ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಟಿವಿ ಡಿಬೇಟ್‌ನಲ್ಲಿ ಪ್ರವಾದಿ ಮಹಮ್ಮದ್‌ರವರನ್ನು ನಿಂದಿಸಿ ಹೇಳಿಕೆ ನೀಡಿದರೆ, ನವೀನ್ ಕುಮಾರ್ ಜಿಂದಾಲ್ ಅವಹೇಳನಕಾರಿ ಟ್ವೀಟ್ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಕಳೆದರು. ಕತಾರ್, ಕುವೈತ್, ಇರಾಕ್ ಮತ್ತು ಇರಾನ್ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳು ಪ್ರವಾದಿ ನಿಂದನೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದವು. ಭಾರತವು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದು, ವಿಚಾರಣೆಗೆ ಹಾಜರಾಗಲು ಭಾರತೀಯ ರಾಯಭಾರಿಗಳಿಗೆ ಸಮನ್ಸ್ ಕಳಿಸಿದವು. ಆಗ ಅವರಿಬ್ಬರನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ ಪಕ್ಷವು ಅವರನ್ನು ಫ್ರಿಂಜ್ ಎಲಿಮೆಂಟ್‌ಗಳು (ಪಕ್ಷದ ಅಂಚಿನಲ್ಲಿರುವವರು, ಕೊಸರುಗಳು, ಅವರ ಮಾತಿಗೆ ಬೆಲೆ ಇಲ್ಲ, ಬಾಯಿಗೆ ಬಂದ ಹಾಗೆ ಮಾತಾಡುವ ಪ್ರಚಾರ ಪ್ರಿಯರು) ಎಂದು ಕರೆಯಿತು. ಅವರಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿತು. ಆದರೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಇಷ್ಟು ದಿನ ಆ ಫ್ರಿಂಜ್ ಎಲಿಮೆಂಟ್‌ಗಳ ಹೇಳಿಕೆಗಳಿಂದ ಪಕ್ಷ ಲಾಭ ಪಡೆದಿತ್ತು. ಈಗ ಅಂತಾರಾಷ್ಟ್ರೀಯಮಟ್ಟದಲ್ಲಿ ಮಾನ ಹೋದಾಗ ಅವರು ನಮ್ಮವರಲ್ಲ ಎಂದರೆ ಜನ ನಂಬುವರೆ?
ಈಗ ಅಂತದ್ದೆ ಫ್ರಿಂಜ್ ಎಲಿಮೆಂಟ್‌ಗಳು ಶ್ರೀರಂಗಪಟ್ಟಣದಲ್ಲಿ ತಮ್ಮತಮ್ಮ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿರುವ ಜನರ ಬದುಕಿಗೆ ಕೊಳ್ಳಿ ಇಡಲು ಮುಂದಾಗಿದ್ದಾರೆ. ಅಂದಂದು ದುಡಿದು ಬದುಕುವ, ಸಾಕಷ್ಟು ಕಷ್ಟನಷ್ಟಗಳಿದ್ದರೂ ಬದುಕು ದೂಡುತ್ತಿರುವ ಜನರ ಮಧ್ಯೆ ಧರ್ಮದ ವಿಷ ಬಿತ್ತಲು, ಆ ಮೂಲಕ ಪ್ರಚಾರ, ಹಣ, ಅಧಿಕಾರ ಪಡೆಯಲು ಕೆಲವರು ಮುಂದಾಗಿದ್ದಾರೆ. ಅದಕ್ಕೆ ಅವರು ಬಳಸಿಕೊಳ್ಳುತ್ತಿರುವುದು ಶ್ರೀರಂಗಪಟ್ಟಣದ ಎರಡು ಕಳಸಪ್ರಾಯಗಳಲ್ಲಿ ಒಂದಾದ ಜಾಮಿಯಾ ಮಸೀದಿಯನ್ನು. ಆದರೆ ಪ್ರಾದೇಶಿಕ ಜನ ಅದಕ್ಕೆ ಸೊಪ್ಪು ಹಾಕದಿರುವುದು ಸಮಾಧಾನದ ವಿಷಯ.
ಶ್ರೀರಂಗಪಟ್ಟಣ ಬ್ರಿಟಿಷರನ್ನು ಭಾರತದಲ್ಲಿ ಮೊಟ್ಟ ಮೊದಲ ಬಾರಿ ಸೋಲಿಸಿದ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್‌ರವರ ರಾಜಧಾನಿ. ಮೈಸೂರು ಅರಸರಿಗೂ ರಾಜಧಾನಿಯಾಗಿದ್ದ, ವಿಶ್ವವಿಖ್ಯಾತಿ ಪಡೆದಿರುವ ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ ವೀರ ಸಾಹಸವನ್ನು ಸಾರುವ ಹತ್ತಾರು ಸ್ಥಳಗಳಿವೆ. ಅವುಗಳೀಗ ಸ್ಮಾರಕಗಳಾಗಿವೆ. ಅದೇ ರೀತಿ ಟಿಪ್ಪು ಕಟ್ಟಿದ, ಸಲಹಿದ ದೇವಸ್ಥಾನಗಳು, ಮಸೀದಿಗಳು ಇವೆ. ಶ್ರೀರಂಗಪಟ್ಟಣದ ಕೋಟೆಯ ಒಳಗೆ ಎರಡು ಕಳಸಪ್ರಾಯದ ರೀತಿಯ ಕಟ್ಟಡಗಳಿವೆ. ಒಂದು ಶ್ರೀರಂಗನಾಥ ಸ್ವಾಮಿ ದೇವಾಲಯ ಮತ್ತೊಂದು ಜಾಮಿಯಾ ಮಸೀದಿ. ಇವೆರಡೂ ಸಹ ಕೂಗಳತೆ ದೂರದಲ್ಲಿದ್ದು ಗೋಪುರಾಕಾರದಲ್ಲಿ ನಿರ್ಮಾಣಗೊಂಡಿವೆ. ಈ ಎರಡೂ ಶ್ರದ್ಧಾಕೇಂದ್ರಗಳು ಪ್ರತಿದಿನ ಪ್ರವಾಸಿಗರನ್ನು, ಭಕ್ತರನ್ನು ಆಕರ್ಷಿಸುತ್ತಿವೆ. ಆ ಮೂಲಕ ನೂರಾರು ಜನರು ಈ ದೇವಾಲಯ ಮತ್ತು ಮಸೀದಿಯ ಸುತ್ತ ಹತ್ತಾರು ರೀತಿಯ ವ್ಯಾಪಾರ ವಹಿವಾಟು ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಜಾಮಿಯಾ ಮಸೀದಿ ಸುತ್ತಲಿನ ಎಲ್ಲಾ ವ್ಯಾಪಾರಿಗಳನ್ನು (ಬಹುತೇಕ ಹಿಂದೂಗಳು) ಎತ್ತಂಗಡಿ ಮಾಡಲಾಗಿದೆ. ಅಲ್ಲಿಗ ಪೊಲೀಸ್ ಪಹರೆ ನಿಲ್ಲಿಸಿ ಕಾವಲು ಕಾಯಲಾಗುತ್ತಿದೆ. ಪ್ರವಾಸಿಗಳಿಗೆ, ಜನರಿಗೆ ಪ್ರವೇಶವಿಲ್ಲದ್ದರಿಂದ ಸುತ್ತ ವ್ಯಾಪಾರ ಮಾಡುತ್ತಿದ್ದವರು ಎಲ್ಲಿ ಹೋಗಬೇಕೆಂದು ತಿಳಿಯದೆ ದಿಕ್ಕು ಕಾಣದಾಗಿದ್ದಾರೆ. ಇದಕ್ಕೆಲ್ಲ ಕಾರಣ ಕೆಲ ಫ್ರಿಂಜ್ ಎಲಿಮೆಂಟ್‌ಗಳು! ’ಇಲ್ಲಿ ಮೂಡಲಬಾಗಿಲು ಆಂಜನೇಯ ಗುಡಿ ಇತ್ತು, ಅದನ್ನು ಒಡೆದುಹಾಕಿ ಈ ಮಸೀದಿ ಕಟ್ಟಲಾಗಿದೆ ಎಂದು ವಾದಿಸುತ್ತಾ, ಇಲ್ಲಿ ಮತ್ತೆ ಮಂದಿರ ಕಟ್ಟಬೇಕೆಂದು’ ಆಗ್ರಹಿಸುತ್ತಿದ್ದಾರೆ. ಅಲ್ಲಿ ಪೂಜೆ ಮಾಡಲು ಅವಕಾಶ ಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟಿದ್ದಾರೆ. ಒಂದೆರಡು ರ್‍ಯಾಲಿಗಳನ್ನು ನಡೆಸಿದ್ದಾರೆ.
ಇತಿಹಾಸ-ಐತಿಹ್ಯ ಏನು ಹೇಳುತ್ತದೆ?
ಮೀರ್ ಹುಸೇನ್ ಅಲಿ ಕಿರ್ಮಾನಿಯವರು ತಮ್ಮ ತಾರಿಖ್-ಎ- ಟಿಪ್ಪು ಸುಲ್ತಾನ್ ಎಂಬ ಪುಸ್ತಕದಲ್ಲಿ ಈಗ ಜಾಮಿಯಾ ಮಸೀದಿ ಎಂದು ಕರೆಯುತ್ತಿರುವ ಮಸೀದಿ ನಿರ್ಮಾಣ ಬಗ್ಗೆ ಬರೆದಿದ್ದಾರೆ. ಪುಸ್ತಕದಲ್ಲಿ ಅವರು ವಿವರಿಸುವುದು ಹೀಗೆ: ’1760ರ ಸಮಯದಲ್ಲಿ ಹೈದರಾಲಿ ಬೆಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಆತನ ಸೈನ್ಯದ ಖಾಂಡೇ ರಾವ್ ಎಂಬಾತ ಮೈಸೂರು ಮಹಾರಾಣಿಯರ ಮಾತು ಕೇಳಿ ಹೈದರಾಲಿಯ ಪತ್ನಿ ಮತ್ತು ಮಕ್ಕಳನ್ನು ಗೃಹಬಂಧನದಲ್ಲಿಟ್ಟಿರುತ್ತಾನೆ. ಆ ಸಮಯದಲ್ಲಿ ಅರಮನೆಯ ಮೈದಾನದಲ್ಲಿ ಹಿಂದೂ ದೇವಾಲಯವೊಂದಿತ್ತು. ಬಾಲಕ ಟಿಪ್ಪು ಅಲ್ಲಿ ಗೆಳೆಯರೊಡನೆ ಆಟವಾಡುತ್ತಿರುವಾಗ ಫಕೀರನೊಬ್ಬ ಟಿಪ್ಪುವನ್ನು ಉಲ್ಲೇಖಿಸಿ, ಭಾಗ್ಯವಂತ ಮಗುವೇ, ಭವಿಷ್ಯದಲ್ಲಿ ನೀನು ಈ ದೇಶದ ರಾಜನಾಗುವೆ, ಆ ಸಮಯ ಬಂದಾಗ ನನ್ನ ಮಾತುಗಳನ್ನು ನೆನಪಿಸಿಕೊ, ಈ ದೇವಾಲಯವನ್ನು ನಾಶಮಾಡಿ ಈ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸು. ಇದು ಯುಗಯುಗಾಂತರಗಳ ಕಾಲ ನಿನ್ನ ಸ್ಮಾರಕವಾಗಿ ಉಳಿಯುತ್ತದೆ’ ಎಂದರಂತೆ.
ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಹೈದರಾಲಿ ಮಡಿದ ನಂತರ ರಾಜನಾದ ಟಿಪ್ಪು ಸುಲ್ತಾನ್ ಫಕೀರನ ಮಾತನ್ನು ನೆನಪಿಸಿಕೊಂಡರು. ಹನುಮಂತ ದೇವಾಲಯದ ಅರ್ಚಕರೊಡನೆ ಮಾತನಾಡಿ ಅವರಿಗೆ ಹಣ ನೀಡಿ ಆ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕಿದ. ಹಣ ಪಡೆದ ಬ್ರಾಹ್ಮಣ ಅರ್ಚಕರು ಅಲ್ಲಿದ್ದ ಹನುಮಂತನ ವಿಗ್ರಹವನ್ನು ಪಕ್ಕದ ದೇವರಾಯ ಪೀಠಕ್ಕೆ ವರ್ಗಾಯಿಸಿದರು. ತದನಂತರ ಬಿಜಾಪುರದ ಜುಮ್ಮಾ ಮಸೀದಿ ಮಾದರಿಯಲ್ಲಿ 1789ರಲ್ಲಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಮಸೀದಿಯನ್ನು ’ಮಸೀದಿ-ಎ-ಆಲಾ’ (ಆಡಳಿತಗಾರನ ಮಸೀದಿ) ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು. ಇಲ್ಲಿ ಟಿಪ್ಪುವಿನ ನೇತೃತ್ವದಲ್ಲಿ ಹತ್ತಾರು ಸಭೆಗಳು, ಯುದ್ಧನಿರ್ವಹಣೆ ಚರ್ಚೆಗಳು ನಡೆದಿವೆ. 4ನೇ ಮೈಸೂರು ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಇಲ್ಲಿ ಶುಶ್ರೂಷ ಸಹ ಮಾಡಲಾಗಿದೆ ಎನ್ನಲಾಗುತ್ತದೆ.
ಈ ಮಸೀದಿ ನಿರ್ಮಾಣದ ಕುರಿತು ಟಿಪ್ಪುವಿನ ಸಮಕಾಲೀನರಾದ ಮೀರ್ ಹುಸೇನ್ ಅಲಿ ಕಿರ್ಮಾನಿಯವರು ಬರೆದಿರುವುದನ್ನು ಪರಿಗಣಿಸುವುದು ಹೆಚ್ಚು ಸೂಕ್ತ ಎನ್ನುತ್ತಾರೆ ಅಧ್ಯಯನಕಾರರು. ಏಕೆಂದರೆ ಅವರು ತಾವೊಬ್ಬ ವಸ್ಥೆನಿಷ್ಠ ಇತಿಹಾಸಕಾರನಾಗಿ ಟಿಪ್ಪುವನ್ನು ಒಬ್ಬ ಮುಸ್ಲಿಂವಾದಿಯಾಗಿಯೇ ನೋಡುತ್ತಾರೆ. ಹಾಗಾಗಿ ಮಸೀದಿ ನಿರ್ಮಾಣವನ್ನು ಅವರು ಮುಸ್ಲಿಮರಿಗಾಗಿ ಮಾಡಿದ ಒಳ್ಳೆಯ ಕೆಲಸ ಎಂದೇ ಬಣ್ಣಿಸುತ್ತಾರೆ. ಆದ್ದರಿಂದ ವಾಸ್ತವಾಂಶಗಳನ್ನು ಬರೆದಿರುತ್ತಾರೆ. ಆದರೆ ಮತ್ತೋರ್ವ ಇತಿಹಾಸಕಾರ ಶೇಕ್ ಅಲಿಯವರು ಟಿಪ್ಪುವನ್ನು ಜಾತ್ಯತೀತ ವ್ಯಕ್ತಿ ಎಂದು ಬಣ್ಣಿಸುತ್ತಾರೆ. ಹಾಗಾಗಿ ಅವರು ಈ ವಿಷಯವನ್ನು ಬಿಟ್ಟುಬಿಡಬಹುದು. ಇನ್ನು ಟಿಪ್ಪುವಿನ ಮತ್ತೊಬ್ಬ ಸಮಕಾಲೀನ ಮರಾಠ ಹಿಂದೂ ’ಪುಂಗನೂರಿ’ಯವರು ಈ ಮಸೀದಿ ನಿರ್ಮಾಣದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ.

ಮೈಸೂರಿನ ಇತಿಹಾಸತಜ್ಞರಾದ ಪ್ರೊ.ಪಿ.ವಿ.ನಂಜರಾಜ ಅರಸುರವರು ಮಂಡಿಸುವ ವಿಷಯಗಳು ಸಹ ಕಿರ್ಮಾನಿಯವರು ಬರೆದಿರುವುದಕ್ಕೆ ಸಾಮ್ಯತೆ ಹೊಂದಿವೆ. ಅವರ ಪ್ರಕಾರ “ಮಸೀದಿಗೂ ಮೊದಲು ಮಂದಿರವಿದ್ದದ್ದು ನಿಜ. ಆದರೆ ಆ ದೇವಾಲಯ ಒಡೆದು ಮಸೀದಿ ನಿರ್ಮಾಣ ಮಾಡಿದ್ದು, ರಾಜತಾಂತ್ರಿಕ ಕಾರಣಕ್ಕಾಗಿಯೆ ಹೊರತು, ಮತೀಯ ಉದ್ದೇಶಕ್ಕಲ್ಲ. ಮಳವಳ್ಳಿ ಕಡೆಯಿಂದ ಬ್ರಿಟಿಷರ ದಾಳಿಯನ್ನು ಅರಿಯಲು ಟಿಪ್ಪು ಕಾವಲು ಗೋಪುರ ನಿರ್ಮಿಸಲು ಮುಂದಾಗಿದ್ದ. ಆ ಕಾವಲು ಗೋಪುರ ಇರುವುದು ಎಲ್ಲರಿಗೂ ಗೊತ್ತಾಗಬಾರದು, ರಹಸ್ಯವಾಗಿರಬೇಕು ಎಂಬುದಕ್ಕಾಗಿ ಮಸೀದಿಯೊಳಗೆ ಕಾವಲು ಗೋಪುರ ನಿರ್ಮಿಸಲಾಯಿತು. ಈ ಮಸೀದಿಯಲ್ಲಿನ ಕಾವಲು ಗೋಪುರದ ಒಳಗೆ 200 ಮೆಟ್ಟಿಲುಗಳಿವೆ. ಅಲ್ಲಿ ನಿಂತರೆ ಸುಮಾರು ನಲವತ್ತು ಮೈಲಿ ದೂರದ ಮಳವಳ್ಳಿವರೆಗೂ ನೋಡಬಹುದು. ರಕ್ಷಣಾ ಕಾರ್ಯಾಚರಣೆ ಎಂದಿಗೂ ರಹಸ್ಯವಾಗಿರುತ್ತದೆ. ಆಂಜನೇಯ ದೇವಸ್ಥಾನದ ಮೇಲೆಯೇ ಗೋಪುರ ಕಟ್ಟಬಹುದಿತ್ತು. ಸೈನಿಕರು ಓಡಾಡುವಾಗ ದೇವರ ಗರ್ಭಗುಡಿಯನ್ನು ತುಳಿಯುತ್ತಾರೆಂಬ ಆರೋಪಗಳು ಬರುವುದನ್ನು ತಪ್ಪಿಸುವುದಕ್ಕಾಗಿ ಟಿಪ್ಪು ಮಸೀದಿ ನಿರ್ಮಿಸಿದ” ಎನ್ನುತ್ತಾರೆ.
“ಮಸೀದಿಯೊಳಗೆ ಇಂದಿಗೂ ಹಿಂದೂ ದೇವರ ಚಿಹ್ನೆಗಳಿರುವ ಕೆಲ ಕಂಬಗಳು ಹಾಗೆಯೇ ಇವೆ. ಟಿಪ್ಪುವಿನ ಹಿಂದೂ ಧರ್ಮ ವಿರೋಧದ ಕಾರಣಕ್ಕೆ ದೇವಾಲಯ ನಾಶ ಮಾಡಿದ್ದರೆ ಆ ಕಂಬಗಳನ್ನು ಏಕೆ ಇರಿಸಿಕೊಳ್ಳಬೇಕಿತ್ತು? ಅವುಗಳನ್ನು ನಾಶ ಮಾಡಬಹುದಿತ್ತಲ್ಲವೇ? ಅರಮನೆ ಪಕ್ಕದಲ್ಲಿದ್ದ ನರಸಿಂಹಸ್ವಾಮಿ ದೇವಸ್ಥಾನ, ಮುಂಭಾಗದಲ್ಲಿದ್ದ ಶ್ರೀರಂಗನಾಥ ಸ್ವಾಮಿ ದೇವಸ್ಥಾನಗಳನ್ನು ಆತ ಏಕೆ ಕೆಡವಲಿಲ್ಲ? ಈ ಎಲ್ಲ ದೇವಸ್ಥಾನಗಳು ಟಿಪ್ಪುವಿನ ಮುಂಚೆಗೂ, ಟಿಪ್ಪುವಿನ ನಂತರವೂ ಯಥಾಸ್ಥಿತಿಯಲ್ಲಿವೆ. ಅಲ್ಲದೆ ದೇವಾಲಯಗಳಿಗೆ ದತ್ತಿ ಕೊಟ್ಟವನು ಟಿಪ್ಪು ಎಂಬುದಕ್ಕೆ ಸಾಕ್ಷಿಗಳಿವೆ” ಎನ್ನುತ್ತಾರೆ ನಂಜರಾಜ ಅರಸ್.
ಮತ್ತೊಂದು ಮಹತ್ವದ ಸಂಗತಿಯೆಂದರೆ ಆಂಜನೇಯ ದೇವಾಲಯ ಕೆಡುವಿದಾಗ, ಮಸೀದಿ ನಿರ್ಮಾಣ ಮಾಡಿದಾಗ, ಶ್ರೀರಂಗಪಟ್ಟಣದ ಬ್ರಾಹ್ಮಣ ಅರ್ಚಕರಾಗಲಿ, ಸ್ಥಳೀಯರಾಗಲಿ ವಿರೋಧ ಮಾಡಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಅಷ್ಟೇ ಏಕೆ ಇಂದಿಗೂ ಕೂಡ ಅವರಿಗೆ ದೇವಾಲಯದ ಬದಲು ಮಸೀದಿ ಇರುವುದರಿಂದ ಯಾವುದೇ ತೊಂದರೆಯಿಲ್ಲ. ಏಕೆಂದರೆ ಆಗ ಬ್ರಾಹ್ಮಣ ಅರ್ಚಕರಿಗೆ ತಿಳಿಸಿ ಮತ್ತು ಅವರಿಗೆ ಹಣ ನೀಡಿಯೆ ಟಿಪ್ಪು ದೇವಾಲಯ ಸ್ಥಳಾಂತರ ಮಾಡಿದ್ದ. ಇಂದು ಕೂಡ ಆ ಮಸೀದಿ ಸುತ್ತಲೂ ಅದನ್ನು ಆಧರಿಸಿಯೇ ನೂರಾರು ಹಿಂದೂ ವ್ಯಾಪಾರಿಗಳು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಈ ವಿವಾದ ಆರಂಭವಾದ ನಂತರ ಅವರ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ ಎಂದು ಅವರೆಲ್ಲಾ ನೋವು ತೋಡಿಕೊಳ್ಳುತ್ತಿದ್ದಾರೆ.
ಹಾಗಾದರೆ ಪ್ರತಿಭಟಿಸುತ್ತಿರುವವರು ಯಾರು?
ಹಿಂದು ಜಾಗರಣ ವೇದಿಕೆಯ ಮೈಸೂರು ವಿಭಾಗದಿಂದ 2021ರ ಡಿಸೆಂಬರ್ 16ರಂದು ಶ್ರೀರಂಗಪಟ್ಟಣದಲ್ಲಿ ಹನುಮ ಮಾಲೆ ಹಾಕಿಕೊಂಡು ನಡೆಸುವ ಸಂಕೀರ್ತನಾ ಯಾತ್ರೆ ಹಮ್ಮಿಕೊಂಡಿತ್ತು. ಆ ನಂತರ ಕಾಳಿ ಸ್ವಾಮಿಯೆಂಬಾತ ಈ ಮಸೀದಿಯ ಬಳಿ ಹೋಗಿ ವಿಡಿಯೋ ಮಾಡಿ ವಿವಾದ ಎಬ್ಬಿಸಿದ. ಈಗ ಶ್ರೀರಾಮ ಸೇನೆಯವರು, ನರೇಂದ್ರ ಮೋದಿ ಜಾಗರಣ ಮಂಚ್‌ನವರು, ವಿಶ್ವ ಹಿಂದೂ ಪರಿಷತ್, ಹಾಸನದ ಪುನೀತ್ ಕೆರೆಹಳ್ಳಿಯಂತಹ ಸಂಘಪರಿವಾರದ ಫ್ರಿಂಜ್ ಎಲಿಮೆಂಟ್‌ಗಳು ಅಲ್ಲಿಗೆ ಹೋಗಿ ಗಲಾಟೆ ಮಾಡುತ್ತಿದ್ದಾರೆ. ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇವರು ಯಾರೂ ಸ್ಥಳೀಯರಲ್ಲ. ಜೂನ್ 4ರಂದು ಅವರು ನಡೆಸಿದ ಮೆರವಣಿಗೆಗೆ ಮಂಡ್ಯದಿಂದ ಬಿಜೆಪಿ ಕಾರ್ಯಕರ್ತರನ್ನು ಕರೆತರಲಾಗಿತ್ತು ಎನ್ನಲಾಗುತ್ತಿದೆ.
ಸ್ಥಳೀಯರು ಏನು ಹೇಳುತ್ತಾರೆ?
“ಜೂನ್ 4ರಂದು ಶನಿವಾರ ಬಲಪಂಥೀಯ ಸಂಘಟನೆಗಳು ನಡೆಸಿದ ಪ್ರತಿಭಟನೆಯಿಂದ ವಾರದ ಸಂತೆ ರದ್ದಾಗಿ ರೈತರು, ವ್ಯಾಪಾರಿಗಳು ಕಷ್ಟ-ನಷ್ಟ ಅನುಭವಿಸಿದರು. ಕಳೆದ ಮೂರು ದಿನಗಳಿಂದ ಮಸೀದಿ ಸುತ್ತ ಪೊಲೀಸ್ ಪಹರೆ ಇದ್ದು ಅಲ್ಲಿ ವ್ಯಾಪಾರ ಮಾಡಲಾಗದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಟೋರಿಕ್ಷಾ ಚಾಲಕರು ಗ್ರಾಹಕರಿಲ್ಲದೆ ಕಂಗಾಲಾಗಿದ್ದಾರೆ. ಈ ರೀತಿ ಕಷ್ಟಕ್ಕೆ ಒಳಗಾಗಿರುವವರು ಹಿಂದೂಗಳೇ ಆಗಿದ್ದಾರೆ. ನಮ್ಮ ಶ್ರೀರಂಗಪಟ್ಟಣದ ಜನರಿಗೆ ಈ ವಿವಾದ ಬೇಕಾಗಿಲ್ಲ. ಬದಲಿಗೆ ನಗರದ ರಸ್ತೆಗಳೆಲ್ಲಾ ಕಿತ್ತುಹೋಗಿವೆ, ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿಲ್ಲ. ಸರ್ಕಾರ ಆ ಕಡೆ ಗಮನ ಹರಿಸಬೇಕು” ಎನ್ನುತ್ತಾರೆ ವಕೀಲರಾದ ವೆಂಕಟೇಶ್‌ರವರು.

“ಶ್ರೀರಂಗಪಟ್ಟಣದಲ್ಲಿ 30 ಸಾವಿರದಷ್ಟು ಜನಸಂಖ್ಯೆಯಿದೆ. ನಮಗೆ ಪೂಜೆ ಮಾಡಲು ಹತ್ತಾರು ದೇವಾಲಯಗಳಿವೆ. ನಮಗೆ ಮುಸ್ಲಿಂ ಧರ್ಮದ ದ್ವೇಷ ಅಥವಾ ಕೋಮು ಗಲಭೆಗಳಾಗುವುದು ಬೇಡ. ಆದರೆ ಹೊರಗಿನವರು ಬಂದು ತೊಂದರೆ ಕೊಡುತ್ತಿದ್ದಾರೆ. ಅವರೆಲ್ಲರೂ ಉದ್ಯೋಗವಿಲ್ಲದ ನಿರುದ್ಯೋಗಿಗಳಾಗಿದ್ದಾರೆ. ಇಲ್ಲಿನ ಜನರ ಬೆಂಬಲ ಅವರಿಗಿಲ್ಲ ಎಂದು
ವಿವರಿಸುತ್ತಾರೆ.
ಕಾನೂನು ಏನು ಹೇಳುತ್ತದೆ?
Places Of Worship Act-1991: ಈ ಕಾಯಿದೆಯ ಪ್ರಕಾರ ಅಯೋಧ್ಯೆ ಪ್ರಕರಣವೊಂದನ್ನು ಹೊರತುಪಡಿಸಿ ಈ ದೇಶದ ಎಲ್ಲಾ ಉಪಾಸನಾ ಸ್ಥಳಗಳನ್ನು 1947ರ ಆಗಸ್ಟ್ 15ರಂದು ಹೇಗಿತ್ತೋ ಹಾಗೆ ಉಳಿಸಿಕೊಳ್ಳತಕ್ಕದ್ದು. ಅದರ ಧಾರ್ಮಿಕ ಸ್ವರೂಪಕ್ಕೆ ಬದಲವಾಣೆ ತರುವ ಯಾವುದೇ ಕೃತ್ಯಗಳು ಅಪರಾಧ ಮತ್ತು ಶಿಕ್ಷಾರ್ಹ. ಈ ಕಾಯ್ದೆಯ ಉದ್ದೇಶವೇ ದೇಶದ ಇತಿಹಾಸದಲ್ಲಿ ನಡೆದುಹೋದ ಸಂಗತಿಗಳು ಪುನರಾವರ್ತನೆಯಾಗಬಾರದು ಎಂಬುದಾಗಿದೆ.
ವೈದಿಕ ಬ್ರಾಹ್ಮಣರ ನೇತೃತ್ವದಲ್ಲಿ ಎಷ್ಟೋ ಬುದ್ಧ ವಿಹಾರಗಳು, ಜೈನ ಬಸದಿಗಳು ಸರ್ವನಾಶವಾಗಿ ಶೈವ-ವೈಷ್ಣವ ದೇವಸ್ಥಾನಗಳಾಗಿ ಪರಿವರ್ತನೆಗೊಂಡಿವೆ. ಇಂತಹವಕ್ಕೆ ತಿರುಪತಿ, ಧರ್ಮಸ್ಥಳ ಉದಾಹರಣೆಗಳನ್ನು ಅಧ್ಯಯನಕಾರರು ನೀಡುತ್ತಾರೆ. ಹೀಗಾಗಿ ಉತ್ಖನನ ನಡೆಸುವುದೇ ಆದರೆ ಮಸೀದಿಗಳಲ್ಲಿ ಮಾತ್ರವಲ್ಲ. ಎಲ್ಲಾ ವೈದಿಕ ಬ್ರಾಹ್ಮಣರ ದೇವಸ್ಥಾನಗಳನ್ನು ಅಗೆದು ತೆಗೆಯಬೇಕಾಗುತ್ತದೆ. ಇದು ಬಹು ದೊಡ್ಡ ಸಾಮಾಜಿಕ ಕ್ಷೋಭೆಗೆ ಕಾರಣವಾಗುತ್ತದೆ ಎಂಬ ಕಾರಣದಿಂದಲೇ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹಾಗಾಗಿ ಶ್ರೀರಂಗಪಟ್ಟಣದಲ್ಲಿ ಮಸೀದಿ ಅಗೆಯುತ್ತಾ ಕೂರುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಅಲ್ಲಿನ ಜನರ ಬದುಕು ಹಸನುಮಾಡಬಹುದಾದ ಯೋಜನೆಗಳತ್ತ ಗಮನ ಹರಿಸಬೇಕಿದೆ.
ಇದನ್ನೂ ಓದಿ: ಶ್ರೀರಂಗಪಟ್ಟಣದ ಮಸೀದಿ ನಿರ್ಮಾಣವಾಗಿದ್ದು ಹೇಗೆ? ಇತಿಹಾಸತಜ್ಞ ಪ್ರೊ.ನಂಜರಾಜ ಅರಸು ಹೇಳುವುದೇನು?



ಟೀಪು ಹನುಮಂತನಿಗಾಗಿ ಬೇರೆ ದೇವಸ್ಥಾನ ಕಟ್ಟಿಸಲು ಹಣ ಮತ್ತು ನೆಲ ಕೊಟ್ಟು ಹನುಮಂತನ ವಿಗ್ರಹವನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮೂಲಕ ಕಳಿಸಿಕೊಟ್ಟ ಎನ್ನುವುದಕ್ಕೆ ಸೆಂಟ್ ಫೋರ್ಟ್ ಜಾರ್ಜಿನಲ್ಲಿ ಸಂಗ್ರಹಿಸಿರುವ ಸಾಕ್ಶ್ಯಾಧಾರಗಳಿವೆ.
ಇನ್ನೆರಡು ಸಂದರ್ಭಗಳಲ್ಲಿ ಟೀಪು ನಡೆದುಕೊಂಡ ಬಗ್ಗೆ ಕೂಡಾ ಸಾಕ್ಷ್ಯಾಧಾರಗಳಿವೆ – ಒಂದು ೧೭೮೩ರಲ್ಲಿ ಟೀಪು ಮಂಗಳೂರಿನ ಸಮೀಪದ ಚರ್ಕಿಲ್ ಗಣೇಶನ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ. ಆ ರಾತ್ರಿ ಅವನಿಗೆ ಕನಸಿನಲ್ಲಿ ಆನೆಯೊಂದು ಬಂದು ಅವನನ್ನು ಅಟ್ಟಾಡಿಸಿದಂತೆ ಕನಸು ಬಿದ್ದಿದ್ದರಿಂದ ಅಲ್ಲಿಂದ ರಾತ್ರೋರಾತ್ರಿ ಹೊರಟು ಕಾರವಾರಕ್ಕೆ ಹೋದ. ಗಣೇಶನ “ಕರಾಮತ್ ” ನಿಂದ ಆ ದೇವಸ್ಥಾನಕ್ಕೆ “ಭಕ್ತಿಯಿಂದ” ಮುನ್ನೂರು ವರಹಗಳ ಜಾಗೀರನ್ನು ಮಂಜೂರು ಮಾಡಿದ.
ಮತ್ತೊಂದು ಸಂದರ್ಭದಲ್ಲಿ ಟೀಪು ತನ್ನ ರಾಜ್ಯದ ಗಡಿಗಳ ಪ್ರವಾಸ ಮಾಡುತ್ತಿದ್ದಾಗ ಈಗಿನ ತಮಿಳುನಾಡಿನ ಕೊಂಬೈಗೆ ಬಂದ. ಅಲ್ಲಿಯ ಜನರು ಅವನನ್ನು ಬಂದು ನಜರು ಒಪ್ಪಿಸಿ ತಮಗೊಂದು ರಂಗನಾಥನ ದೇವಸ್ಥಾನ ನಿರ್ಮಿಸಿಕೊಡಬೇಕೆಂದು ಕೇಳಿಕೊಂಡರು. ಆ ಸಂದರ್ಭದಲ್ಲಿ ಟೀಪುಗೆ ಒಂದು ಕೊಂಬೈ ನಾಯಿ – ಬೇಟೆ ನಾಯಿ – ಉಡುಗೊರೆಯಾಗಿ ನೀಡಿದರು. ಕೊಂಬೈ ಬೇಟೆ ನಾಯಿ ಹಿಡಿದ ಪಟ್ಟು ಬಿಡದ ಉಗ್ರ ನಾಯಿ. ಅದರಿಂದ ತುಂಬಾ ಸಂತೋಷಪಟ್ಟ ಟೀಪು ತನ್ನ ಸೈನ್ಯಕ್ಕೆ ಐನೂರು ಕೋಂಬೈ ನಾಯಿ ಒದಗಿಸಬೇಕೆಂದೂ ಕೊಂಬೈ ನಲ್ಲಿ ಒಂದು ದೇವಸ್ಥಾನ ಕಟ್ಟಿಸಿ, ಪ್ರತಿಷ್ಠಾಪನೆಗೆ ಶ್ರೀರಂಗಪಟ್ಟಣದಿಂದಲೇ ಮೂರ್ತಿಯನ್ನು ಮಾಡಿಸಿ ಪಲ್ಲಕ್ಕಿಯಲ್ಲಿ ಕಳಿಸಿಕೊಡುತ್ತೇನೆಂದು ಹೇಳಿದ. ಅದೇ ರೀತಿ ಅಲ್ಲೊಂದು ದೇವಸ್ಥಾನ ನಿರ್ಮಾಣವಾಯಿತು ಮತ್ತು ಟೀಪು ಮೂರ್ತಿ ಕಳಿಸಿಕೊಟ್ಟ. ಅಲ್ಲಿ ಟೀಪು ಹೆಸರಿನಲ್ಲಿಯೂ ನಿತ್ಯ ಪೂಜೆ ಈಗಲೂ ನಡೆಯುತ್ತಿದೆ. ಅಲ್ಲಿಯ ಕನ್ನಡ ಮಾತನಾಡುವ ಜಮೀನ್ದಾರರುಗಳು ಈ ಕಥೆಯನ್ನು ಈಗಲೂ ಹೇಳುತ್ತಾರೆ. ಸುಮಾರು ಅರವತ್ತು ವರ್ಷಗಳ ಹಿಂದೆ ಡೇ#ವಸ್ತಾನದಲ್ಲಿ ಕಳ್ಳತನ ನಡೆದು ವಿಗ್ರಹವನ್ನು ಭಗ್ನ ಮಾಡಿ ನೆಲ ತೋಡಿ ಪೀಠದ ಕೆಳಗಿನ ನವರತ್ನಗಳನ್ನು ಕದ್ದುಕೊಂಡು ಹೋದರು. ಆ ಭಗ್ನ ಹಿತ್ತಾಳೆಯ ಮೂರ್ತಿ ಈಗಲೂ ತಮಿಳುನಾಡಿನ ಆರ್ಕಿಯಾಲಜಿ ವಿಭಾಗದ ವಶದಲ್ಲಿದೆ ಮತ್ತು ಅದರ ಮುಖ್ಯಸ್ತ ಒಂದು ಸಂದರ್ಶನದಲ್ಲಿ ಹೇಳಿದ್ದು – ಈ ಮೂರ್ತಿಯ ಮೂಲ ಸಾಮಗ್ರಿ, ಎರಕ ಹೊಯ್ದ ಶೈಲಿ ತಮಿಳುನಾಡಿನದ್ದಲ್ಲ, ಇದು ಶ್ರೀರಂಗಪಟ್ಟಣದ ಶೈಲಿಯ ನಿರ್ಮಾಣ ಎಂದು ಸಾಕ್ಷ್ಯಾಧಾರ ಸಮೇತ ಹೇಳಿದ್ದಾರೆ. ಅಂದರೆ ಟೀಪು ಕಳಿಸಿಕೊಟ್ಟ ಮೂರ್ತಿ ಎನ್ನುವುದು ಸತ್ಯ.
ಟೀಪು ಹನುಮಂತನಿಗಾಗಿ ಬೇರೆ ದೇವಸ್ಥಾನ ಕಟ್ಟಿಸಲು ಹಣ ಮತ್ತು ನೆಲ ಕೊಟ್ಟು ಹನುಮಂತನ ವಿಗ್ರಹವನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮೂಲಕ ಕಳಿಸಿಕೊಟ್ಟ ಎನ್ನುವುದಕ್ಕೆ ಸೆಂಟ್ ಫೋರ್ಟ್ ಜಾರ್ಜಿನಲ್ಲಿ ಸಂಗ್ರಹಿಸಿರುವ ಸಾಕ್ಶ್ಯಾಧಾರಗಳಿವೆ.
ಇನ್ನೆರಡು ಸಂದರ್ಭಗಳಲ್ಲಿ ಟೀಪು ನಡೆದುಕೊಂಡ ಬಗ್ಗೆ ಕೂಡಾ ಸಾಕ್ಷ್ಯಾಧಾರಗಳಿವೆ – ಒಂದು ೧೭೮೩ರಲ್ಲಿ ಟೀಪು ಮಂಗಳೂರಿನ ಸಮೀಪದ ಚರ್ಕಿಲ್ ಗಣೇಶನ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ. ಆ ರಾತ್ರಿ ಅವನಿಗೆ ಕನಸಿನಲ್ಲಿ ಆನೆಯೊಂದು ಬಂದು ಅವನನ್ನು ಅಟ್ಟಾಡಿಸಿದಂತೆ ಕನಸು ಬಿದ್ದಿದ್ದರಿಂದ ಅಲ್ಲಿಂದ ರಾತ್ರೋರಾತ್ರಿ ಹೊರಟು ಕಾರವಾರಕ್ಕೆ ಹೋದ. ಗಣೇಶನ “ಕರಾಮತ್ ” ನಿಂದ ಆ ದೇವಸ್ಥಾನಕ್ಕೆ “ಭಕ್ತಿಯಿಂದ” ಮುನ್ನೂರು ವರಹಗಳ ಜಾಗೀರನ್ನು ಮಂಜೂರು ಮಾಡಿದ.
ಮತ್ತೊಂದು ಸಂದರ್ಭದಲ್ಲಿ ಟೀಪು ತನ್ನ ರಾಜ್ಯದ ಗಡಿಗಳ ಪ್ರವಾಸ ಮಾಡುತ್ತಿದ್ದಾಗ ಈಗಿನ ತಮಿಳುನಾಡಿನ ಕೊಂಬೈಗೆ ಬಂದ. ಅಲ್ಲಿಯ ಜನರು ಅವನನ್ನು ಬಂದು ನಜರು ಒಪ್ಪಿಸಿ ತಮಗೊಂದು ರಂಗನಾಥನ ದೇವಸ್ಥಾನ ನಿರ್ಮಿಸಿಕೊಡಬೇಕೆಂದು ಕೇಳಿಕೊಂಡರು. ಆ ಸಂದರ್ಭದಲ್ಲಿ ಟೀಪುಗೆ ಒಂದು ಕೊಂಬೈ ನಾಯಿ – ಬೇಟೆ ನಾಯಿ – ಉಡುಗೊರೆಯಾಗಿ ನೀಡಿದರು. ಕೊಂಬೈ ಬೇಟೆ ನಾಯಿ ಹಿಡಿದ ಪಟ್ಟು ಬಿಡದ ಉಗ್ರ ನಾಯಿ. ಅದರಿಂದ ತುಂಬಾ ಸಂತೋಷಪಟ್ಟ ಟೀಪು ತನ್ನ ಸೈನ್ಯಕ್ಕೆ ಐನೂರು ಕೋಂಬೈ ನಾಯಿ ಒದಗಿಸಬೇಕೆಂದೂ ಕೊಂಬೈ ನಲ್ಲಿ ಒಂದು ದೇವಸ್ಥಾನ ಕಟ್ಟಿಸಿ, ಪ್ರತಿಷ್ಠಾಪನೆಗೆ ಶ್ರೀರಂಗಪಟ್ಟಣದಿಂದಲೇ ಮೂರ್ತಿಯನ್ನು ಮಾಡಿಸಿ ಪಲ್ಲಕ್ಕಿಯಲ್ಲಿ ಕಳಿಸಿಕೊಡುತ್ತೇನೆಂದು ಹೇಳಿದ. ಅದೇ ರೀತಿ ಅಲ್ಲೊಂದು ದೇವಸ್ಥಾನ ನಿರ್ಮಾಣವಾಯಿತು ಮತ್ತು ಟೀಪು ಮೂರ್ತಿ ಕಳಿಸಿಕೊಟ್ಟ. ಅಲ್ಲಿ ಟೀಪು ಹೆಸರಿನಲ್ಲಿಯೂ ನಿತ್ಯ ಪೂಜೆ ಈಗಲೂ ನಡೆಯುತ್ತಿದೆ. ಅಲ್ಲಿಯ ಕನ್ನಡ ಮಾತನಾಡುವ ಜಮೀನ್ದಾರರುಗಳು ಈ ಕಥೆಯನ್ನು ಈಗಲೂ ಹೇಳುತ್ತಾರೆ. ಸುಮಾರು ಅರವತ್ತು ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಕಳ್ಳತನ ನಡೆದು ವಿಗ್ರಹವನ್ನು ಭಗ್ನ ಮಾಡಿ ನೆಲ ತೋಡಿ ಪೀಠದ ಕೆಳಗಿನ ನವರತ್ನಗಳನ್ನು ಕದ್ದುಕೊಂಡು ಹೋದರು. ಆ ಭಗ್ನ ಹಿತ್ತಾಳೆಯ ಮೂರ್ತಿ ಈಗಲೂ ತಮಿಳುನಾಡಿನ ಆರ್ಕಿಯಾಲಜಿ ವಿಭಾಗದ ವಶದಲ್ಲಿದೆ ಮತ್ತು ಅದರ ಮುಖ್ಯಸ್ತ ಒಂದು ಸಂದರ್ಶನದಲ್ಲಿ ಹೇಳಿದ್ದು – ಈ ಮೂರ್ತಿಯ ಮೂಲ ಸಾಮಗ್ರಿ, ಎರಕ ಹೊಯ್ದ ಶೈಲಿ ತಮಿಳುನಾಡಿನದ್ದಲ್ಲ, ಇದು ಶ್ರೀರಂಗಪಟ್ಟಣದ ಶೈಲಿಯ ನಿರ್ಮಾಣ ಎಂದು ಸಾಕ್ಷ್ಯಾಧಾರ ಸಮೇತ ಹೇಳಿದ್ದಾರೆ. ಅಂದರೆ ಟೀಪು ಕಳಿಸಿಕೊಟ್ಟ ಮೂರ್ತಿ ಎನ್ನುವುದು ಸತ್ಯ.