ದಿಶಾ ರವಿಯ ಬಂಧನಕ್ಕೆ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಖಂಡನೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ‘ಭಾರತದ ಗ್ರೆಟಾ ಥನ್‌ಬರ್ಗ್’ ಎಂದು ಕರೆಯಲ್ಪಡುವ ಯುವ ಹವಾಮಾನ ಕಾರ್ಯಕರ್ತೆ ರಿಧಿಮಾ ಪಾಂಡೆ (13), ದಿಶಾ ರವಿಯ ಬಂಧನವನ್ನು ಅನಗತ್ಯ ಎಂದು ಕರೆದಿದ್ದಾರೆ.
“ದಿಶಾ ಅವರು ಪರಿಸರ ಮತ್ತು ಪರಿಸರ ವಿಜ್ಞಾನಕ್ಕಾಗಿ ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ಆಕೆ ರಾಷ್ಟ್ರ ವಿರೋಧಿ ಆಗಲು ಸಾಧ್ಯವಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಅವರು ದೇಶದ ಬಲವರ್ಧನೆಗೆ ಕೊಡುಗೆ ನೀಡಲು ಯುವಜನತೆಯನ್ನು ಪ್ರೇರೇಪಿಸುತ್ತಿದ್ದಾರೆ” ಎಂದು ಸರ್ಕಾರದ ಧೋರಣೆಯನ್ನು ಖಂಡಿಸಿರುವ ರಿಧೀಮಾ ಪಾಂಡೆ ದಿಶಾ ರವಿಗೆ ಬೆಂಬಲ ಸೂಚಿಸಿದ್ದಾರೆ.
ರೈತರ ಪ್ರತಿಭಟನೆ ಮತ್ತು ಗಣರಾಜ್ಯೋತ್ಸವ ದಿನದ ಅಹಿತಕರ ಘಟನೆಗೆ ಸಂಬಂಧಿಸಿದ ‘ಟೂಲ್‌ಕಿಟ್’ ಅನ್ನು ಹಂಚಿಕೊಂಡಿದ್ದಕ್ಕಾಗಿ ಯುವ ಪರಿಸರ ಹೋರಾಟಗಾರ್ತಿ ದಿಶಾಳನ್ನು ಬಂಧಿಸಲಾಗಿದೆ.
ರಿಧಿಮಾ ಪಾಂಡೆ ಬಿಬಿಸಿಯ 2020 ರ ಜಗತ್ತಿನ 100 ಸ್ಪೂರ್ತಿದಾಯಕ ಮತ್ತು ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
ಇದನ್ನೂ ಓದಿ: ‘ನೆರೆಯ ರಾಷ್ಟ್ರಗಳಲ್ಲೂ ಬಿಜೆಪಿ ಸಂಘಟನೆ’ ಹೇಳಿಕೆ: ಖಂಡನೆ ವ್ಯಕ್ತಪಡಿಸಿದ ನೇಪಾಳ
ಬಿಬಿಸಿಯು ರಿಧಿಮಾಳನ್ನು “ಹವಾಮಾನ ಕಾರ್ಯಕರ್ತೆ” ಎಂದು ಬಣ್ಣಿಸಿತ್ತು. ಆಕೆ ತನ್ನ ಒಂಬತ್ತನೇ ವಯಸ್ಸಿನಲ್ಲಿಯೇ, ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿನ ನಿಷ್ಕ್ರಿಯತೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ಪ್ರಪಂಚವನ್ನು ಪೀಡಿಸುತ್ತಿರುವ ಪರಿಸರದ ಸಮಸ್ಯೆಗಳ ಕುರಿತು ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿರುವ ಜಗತ್ತಿನಾದ್ಯಂತ ಇರುವ 16 ಮಕ್ಕಳಲ್ಲಿ ರಿಧಿಮಾ ಪಾಂಡೆ ಕೂಡಾ ಒಬ್ಬರು.
ಡೆಹ್ರಾಡೂನ್ ವಿಮಾನ ನಿಲ್ದಾಣವನ್ನು ವಿಸ್ತರಿಸಲು 10,000 ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಉತ್ತರಾಖಂಡ ಸರ್ಕಾರದ ಕ್ರಮವನ್ನು ವಿರೋಧಿಸಿರುವ ರಿಧಿಮಾ ಪಾಂಡೆ, ಸೇವ್ ಥಾನೋ ಫಾರೆಸ್ಟ್ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಾನವಹಕ್ಕುಗಳ ರಕ್ಷಕ ಅಮ್ನೆಸ್ಟಿ ಸಂಸ್ಥೆಯ ಹಣ ಮುಟ್ಟುಗೋಲು: ಭಾರತ ಸರ್ಕಾರ ಕಿರುಕುಳ ನೀಡುತ್ತಿದೆ ಎಂದಿದ್ದ ಸಂಸ್ಥೆ


