಿ. ಇದೆ ಸಾಲಿನಲ್ಲಿ ಬಸವಣ್ಣ, ಸಿದ್ದರಾಮ, ಚನ್ನಬಸವಣ್ಣ, ಮಾಚಯ್ಯ, ಕಕ್ಕಯ್ಯ. ಎಲ್ಲರಿಗೂ ಒಂದೇ ಸ್ಥಾನ. ಇವರೆಲ್ಲರಿಂದ ತುಂಬಿತ್ತು ಅನುಭವ ಮಂಟಪ. ಚರ್ಚೆ, ತರ್ಕ, ವಿತರ್ಕ, ವಚನ ರಚನೆ ಅವುಗಳಿಗೆಲ್ಲ ಅಧಿಪತಿ ಅಧ್ಯಕ್ಷ ಆಧ್ಯಾತ್ಮ ಸೂರ್ಯ ಅಲ್ಲಮಪ್ರಭು.

“ಪ್ರೀತಿಸುವ ಶರಣರ ಮಕ್ಕಳಿಗೆ ಜಾತಿಯ ಸೋಂಕೇಕೆ” ಎಂದು ಅವರ ಜಾತಿಯ ಪೂರ್ವಾಪರ ಎಣಿಸದೆ ಕಲ್ಯಾಣ ಮಾಡಿ ಎಂದ ರಾಜ್ಯದ ಪ್ರಧಾನಿಯಾದ ಬಸವಣ್ಣ. ಹೋಯಿತು ದೊರೆಗೆ ದೂರು. ಕಚ್ಚಿದರು ದೊರೆಯ ಕಿವಿ. ವರ್ಣಸಂಕರವಾದರೆ ಮುಳಗಿಹೋದೀತು ಧರೆ ಎಂದರು ಆಸ್ಥಾನದ ಬ್ರಾಹ್ಮಣರು. ಬಂತು ಬಸವಣ್ಣನವರ ಪ್ರಧಾನಿ ಪಟ್ಟಕ್ಕೆ ಸಂಚು. ಆದರೆ ಅದನ್ನೂ ಲೆಕ್ಕಿಸಲಿಲ್ಲ ಕ್ರಾಂತಿಕಾರಿ ಬಸವಣ್ಣ. “ಅಂಜಿದಡೆ ಮಾಣದು, ಅಳುಕಿದಡೆ ಮಾಣದು, ವಜ್ರ ಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಿಲಾಟ ಲಿಖಿತ” ಎಂದರು ವಜ್ರ ದೇಹಿ ಬಸವಣ್ಣ. ಅಧಿಕಾರಕ್ಕಿಂತ ಸಿದ್ಧಾಂತ ಮುಖ್ಯವೆಂದ ನಿಸ್ವಾರ್ಥಿ. ತಪ್ಪು ಮಾಡಿದವ ರಾಜನಿರಲಿ ಪ್ರಜೆ ಇರಲಿ ನ್ಯಾಯ ಇಬ್ಬರಿಗೂ ಒಂದೇ ಎಂದು ಪ್ರಜಾಸತ್ತಾತ್ಮಕ ನಿಲುವು ತಳೆದ ನ್ಯಾಯವಾದಿ. ದಾರಿ ತಪ್ಪಿದವನು ರಾಜನಾಗಲಿ ಅಥವಾ ಪ್ರಜೆಯಾಗಲಿ, ಇವರಿಬ್ಬರಿಗೂ ಸಮಾನ ಶಿಕ್ಷೆ ನೀಡುವ ಜ್ಞಾನ ಬಲ, ನೈತಿಕ ಬಲ ತುಂಬಿದ ಜನಪ್ರಿಯ ಕ್ರಾಂತಿಕಾರಿ, “ಬಾರದು ಬಪ್ಪುದು, ಬಪ್ಪುದು ತಪ್ಪದು” ಎಂದು ನಡೆದುಬಿಟ್ಟರು ಕಲ್ಯಾಣದತ್ತ.

  • ಜಿ ಬಿ ಪಾಟೀಲ್


ಬಸವನ ಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Hengagutte Lasike, idu virus alve enadru manusyarannu badukisuva medicine iddre heli, nijavaglu badukalu prayatnisi , tatvajnana vu medicine hegagutte , obbarigobbaru sahaya madabekadaru saha medicine bekalla, medicine ellide??????

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...