ಬಿಜೆಪಿಯನ್ನು ನೆರೆಯ ರಾಷ್ಟ್ರಗಳಾದ ನೇಪಾಳ ಮತ್ತು ಶ್ರೀಲಂಕಾದಲ್ಲೂ ಸಂಘಟಿಸುವ ಯೋಜನೆಯಿದೆ ಎಂದಿರುವ ಅಮಿತ್ ಶಾ ಹೇಳಿಕೆಯ ವಿರುದ್ಧ ನೇಪಾಳವು ಕಳವಳ ವ್ಯಕ್ತಪಡಿಸಿದೆ.
‘ಕಠ್ಮಂಡು ಪೋಸ್ಟ್’ ಪ್ರಕಾರ, “ಭಾರತದ ನೇಪಾಳಿ ರಾಯಭಾರಿ ನಿಲಾಂಬರ್ ಆಚಾರ್ಯ ಅವರು ಭಾರತದ ವಿದೇಶಾಂಗ ಸಚಿವಾಲಯದ ನೇಪಾಳ ಮತ್ತು ಭೂತಾನ್‌ನ ಜಂಟಿ ಕಾರ್ಯದರ್ಶಿ ಅರಿಂದಮ್ ಬಾಗ್‌ಚಿಗೆ ದೂರವಾಣಿ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
“ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ದೇವ್ ಅವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಭಾರತದ ವಿವಿಧ ಸುದ್ದಿ ಮಾಧ್ಯಮಗಳು ವರದಿ ಪ್ರಸಾರ ಮಾಡುತ್ತಿರುವುದು ದುರದೃಷ್ಟಕರ. ಇದಕ್ಕೆ ಸಂಬಂಧಿಸಿದಂತೆ ಗುರುವಾರದ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟಪಡಿಸುವುದಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭರವಸೆ ನೀಡಿದೆ” ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಬೆಂಗಳೂರು:1 ಅಪಾರ್ಟ್‌ಮೆಂಟ್, 2 ಪಾರ್ಟಿ, 103 ಕೊರೊನಾ ಕೇಸ್!
ಅಗರ್ತಲಾದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ, “ಪಕ್ಷವನ್ನು ದೇಶಾದ್ಯಂತ ಮಾತ್ರವಲ್ಲದೆ, ನೆರೆಯ ರಾಷ್ಟ್ರಗಳಲ್ಲೂ ವಿಸ್ತರಿಸುವ ಯೋಜನೆ ಇದೆ. ಗೃಹ ಸಚಿವ ಅಮಿತ್ ಶಾ ಅವರು ನೇಪಾಳ ಮತ್ತು ಶ್ರೀಲಂಕಾದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸುವ ಯೋಜನೆ ಹೊಂದಿದ್ದಾರೆ” ಎಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು.
“2018ರಲ್ಲಿ ತ್ರಿಪುರಾ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು, ಭಾರತದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಗೆದ್ದು ಬಂದ ಬಳಿಕ ವಿದೇಶಗಳಲ್ಲೂ ಪಕ್ಷವನ್ನು ವಿಸ್ತರಿಸುವ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದರು” ಎಂದು ಬಿಪ್ಲವ್ ದೇವ್ ಹೇಳಿದ್ದರು.
ಈ ಹೇಳಿಕೆಯ ವಿರುದ್ಧ ದೇಶದಾದ್ಯಂತ ಖಂಡನೆ ವ್ಯಕ್ತವಾಗಿತ್ತು.
ಇನ್ನು ಈ ಕುರಿತು ಶ್ರೀಲಂಕಾ ಕೂಡ ಪ್ರತಿಕ್ರಿಯಿಸಿದ್ದು, ಶ್ರೀಲಂಕಾ ಚುನಾವಣಾ ಆಯೋಗದ ಅಧ್ಯಕ್ಷ ನಿಮಲ್ ಪುಂಚಿಹೆವಾ ಸೋಮವಾರ, “ದೇಶದ ಚುನಾವಣಾ ಕಾನೂನು ಹೊರಗಿನ ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುವುದಿಲ್ಲ. ಶ್ರೀಲಂಕಾದ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯು ವಿದೇಶದಲ್ಲಿರುವ ಯಾವುದೇ ಪಕ್ಷ ಅಥವಾ ಸಂಘಟನೆಯೊಂದಿಗೆ ಬಾಹ್ಯ ಸಂಪರ್ಕ ಹೊಂದಬಹುದು. ಆದರೆ, ಸಾಗರೋತ್ತರ ರಾಜಕೀಯ ಪಕ್ಷಗಳು ನಮ್ಮ ನೆಲದಲ್ಲಿ ಕಾರ್ಯನಿರ್ವಹಿಸಲು ನಮ್ಮ ಚುನಾವಣಾ ಕಾನೂನುಗಳು ಅನುಮತಿ ನೀಡುವುದಿಲ್ಲ” ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ಟೂಲ್‌ಕಿಟ್ ಪ್ರಕರಣ: ಮತ್ತೊಬ್ಬ ಆರೋಪಿ ಶಾಂತನು ಮುಲುಕ್‌ಗೆ ನಿರೀಕ್ಷಣಾ ಜಾಮೀನು