ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿಯಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ನೀಡುತ್ತಿದ್ದ ಅಕ್ಕಿ ಪ್ರಮಾಣವನ್ನು ರಾಜ್ಯ ಸರ್ಕಾರ ಮತ್ತೆ ಕಡಿತಗೊಳಿಸಿದೆ.
ಈ ಮೊದಲು ವ್ಯಕ್ತಿಯೊಬ್ಬರಿಗೆ 7 ಅಕ್ಕಿ ನೀಡಲಾಗುತ್ತಿತ್ತು. ಅದನ್ನು ಇತ್ತೀಚೆಗೆ 5 ಕೆಜಿಗೆ ಇಳಿಸಲಾಗಿತ್ತು. ಈಗ ಮತ್ತೊಮ್ಮೆ 3 ಕೆಜಿ ಕಡಿತ ಮಾಡಿ 2 ಕೆಜಿ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ವ್ಯತ್ಯಾಸವನ್ನು ಸರಿದೂಗಿಸಲು 3ಕೆಜಿ ರಾಗಿ ಮತ್ತು 2ಕೆಜಿ ಗೋಧಿ ನೀಡಲು ಸರ್ಕಾರ ಮುಂದಾಗಿದೆ.
ಅಕ್ಕಿಯನ್ನು ಹೊರರಾಜ್ಯಗಳಿಂದ ಆಮದು ಮಾಡಿಕೊಂಡು ವಿತರಿಸಲಾಗುತ್ತಿತ್ತು. ಅದರ ಬದಲಿಗೆ ನಮ್ಮದೇ ರಾಜ್ಯದ ರೈತರು ಬೆಳೆದ ರಾಗಿಯನ್ನು ಬೆಂಬಲ ಬೆಲೆ ನೀಡಿ ಕೊಂಡು ಪಡಿತರ ವ್ಯವಸ್ಥೆ ಮೂಲಕ ವಿತರಿಸಲು ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಆದರೆ ಸರ್ಕಾರದ ಈ ಅಕ್ಕಿ ಕಡಿತ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಗದಗಿನ ಶಾಸಕ ಹೆಚ್.ಕೆ.ಪಾಟೀಲ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ “ಸರ್ಕಾರ ಬಡವರಿಗೆ ಅನ್ಯಾಯ ಮಾಡಲು ಹೊರಟಿದೆ” ಎಂದು ಕಿಡಿಕಾರಿದ್ದಾರೆ.
“ಈ ಹಿಂದೆ ಕಾಂಗ್ರೆಸ್ ಸರ್ಕಾರ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು ಈ ಬಿಜೆಪಿ ಸರ್ಕಾರ 5ಕೆಜಿಗೆ ಇಳಿಸಿತ್ತು. ಈಗ ಮತ್ತೆ 5 ಕೆಜಿಯಿಂದ 2 ಕೆಜಿಗೆ ಕಡಿತಗೊಳಿಸಲು ಹೊರಟಿರುವುದನ್ನು ಮಾಧ್ಯಮಗಳ ಮೂಲಕ ಗಮನಿಸಿದ್ದೇನೆ. ಇದರಿಂದ ಬಡವರಿಗೆ ಅನ್ಯಾಯವಾಗಲಿದ್ದು, ಯಾವುದೇ ಕಾರಣಕ್ಕೂ ಅಕ್ಕಿ ಪ್ರಮಾಣದಲ್ಲಿ ಕಡಿತ ಮಾಡಬಾರದು” ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಭರವಸೆ ನೀಡಿದರೆ 5ಕೆಜಿ ಅಕ್ಕಿಯ ಜೊತೆಗೆ 3ಕೆಜಿ ರಾಗಿ ಅಥವಾ ಜೋಳ ನೀಡಬೇಕು. ಹೊರತಾಗಿ ಕೋವಿಡ್ ಸಂಕಷ್ಟದ ಕಾಲದಲ್ಲಿ ಅಕ್ಕಿ ಕಡಿತದಂತಹ ಬಡವರ ವಿರೋಧಿ ನಿರ್ಣಯ ಕೈಗೊಂಡರೆ ಬಿಜೆಪಿ ಸರ್ಕಾರ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಡ್‌ಗಾಗಿ ಸೋಂಕಿತರ ಪರದಾಟ: ಬೆಂಗಳೂರಿನ 10,100 ಬೆಡ್‌ಗಳ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಏನಾಯಿತು?


