ಬೆಂಗಳೂರು: 2019 ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಡಿಪ್ಲೊಮಾ ವಿದ್ಯಾರ್ಥಿಯ ಕುಟುಂಬಕ್ಕೆ ರಾಜ್ಯ ಹೈಕೋರ್ಟ್ ಪರಿಹಾರವನ್ನು ಹೆಚ್ಚಿಸಿ ತೀರ್ಪು ನೀಡಿದೆ. ಮೋಟಾರ್ ಅಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯೂನಲ್ ಆರಂಭದಲ್ಲಿ ನೀಡಿದ್ದ 1,53,000 ಲಕ್ಷ ರೂ.ವನ್ನು 21,28,800 ಲಕ್ಷ ರೂ.ಗೆ ಹೆಚ್ಚಿಸಿದೆ.
ನ್ಯಾಯಮೂರ್ತಿಗಳಾದ ಕೆ.ಎಸ್. ಮುದಗಲ್ ಮತ್ತು ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಪರಿಷ್ಕೃತ ಪರಿಹಾರವನ್ನು ಆರಂಭದಲ್ಲಿ ವಿಮಾ ಕಂಪನಿಯು ಪಾವತಿಸಬೇಕು. ನಂತರ ವಾಹನ ಮಾಲೀಕರಿಂದ ಮೊತ್ತವನ್ನು ಕಂಪನಿಯು ಮರುಪಡೆಯಬಹುದು. ಈ ಪ್ರಕರಣವು 2019 ರ ಏಪ್ರಿಲ್ 23 ರಂದು ಸ್ನೇಹಿತ ಅರವಿಂದ್ ಅವರೊಂದಿಗೆ 19 ವರ್ಷದ ಎಂ.ಎಸ್. ಶ್ರೀಹರಿ ಅವರ ರಸ್ತೆ ಅಫಘಾತದಿಂದಾದ ಸಾವಿಗೆ ಸಂಬಂಧಿಸಿದೆ.
ಬೆಂಗಳೂರು ಸಮೀಪದ ಹೆಜ್ಜಾಲ-ಕೆಂಪದ್ಯಾಪನಹಳ್ಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಅತಿವೇಗದ ಚಾಲನೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತ್ತು. ರಾಮನಗರ ಜಿಲ್ಲೆಯ ಮಲ್ಲತ್ತಹಳ್ಳಿ ಗ್ರಾಮದ ಬಳಿ ಮಣ್ಣಿನ ಗೋಡೆಗೆ ಬೈಕ್ ಡಿಕ್ಕಿ ಹೊಡೆದಿದ್ದು, ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಯುವಕ ಇಲ್ಲಿನ ಪಿಇಎಸ್ ಕಾಲೇಜಿನಲ್ಲಿ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದು, ಹಾಲು ಮಾರಾಟ ವ್ಯವಹಾರದ ಮೂಲಕ ತಿಂಗಳಿಗೆ 20,000 ರೂ. ಸಂಪಾದಿಸುತ್ತಿದ್ದ ಎಂದು ತಿಳಿಸಿರುವ ಶ್ರೀಹರಿಯ ಕುಟುಂಬದ ಪೋಷಕರು ಮತ್ತು ಸಹೋದರಿ ಆರಂಭದಲ್ಲಿ 30 ಲಕ್ಷ ರೂ. ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ನ್ಯಾಯಾಲಯವು ತನ್ನ ಏಪ್ರಿಲ್ 2022 ರ ಆದೇಶದಲ್ಲಿ, 1.53 ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿತ್ತು. ಸವಾರನು ಆ ಸಂದರ್ಭದಲ್ಲಿ ಚಾಲನಾ ಪರವಾನಗಿಯನ್ನು ಹೊಂದಿರಲಿಲ್ಲವಾಗಿದ್ದರಿಂದ ಪ್ರಾಥಮಿಕವಾಗಿ ಮೋಟಾರ್ ಮಾಲೀಕ ಸೂರಜ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಿದೆ.
ಇದನ್ನೂ ಓದಿ…10 ತಿಂಗಳಲ್ಲಿ 420,000 ಸೊಮಾಲಿಯನ್ನರ ಸ್ಥಳಾಂತರ: ಯುಎನ್ ಹೆಚ್‌ಸಿಆರ್
ನ್ಯಾಯಮಂಡಳಿಯ ತೀರ್ಪಿನಿಂದ ಅತೃಪ್ತರಾದ ಕುಟುಂಬವು ಮೇಲ್ಮನವಿ ಸಲ್ಲಿಸಿ, ಸುಪ್ರೀಂ ಕೋರ್ಟ್ ಪೂರ್ವನಿದರ್ಶನಕ್ಕೆ ಅನುಗುಣವಾಗಿ ಪರಿಹಾರವನ್ನು ಮುಂಗಡವಾಗಿ ಪಾವತಿಸಲು ಮತ್ತು ನಂತರ ಮಾಲೀಕರಿಂದ ವಸೂಲಿ ಮಾಡಲು ವಿಮಾ ಕಂಪನಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ,ಚಾಲನಾ ಪರವಾನಿಗೆ ಇಲ್ಲದಿರುವುದು ನೀತಿ ಉಲ್ಲಂಘನೆಯಾಗಿದೆ ಮತ್ತು ಹಕ್ಕುದಾರರು ಶ್ರೀಹರಿಯ ಮೇಲೆ ಆರ್ಥಿಕ ಅವಲಂಬನೆಯನ್ನು ಸಾಕಷ್ಟು ಸಾಬೀತುಪಡಿಸಿಲ್ಲ ಎಂದು ವಿಮಾದಾರರು ವಾದಿಸಿದರು.
ಆದಾಗ್ಯೂ, ಕುಟುಂಬದ ಪರವಾಗಿ ತೀರ್ಪು ನೀಡಿರುವ ಹೈಕೋರ್ಟ್,ಸುಪ್ರೀಂ ಕೋರ್ಟ್ ಸೂಚಿಸಿದ “ಪಾವತಿ ಮತ್ತು ಮರುಪಡೆಯುವಿಕೆ” ಎಂಬ ನಿರ್ದೇಶನ ಈ ಪ್ರಕರಣಕ್ಕೆ ಅನ್ವಯಿಸುತ್ತದೆ ಎಂದು ಹೇಳಿದೆ. ಶ್ರೀಹರಿಯ ಕುಟುಂಬವು ಆದಾಯವನ್ನು ನಿರ್ಣಾಯಕವಾಗಿ ಸಾಬೀತುಪಡಿಸಲು ಸಾಧ್ಯವಾಗದಿದ್ದರೂ,ಅವರ ವಯಸ್ಸು ಮತ್ತು ಕೌಟುಂಬಿಕ ಪಾತ್ರವನ್ನು ರುಜುವಾತುಪಡಿಸಲಾಗಿದೆ ಎಂದಿದೆ.
ನ್ಯಾಯಾಲಯವು ಅವನ ಮಾಸಿಕ ಗಳಿಕೆಯನ್ನು 14,000 ರೂ. ಎಂದು ಅಂದಾಜು ಮಾಡಿದೆ. ಅರ್ಜಿ ಸಲ್ಲಿಸಿದ ದಿನದಿಂದ ಮೊತ್ತವನ್ನು ಠೇವಣಿ ಇಡುವವರೆಗೆ ಶೇ 6ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ₹21,28,800 ಪಾವತಿಸುವಂತೆ ಪೀಠವು ವಿಮಾ ಕಂಪನಿಗೆ ಸೂಚಿಸಿದೆ.
ಇದನ್ನೂ ಓದಿ….2019ರ ರಸ್ತೆ ಅಪಘಾತ: ವಿದ್ಯಾರ್ಥಿ ಕುಟುಂಬಕ್ಕೆ 21 ಲಕ್ಷ ರೂ. ಪರಿಹಾರ ಹೆಚ್ಚಿಸಿದ ಹೈಕೋರ್ಟ್


