Homeಮುಖಪುಟಪಠ್ಯಪರಿಷ್ಕರಣೆಯ ಬೇರಡಗಿರುವುದು ’ರಾಷ್ಟ್ರೀಯ ಶಿಕ್ಷಣ ನೀತಿ 2020’ರಲ್ಲಿ

ಪಠ್ಯಪರಿಷ್ಕರಣೆಯ ಬೇರಡಗಿರುವುದು ’ರಾಷ್ಟ್ರೀಯ ಶಿಕ್ಷಣ ನೀತಿ 2020’ರಲ್ಲಿ

- Advertisement -
- Advertisement -

ಕಳೆದ ಹತ್ತು-ಹದಿನೈದು ದಿನಗಳಿಂದ ಪಠ್ಯಪುಸ್ತಕ ಪರಿಷ್ಕರಣೆಯ ಸೋಗಿನಲ್ಲಿ, ಕನ್ನಡ ಮತ್ತು ಸಮಾಜ ವಿಜ್ಞಾನದ ಶಾಲಾ ಪಠ್ಯಪುಸ್ತಕಗಳಲ್ಲಿ ಬ್ರಾಹ್ಮಣ್ಯ, ಪಿತೃಪ್ರಧಾನತೆ ಮತ್ತು ಕೇಸರೀಕರಣದ ಮೌಲ್ಯಗಳನ್ನು ತುರುಕಲಾಗುತ್ತಿರುವ ರಾಜ್ಯ ಸರ್ಕಾರದ ಪ್ರಯತ್ನಗಳ ವಿರುದ್ಧ ಕರ್ನಾಟಕಾದ್ಯಂತ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದ್ದು ಅದು ಪ್ರತಿಭಟನೆಗಳ ರೂಪವನ್ನೂ ಪಡೆದುಕೊಂಡಿದೆ. ಇದರ ಜೊತೆಗೆ ಇಡೀ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಿರುವ ಪಾರದರ್ಶಕತೆ, ಪರಿಷ್ಕರಣೆ ಸಮಿತಿ ಸದಸ್ಯರಲ್ಲಿ ಕಾಣೆಯಾಗಿರುವ ಪ್ರತಿನಿಧಿತ್ವ, ಅದರ ಅಧ್ಯಕ್ಷನ ಸಮಸ್ಯಾತ್ಮಕ ನಿಲುವುಗಳು- ಹೀಗೆ ವಿವಿಧ ಆಯಾಮಗಳಿಂದ ವಿರೋಧಿಸಲಾಗುತ್ತಿದೆ. ಎಲ್ಲೆಡೆ ವ್ಯಕ್ತವಾಗಿರುವ ಈ ಭಾರೀ ಅಕ್ರೋಶದ ಕಾರಣಕ್ಕೆ ಸರ್ಕಾರವು ಇಂದು ಸಣ್ಣ ಹೆಜ್ಜೆ ಹಿಂದಿಟ್ಟಿರುವುದು ನಿಜ. ಆದರೂ, ಶಿಕ್ಷಣ ಕ್ಷೇತ್ರದಲ್ಲಿನ ಯಾವುದೇ ಬದಲಾವಣೆಗಳನ್ನು ನಾವು ಅಳೆಯಬೇಕಿರುವುದು-ಅವಲೋಕಿಸಬೇಕಿರುವುದು ರಾಷ್ಟ್ರೀಯ ಶಿಕ್ಷಣ ನೀತಿಯು ಮುಂದಿನ ಹಲವು ದಶಕಗಳ ಕಾಲ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದರ ಮೇಲೆಯೇ. ಈ ನಿಟ್ಟಿನಲ್ಲಿಯೇ ಈ ಲೇಖನ.

ರಾಷ್ಟ್ರೀಯ ಶಿಕ್ಷಣ ನೀತಿ 2020, ಪಠ್ಯಕ್ರಮಗಳ ಬಗ್ಗೆ ಹೇಳುವುದಾದರೂ ಏನು?

ಈ ನೀತಿಯು, “ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವುದರ ಮೂಲಕ ಭಾರತವನ್ನು ಸಮತೆಯುಳ್ಳ ಮತ್ತು ಚಲನಶೀಲ ಜ್ಞಾನ ಸಮಾಜವನ್ನಾಗಿ ಪರಿವರ್ತಿಸುವುದರೊಂದಿಗೆ ಜ್ಞಾನ ಜಗತ್ತಿನ ಬಲಶಾಲಿ ರಾಷ್ಟ್ರವನ್ನಾಗಿಸಲು ಕೊಡುಗೆ ನೀಡುವ, ಭಾರತೀಯ ಮೌಲ್ಯಗಳಲ್ಲಿ ಬೇರೂರಿದ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವ ಆಶಯವನ್ನು ಹೊಂದಿದೆ. ಈ ನೀತಿಯು, ನಮ್ಮ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮ ಮತ್ತು ಬೋಧನಾ ವಿಧಾನವು ವಿದ್ಯಾರ್ಥಿಗಳಲ್ಲಿ ಮೂಲಭೂತ ಕರ್ತವ್ಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಆಳವಾದ ಗೌರವ, ದೇಶದೊಂದಿಗೆ ಬಾಂಧವ್ಯ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ತಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ದೃಷ್ಟಿಕೋನ ಹೊಂದಿದೆ. ಅಲ್ಲದೇ, ಕಲಿಕಾರ್ಥಿಗಳ ಆಲೋಚನೆಯಲ್ಲಿ ಮಾತ್ರವಲ್ಲದೇ ಭಾವನಾತ್ಮಕವಾಗಿ, ಬೌದ್ಧಿಕತೆ ಮತ್ತು ಕಾರ್ಯಗಳಲ್ಲಿಯೂ ಸಹ ಆಳವಾಗಿ ಬೇರೂರಿದ ಭಾರತೀಯತೆಯ ಹೆಮ್ಮೆಯನ್ನು ಬಿತ್ತುವುದು ಮತ್ತು ಮಾನವ ಹಕ್ಕುಗಳ ಕುರಿತು ಜವಾಬ್ದಾರಿಯುತ ಬದ್ಧತೆ, ಸುಸ್ಥಿರ ಅಭಿವೃದ್ಧಿ ಮತ್ತು ಜೀವನ ಹಾಗೂ ಜಾಗತಿಕ ಕಲ್ಯಾಣವನ್ನು ಬೆಂಬಲಿಸುವುದರೊಂದಿಗೆ ವಾಸ್ತವದಲ್ಲಿ ಜಾಗತಿಕ ನಾಗರಿಕರನ್ನಾಗಿಸುವ ದೃಷ್ಟಿಕೋನ ಹೊಂದಿದೆ..” ಎನ್ನುತ್ತದೆ.

ರಾ.ಶಿ.ನೀ-2020 ತನ್ನ ಪೀಠಿಕೆಯಲ್ಲಿಯೇ ಹೇಳುವಂತೆ, “ಈ ರಾಷ್ಟ್ರೀಯ ಶಿಕ್ಷಣ ನೀತಿಯು 21ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ ಮತ್ತು ಇದು ನಮ್ಮ ದೇಶದ ಅನೇಕ ಅಭಿವೃದ್ಧಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಭಾರತದ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಬಲಗೊಳಿಸುತ್ತಾ, SDG (Sustainable Development Goal) ಗುರಿ 4 ಸೇರಿದಂತೆ 21 ನೇ ಶತಮಾನದ ಶಿಕ್ಷಣದ ಮಹತ್ವಾಕಾಂಕ್ಷೆಯ ಗುರಿಗಳಿಗೆ ಹೊಂದಿಕೆಯಾಗುವ ಹೊಸ ವ್ಯವಸ್ಥೆಯನ್ನು ರಚಿಸಲು, ನಿಯಂತ್ರಣ ಮತ್ತು ಆಡಳಿತ ಸೇರಿದಂತೆ ಶಿಕ್ಷಣ ವ್ಯವಸ್ಥೆಯ ಎಲ್ಲಾ ಅಂಶಗಳನ್ನು ಪರಿಷ್ಕರಿಸಲು ಈ ನೀತಿಯಲ್ಲಿ ಪ್ರಸ್ತಾಪಿಸಿದೆ…”.

ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಮುಂದಿನ ಪ್ಯಾರಾದಲ್ಲಿ, “ಅತ್ಯುನ್ನತ ಭಾರತೀಯ ಜ್ಞಾನ ಮತ್ತು ಚಿಂತನೆಯ ಶ್ರೀಮಂತ ಪ್ರಾಚೀನ ಪರಂಪರೆಯು ಈ ನೀತಿಗೆ ದಾರಿದೀಪವಾಗಿದೆ… ಪ್ರಾಚೀನ ಭಾರತದಲ್ಲಿ ಶಿಕ್ಷಣದ ಗುರಿಯು ಕೇವಲ ಪ್ರಸ್ತುತ ಜೀವನಕ್ಕೆ ಅಥವಾ ಶಾಲಾ ಶಿಕ್ಷಣದ ನಂತರದ ಜೀವನಕ್ಕೆ ಸಿದ್ಧಪಡಿಸಲು ಜ್ಞಾನವನ್ನು ಪಡೆಯುವುದಾಗಿರಲಿಲ್ಲ, ಬದಲಾಗಿ ಆತ್ಮ ಸಾಕ್ಷಾತ್ಕಾರ ಮತ್ತು ಸ್ವಯಂ ವಿಮೋಚನೆಗಾಗಿ ಸಿದ್ಧಪಡಿಸುವುದಾಗಿತ್ತು. ತಕ್ಷಶಿಲಾ, ನಳಂದ, ವಿಕ್ರಮಶಿಲಾ, ವಲ್ಲಭಿಯಂತಹ ಪ್ರಾಚೀನ ಭಾರತದ ವಿಶ್ವ ದರ್ಜೆಯ ಸಂಸ್ಥೆಗಳು ಬಹುವಿಷಯದ ಬೋಧನೆ ಮತ್ತು ಸಂಶೋಧನೆಯ ಉನ್ನತ ಗುಣಮಟ್ಟವನ್ನು ಸಾಧಿಸುವುದರೊಂದಿಗೆ ವಿವಿಧ ಹಿನ್ನೆಲೆಯುಳ್ಳ ಮತ್ತು ವಿವಿಧ ದೇಶಗಳ ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದವು. ಭಾರತೀಯ ಶಿಕ್ಷಣ ವ್ಯವಸ್ಥೆಯು ಚರಕ, ಸುಶ್ರುತ, ಆರ್ಯಭಟ, ವರಾಹ ಮಿಹಿರ, ಭಾಸ್ಕರಾಚಾರ್ಯ, ಬ್ರಹ್ಮಗುಪ್ತ, ಚಾಣಕ್ಯ, ಚಕ್ರಪಾಣಿ ದತ್ತ, ಮಾಧವ, ಪಾಣಿನಿ, ಪತಂಜಲಿ, ನಾಗಾರ್ಜುನ, ಗೌತಮ, ಪಿಂಗಳ, ಶಂಕರದೇವ, ಮೈತ್ರೇಯಿ, ಗಾರ್ಗಿ ಮತ್ತು ತಿರುವಳ್ಳುವರ್‌ರಂತಹ ಶ್ರೇಷ್ಠ ವಿದ್ವಾಂಸರನ್ನು ರೂಪಿಸಿದೆ” ಎಂದೂ ಹೇಳುತ್ತದೆ.

ಅರವತ್ತಾರು ಪುಟಗಳ ರಾ.ಶಿ.ನೀ-2020ರ ಬರೋಬ್ಬರಿ 13 ಪುಟಗಳಷ್ಟಿರುವ ಭಾಗ-1ರ 4ನೇ ವಿಷಯವು ಶಾಲೆಗಳಲ್ಲಿ ಪಠ್ಯಕ್ರಮ ಮತ್ತು ಬೋಧನಾ ವಿಧಾನ ಕಲಿಕೆಯು ಸಂಪೂರ್ಣ, ಸಮಗ್ರ ಆಹ್ಲಾದಕರ ಮತ್ತು ಭಾಗವಹಿಸುವಿಕೆಯಿಂದ ಕೂಡಿರಬೇಕು ಎಂಬ ಶೀರ್ಷಿಕೆಯಡಿಯಲ್ಲಿ ರಾ.ಶಿ.ನೀ.ಯ ಪಠ್ಯಕ್ರಮದ ಬಗೆಗಿನ ನಿಲುವು ನಮಗೆ ಸ್ಪಷ್ಟವಾಗುತ್ತದೆ. ಅದರಲ್ಲಿ ಉಲ್ಲೇಖಿಸಿರುವಂತೆಯೇ ಕೆಲವು ಪ್ರಮುಖವೆನಿಸುವ ಅಂಶಗಳನ್ನು ಕೆಳಗೆ ನೀಡಲಾಗಿದೆ.

“ಗಟ್ಟು ಮಾಡಿ ಎಕ್ಸಾಮು ಪಾಸು ಮಾಡುವ ಕಾರ್ಯತಂತ್ರದಿಂದ ದೂರವಾಗಿ ಕಲಿಕೆಯ ಕಲಿಕೆ (ಪ್ಯಾರಾ 4.6) ಬಗ್ಗೆ ಹೆಚ್ಚು ಗಮನ ಹರಿಸಬೇಕು, ಅದಕ್ಕೆ ಪೂರಕವೆಂಬಂತೆ, ಕಲೆಯಾಧಾರಿತ (ಪ್ಯಾರಾ 4.7), ಕ್ರೀಡೆಗಳಾಧರಿತ (ಪ್ಯಾರಾ 4.8), ಅನುಭವಾತ್ಮಕ ಕಲಿಕೆ (ಪ್ಯಾರಾ 4.6, 4,7 ಮತ್ತು 4.8) ಮತ್ತು ವೃತ್ತಿ ಶಿಕ್ಷಣ ಕ್ರಮಕ್ಕೆ (16.4) ಹೆಚ್ಚು ಆದ್ಯತೆ ನೀಡಬೇಕು.”

ಪ್ಯಾರಾ 4.4 ರಲ್ಲಿ ಹೇಳಲಾಗಿರುವಂತೆ, “…ಶಿಕ್ಷಣದ ಗುರಿಯೆಂದರೆ ಜ್ಞಾನಾತ್ಮಕ ಬೆಳವಣಿಗೆಯಷ್ಟೇ ಅಲ್ಲ, ಚಾರಿತ್ರ್ಯ ನಿರ್ಮಾಣ ಮತ್ತು 21ನೇ ಶತಮಾನದ ಪ್ರಮುಖ ಕೌಶಲ್ಯಗಳನ್ನು ರೂಢಿಸಿಕೊಂಡಿರುವ ಸಂಪೂರ್ಣ ಮತ್ತು ಸರ್ವತೋಮುಖ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳನ್ನು ಸಿದ್ಧಪಡಿಸುವುದಾಗಿದೆ… ಶಾಲಾಪೂರ್ವ ಹಂತದಿಂದ ಉನ್ನತ ಶಿಕ್ಷಣದವರೆಗೆ ಕಲಿಕೆಯ ಪ್ರತಿಯೊಂದು ಹಂತದಲ್ಲೂ ಅಳವಡಿಸಲು ವಿವಿಧ ಕ್ಷೇತ್ರಗಳಾದ್ಯಂತ ನಿರ್ದಿಷ್ಟ ಕೌಶಲ ಮತ್ತು ಮೌಲ್ಯಗಳನ್ನು ಗುರುತಿಸಲಾಗುತ್ತದೆ. ಬೋಧನೆ ಮತ್ತು ಕಲಿಕೆಯ ಸಹಭಾಗಿತ್ವ ಪ್ರಕ್ರಿಯೆಗಳ ಮೂಲಕ ಈ ಕೌಶಲಗಳು ಮತ್ತು ಮೌಲ್ಯಗಳನ್ನು ಅಳವಡಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪಠ್ಯಕ್ರಮದ ಚೌಕಟ್ಟು ಮತ್ತು ಬೋಧನಾ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.”

’ಬಹುಭಾಷೀಯತೆ ಮತ್ತು ಭಾಷೆಯ ಶಕ್ತಿ’ ಎಂಬ ಶೀರ್ಷಿಕೆಯಡಿಯಲ್ಲಿ ನೀಡಲಾದ ಪ್ಯಾರಾ 4.11ರಲ್ಲಿ “ಬೋಧನಾ ಮಾಧ್ಯಮವು ಮನೆ ಭಾಷೆ/ಮಾತೃಭಾಷೆ/ಸ್ಥಳೀಯ ಭಾಷೆ/ಪ್ರಾದೇಶಿಕ ಭಾಷೆಯಾಗಿರುತ್ತದೆ. ಅದರ ನಂತರ, ಮನೆ/ಸ್ಥಳೀಯ ಭಾಷೆಯನ್ನು ಸಾಧ್ಯವಾದಲ್ಲೆಲ್ಲಾ ಒಂದು ಭಾಷೆಯಾಗಿ ಕಲಿಸಲಾಗುತ್ತದೆ” ಎಂದು ಹೇಳಿದರೂ, ಪ್ಯಾರಾ 4.17ರಲ್ಲಿ “..ಸಂಸ್ಕೃತವು ಭಾರತದ ಸಂವಿಧಾನದ ಎಂಟನೇ ಪರಿಚ್ಛೇಧದಲ್ಲಿ ಉಲ್ಲೇಖಿಸಲಾದ ಒಂದು ಪ್ರಮುಖ ಆಧುನಿಕ ಭಾಷೆಯಾಗಿದ್ದು, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಶಾಸ್ತ್ರೀಯ ಸಾಹಿತ್ಯವನ್ನು ಹೊಂದಿದೆ. ಇದು ಸಾವಿರಾರು ವರ್ಷಗಳಿಂದ ವಿವಿಧ ಮತ ಪಂಥಗಳಿಗೆ ಸೇರಿದ ಜನರು ಹಾಗೂ ವೈವಿಧ್ಯಮಯ ಸಾಮಾಜಿಕ-ಆರ್ಥಿಕ ಹಿನ್ನೆಲೆಗಳ ಜನರು ಬರೆದಿರುವ ಗಣಿತ, ತತ್ವಶಾಸ್ತ್ರ, ವ್ಯಾಕರಣ, ಸಂಗೀತ, ರಾಜಕೀಯ, ವೈದ್ಯಕೀಯ, ವಾಸ್ತುಶಿಲ್ಪ, ಲೋಹಶಾಸ್ತ್ರ, ನಾಟಕ, ಕವನ, ಕಥೆ ಹೇಳುವಿಕೆ ಮತ್ತು ಇನ್ನೂ ಹೆಚ್ಚಿನ ಸಂಪತ್ತನ್ನು (’ಸಂಸ್ಕೃತ ಜ್ಞಾನ ವ್ಯವಸ್ಥೆಗಳು’ ಎಂದು ಕರೆಯಲಾಗುತ್ತದೆ) ಒಳಗೊಂಡಿದೆ. ತ್ರಿ-ಭಾಷಾ ಸೂತ್ರದಲ್ಲಿನ ಒಂದು ಆಯ್ಕೆಯೂ ಸೇರಿದಂತೆ ವಿದ್ಯಾರ್ಥಿಗಳಿಗೆ ಒಂದು ಪ್ರಮುಖ, ಸಂಪದ್ಭರಿತ ಆಯ್ಕೆಯಾಗಿ ಶಾಲೆ ಮತ್ತು ಉನ್ನತ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸಂಸ್ಕೃತವನ್ನು ಪರಿಚಯಿಸಲಾಗುವುದು…”.

ಪ್ಯಾರಾ 4.23ರಲ್ಲಿ ನೀಡಲಾಗಿರುವಂತೆ, “ಆದರೆ ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಉತ್ತಮ, ಯಶಸ್ವಿ, ನವೀನ, ಹೊಂದಿಕೊಳ್ಳಬಲ್ಲ ಮತ್ತು ಉತ್ಪಾದಕ ವ್ಯಕ್ತಿಗಳಾಗಲು, ಎಲ್ಲಾ ವಿದ್ಯಾರ್ಥಿಗಳು ಕೆಲವು ವಿಷಯಗಳು, ಕೌಶಲಗಳು ಮತ್ತು ಸಾಮರ್ಥ್ಯಗಳನ್ನು ಕಲಿಯಬೇಕಾಗಿದೆ…”.

ಪ್ಯಾರಾ 4.30ರಲ್ಲಿ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCFSE) ಬಗ್ಗೆ ಮಾತನಾಡುತ್ತಾ, “ಈ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿನ ತತ್ವಗಳು, ಪಠ್ಯಕ್ರಮದ ಪ್ರಮುಖ ಅಗತ್ಯತೆಗಳು ಮತ್ತು ರಾಜ್ಯ ಸರ್ಕಾರಗಳು, ಸಚಿವಾಲಯಗಳು, ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಗಳು ಹಾಗೂ ಇತರ ತಜ್ಞ ಸಂಸ್ಥೆಗಳು ಸೇರಿದಂತೆ ಎಲ್ಲಾ ಭಾಗೀದಾರರೊಂದಿಗೆ ಚರ್ಚಿಸಿದ ನಂತರ ಶಾಲಾ ಶಿಕ್ಷಣಕ್ಕಾಗಿ ಹೊಸ ಮತ್ತು ಸಮಗ್ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು NCERT ಸಿದ್ಧಪಡಿಸುತ್ತದೆ ಮತ್ತು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಅದನ್ನು ಲಭ್ಯಗೊಳಿಸಲಾಗುವುದು. ಮುಂಚೂಣಿಯ ಪಠ್ಯಕ್ರಮವನ್ನು ಗಣನೆಗೆ ತೆಗೆದುಕೊಂಡು ಪಠ್ಯಕ್ರಮ ಚೌಕಟ್ಟನ್ನು ಇನ್ನು ಮುಂದೆ 5-10 ವರ್ಷಗಳಿಗೊಮ್ಮೆ ಮರುಪರಿಶೀಲಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ.”

ಇವೆಲ್ಲವನ್ನು ಅವಲೋಕಿಸಿ ಒಂದು ಸಾರಾಂಶವನ್ನು ನೀಡಬೇಕೆಂದರೆ, ರಾ.ಶಿ.ನಿಯು 21ನೇಯ ಶತಮಾನಕ್ಕೆ ಸರಿಹೊಂದುವ ಪಠ್ಯಕ್ರಮದ ಹೆಸರಿನಲ್ಲಿ ಗೆದ್ದವನು ಮಾತ್ರ ಬದುಕಬಲ್ಲ ಎಂಬ ಮಾತನ್ನು ಮಕ್ಕಳ ಮನದಲ್ಲಿರಿಸುವ, ಭಾರತೀಯ ಸಂಸ್ಕೃತಿಯನ್ನು ಸಂಸ್ಕೃತದ ಮೂಲಕ ಮಕ್ಕಳ ಎದೆಯಲ್ಲಿರಿಸುವ, ಏನೋ ಒಂದಷ್ಟು ಕೌಶಲಗಳನ್ನು ಕಲಿಸಲು ಹೊಸ ಪಠ್ಯಕ್ರಮವನ್ನು ರೂಪಿಸಲು ನಿಂತಂತಿದೆ. ಇದು ಮೇಲ್ನೋಟಕ್ಕೆ ಚೆಂದ ಮತ್ತು ಹಿತವೆನಿಸಿದರೂ ಅದರ ಹಿಂದಿರುವ ಸಮಸ್ಯೆಗಳು ಹಲವಾರು.

21ನೇಯ ಶತಮಾನಕ್ಕೆ ಸರಿಹೊಂದುವ ಪಠ್ಯಕ್ರಮದ ಹೆಸರಿನಲ್ಲಿ ರಾ.ಶಿ.ನೀಯು ಹೊಸ ಪಠ್ಯಕ್ರಮ ಚೌಕಟ್ಟು ರಚಿಸಲು ಮುಂದಾಗುತ್ತದೆ. ಆದರೆ, ಈಗಿರುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ರೂಪಿಸಿದ್ದು 2005ರಲ್ಲಿ, ಮತ್ತಿದನ್ನು 21ನೇ ಶತಮಾನದ ಅಗತ್ಯತೆಗಳನ್ನು ಮನದಲ್ಲಿರಿಸಿಯೇ ರಚಿಸಲಾಗಿದೆ. ಹಾಗಿರುವಾಗ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರಚಿಸುವ ಅಗತ್ಯತೆಯೇನು? ಎಂಬುದನ್ನು ಹೇಳುವುದಿರಲಿ, ಅದನ್ನು ಒಂದು ಬಾರಿಯೂ ಉಲ್ಲೇಖಿಸುವುದಿಲ್ಲ. ಆದಕಾರಣ, ಹೊಸ ಪಠ್ಯಕ್ರಮ ಚೌಕಟ್ಟನ್ನು ರಚಿಸಲಾಗುತ್ತಿರುವುದು ಬೇರೆಯದೇ ಉದ್ದೇಶಕ್ಕೆ ಎಂಬುದು ಸ್ಪಷ್ಟವಾಗುತ್ತದೆ.

ಇನ್ನು ಭಾರತೀಯ ಸಂಸ್ಕೃತಿಯ ವಿಚಾರ; ಯಾವುದೀ ಭಾರತೀಯ ಸಂಸ್ಕೃತಿ? ಇದರ ಹಿಂದಿನ ಅಸಲೀಯತ್ತನ್ನು ತಿಳಿಯಲು ನಾವು ಹೆಚ್ಚೇನು ಶ್ರಮ ವ್ಯಯಿಸಬೇಕಿಲ್ಲ. ಬದಲಿಗೆ, ಭಾರತವು ಕಂಡಿರುವ ಮೇರು ಶಿಕ್ಷಣ ತಜ್ಞರಲ್ಲೊಬ್ಬರಾದ ಅನಿಲ್ ಸದಗೋಪಾಲರು ರಾ.ಶಿ.ನೀಯ ಬಗ್ಗೆ ಬರೆದ ಪ್ಯಾರಾವೊಂದನ್ನು ಓದಿದರೆ ಸಾಕು. ಅದನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿ ಕೆಳಗೆ ನೀಡಲಾಗಿದೆ: “ರಾ.ಶಿ.ನೀಯ ’ಪ್ರಾಚೀನ ಮತ್ತು ಸನಾತನ ಭಾರತೀಯ ಜ್ಞಾನ ಮತ್ತು ಚಿಂತನೆಯ ಶ್ರೀಮಂತ ಪರಂಪರೆಯ’ಯ ಅಪೂರ್ಣ ಮತ್ತು ಬೇಕಂತಲೇ ತಪ್ಪಾಗಿ ಗ್ರಹಿಸಲಾಗಿರುವ ಚೌಕಟ್ಟು ಅದರ ಐತಿಹಾಸಿಕ ಪೂರ್ವಾಗ್ರಹಗಳನ್ನು ಬಹಿರಂಗಪಡಿಸುತ್ತದೆ. ಇದು ಬ್ರಾಹ್ಮಣ ಸಂಪ್ರದಾಯಗಳು ಮತ್ತು ಜ್ಞಾನ ಮೂಲಗಳಿಗೆ ಸಾಕಷ್ಟು ಗಮನವನ್ನು ನೀಡುತ್ತದೆ. ಜ್ಞಾನ, ಚರ್ಚೆ ಮತ್ತು ಪ್ರಶ್ನೆಗಳಾಧರಿತ ಬೋಧನಾಶಾಸ್ತ್ರವನ್ನು ನೀಡಿದ ಬುದ್ಧ ಮತ್ತು ಮಹಾವೀರರನ್ನೂ ಒಳಗೊಂಡಂತೆ ಬ್ರಾಹ್ಮಣೇತರರ ಕೊಡುಗೆಗಳನ್ನು ಹಾಗೂ ಸಾಮಾಜಿಕ ಶ್ರೇಣೀಕರಣ ಮತ್ತು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಗೆ ಅವರೆಸೆದ ಸವಾಲನ್ನು ನಿರ್ಲಕ್ಷಿಸಲಾಗಿದೆ. ಅವಲೋಕನ, ಅನುಭವವಾದ ಮತ್ತು ಷರತ್ತುಬದ್ಧ ನಿರ್ಣಯತೆಗಳನ್ನು ಜ್ಞಾನದ ಮೂಲಗಳನ್ನಾಗಿಸಿ ಚಾರ್ವಾಕ ಅಥವಾ ಲೋಕಾಯತರು ಮಂಡಿಸಿದ ಭೌತವಾದಿ ತಾತ್ವಿಕತೆಯನ್ನು ಗೌಣವಾಗಿಸಿರುವುದು ಮಾತ್ರವಲ್ಲ, ರಾ.ಶಿ.ನೀಯ ಐತಿಹಾಸಿಕ ಸ್ಮರಣೆಯಿಂದಲೇ ಅದನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗಿದೆ. 2019ರ ಮಧ್ಯದಲ್ಲಿ ತಮಿಳುನಾಡಿನಿಂದ ಪ್ರತಿಭಟನೆ ನಡೆಯುವವರೆಗೂ ಶ್ರೀಮಂತವಾದ ತಮಿಳು ಸಾಹಿತ್ಯ ಮತ್ತು ಅದರ ಗ್ರಂಥಗಳನ್ನು ಭಾರತದ ಶ್ರೀಮಂತ ಪರಂಪರೆಯ ಭಾಗವಾಗಿ ಅಳವಡಿಸಿಕೊಳ್ಳಲು ರಾ.ಶಿ.ನೀಯ ಬ್ರಾಹ್ಮಣ ದೃಷ್ಟಿಕೋನವು ಸಂಪೂರ್ಣವಾಗಿ ವಿಫಲವಾಗಿತ್ತು. ಮೊದಲ ಶತಮಾನದಲ್ಲಿ ಕೇರಳದ ಕರಾವಳಿಯಲ್ಲಿ ನೆಲೆಸಿ ಉಪಖಂಡದ ಸಾಮಾಜಿಕ-ಸಾಂಸ್ಕೃತಿಕ ಭಾಗವೇ ಆಗಿರುವ ಸಿರಿಯನ್ ಕ್ರಿಶ್ಚಿಯನ್ನರ ದೇಣಿಗೆಗೂ ಕೂಡ ಇದೇ ರೀತಿಯಲ್ಲಿ ಸೂಕ್ತ ಸ್ಥಾನವನ್ನು ನಿರಾಕರಿಸಲಗಿದೆ. ಇಸ್ಲಾಮಿಕ್ ಸಂಪ್ರದಾಯಗಳು ಹಿಂದೂ ಸಂಪ್ರದಾಯಗಳೊಂದಿಗೆ ಸಂವಹನ ನಡೆಸಿ ಸಿಂಕ್ರೆಟಿಕ್ಕಾದ ಸೂಫಿಸಂಅನ್ನು ಸೃಜಿಸಿದ ಮತ್ತು ಆ ಮೂಲಕ ವಿವಿಧ ವೈಜ್ಞಾನಿಕ ಕ್ಷೇತ್ರಗಳು, ಆಡಳಿತ, ವಾಣಿಜ್ಯ, ಸಾಹಿತ್ಯ, ಸಂಗೀತ ಮತ್ತು ಕಲೆಗಳ ವಲಯಗಳಲ್ಲಿ ಭಾರತದ ಜ್ಞಾನಾನ್ವೇಷಣೆಯ ಹಾದಿಯಲ್ಲಿ ಹೊಸ ಚೈತನ್ಯವನ್ನು ತುಂಬಿದ ಮಧ್ಯಕಾಲೀನ ಅವಧಿಯನ್ನೂ ರಾ.ಶಿ.ನೀಯು ಸಂಪೂರ್ಣವಾಗಿ ಬದಿಗೆ ಸರಿಸುತ್ತದೆ. ಅದೇ ರೀತಿ, ಮಧ್ಯ ಮತ್ತು ಪೂರ್ವ ಭಾರತದ ಬುಡಕಟ್ಟು ಜನಾಂಗ ಹಾಗೂ ಈಶಾನ್ಯ ರಾಜ್ಯಗಳ ಜನರು ಕೃಷಿ, ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯ ಜ್ಞಾನಶಾಸ್ತ್ರಕ್ಕೆ ನೀಡಿದ ಕೊಡುಗೆಗಳನ್ನು ’ಮುಖ್ಯವಾಹಿನಿ’ ಎಂದು ಕರೆಯಲ್ಪಡುವ ಭಾರತೀಯ ಪರಂಪರೆಯ ಭಾಗವಾಗಿ ಗುರುತಿಸಲಾಗಿಲ್ಲ. ಈ ತಿರುಚಿದ ಗ್ರಹಿಕೆಯು 21ನೇ ಶತಮಾನದ ಭಾರತದ ಯುವಕರ ಶೈಕ್ಷಣಿಕ ಯೋಜನೆಯನ್ನು ದಾರಿ ತಪ್ಪಿಸುತ್ತದೆ.”

ಜಾತಿ ಮತ್ತು ಪಿತೃಪ್ರಧಾನತೆಯ ಬಗೆಗಿನ ರಾ.ಶಿ.ನೀಯ ನಿಲುವುಗಳೂ ಬಹಳ ಸಮಸ್ಯಾತ್ಮಕವಾಗಿದೆ. ಅದರ ಬಗ್ಗೆ ಚರ್ಚಿಸುತ್ತಾ ಅನಿಲ್ ಸದಗೋಪಾಲರು ಹೀಗೆ ಬರೆಯುತ್ತಾರೆ.. “ರಾ.ಶಿ.ನೀಯು ಸಾವಿತ್ರಿಬಾಯಿ-ಜ್ಯೋತಿರಾವ್ ಫುಲೆ, ಛತ್ರಪತಿ ಶಾಹು ಮಹಾರಾಜ್ ಮತ್ತು ಡಾ. ಅಂಬೇಡ್ಕರ್ (ಮಹಾರಾಷ್ಟ್ರ); ಸಿ. ಅಯೋಥಿ ಥಾಸ್, ಸಿಂಗರವೇಲರ್ ಮತ್ತು ’ಪೆರಿಯಾರ್’ ಇ.ವಿ. ರಾಮಸ್ವಾಮಿ (ತಮಿಳುನಾಡು); ನಾರಾಯಣ ಗುರು ಮತ್ತು ಅಯ್ಯಂಕಾಳಿ (ಕೇರಳ); ಕಂದುಕುರಿ ವೀರೇಶಲಿಂಗಂ ಪಂತುಲು ಮತ್ತು ಗುರಜಾಡ ಅಪ್ಪಾರಾವ್ (ಅವಿಭಜಿತ ಆಂಧ್ರ ಪ್ರದೇಶ); ಕುದ್ಮುಲ್ ರಂಗರಾವ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ (ಕರ್ನಾಟಕ); ಮತ್ತು ಅಂತಿಮವಾಗಿ, 1930ರ ದಶಕದಲ್ಲಿ ಜಾತಿಯ ಪ್ರಶ್ನೆಯ ಕುರಿತು ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಐತಿಹಾಸಿಕ ಚರ್ಚೆಯನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ.”

ಹೀಗಾಗಿ, ರಾ.ಶಿ.ನೀಯು ಭಾರತದ ಸಂಸ್ಕೃತಿಯೆಂದು ಹೇಳಿದಾಗಲೆಲ್ಲ ಅದು ಬ್ರಾಹ್ಮಣ್ಯ ಮತ್ತು ವೈದಿಕತೆಯನ್ನೇ ಪ್ರಸ್ತಾಪಿಸುತ್ತಿರುವುದು ನಿಚ್ಚಳ. ಇದು ಸಂವಿಧಾನ ಮತ್ತು ಪ್ರಜಾಸತ್ತೆಯ ವಿರೋಧಿ ಮಾತ್ರವಲ್ಲ, ಭಾರತದ ಅವೈದಿಕ ಪರಂಪರೆ ಮತ್ತು ಜನಚಿಂತನೆ ವಿರೋಧಿ ಕೂಡ ಆಗಿದೆ. ಮತ್ತು ಕಡೆಯದಾಗಿ, ವೃತ್ತಿಪರ ಶಿಕ್ಷಣದ ಸೋಗಿನಲ್ಲಿ ಮಕ್ಕಳ ಕೌಶಲ್ಯಾಭಿವೃದ್ಧಿಯೆಡೆಗೆ ಹೆಚ್ಚು ಗಮನ ನೀಡಬೇಕು, ಅನುಭವಾತ್ಮಕ ಕಲಿಕೆಯ ಹೆಸರಿನಲ್ಲಿ ಪಠ್ಯಗಳ ಕಡಿತಕ್ಕೆ (ಪ್ಯಾರಾ 4.5) ಮತ್ತು ಕಲಿಕಾ ಫಲಗಳ (Learning Outcomes) ಮತ್ತು ಸಾಧನೆ ಆಧಾರಿತ ಕಲಿಕೆಗೆ (Competence Based Learning) ಆದ್ಯತೆ ನೀಡುವ ಸಲುವಾಗಿ ಪಠ್ಯಗಳ ಕಡಿತಕ್ಕೆ ಕರೆಯನ್ನೂ ಕೊಡುವ (ಪ್ಯಾರಾ 4.6) ಹಿಂದಿನ ದುರುದ್ದೇಶವು ಶಿಕ್ಷಣದ ವಸ್ತು ಮತ್ತು ಪ್ರಕ್ರಿಯೆಯನ್ನು ಗೌಣಗೊಳಿಸುವುದೇ ಆಗಿದೆ. ಮೊದಲಿಗೆ, ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಎಂಬ ನಂಬುಗೆಯನ್ನು ಮಕ್ಕಳಲ್ಲಿ ಸಾರುವ ಈ ರೀತಿಯ ನಿಲುವುಗಳು, ಅವರಲ್ಲಿ ನೇರವಾಗಿ ಉದ್ಯೋಗ ದೊರಕಿಸಿಕೊಡದಿರುವ (ಅದರಲ್ಲೂ ಪ್ರಮುಖವಾಗಿ ಸಮಾಜ ವಿಜ್ಞಾನ, ಭಾಷೆಗಳು ಮತ್ತು ವಿಜ್ಞಾನ-ಗಣಿತೇತರ ವಿಷಯಗಳ ಬಗ್ಗೆ) ವಿಷಯಗಳ ಬಗ್ಗೆ ನಿರಾಸಕ್ತಿಯನ್ನೂ, ತಾತ್ಸಾರವನ್ನೂ ಮೂಡಿಸುತ್ತದೆ. ಹೀಗಿರುವಾಗ, ನಮ್ಮ ಸುತ್ತಲಿನ ಸಮಾಜವನ್ನು ಅರಿಯುವ, ಅದರ ಕೆಡಕುಗಳನ್ನು ಅರ್ಥೈಸಿ, ಪ್ರಶ್ನಿಸಿ ಮತ್ತದನ್ನು ಬದಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಸಹಕರಿಸಬೇಕಾದ ಸಮಾಜ ವಿಜ್ಞಾನ, ಮಾನವೀಯ ಮತ್ತು ಭಾಷಾ ಪಠ್ಯಗಳನ್ನೂ ಕೂಡ ಮಕ್ಕಳು ಮುಂದೆಂದಾದರೂ ನಮ್ಮ ಉಪಯೋಗಕ್ಕೆ ಬರಬಹುದಾದ ಮಾಹಿತಿಯಂತೆ ಮಾತ್ರ ಗಟ್ಟು ಮಾಡುತ್ತಾರೆ. (ಈ ಪ್ರಶ್ನೆಯು ಜಾತಿಯಾಧಾರಿತ-ಪಿತೃಪ್ರಧಾನತೆಯಾಧಾರಿತ ಶ್ರೇಣೀಕೃತ ಸಮಾಜದಲ್ಲಿ, ಹಿಂದುಳಿದ ಮತ್ತು ತುಳಿತಕ್ಕೊಳಗಾದವರನ್ನು ಇನ್ನಷ್ಟೂ ತೊಂದರೆಗಳಿಗೆ ದೂಡುತ್ತದೆಯಾದರೂ ಈ ಲೇಖನದಲ್ಲಿ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತ್ರ ಚರ್ಚಿಸುತ್ತಿರುವ ಕಾರಣಕ್ಕೆ ಅದರ ವಿವರಗಳನ್ನು ನೀಡಲಾಗಿಲ್ಲ). ಹೀಗಾದಾಗ ಮಾತ್ರವೇ ಮಕ್ಕಳ ಮಿದುಳಲ್ಲಿ ಯಾವುದೇ ಒಂದು ನಿರ್ದಿಷ್ಟ ಸಿದ್ಧಾಂತವನ್ನು ತುರುಕಲು ಸಾಧ್ಯವಾಗುವುದು.

ಒಟ್ಟಿನಲ್ಲಿ ಹೇಳುವುದಾದರೆ, ರಾ,ಶಿ.ನೀಯೇ ಜಾತೀಯತೆ, ಪಿತೃಪ್ರಧಾನತೆ ಮತ್ತು ಮೂಲಭೂತವಾದವನ್ನು ದೇಶದ ಮಕ್ಕಳ ಮನಸ್ಸಿನಲ್ಲಿ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ಬೆಳೆಸಲಿಕ್ಕೆ ಬಿಜೆಪಿಯು ಹಾಕಿರುವ ಭದ್ರ ಬುನಾದಿಯಾಗಿದೆ. ಮತ್ತಿಂದು ಕರ್ನಾಟಕದಲ್ಲಿ ಶ್ರೇಣೀಕೃತ ಸಮಾಜವನ್ನೇ ಮುಂದುವರೆಸಲು ಆಸಕ್ತರಾಗಿರುವ ಅರ್‌ಎಸ್‌ಎಸ್ ಬೆಂಬಲಿತ ಬಿಜೆಪಿಯು, ಇತಿಹಾಸವನ್ನು ಮತ್ತು ಪಠ್ಯವನ್ನು ಸರಿಪಡಿಸುವ ಸೋಗಿನಲ್ಲಿ, ರಾಷ್ಟ್ರೀಯತೆ, ಭಾರತದ ಸಂಸ್ಕೃತಿ ಮತ್ತು ಸಂಸ್ಕೃತಿ-ಸಂಸ್ಕೃತದ ಹೆಸರಿನಲ್ಲಿ ಭಗತ್ ಸಿಂಗರ, ಪೆರಿಯಾರರ, ನಾರಾಯಣ ಗುರುಗಳ, ಅಂಬೇಡ್ಕರರ, ಬಸವಣ್ಣನ, ಕುವೆಂಪುರವರ ಮತ್ತಿತರ ಚಿಂತಕರ ಜೀವನವನ್ನು ಸಾರುವ ಮತ್ತವರ ಚಿಂತನೆಗಳನ್ನು ಪರಿಚಯಿಸುವ ಪಠ್ಯಗಳನ್ನು ಪಠ್ಯಪುಸ್ತಕಗಳಿಂದ ತೆಗೆಯುತ್ತಿರುವುದು ಮತ್ತು ಅವರ ಹಿತಾಸಕ್ತಿಗನುಗುಣವಾಗಿ ಕಸವನ್ನೇ ತಂದು ಪಠ್ಯಪುಸ್ತಕದ ಮೂಲಕ ಮಕ್ಕಳ ಮನಸಿನಲ್ಲಿ ತುರುಕುತ್ತಿರುವ ನಡೆಯ ಬೇರಡಗಿರುವುದು ಇದೇ ಫ್ಯಾಸಿಸ್ಟರು ನಮ್ಮ ಮೇಲೆ ಹೇರಿರುವ ರಾ.ಶಿ.ನೀ 2020ರಲ್ಲಿ.

ಇಲ್ಲಿ ನಾವು ನೆನಪಿನಲ್ಲಿಡಬೇಕಾದ ಇನ್ನೆರಡು ಪ್ರಮುಖ ಅಂಶಗಳಿವೆ. ಮೊದಲನೆಯದಾಗಿ, ಇಡೀ ಪಠ್ಯಪುಸ್ತಕ ಪರಿಷ್ಕರಣೆ ಪ್ರಹಸನದ ಪ್ರಕ್ರಿಯೆಯು ಗೊಂದಲಕಾರಿಯಾಗಿ, ಎಳ್ಳಷ್ಟೂ ಪಾರದರ್ಶಕತೆಯಿಲ್ಲದೆ ನಡೆದಿರುವುದನ್ನು ನೀವು ಗಮನಿಸಿರಬಹುದು. ಇದೂ ಕೂಡ ರಾ.ಶಿ.ನೀ2020ರ ಬಳುವಳಿಯೇ. ಎರಡನೆಯದಾಗಿ, ಪಠ್ಯಪುಸ್ತಕ ಪರಿಷ್ಕರಣೆಯ ವಿವಾದವನ್ನು ಸೃಷ್ಟಿಸಿರುವಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ2020ರಲ್ಲಿ ಉಲ್ಲೇಖವಾಗಿರುವಂತೆ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (National Curriculum Framework for School Education), ಶಿಕ್ಷಕರ ಶಿಕ್ಷಣಕ್ಕಾಗಿ ಹೊಸ ಮತ್ತು ಸಮಗ್ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (National Curriculum Framework for Teacher Education), ಬಾಲ್ಯಾವಸ್ಥೆ ಆರೈಕೆ ಮತ್ತು ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಚೌಕಟ್ಟುಗಳನ್ನು (National Curricular and Pedagogical Framework for Early Childhood Care and Education) ರಾಷ್ಟ್ರೀಯ ಶಿಕ್ಷಣ ನೀತಿ-2020 ಸದ್ದಿಲ್ಲದೆ ಮುನ್ನಡೆಸುತ್ತಿದೆ. ಇಂದು ಕಷ್ಟಪಟ್ಟಾದರೂ ಉಸಿರಾಡುತ್ತಿರುವ ಇಡೀ ಶಿಕ್ಷಣ ವ್ಯವಸ್ಥೆಯನ್ನು ಇವು ಸಂಪೂರ್ಣವಾಗಿ ಉಸಿರುಗಟ್ಟಿಸಿ ಕೊಲ್ಲುವುದರ ಬಗ್ಗೆ ಯಾವ ಸಂಶಯಗಳೂ ಬೇಡ. ಏಕೆಂದರೆ, ಇದರ ಸಾರಥ್ಯವನ್ನೂ ಕೂಡ ಅರ್‌ಎಸ್‌ಎಸ್ ಜನರೇ ವಹಿಸಿಕೊಂಡಿದ್ದಾರೆ.

ಆದಕಾರಣ, ನಾವು ಈ ಪಠ್ಯ ಪರಿಷ್ಕರಣೆಯನ್ನು ಎಷ್ಟು ಗಟ್ಟಿದನಿಯಲ್ಲಿ ವಿರೋಧಿಸುತ್ತೇವೆಯೋ ಅದಕ್ಕಿಂತಲೂ ಗಟ್ಟಿ ದನಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ2020ನ್ನೂ ವಿರೋಧಿಸಬೇಕಾಗಿದೆ. ಇಲ್ಲವಾದಲ್ಲಿ, ಇಂದು ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ಮಕ್ಕಳಗೆ ಉಣಿಸಲು ಪ್ರಯತ್ನಿಸಿದ ವಿಷವನ್ನೇ ಮತ್ತೊಮ್ಮೆ ಬೇರೊಂದು ರೀತಿಯಲ್ಲಿ ಉಣಿಸುತ್ತಾರೆ. ಈ ಫ್ಯಾಸಿಸ್ಟ್ ಸರ್ಕಾರ ಮಕ್ಕಳಿಗೆ ಯಾವ ರೀತಿಯಲ್ಲಿ ವಿಷವುಣಿಸಿದರೂ ಸಾಯುವುದು ನಮ್ಮ ಮಕ್ಕಳೇ, ಅದರ ನೋವುಣ್ಣುವುದು ನಾವುಗಳೇ.

ಶಶಾಂಕ್ ಎಸ್ ಆರ್

ಶಶಾಂಕ್
ಎನ್‌ಐಎಎಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ. ಪ್ರಗತಿಪರ-ಜನಪರ ಚಳವಳಿಗಳ ಬಗ್ಗೆ ಆಸಕ್ತಿ.


ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆಯನ್ನು ಧಾರ್ಮಿಕತೆಯಿಂದ ಹೊರಗಿಡಲು ಸಾಧ್ಯವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -