Homeಕರ್ನಾಟಕಶ್ರೀರಂಗಪಟ್ಟಣದ ಮಸೀದಿ ನಿರ್ಮಾಣವಾಗಿದ್ದು ಹೇಗೆ? ಇತಿಹಾಸತಜ್ಞ ಪ್ರೊ.ನಂಜರಾಜ ಅರಸು ಹೇಳುವುದೇನು?

ಶ್ರೀರಂಗಪಟ್ಟಣದ ಮಸೀದಿ ನಿರ್ಮಾಣವಾಗಿದ್ದು ಹೇಗೆ? ಇತಿಹಾಸತಜ್ಞ ಪ್ರೊ.ನಂಜರಾಜ ಅರಸು ಹೇಳುವುದೇನು?

- Advertisement -
- Advertisement -

ಶ್ರೀರಂಗಪಟ್ಟಣದ ಜಾಮೀಯ ಮಸೀದಿಯು ಮೂಲದಲ್ಲಿ ದೇವಾಲಯವಾಗಿದ್ದು, ಅದನ್ನು ಒಡೆದು ಹಾಕಬೇಕೆಂದು ವಿವಾದ ಸೃಷ್ಟಿಸಲಾಗಿದ್ದು, ಶಾಂತಿ ಸಹಬಾಳ್ವೆಯಿಂದ ನೆಮ್ಮದಿಯಾಗಿದ್ದ ಶ್ರೀರಂಗಪಟ್ಟಣಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಹೊರಗಿನ ಶಕ್ತಿಗಳು ಮಾಡುತ್ತಿವೆ.

“ಟಿಪ್ಪು ಕಾಲದಲ್ಲಿ ಆಂಜನೇಯ ದೇವಾಲಯವನ್ನು ಒಡೆದು ಮಸೀದಿಯನ್ನು ಕಟ್ಟಲಾಯಿತು. ಟಿಪ್ಪು ಹಿಂದೂ ವಿರೋಧಿ” ಎಂದು ಕೂಗುತ್ತಾ ಜನರ ನಡುವೆ ದ್ವೇಷ ಬಿತ್ತಲಾಗುತ್ತಿದೆ. ಆದರೆ ಈ ಜಾಮಿಯಾ ಮಸೀದಿಯ ಕುರಿತು ಕೆದಕಿದರೆ ಹಲವು ಕುತೂಹಲಕಾರಿ ಸಂಗತಿಗಳು ತೆರೆದುಕೊಳ್ಳುತ್ತವೆ.

“ಮಸೀದಿಗೂ ಮೊದಲು ಮಂದಿರವಿದ್ದದ್ದು ನಿಜ” ಎಂದು ಹೇಳುವ ಇತಿಹಾಸತಜ್ಞರಾದ ಪ್ರೊ.ಪಿ.ವಿ.ನಂಜರಾಜ ಅರಸು, “ದೇವಾಲಯವನ್ನು ಒಡೆದದ್ದು ರಾಜತಾಂತ್ರಿಕ ಕಾರಣಕ್ಕೆ ಹೊರತು, ಮತೀಯ ಉದ್ದೇಶಕ್ಕಲ್ಲ” ಎಂದು ವಿವರಿಸುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಟಿಪ್ಪು ಸುಲ್ತಾನ್’ ಹಾಗೂ ‘ಮೈಸೂರು ಇತಿಹಾಸ’ದ ಕುರಿತು ಆಳವಾಗಿ ಅಧ್ಯಯನ ಮಾಡಿದವರಾದ ಪ್ರೊ.ಅರಸು, ‘ನಾನುಗೌರಿ.ಕಾಂ’ ಜೊತೆ ಮಾತನಾಡಿ ಜಾಮಿಯ ಮಸೀದಿಯ ಹಿಂದಿನ ಕಥೆಯನ್ನು ವಿಸ್ತೃತವಾಗಿ ತಿಳಿಸಿದ್ದಾರೆ.

“ಶ್ರೀರಂಗಪಟ್ಟಣದಲ್ಲಿ ದೇವಸ್ಥಾನ ಇದ್ದದ್ದು ನಿಜ. ಅದು ಎಲ್ಲರಿಗೂ ಗೊತ್ತು. ಪ್ರಮೋದ್‌ ಮುತಾಲಿಕ್‌ ಹಾಗೂ ಅದ್ಯಾರೋ ಕಾಳಿ ಸ್ವಾಮೀಜಿಗೂ ಇದು ಗೊತ್ತು. ಟಿಪ್ಪು ಕದ್ದು ಮುಚ್ಚಿ ಈ ವ್ಯವಹಾರ ಮಾಡಿದವನ್ನಲ್ಲ” ಎಂದರು.

ಇದನ್ನೂ ಓದಿರಿ: ಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು

“ಒಂದು ರಾಜ್ಯದ ರಾಜಧಾನಿ ಅಂದಾಗ ಶತ್ರುಗಳ ದಾಳಿಯನ್ನು ಗಮನಿಸುತ್ತಿರಬೇಕಾಗುತ್ತದೆ. ಅದಕ್ಕಾಗಿ ಕಾವಲು ಗೋಪುರಗಳು ಬೇಕಾಗಿರುತ್ತವೆ. ಇಂದು ನಾವು ಡ್ರೋನ್‌ಗಳನ್ನು ಬಳಸಿ ಕಾಯುತ್ತಿದ್ದೇವೆ. ಆದರೂ ಚೀನಾ ದಾಳಿ ಮಾಡುತ್ತಿರುವುದು ತಿಳಿಯುತ್ತಿಲ್ಲ” ಎಂದು ವಿಷಾದಿಸಿದರು.

ಪ್ರಶ್ನೆ: ‘ಕಾವಲು ಗೋಪುರ’ಕ್ಕಾಗಿ ದೇವಾಲಯವನ್ನು ಟಿಪ್ಪು ಒಡೆದನೆಂದು ಹೇಳುತ್ತೀರಿ. ಆದರೆ ಅದರ ಸುತ್ತಲೂ ಹಲವು ಗೊಂದಲಗಳು ಉಂಟಾಗುತ್ತವೆ. ದೇವಾಲಯವನ್ನೇ ಏಕೆ ಒಡೆಯಬೇಕಿತ್ತು? ಟಿಪ್ಪು ಹಿಂದೂ ವಿರೋಧಿಯಾಗಿದ್ದರಿಂದಲೇ ದೇವಾಲಯ ಒಡೆದ ಎನ್ನುವ ವಾದ ಮಾಡಬಹುದಲ್ಲ?

ನಂಜರಾಜ ಅರಸ್‌: ರಾಜಧಾನಿಗೆ ಕಾವಲು ಗೋಪುರಗಳು ಬೇಕಿತ್ತು. ಬ್ರಿಟಿಷರ ನಡುವೆ ಟಿಪ್ಪು ನಡೆಸಿದ ನಾಲ್ಕು ಆಂಗ್ಲೋ ಮೈಸೂರು ಯುದ್ಧದಲ್ಲೂ ಬ್ರಿಟಿಷರು ದಾಳಿ ಮಾಡಿದ್ದು ಮಳವಳ್ಳಿ ಕಡೆಯಿಂದ. ಮದ್ದೂರು, ಮಂಡ್ಯ ಕಡೆಯಿಂದ ಬರಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನದಿ ದಾಟುವುದು ಕಷ್ಟವಿತ್ತು. ಹೀಗಾಗಿ ಮಳವಳ್ಳಿ ಮಾರ್ಗವನ್ನು ಬ್ರಿಟಿಷರು ಆಯ್ದುಕೊಂಡರು. ಹೀಗಾಗಿ ಕಾವಲು ಗೋಪುರಗಳನ್ನು ನಿರ್ಮಿಸಲಾಯಿತು. ಈ ಮಸೀದಿಯಲ್ಲಿನ ಕಾವಲು ಗೋಪುರದ ಒಳಗೆ 200 ಮೆಟ್ಟಿಲುಗಳಿವೆ. ಈಗ ಬೀಗ ಹಾಕಿದ್ದಾರೆ. ನೀವು ಬೀಗ ತೆಗೆಸಿ ಹೋಗಿ ನೋಡಿ. ಸುಮಾರು ನಲವತ್ತು ಮೈಲಿ ದೂರದ ಮಳವಳ್ಳಿವರೆಗೂ ನೋಡಬಹುದು. ಮತ್ತೆ ಈ ಕಡೆ ತಿರುಗಿ ನೋಡಿದರೆ ಮದ್ದೂರುವರೆಗೂ ನೋಡಬಹುದು. ಇದಕ್ಕಾಗಿ ದೇವಾಲಯವನ್ನು ಮಸೀದಿಯಾಗಿ ರೂಪಾಂತರಿಸುತ್ತಾನೆ.

ದೇವಾಲಯನ್ನೇ ಏಕೆ ಆಯ್ಕೆ ಮಾಡಿಕೊಂಡ ಎಂಬ ಪ್ರಶ್ನೆ ಬರುತ್ತದೆ. ದೇವಾಲಯವನ್ನು ಮಸೀದಿಯಾಗಿ ಬದಲಾಯಿಸುವ ಮುನ್ನ ದೇವರನ್ನು ಕಿತ್ತು ಹೊಳೆಗೆ ಬೀಸಾಕಲಿಲ್ಲ. ದಿವಾನ್‌ ಪೂರ್ಣಯ್ಯನವರ ನೇತೃತ್ವದಲ್ಲಿ ಕೋಟೆ ಒಳಗೆ ಮರುಸ್ಥಾಪನೆ ಮಾಡಿಸುತ್ತಾನೆ. ಈಗ ಉತ್ತರಕ್ಕೆ ಬಾಗಿಲು ಇದೆ. ಮೂಡಲಬಾಗಿಲು ಆಂಜನೇಯ ಎಂದಾಗ ಪೂರ್ವಕ್ಕೆ ಬಾಗಿಲಿತ್ತು. ಈಗ ಉತ್ತರಕ್ಕೆ ಇದೆ. ಆದರೂ ಮೂಡಲಬಾಗಿಲು ಆಂಜನೇಯ ಎಂಬ ಹೆಸರೇ ಇದೆ. ಶರಣಾಂಬಿಕ ದೇವಿ ಆವರಣದಲ್ಲಿ ದೇವರನ್ನು ಟಿಪ್ಪು ಪ್ರತಿಷ್ಠಾಪನೆ ಮಾಡಿಸುತ್ತಾನೆ.

ಇದನ್ನೂ ಓದಿರಿ: ಮತ್ತೆ ಮತ್ತೆ ನೆನೆಯಬೇಕಾದ ‘ಟಿಪ್ಪುವಿನ ಸರ್ವಧರ್ಮ ಸಹಿಷ್ಣುತೆ’

ಕಾವಲು ಗೋಪುರ ಇದೆ ಎಂಬುದು ಎಲ್ಲರಿಗೂ ಗೊತ್ತಾಗಬಾರದು, ರಹಸ್ಯವಾಗಿರಬೇಕು ಎಂಬುದಕ್ಕಾಗಿ ಮಸೀದಿಯೊಳಗೆ ಕಾವಲು ಗೋಪುರ ನಿರ್ಮಿಸಲಾಯಿತು. ರಕ್ಷಣಾ ಕಾರ್ಯಾಚರಣೆ ಎಂದಿಗೂ ರಹಸ್ಯವಾಗಿರುತ್ತದೆ. ಆಂಜನೇಯ ದೇವಸ್ಥಾನದ ಮೇಲೆಯೇ ದೇವಸ್ಥಾನ ಕಟ್ಟಬಹುದಿತ್ತು. ಆದರೆ ರಕ್ಷಣಾ ಕಾರ್ಯದ ಉದ್ದೇಶದಿಂದ ಸೈನಿಕರು ಓಡಾಡುತ್ತಲೇ ಇರುತ್ತಾರಲ್ಲ. ತಾರಸಿ ಮೇಲೆ ಓಡಾಡುವಾಗ ದೇವರ ಗರ್ಭಗುಡಿಯನ್ನು ತುಳಿಯುತ್ತಾನೆಂಬ ಆರೋಪಗಳು ಬರುತ್ತವೆ. ‌ಇದನ್ನು ತಪ್ಪಿಸುವುದಕ್ಕಾಗಿ ಟಿಪ್ಪು ಮಸೀದಿ ನಿರ್ಮಿಸಿದೆ.

ದೇವಾಲಯದ ಸುತ್ತ ಕಲ್ಲು ಕಂಬಗಳಿವೆ. ಟಿಪ್ಪುವಿಗೆ ದುರುದ್ದೇಶ ಇದ್ದರೆ ಕಂಬಗಳನ್ನು ಕಿತ್ತು ಹೊಳೆಗೆ ಬೀಸಾಕಬೇಕಿತ್ತಲ್ಲ! ಆದರೆ ಹಿಂದೂ ದೇವರ ಚಿಹ್ನೆಗಳಿರುವ ಕಂಬಗಳು ಹಾಗೆಯೇ ಇವೆ. ಈಗ ಈ ಕಂಬಗಳನ್ನು ನೋಡಿ, ಓ ಇಲ್ಲಿ ದೇವಸ್ಥಾನ ಇತ್ತು ಎಂದು ಗುಲ್ಲೆಬ್ಬಿಸುತ್ತಾರೆ. ಇದಕ್ಕೆ ಇಂಟಲಿಜೆನ್ಸ್ ರಿಪೋರ್ಟ್ ತೆಗೆದುಕೊಳ್ಳುವ, ಸರ್ವೇ ಮಾಡುವ ಅವಶ್ಯಕತೆ ಇಲ್ಲ. ಮುಸ್ಲಿಂ ಎನ್ನುವ ಕಾರಣಕ್ಕೆ ಟಿಪ್ಪು ಮೇಲೆ ದ್ವೇಷ ಹಬ್ಬಿಸಲಾಗುತ್ತಿದೆ.

ಪ್ರಶ್ನೆ: ಟಿಪ್ಪು ಧರ್ಮ ದ್ವೇಷಿಯೇ?

ನಂಜರಾಜ ಅರಸು: ಟಿಪ್ಪು ಸುಲ್ತಾನ್‌ನ ಅರಮನೆಯ ಮುಂದೆ ನಿಂತು ಜೋರಾಗಿ ಒಂದು ಕಲ್ಲನ್ನು ಬಿಸಾಕಿದರೆ ನರಸಿಂಹಸ್ವಾಮಿ ದೇವಸ್ಥಾನದ ಅಂಗಳಕ್ಕೆ ಹೋಗಿ ಬೀಳುತ್ತದೆ. ರಂಗನಾಥಸ್ವಾಮಿ ದೇವಸ್ಥಾನ, ತುಪ್ಪದ ಕೊಳ ಸಮೀಪದಲ್ಲೇ ಇವೆ. ರಣಧೀರ ಕಂಠೀರವ ನರಸರಾಜ್ ಒಡೆಯರ್‌ ಕುಸ್ತಿ ಪೈಲ್ವಾನರಾಗಿದ್ದರು. ಇವರು 1640- 1650ರ ಅವಧಿಯಲ್ಲಿ ನರಸಿಂಹಸ್ವಾಮಿ ದೇವಾಲಯವನ್ನು ಕಟ್ಟಿಸಿದರು. ಟಿಪ್ಪು ತನ್ನ ಅರಮನೆಯ ಎಡದ ಭಾಗಕ್ಕೆ ಹೊರಟರೇ ಆ ದೇವಸ್ಥಾನದ ಮುಂದೆಯೇ ಹೋಗಬೇಕಿತ್ತು. ಅರ್ಧ ಪರ್ಲಾಂಗು ದೂರದಲ್ಲಿದ್ದ ದೇವಾಲಯವನ್ನು ಟಿಪ್ಪು ಏಕೆ ಒಡೆಯಲಿಲ್ಲ? ಬಲದ ಕಡೆಯಲ್ಲಿ ಮತ್ತೊಂದು ದೇವಾಲಯವಿದೆ. ಅದನ್ನು ಏಕೆ ಒಡೆಯಲಿಲ್ಲ? ಎಲ್ಲ ದೇವಸ್ಥಾನಗಳು ಯಥಾಸ್ಥಿತಿಯಲ್ಲಿವೆ. ಹತ್ತು ಸಾವಿರ ದೇವಾಲಯಗಳನ್ನು ಟಿಪ್ಪು ಒಡೆದುಹಾಕಿದ ಎನ್ನುತ್ತಾರಲ್ಲ, ದಾಖಲೆ ತೋರಿಸಲಿ. ದೇವಾಲಯಗಳಿಗೆ ದತ್ತಿ ಕೊಟ್ಟವನು ಟಿಪ್ಪು.

ಹದಿನಾರು ಕಥೆ ಗೊತ್ತೆ?

ಇತಿಹಾಸವನ್ನು ಕೆದಕುತ್ತಾ ಹೋದರೆ ದೇವಾಲಯಗಳ ಅಡಿಯಲ್ಲಿ ಜೈನ ಹಾಗೂ ಬೌದ್ಧ ಧರ್ಮದ ಕುರುಹುಗಳು ಸಿಗುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೆ ಪೂರಕವಾಗಿ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ಪತ್ತೆಯಾದ ಜೈನ ತೀರ್ಥಂಕರರ ವಿಗ್ರಹದ ಇತಿಹಾಸವನ್ನು ಪ್ರೊ.ನಂಜರಾಜ ಅರಸು ಅವರು ವಿವರಿಸಿದರು.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್‌ರನ್ನು ಜಿಹಾದಿ, ಅತ್ಯಾಚಾರಿ ಎಂದು ಕರೆದಿಲ್ಲ

“ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹದಿನಾರು ಗ್ರಾಮದ ಇತಿಹಾಸವನ್ನು ಬರೆಯಲು ಹೊರಟಾಗ ಹಲವಾರು ಸಂಗತಿಗಳು ತೆರೆದುಕೊಂಡವು. ಯದುವಂಶ ಹುಟ್ಟಿದ್ದು ಇದೇ ಗ್ರಾಮದಲ್ಲಿ ಎನ್ನುತ್ತಾರೆ. ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಹದಿನಾರು ಗ್ರಾಮದ ನಿವಾಸಿ ಎಚ್.ಸಿ.ಮಹದೇವಪ್ಪ ಅವರು ತಮ್ಮ ಅಧಿಕಾರವಧಿಯಲ್ಲಿ ಹದಿನಾರು ಗ್ರಾಮದ ಅಭಿವೃದ್ಧಿಗೆ, ದೇವಾಲಯಗಳ ಜೀರ್ಣೋದ್ಧಾರಕ್ಕೆ ಕ್ರಮ ವಹಿಸಿದರು. ಆಗ ಜೈನ ತೀರ್ಥಂಕರರ ವಿಗ್ರಹ ಪತ್ತೆಯಾಗಿತ್ತು” ಎಂದು ಪ್ರೊ.ಅರಸು ತಿಳಿಸಿದರು.

“ಹದಿನಾರು ಗ್ರಾಮದಲ್ಲಿ ಚೆನ್ನಕೇಶವ ದೇವಾಲಯವಿದೆ. ಅದು ವೈಷ್ಣವ ದೇವರು. ವಿಜಯನಗರ ಕಾಲದ ವಾಸ್ತು ಶಿಲ್ಪದಲ್ಲಿ ದೇವಾಲಯವನ್ನು ಕಾಣಬಹುದು. ದೇವಾಲಯದ ಗೋಡೆಗಳು ಶಿಥಿಲವಾಗಿದ್ದರಿಂದ ಹೊಸದಾಗಿಯೇ ಕಟ್ಟಲು ಮಹದೇವಪ್ಪ ಸೂಚಿಸಿದರು. ಗರ್ಭಗುಡಿಯಲ್ಲಿನ ದೇವರನ್ನು ಗೋಣಿಚೀಲ, ಟಾರ್ಪಲ್‌ ಇತ್ಯಾದಿಗಳಿಂದ ಮುಚ್ಚಿ ಸುರಕ್ಷಿತವಾಗಿಟ್ಟು ಗೋಡೆಗಳನ್ನು ಒಡೆಯುತ್ತಾರೆ. ಹೊಸದಾಗಿ ಗೋಡೆ ನಿರ್ಮಿಸಲು ಒಂದು ಬದಿಯ ಗೋಡೆಯ ಬಳಿ ಆರು ಅಡಿ ಅಗೆದಾಗ ತೀರ್ಥಂಕರರ ಅರ್ಧಭಾಗ (ಸೊಂಟದ ಮೇಲಿನ ಭಾಗ) ಸಿಕ್ಕಿತು. ಇನ್ನೊಂದು ಗೋಡೆ ಒಡೆದಾಗ ಸೊಂಟದಿಂದ ಕೆಳಭಾಗ ಸಿಕ್ಕಿತು. ಅಂದರೆ ಇಲ್ಲಿ ಮೊದಲು ಜೈನರ ಬಸದಿ ಇತ್ತು. ಅದನ್ನು ವೈಷ್ಣವರು ಒಡೆದುಹಾಕಿದ್ದಾರೆ. ಅದನ್ನು ನಂತರ ವಿಗ್ರಹವನ್ನು ಅಲ್ಲಿಯೇ ಮುಚ್ಚಿಹಾಕಿ ವಿಷ್ಣು ದೇವಾಲಯ ಕಟ್ಟಿದ್ದಾರೆ ಎಂದಾಯಿತಲ್ಲ. ಮುತಾಲಿಕ್ ಹಾಗೂ ಕೆಲವು ಸ್ವಾಮೀಜಿಗಳು ಚೆನ್ನಕೇಶವನ ವಿಗ್ರಹ ತೆರವು ಮಾಡಿ, ಪಾರ್ಶ್ವನಾಥರ ವಿಗ್ರಹವನ್ನು ಪ್ರತಿಷ್ಠಾಪಿಸಬೇಕಲ್ಲವೇ?” ಎಂದು ಪ್ರಶ್ನಿಸಿದರು.

“ನನಗೆ ಯಾವ ದೇವರ ಬಗ್ಗೆಯೂ ಆಸಕ್ತಿ ಇಲ್ಲ. ಆದರೆ ಮಸೀದಿ ಒಡೆದು ದೇವಸ್ಥಾನ ಮಾಡುತ್ತೇವೆ ಎನ್ನುತ್ತಾರಲ್ಲ. ಹದಿನಾರು ಗ್ರಾಮದಲ್ಲಿ ಯಾವುದನ್ನು ಒಡೆಯುತ್ತಾರೆ? ಮೈಸೂರಿನಿಂದ ಪಶ್ಚಿಮವಾಹಿನಿಗೆ ಹೊರಟರೆ ದಾರಿಯಲ್ಲಿ ಕಳಸ್ತವಾಡಿ ಎಂಬ ಗ್ರಾಮ ಸಿಗುತ್ತದೆ. ಮುತಾಲಿಕ್‌ ಉಲ್ಲೇಖಿಸುವ ಬ್ರಿಟಿಷರೇ ಬರೆದ ಪ್ರಕಾರ, 1484ರ ಅವಧಿಯಲ್ಲಿ ತಿಮ್ಮಣ್ಣನಾಯಕನಿಗೆ ವಿಜಯನಗರದ ಅರಸರು ಅನುಮತಿ ನೀಡಿ ಕಳಸ್ತವಾಡಿಯಲ್ಲಿದ್ದ 100 ಜೈನಬಸದಿಗಳನ್ನು ಒಡೆದುಹಾಕುತ್ತಾರೆ. ನಂತರ ಇಲ್ಲಿನ ಜೈನ ಬಸದಿಗಳಿಂದ ಕಲ್ಲು, ಮರದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನವನ್ನು ವಿಸ್ತಾರಗೊಳಿಸಲಾಗುತ್ತದೆ. ಮುತಾಲಿಕ್‌ ಅವರೇ ಇದನ್ನು ನಿಮ್ಮ ಬ್ರಿಟಿಷರೇ ಬರೆದಿದ್ದಾರೆ. ನೂರೊಂದು ಜೈನ ಬಸದಿ ಇತ್ತೆಂದು ಇಲ್ಲಿನ ಜನರಿಗೇ ಗೊತ್ತೇ ಇಲ್ಲ. ಹೊಸದಾಗಿ ಪ್ರತಿಷ್ಠಾಪನೆ ಮಾಡುತ್ತೀರಾ?” ಎಂದು ಕೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥ ದೇವಾಲಯ ಮೂಲದಲ್ಲಿ ಬೌದ್ಧ ವಿಹಾರವಾಗಿತ್ತು ಎಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ. ಮಂಜುಶ್ರೀ ಎಂಬ ಬೌದ್ಧ ಭಿಕ್ಷುವಿಗಾಗಿ ಸಾಮ್ರಾಟ ಅಶೋಕ ಕಟ್ಟಿಸಿದ್ದ ಬೌದ್ಧ ವಿಹಾರ ಇದಾಗಿದೆ. ಇದನ್ನು ತಕ್ಷಣ ಬೌದ್ಧರಿಗೆ ಬಿಟ್ಟು ಕೊಡಬೇಕು.

  2. ಉಡುಪಿ ಕೃಷ್ಣ ಮಠ ಮೂಲದಲ್ಲಿ ಜೈನರ ಬಸದಿ ಆಗಿತ್ತು ಎಂಬುದಕ್ಕೆ ದಾಖಲೆಗಳಿವೆ.
    ಈ ಕೃಷ್ಣ ಮಠವನ್ನು ಜೈನರಿಗೆ ತಕ್ಷಣ ಬಿಟ್ಟು ಕೊಡಬೇಕು.
    ಉಡುಪಿಯ ಚಂದ್ರನಾಥ ಬಸದಿಯೇ ಚಂದ್ರ ಮೌಳೀಶ್ವರ ದೇವಸ್ಥಾನವಾಯಿತು.

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...