ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಯು ಭಾರತೀಯ ಸೇನೆ ಗಡಿಯಲ್ಲಿ ಎಲ್ಲಾ ಸಮಯದಲ್ಲೂ ಕಟ್ಟೆಚ್ಚರ ವಹಿಸಬೇಕು ಎಂಬುದನ್ನು ನೆನಪಿಸುತ್ತದೆ. ರಕ್ಷಣಾ ಇಲಾಖೆ ಎಲ್ಲಾ ಸಮಯದಲ್ಲೂ ಅಲರ್ಟ್ ಆಗಿರಬೇಕು ಎಂದು ವಾಯುಸೇನೆ ಮುಖ್ಯಸ್ಥ ಬದೌರಿಯಾ ಹೇಳಿದ್ದಾರೆ.

ನವದೆಹಲಿಯ ಹಿಂಡನ್ ವಾಯುಸೇನೆ ನೆಲೆಯಲ್ಲಿ ನಡೆದ ಭಾರತೀಯ ವಾಯುಸೇನೆಯ 87ನೇ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಬದೌರಿಯಾ, ಪ್ರಸ್ತುತ ದೇಶದ ಭದ್ರತೆಗೆ ಸಂಬಂಧಪಟ್ಟಂತೆ, ನೆರೆಹೊರೆಯ ರಾಷ್ಟ್ರಗಳ ಗಡಿಯಲ್ಲಿ ವಾತಾವರಣವು ಕಳವಳಕಾರಿಯಾಗಿದೆ. ದೇಶದ ಗಡಿಯಲ್ಲಿ ಯೋಧರು ಎಲ್ಲಾ ಸಮಯದಲ್ಲೂ ಅಲರ್ಟ್ ಆಗಿರಬೇಕು ಎಂಬುದನ್ನು ಪುಲ್ವಾಮಾ ದಾಳಿ ಮತ್ತೆ ಮತ್ತೆ ನೆನಪಿಸುತ್ತದೆ ಎಂದಿದ್ದಾರೆ. ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಸಿಆರ್‍ಪಿಎಫ್‍ನ 40ಕ್ಕೂ ಹೆಚ್ಚು ಯೋಧರು ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾಗಿದ್ದರು.
ಬಾಲಾಕೋಟ್‍ನ ಜೈಷೇ ಮೊಹಮ್ಮದ್ ಉಗ್ರರ ಕ್ಯಾಂಪ್‍ಗಳ ಮೇಲೆ ಭಾರತೀಯ ಸೇನೆ ನಡೆಸಿದ ಏರ್‍ಸ್ಟ್ರೈಕ್ಸ್ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿ, ಭಯೋತ್ಪಾದಕರನ್ನು ಶಿಕ್ಷಿಸಲು ಮಾಡಿರುವ ರಾಜಕೀಯ ಸಂಕಲ್ಪವಾಗಿದೆ. ಭಯೋತ್ಪಾದಕರ ದಾಳಿಯನ್ನು ತಡೆಯಲು ಮತ್ತು ನಿರ್ವಹಿಸಲು ಸರ್ಕಾರದ ವಿಧಾನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ ಎಂದು ಹೇಳಿದರು.
ವಾಯುಪಡೆಯ ದಿನಾಚರಣೆಯ ಪ್ರಯುಕ್ತ ಆಕಾಶ್ ಗಂಗಾ ತಂಡದ ಸ್ಕೈಡೈವರ್ ಗಳು ಧ್ವಜದೊಂದಿಗೆ ವರ್ಣರಂಜಿತ ಕ್ಯಾನೊಪಿಗಳಲ್ಲಿ ಎಎನ್ -32 ವಿಮಾನದಿಂದ ಕೆಳಗಿಳಿಯುವ ಮೂಲಕ ವಾಯು ಪ್ರದರ್ಶನಕ್ಕೆ ಚಾಲನೆ ನೀಡಿದರು. ಐಎಎಫ್ ತನ್ನ ಚಿನೂಕ್ ಹೆವಿ-ಲಿಫ್ಟ್ ಟ್ವಿನ್-ರೋಟರ್ ಟ್ರಾನ್ಸ್‌ಪೋರ್ಟ್ ಹೆಲಿಕಾಪ್ಟರ್ ಮತ್ತು ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ಮೊದಲ ಬಾರಿಗೆ ಪ್ರದರ್ಶಿಸಿತು.
ಇನ್ನು ಹಿಂಡನ್ ವಾಯು ನೆಲೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮಿಗ್ 21 ಬಿಸೋನ್ ಏರಿ ಪರೇಡ್ ನಡೆಸಿದರು. 3 ಮಿರಾಜ್ 2000 ವಿಮಾನ ಮತ್ತು 2 ಸು -30 ಎಂಕೆಐ ಯುದ್ಧ ವಿಮಾನಗಳು ಅವೆಂಜರ್ ರಚನೆಯಲ್ಲಿ ಹಾರಾಡಿದವು. ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಭಾಗಿಯಾಗಿದ್ದ ಪೈಲಟ್ ಗಳು ವಿಮಾನದಲ್ಲಿ ಹಾರಾಟ ನಡೆಸಿದರು.


