ಆರ್‌ಎಸ್‍ಎಸ್‍ನ ಎಂ.ಎಸ್ ಗೋಲ್ವಾಲ್ಕರ್ ಆಲೋಚನೆಗಳ ವಿರುದ್ಧ ಹೋರಾಟಕ್ಕೆ ಸೇರುವ ಮೂಲಕ ಮಾತ್ರ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ತಮ್ಮ ತಂದೆಯ ಪರಂಪರೆಯನ್ನು ಮುಂದಕ್ಕೆ ಒಯ್ಯಬಹುದು ಎಂದು ಹೇಳಿರುವ RJD ನಾಯಕ ತೇಜಸ್ವಿ ಯಾದವ್, ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತೇವೆ ಎಂದು ಹೇಳಿದ್ದಾರೆ.
ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಿಯಂತ್ರಣಕ್ಕಾಗಿ ಚಿಕ್ಕಪ್ಪ ಪಶುಪತಿ ಕುಮಾರ್ ಅವರೊಂದಿಗಿನ ಕಹಿಯ ಬಗ್ಗೆ ಬಿಜೆಪಿಯ ಮೌನದ ಬಗ್ಗೆ ಚಿರಾಗ್ ನಿರಾಶೆ ಹೊಂದಿರುವ ಸಂದರ್ಭದಲ್ಲಿ, ‘ಯಾರ್ಯಾರಿಂದ ಎಷ್ಟು ಲಾಭ ಬೇಕೋ ಅಷ್ಟನ್ನು ಪಡೆದ ಬಿಜೆಪಿ ಅಧಿಕಾರ ಸಿಕ್ಕ ನಂತರ ಅವರನ್ನು ಕೈ ಬಿಟ್ಟಿದೆ ಎಂದ ತೇಜಸ್ವಿ ಯಾದವ್ ಚಿರಾಗ್ ಪರ ನಿಂತಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಯಾದವ್, ತಮ್ಮ ಪಕ್ಷವು ಯಾವಾಗಲೂ ರಾಮ್ ವಿಲಾಸ್ ಪಾಸ್ವಾನ್ ಅವರ ಪರವಾಗಿ ನಿಂತಿದೆ. ಎಲ್‍ಜೆಪಿಗೆ ಒಬ್ಬ ಶಾಸಕರಿಲ್ಲದಿದ್ದಾಗ ಮತ್ತು ರಾಮ್ ವಿಲಾಸ್ ಪಾಸ್ವಾನ್ 2009ರಲ್ಲಿ ನಡೆದ ಚುನಾವಣೆಯಲ್ಲಿ ಸೋತಾಗ, ಲಾಲು ಪ್ರಸಾದ್ ಯಾದವ್ RJD ಕೋಟಾದಲ್ಲಿ ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದರು ಎಂದು ಹೇಳಿದ್ದಾರೆ.
ದೇಶದ ಬೇರೆ ಯಾವುದೇ ನಾಯಕ ಅಥವಾ ಪಕ್ಷ ಇಷ್ಟು ಕೆಲಸ ಮಾಡಿದ್ದಾರೆ ಅಥವಾ ತ್ಯಾಗ ಮಾಡಿದ್ದಾರೆಯೇ? ಎಂದು ಅವರು ಕೇಳಿದರು. “ರಾಮ್ ವಿಲಾಸ್ ಜಿ ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲು ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ನಮ್ಮ ಪಕ್ಷ ನಿರ್ಧರಿಸಿದೆ” ಎಂದು ಯಾದವ್ ಹೇಳಿದರು.
“ದಿವಂಗತ ರಾಮ್ ವಿಲಾಸ್ ಜಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮತ್ತು ಲೋಕಸಭೆಯಲ್ಲಿ ಸಂಸದೀಯ ನಾಯಕರಾಗಿ ನೇಮಕ ಮಾಡುವ ಮೂಲಕ ಚಿರಾಗ್ ಪಾಸ್ವನ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಈಗ ಅವರು ತಮ್ಮ ತಂದೆಯ ಪರಂಪರೆಯನ್ನು ಹೇಗೆ ಮುಂದಕ್ಕೆ ಸಾಗಿಸುತ್ತಾರೆ ಎಂಬುದು ಈಗ ಅವರ ಮೇಲಿದೆ” ಎಂದು ಯಾದವ್ ಹೇಳಿದರು.
ಇದನ್ನೂ ಓದಿ: ‘ಆರೆಸ್ಸೆಸ್ ಅಥವಾ ಸಂವಿಧಾನ’ – ಚಿರಾಗ್ ಪಾಸ್ವಾನ್‌ಗೆ ಆಯ್ಕೆ ಮುಂದಿಟ್ಟ ತೇಜಸ್ವಿ ಯಾದವ್!


