Homeಕರ್ನಾಟಕ40% ಕಮಿಷನ್‌ನಿಂದ ಕರುನಾಡು ಕಳೆದುಕೊಳ್ಳುತ್ತಿರುವುದೇನು?

40% ಕಮಿಷನ್‌ನಿಂದ ಕರುನಾಡು ಕಳೆದುಕೊಳ್ಳುತ್ತಿರುವುದೇನು?

- Advertisement -
- Advertisement -

ಕರ್ನಾಟಕದ ಹಲವು ನಗರಗಳಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಟಾರು ಕಿತ್ತುಹೋದ, ಗುಂಡಿ ಬಿದ್ದ ರಸ್ತೆಗಳು ಸರ್ವೇಸಾಮಾನ್ಯವಾಗಿವೆಯಲ್ಲವೇ? ರಸ್ತೆ ನಿರ್ಮಿಸಿದ ಕೆಲವೇ ದಿನಗಳಲ್ಲಿ ಒಂದೇ ಮಳೆಗೆ ಕೊಚ್ಚಿಹೋದ ಉದಾಹರಣೆಗಳು ನೂರಾರಿವೆ. ಡ್ಯಾಂಗಳು, ನಾಲೆಗಳ ನಿರ್ಮಾಣ ಸೇರಿ ಹಲವು ಕಟ್ಟಡಗಳಲ್ಲಿ ಕಳಪೆ ಕಾಮಗಾರಿ ಎದ್ದು ಕಾಣುತ್ತಿರುತ್ತದೆ. ಇದಕ್ಕೆಲ್ಲ ಜನತೆ ಒಂದಷ್ಟು ದಿನ ಸ್ಥಳೀಯ ಕಾಂಟ್ರಾಕ್ಟರ್‌ಗಳನ್ನು ದೂರುತ್ತಿರುತ್ತಾರೆ. ಗುತ್ತಿಗೆದಾರರೆಂದರೆ ಭ್ರಷ್ಟಾಚಾರಿಗಳೆಂಬ ಕಲ್ಪನೆ ಜನರ ಮನಸ್ಸಿನಲ್ಲಿದೆ. ಆದರೀಗ ಕರ್ನಾಟಕದಲ್ಲಿ ಅದೇ ಗುತ್ತಿಗೆದಾರರ ಪರ ಜನರು ಸಹಾನುಭೂತಿ ತೋರಿಸುವಂತಹ ಪರಿಸ್ಥಿತಿಯನ್ನು ಆಳುವ ಬಿಜೆಪಿ ಸರ್ಕಾರ ತಂದಿಟ್ಟಿದೆ.

ರಾಜ್ಯದ ಗುತ್ತಿಗೆ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ; ಸಚಿವರು, ಶಾಸಕರು ಮತ್ತು ಅಧಿಕಾರಿಗಳು 40% ಕಮಿಷನ್ ಕೀಳುತ್ತಿದ್ದಾರೆ; ಹೀಗಾಗಿ ಗುಣಮಟ್ಟದ ಕಾಮಗಾರಿ ನಡೆಸಲಾಗುತ್ತಿಲ್ಲ; ಹಾಗಾಗಿ ಸರ್ಕಾರ ಈ ಕುರಿತು ತನಿಖೆ ನಡೆಸಿ ಭ್ರಷ್ಟಾಚಾರ ನಿಲ್ಲಿಸಬೇಕು ಎಂದು ಕಳೆದ ಆರು ತಿಂಗಳಿನಿಂದ ರಾಜ್ಯದ ಗುತ್ತಿಗೆದಾರರ ಸಂಘದ ಹಲವರು ಪ್ರಧಾನಿ, ಮುಖ್ಯಮಂತ್ರಿಗಳಿಗೆ ಪದೇಪದೇ ಪತ್ರ ಬರೆಯುತ್ತಿದ್ದಾರೆ. ಕಮಿಷನ್ ದಂಧೆಯಲ್ಲಿ ಭಾಗಿಯಾಗಿರುವ ಹಲವು ಪ್ರಭಾವಿ ಸಚಿವರ, ಶಾಸಕರು ಹೆಸರು ಉಲ್ಲೇಖಿಸಿ ದಾಖಲೆಗಳನ್ನು ಮುಂದಿಡುತ್ತಿದ್ದಾರೆ. ಇದರಿಂದ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನವರ ಕಮಿಷನ್ ಭ್ರಷ್ಟಾಚಾರದಿಂದ ನೊಂದು ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರನೊಬ್ಬ ಮೋದಿಗೆ ಪತ್ರ ಬರೆದಿದ್ದರು. ಅದೂ ಪ್ರಯೋಜನವಾಗದೆ, ಕೊನೆಗೆ ದಾರಿಕಾಣದೆ ಆತ್ಮಹತ್ಯೆ ಮಾಡಿಕೊಂಡ ಅವರು ಅದಕ್ಕೆ ಈಶ್ವರಪ್ಪನವರನ್ನು ದೂರಿದ್ದರು. ಇದು ಈಶ್ವರಪ್ಪನವರ ರಾಜೀನಾಮೆಗೆ ಎಡೆಮಾಡಿಕೊಟ್ಟಿದೆ. ಇದರ ನಂತರ 40% ಕಮಿಷನ್ ವಿಚಾರ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ.

40% ಕಮಿಷನ್ ನಿಜವೇ?

ಈ ಕುರಿತು ಮಾಹಿತಿ ಪಡೆಯಲು ಮಂಡ್ಯದ ಕ್ಲಾಸ್ ಒನ್ ಗುತ್ತಿಗೆದಾರರನ್ನುಮಾತನಾಡಿಸಲಾಯಿತು.
ಅವರು “ಯಾವುದೇ ಕಾಮಗಾರಿ ಮಂಜೂರಾದ ನಂತರ ವರ್ಕ್ ಎಸ್ಟಿಮೇಟ್ ಮತ್ತು ಅಗ್ರಿಮೆಂಟ್ ಆಗುವ ಸಂದರ್ಭದಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್‌ಗೆ 1.5-2%, ಸೂಪರಿಂಡೆಂಟ್ ಇಂಜಿನಿಯರ್‌ಗೆ 1%, ಬೆಂಗಳೂರಿನಲ್ಲಿರುವ ಚೀಫ್ ಇಂಜಿನಿಯರ್‌ಗೆ 1% ಕಮಿಷನ್ ಕೊಡಲೇಬೇಕು ಎಂದರು. ಕೆಲಸ ಮುಗಿದ ಮೇಲೆ ಇಂಜಿನಿಯರ್‌ಗಳು ಬಿಲ್ ಬರೆಯುವಾಗ 5% ತೆಗೆದುಕೊಳ್ಳೂತ್ತಾರೆ. ಎಂಡಿ ಸಹಿ ಆದಾಗ
ತಾಲ್ಲೂಕು ಮಟ್ಟದ ಎಇಇ ಎಂಬ ಆಫೀಸರ್ 3% ತೆಗೆದುಕೊಳ್ಳುತ್ತಾರೆ. ಆಡಿಟ್ ಮಾಡುವವರಿಗೆ
0.5%, ಅಕೌಂಟ್ ಸೂಪರಿಂಡೆಂಟ್‌ಗೆ 0.5% ಮತ್ತು ಎಕ್ಸಿಕ್ಯುಟಿವ್ ಎಂಜಿನಿಯರ್‌ಗೆ 3% ಕಮಿಷನ್ ಕೊಡಬೇಕು” ಎಂದು ಹೇಳಿದರು.

ಸಂತೋಷ್ ಪಾಟೀಲ್

“ಇದಾದ ನಂತರ ಜಿ.ಪಂಗೆ ಅಪ್ರೂವಲ್‌ಗೆ ಹೋಗುತ್ತದೆ. ಮುಖ್ಯ ಲೆಕ್ಕ ಪರಿಶೋಧಕರಿಗೆ 1%, ಜಿಲ್ಲಾ ಖಜಾನೆಗೆ ಹೋದಾಗ 1% ಕಮಿಷನ್ ಕೊಡಬೇಕು. ಅಂದರೆ ಅಧಿಕಾರಿಗಳಿಗೆ ಸುಮಾರು 15-16% ಕಮಿಷನ್ ಕೊಡಬೇಕು. ನಂತರ ಶಾಸಕರು 5% ತೆಗೆದುಕೊಳ್ಳುತ್ತಾರೆ. ಇನ್ನು ರೆಡಿ ಗ್ರಾಂಟ್ಸ್ ಇಲ್ಲದಿದ್ದ ಸಂದರ್ಭದಲ್ಲಿ ವಿಶೇಷ ಗ್ರಾಂಟ್‌ಗೆ ಎಲ್‌ಓಸಿ ತರಲು ಬೆಂಗಳೂರಿಗೆ ಹೋಗಬೇಕು. ಆಗ ಸಚಿವರಿಗೆ ಮೊದಲು 5% ಕಮಿಷನ್ ಇತ್ತು. ಈ ಮೊದಲು ನಾವೇ ಈಶ್ವರಪ್ಪನವರಿಗೆ 5% ಕೊಟ್ಟು 2 ಕೋಟಿ ಅನುದಾನ ತಂದಿದ್ದೇವೆ. ಈಗ ಅದು 10% ವರೆಗೂ ಹೆಚ್ಚಾಗಿದೆ”.

“ಸಚಿವರಿಗೆ 10%, ಶಾಸಕರಿಗೆ 5%, ಅಗ್ರಿಮೆಂಟ್ ಮಾಡುವಾಗ ಇಂಜಿನಿಯರ್‌ಗಳಿಗೆ 4%, ಬಿಲ್ ಮಾಡುವಾಗ ಇಂಜಿನಿಯರ್‌ಗಳಿಗೆ 5% ಎಇಇಗಳಿಗೆ 3%, ಮತ್ತೆ ಕೆಳಗಿನ ಅಧಿಕಾರಿಗಳಿಗೆ 4% ಹೀಗೆ ಒಟ್ಟು 31% ಗೂ ಹೆಚ್ಚು ಕಮಿಷನ್ ಹೋಗುತ್ತಿದೆ. ಅಲ್ಲದೆ ಟ್ಯಾಕ್ಸ್, ರಾಯಲ್ಟಿ, ಕಾರ್ಮಿಕರ ಇಎಸ್‌ಐ ಸೇರಿ 40% ಮೀರುತ್ತದೆ. ಇಂತಹ ಸಂದರ್ಭದಲ್ಲಿ ಗುತ್ತಿಗೆದಾರರು ಬೀದಿಗೆ ಬರದೆ ಇರಲು ಸಾಧ್ಯವೇ” ಎಂದು ಪ್ರಶ್ನಿಸುತ್ತಾರೆ.

“ಈ ಕಮಿಷನ್ ಪದ್ಧತಿ ಹಿಂದಿನಿಂದಲೂ ಇದೆ. ಆದರೆ ಮೊದಲು ಹೆಚ್ಚಿನ ಸಚಿವರು, ಶಾಸಕರು, ಸಂಸದರು ಕಮಿಷನ್ ಕೇಳುತ್ತಿರಲಿಲ್ಲ. ಏಕೆಂದರೆ ಆಗ ಎಲ್‌ಓಸಿ ನೀಡುವ ಅಧಿಕಾರ ಅಧಿಕಾರಿಗಳಿಗೆ ಇತ್ತು. ಅವರಿಗೆ 1-2% ಲಂಚ ಕೊಟ್ಟು ತರುತ್ತಿದ್ದೆವು. ಆದರೆ ಈಗ ಆ ಅಧಿಕಾರ ಸಚಿವರ ಕೈಗೆ ಹೋದ ನಂತರ ಪರ್ಸೆಂಟೇಜ್ ಭ್ರಷ್ಟಾಚಾರ ಹೆಚ್ಚಾಗಿದೆ. 10%ಗಿಂತ ಕಡಿಮೆ ತೆಗೆದುಕೊಳ್ಳುವುದಿಲ್ಲ ಎಂದರು.

ಈ ಕಮಿಷನ್ ಭ್ರಷ್ಟಾಚಾರದ ಕುರಿತು ಪ್ರಧಾನಿಯವರಿಗೆ ಮೊದಲು ದೂರು ಸಲ್ಲಿಸಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರು ಮಾತನಾಡಿ “ನಾವು ಸಲ್ಲಿಸಿರುವ ದಾಖಲೆಗಳಲ್ಲಿ ತಪ್ಪಿದ್ದರೆ ತನಿಖೆ ನಡೆಸಿ. ನಾವು ಹೇಳಿದ್ದು ತಪ್ಪಾಗಿದ್ದರೆ ನೀವು ಹೇಳುವ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಸಾರ್ವಜನಿಕವಾಗಿ ಘೋಷಿಸಿದ್ದೇವೆ. ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಹಿಂದಿನ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದು ಟೀಕಿಸಿದ್ದರು. ನಾವೀಗ ಮೋದಿಯವರ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಅವರು ನಡೆಸುತ್ತಿರುವ 40% ಕಮಿಷನ್ ಭ್ರಷ್ಟಾಚಾರದ ಬಗ್ಗೆ ದಾಖಲೆ ಸಮೇತ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲವೇಕೆ” ಎಂದು ಪ್ರಶ್ನಿಸಿದ್ದಾರೆ.

ಇದರಿಂದ ಕರುನಾಡಿಗೇನು ಕಷ್ಟ?

55,000 ಕೋಟಿ ರೂಗಳಷ್ಟು ಹಣವನ್ನು ಈ ಬಾರಿಯ ಬಜೆಟ್‌ನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರವೂ ಸಹ ಅಷ್ಟೇ ಪ್ರಮಾಣದ ಅನುದಾನ ನೀಡುತ್ತದೆ. ಅಂದರೆ ರಾಜ್ಯದ ಮೂಲ ಸೌಕರ್ಯಕ್ಕಾಗಿ ಇವೆರಡು ಸೇರಿ ಅಂದಾಜು 1 ಲಕ್ಷ ಕೋಟಿ ಹಣ ಬಿಡುಗಡೆಯಾಗುತ್ತದೆ. ಇದರಲ್ಲಿ 40% ಕಮಿಷನ್ ಅಥವಾ ಲಂಚ ಅಂದರೇ ಕನಿಷ್ಠ ವರ್ಷಕ್ಕೆ 40,000 ಕೋಟಿ ರೂ ಸರ್ಕಾರದ (ಸಾರ್ವಜನಿಕರ) ಹಣವನ್ನು ಆಡಳಿತ ಪಕ್ಷದ ರಾಜಕಾರಣಿಗಳು ಮತ್ತು ಅಧಿಕಾರಿಗಳು ನುಂಗಿ ಹಾಕುತ್ತಾರೆ ಎಂದರ್ಥ ಎನ್ನುತ್ತಾರೆ ಪ್ರಾಧ್ಯಾಪಕರಾದ ಬಿ.ಸಿ ಬಸವರಾಜ್.

ಡಿ.ಕೆಂಪಣ್ಣ

ಈ 40,000 ಕೋಟಿ ರೂ ಅಂದರೆ ಈ ವರ್ಷದ ಕರ್ನಾಟಕದ ಬಜೆಟ್‌ನಲ್ಲಿ ಆರೋಗ್ಯಕ್ಕೆ ಕೊಟ್ಟಿರುವುದಕ್ಕಿಂತಲೂ (14,368 ಕೋಟಿ ರೂ) ಮೂರು ಪಟ್ಟು ಜಾಸ್ತಿ. ಗ್ರಾಮೀಣಾಭಿವೃದ್ಧಿಗೆ ಕೊಟ್ಟಿರುವದಕ್ಕಿಂತಲೂ (9,275 ಕೋಟಿ ರೂ) ನಾಲ್ಕು ಪಟ್ಟು ಜಾಸ್ತಿ ಮತ್ತು ಶಿಕ್ಷಣಕ್ಕೆ ಕೊಟ್ಟಿರುವುದಕ್ಕಿಂತಲೂ (8,000 ಕೋಟಿ ರೂ) ಜಾಸ್ತಿ ಹಣವಾಗಿದೆ. ರಸ್ತೆ, ನೀರಾವರಿಗೂ ಇಷ್ಟು ಹಣವನ್ನು ಸರ್ಕಾರ ನೀಡಿಲ್ಲ. ಆದರೆ ಜನರ ತೆರಿಗೆಯಾದ, ಸಾರ್ವಜನಿಕರ ಕಲ್ಯಾಣಕ್ಕೆ ಬಳಕೆಯಾಗಬೇಕಾದ 40,000 ಕೋಟಿ ರೂ.ಹಣವನ್ನು ಕೆಲವೇ ಕೆಲವು ಭ್ರಷ್ಟಾಚಾರಿಗಳು ತಿಂದುಹಾಕುತ್ತಿರುವುದು ದೊಡ್ಡ ದುರಂತವಾಗಿದೆ.

ಜನರು ದುಬಾರಿ ತೆರಿಗೆ ತೆತ್ತರೂ ಸಹ ರಸ್ತೆ, ಶಾಲೆ-ಆಸ್ಪತ್ರೆ, ನೀರಾವರಿಯಂತಹ ಉತ್ತಮ ಮೂಲ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. 40% ಕಮಿಷನ್ ಕೊಟ್ಟು, ತಾನೊಂದಿಷ್ಟು ಲಾಭ ಇಟ್ಟುಕೊಂಡ ಗುತ್ತಿಗೆದಾರ ಮಾಡುವ ಕಳಪೆ ಕಾಮಗಾರಿಯಲ್ಲಿ ನಿರ್ಮಿಸಿದ ರಸ್ತೆಗಳು, ಕಟ್ಟಡಗಳು ಖರೀದಿಸಿದ ಉಪಕರಣಗಳು ಬೇಗನೇ ಹಾಳಾಗುತ್ತವೆ. ಹದಗೆಟ್ಟ ರಸ್ತೆಗಳಿಂದ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಸವಾರರು ಸಾವನ್ನಪ್ಪುತ್ತಿರುವುದನ್ನು ನೋಡುತ್ತಿದ್ದೇವೆ. ಅಷ್ಟೇ ಅಲ್ಲದೆ ಮತ್ತು ಅವುಗಳ ರಿಪೇರಿಗೆ, ಪುನರ್ ನಿರ್ಮಾಣಕ್ಕೆಂದು ಸರ್ಕಾರ ಜನರ ಬಳಿಯಿಂದಲೇ ದುಬಾರಿ ತೆರಿಗೆ ಸಂಗ್ರಹಿಸುತ್ತದೆ. ಈ ಸುಳಿಗೆ ಜನರು ಸಿಕ್ಕಿಕೊಳ್ಳಲಿದ್ದಾರೆ.

ಹಣಕಾಸಿನ ಕೊರತೆಯ ನೆಪವೊಡ್ಡಿ ಸಾವಿರಾರು ಸರ್ಕಾರಿ ಉದ್ಯೋಗಗಳನ್ನು ತುಂಬದೇ ಖಾಲಿ ಬಿಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರಿಲ್ಲ, ಬೆಡ್‌ಗಳಿಲ್ಲ ಎಂಬುದನ್ನು ಕೊರೊನಾ ಸಾಂಕ್ರಾಮಿಕ ತೋರಿಸಿಕೊಟ್ಟಿದೆ. ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಮಿಕರು, ಗುತ್ತಿಗೆ ನೌಕರರು, ಅತಿಥಿ ಉಪನ್ಯಾಸಕರು ಸಂಬಳ ಹೆಚ್ಚಳಕ್ಕಾಗಿ ದಿನನಿತ್ಯ ಹೋರಾಡುತ್ತಿದ್ದಾರೆ. ಇದಕ್ಕೆಲ್ಲ ಹಣ ಇಲ್ಲ ಎನ್ನುವ ಸರ್ಕಾರದ ಸಚಿವರು 40% ಕಮಿಷನ್ ತಿನ್ನುತ್ತಿರುವುದು ವಿಪರ್ಯಾಸವಲ್ಲವೇ?

ಈ ಭ್ರಷ್ಟಾಚಾರ ತಡೆಯಲು ಸಾಧ್ಯವೇ?

ಟೆಂಡರ್‌ಗಳಲ್ಲಿ ಪಾರದರ್ಶಕತೆ ತರುವ ಕಾನೂನು ಕಳೆದ 20 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಮತ್ತು ಭ್ರಷ್ಟಾಚಾರ ಕಡಿಮೆಯಾಗಿಲ್ಲ. ಏಕಂದರೆ ಯಾವುದೇ ಗುತ್ತಿಗೆ ನೀಡುವಾಗ ಟೆಂಡರ್ ಎನ್ನುವುದು ಅದರ ಒಂದು ಭಾಗ ಅಷ್ಟೇ. ಆದರೆ ಟೆಂಡರ್ ಪೂರ್ವ ಮತ್ತು ಟೆಂಡರ್ ನಂತರದ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವನ್ನು ತಡೆಯಲು ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಮಾಜಿ ಐಎಎಸ್ ಅಧಿಕಾರಿಯಾಗಿರುವ ಮತ್ತು ಹಾಲಿ ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುತ್ತಿರುವ ರಘುನಂದನ್‌ರವರು.

ಟಿ ಆರ್ ರಘುನಂದನ್

ನ್ಯಾಯಪಥದೊಂದಿಗೆ ಮಾತನಾಡಿದ ಅವರು, “ಟೆಂಡರ್‌ನಲ್ಲಿ ಎಲ್1 ಎಂದು ಆಯ್ಕೆಯಾದ ನಂತರವೂ ನೇರವಾಗಿ ನಮಗೆ ವರ್ಕ್ ಆರ್ಡರ್ ಕೊಡುವ ಬದಲು, ಸಚಿವರ ಕಚೇರಿಯಿಂದ ’ಬನ್ನಿ ಮಾತಾಡೋಣ’ ಎಂದು ಕರೆ ಬರುತ್ತದೆ. ಅಂದರೆ ನಾವು ಅಲ್ಲಿ ಇಂತಿಷ್ಟು ಕಮಿಷನ್ ಕೊಡಬೇಕೆಂದೆ ಅರ್ಥ. ಇಲ್ಲದಿದ್ದಲ್ಲಿ ನಿಮಗೆ ವರ್ಕ್ ಆರ್ಡರ್ ಕೊಡದೆ ಸತಾಯಿಸಲಾಗುತ್ತದೆ. ಹಾಗಾಗಿ ಭ್ರಷ್ಟಾಚಾರ ಮಿತಿಮೀರಿದೆ” ಎನ್ನುತ್ತಾರೆ.

“ಈ ರೀತಿಯ ಭ್ರಷ್ಟಾಚಾರವನ್ನು ಕೊನೆಗೊಳಿಸುವುದಕ್ಕಾಗಿ ಕೆಲವು ಅಧಿಕಾರಿಗಳು public procurement billಅನ್ನು 2012ರಲ್ಲಿ ಮನಮೋಹನ್ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದರು. ಅದು ಒಂದು ಒಳ್ಳೆಯ ಮಸೂದೆ ಆಗಿತ್ತು. ಆದರೆ ಅದು ಕಾನೂನಾಗಿ ಅಂಗೀಕಾರವಾಗಲಿಲ್ಲ. ಅದರಲ್ಲಿ ಟೆಂಡರ್ ಮಾತ್ರವಲ್ಲದೆ, ಟೆಂಡರ್ ಪೂರ್ವ ಮತ್ತು ಟೆಂಡರ್ ನಂತರದ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವನ್ನು ತಡೆಯುವ ಅಂಶಗಳು ಇದ್ದವು. ಅದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದಲ್ಲಿ ಈ ಸಮಸ್ಯೆಗೆ ಪರಿಹಾರವಿದೆ” ಎಂದರು.

“ಈ ಗುತ್ತಿಗೆಯಲ್ಲಿ ಎಲ್ಲಾ ಸರ್ಕಾರಗಳು ಒಂದಷ್ಟು ಮಟ್ಟದ ಭ್ರಷ್ಟಾಚಾರದಲ್ಲಿ ಭಾಗಿಯಾಗಿವೆ. ಇಂದು ಬಿಜೆಪಿ ಸರ್ಕಾರ ನಡೆಸುತ್ತಿರುವುದು ಹೈಪರ್ ಭ್ರಷ್ಟಾಚಾರವಾಗಿದೆ. ಇಲ್ಲಿ ಸರಣಿ ರೀತಿಯಲ್ಲಿ ವ್ಯವಸ್ಥಿತವಾಗಿ ಕಮಿಷನ್ ದಂಧೆ ನಡೆಯುತ್ತಿದೆ. ಒಂದೆಡೆ ಚುನಾವಣಾ ಬಾಂಡ್‌ಗಳ ಮೂಲಕ ಮಾಡುವ ಬಿಜೆಪಿ ಗುತ್ತಿಗೆಯಲ್ಲಿಯೂ ಮತ್ತು ಪಾಲಿಸಿ ಲೆವೆಲ್‌ಗಳಲ್ಲಿಯೂ ಭ್ರಷ್ಟಾಚಾರವನ್ನು ಲೀಗಲೈಸ್ ಮಾಡುತ್ತಿದೆ. ಆಪ್ ಹೊರತುಪಡಿಸಿ ಉಳಿದ ಯಾವ ಪಕ್ಷಗಳು ಭ್ರಷ್ಟಾಚಾರದ ಬಗ್ಗೆ ದನಿಯೆತ್ತುತ್ತಿಲ್ಲ. ಬದಲಿಗೆ ನಾವಿನ್ನು ಹಿಜಾಬ್-ಹಲಾಲ್ ಎಂಬ ಚರ್ಚೆಯಲ್ಲಿ ಮುಳುಗಿರುವುದು ದುರಂತ” ಎಂದರು.

“ಹಲವು ದೇಶಗಳಲ್ಲಿ ಭ್ರಷ್ಟಾಚಾರವನ್ನು ತಡೆಯುವದಕ್ಕಾಗಿ ಖರೀದಿ ಸಮಿತಿ ರಚಿಸಿ ಇಂಟಿಗ್ರಿಟಿ ಚೆಕ್ ಎಂದು ಮಾಡುತ್ತಾರೆ. ಅಂದರೆ ಯಾವುದೇ ಖರೀದಿ ತೀರ್ಮಾನವನ್ನು ಒಬ್ಬರು ಮಾಡದೇ ಸಮಿತಿ ಮಾಡಬೇಕಿರುತ್ತದೆ. ಇನ್ನು ಆ ಸಮಿತಿ ರಚಿಸುವಾಗಲೇ ಅದರಲ್ಲಿ ಯಾರು ಯಾರು ಇರಬೇಕೆಂದು ಇಂಟಿಗ್ರಿಟಿ ಚೆಕ್ ನಡೆಸಲಾಗುತ್ತಿದೆ. ಇದನ್ನು ಭಾರತದಲ್ಲಿಯೂ ಕಾನೂನಾಗಿ ತರಬೇಕು” ಎಂದು ರಘುನಂದನ್‌ರವರು ತಿಳಿಸಿದರು.

ಇದು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ-ಅವಮಾನ

40% ಕಮಿಷನ್ ವಿಚಾರ ಎಂದರೆ ಇದು ಕರ್ನಾಟಕಕ್ಕೆ ಆಗುತ್ತಿರುವ ಘೋರ ಅನ್ಯಾಯವಾಗಿದೆ. ನಮ್ಮನ್ನು ರಸ್ತೆಯಲ್ಲಿ ನಿಲ್ಲಿಸಿ, ನಮ್ಮ ಬಳಿಯ ದುಡ್ಡನ್ನು ದೋಚುವುದಕ್ಕೂ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ ಎನ್ನುತ್ತಾರೆ ಜಾಗೃತ ಕರ್ನಾಟಕ ಸಂಘಟನೆಯ ಸಂಚಾಲಕರಾದ ರಾಜಶೇಖರ್ ಅಕ್ಕಿಯವರು.

“’ನಾವು 40% ಕಮಿಷನ್ ತೆಗೆದುಕೊಂಡು ಭ್ರಷ್ಟಾಚಾರ ಮಾಡ್ತೀವಿ, ನೀವು ರಸ್ತೆಗಳಲ್ಲಿಯ ಗುಂಡಿಗಳಲ್ಲಿ ಬಿದ್ದು ಸಾಯಿರಿ’, ’ನಾವು 40% ಕಮಿಷನ್ ತೆಗೆದುಕೊಂಡು ಭ್ರಷ್ಟಾಚಾರ ಮಾಡ್ತೀವಿ, ನೀವು ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲದೇ ರಸ್ತೆಯಲ್ಲಿಯೇ ಪ್ರಾಣಬಿಡಿ, ’ನಾವು 40% ಕಮಿಷನ್ ತೆಗೆದುಕೊಂಡು ಭ್ರಷ್ಟಾಚಾರ ಮಾಡ್ತೀವಿ, ಸರಕಾರಿ ಶಾಲೆಗಳನ್ನು ಮುಚ್ತೀವಿ, ನೀವು ಲಕ್ಷಲಕ್ಷ ಕೊಟ್ಟು ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸಿ, ’ನಾವು 40% ಕಮಿಷನ್ ತೆಗೆದುಕೊಂಡು ಭ್ರಷ್ಟಾಚಾರ ಮಾಡ್ತೀವಿ, ನೀವು ತೆಪ್ಪಗಿರಿ, ಮಾತನಾಡಿದರೆ ಕಪಾಳಕ್ಕೆ ಕೊಡ್ತೀವಿ’ ಎಂದು ಹೇಳ್ತಿದಾರೆ. ಕರ್ನಾಟಕ ಈ ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಗಟ್ಟಿ ದನಿಯಲ್ಲಿ ಹೇಳಬೇಕಿದೆ. ಜನರ ಭಾವನೆಗಳಿಗೆ ಮನ್ನಣೆ ನೀಡಿ, ಅವನ್ನು ಮುಖ್ಯವಾಹಿನಿಗೆ ತರಬೇಕಿದೆ. ಆ ಕಾರಣಕ್ಕಾಗಿ ಜಾಗೃತ ಕರ್ನಾಟಕ ರಾಜ್ಯಾದ್ಯಂತ ಕ್ಯಾಂಪೇನ್ ನಡೆಸಲಿದೆ. ಭ್ರಷ್ಟರಿಗೆ ಪಾಠ ಕಲಿಸಲಿದೆ ಹಾಗೂ ಕರ್ನಾಟಕ ಅವಮಾನವನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ” ಎಂದು ತಿಳಿಸಿದರು.

ಹೋರಾಟಕ್ಕಿಳಿದ ಗುತ್ತಿಗೆದಾರರು: ಜನರು ಎಚ್ಚೆತ್ತುಕೊಳ್ಳುವುದು ಯಾವಾಗ?

“ಕಳಪೆ ಕಾಮಗಾರಿಗೆ ಜನ ಗುತ್ತಿಗೆದಾರರನ್ನು ಹೊಣೆ ಮಾಡುತ್ತಾರೆ. ಆದರೆ ಗುತ್ತಿಗೆದಾರರಿಂದ ಸರ್ಕಾರ 40% ಕಮಿಷನ್ ದೋಚುತ್ತಿದೆ. ಇಂತ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಗುತ್ತಿಗೆದಾರರ ಸಹಿಸುವುದಿಲ್ಲ. ಮೇ 11ರಂದು ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತಿದ್ದೇವೆ. ಆ ನಂತರ ಒಂದು ತಿಂಗಳ ಕಾಲ ಎಲ್ಲಾ
ಕಾಮಗಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ. ಮೇ 25 ರಂದು 50,000ಕ್ಕೂ ಹೆಚ್ಚು ಗುತ್ತಿಗೆದಾರರು ಸೇರಿ ಸಮಾವೇಶ ನಡೆಸುತ್ತೇವೆ” ಎನ್ನುತ್ತಾರೆ ಡಿ.ಕೆಂಪಣ್ಣನವರು.

ಬಸವರಾಜ ಬೊಮ್ಮಾಯಿ

ಸ್ವಿಸ್ ಬ್ಯಾಂಕ್‌ನಲ್ಲಿರುವ ಮತ್ತು ಭಾರತದಲ್ಲಿರುವ ಕಪ್ಪು ಹಣವನ್ನು ಭಾರತದ ಬೊಕ್ಕಸಕ್ಕೆ ತಂದು ಹಾಕಿದರೆ, ಚಿನ್ನವಾಗಿ ಕನ್ವರ್ಟ್ ಮಾಡಿದರೆ ದೇಶದ ಎಲ್ಲಾ ರಸ್ತೆಗಳನ್ನು ಚಿನ್ನದಲ್ಲಿ ನಿರ್ಮಿಸಬಹುದು ಎಂದು ಅವಿವೇಕಿಯೊಬ್ಬ ಭಾಷಣ ಬಿಗಿದು, ಅದಕ್ಕಾಗಿ ನೀವೆಲ್ಲರೂ ಮೋದಿಯವರನ್ನು ಪ್ರಧಾನಿ ಮಾಡಬೇಕೆಂದು ಕೇಳಿಕೊಳ್ಳುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಂತೆಯೆ ಜನ ಮೋದಿಯವರನ್ನು ಪ್ರಧಾನಿ ಮಾಡಿದ ನಂತರ ಚಿನ್ನದ ರಸ್ತೆ ಇರಲಿ, ಮಾಮೂಲಿ ರಸ್ತೆ ಮಾಡುವ ದುಡ್ಡಿನಲ್ಲಿಯೂ ಬಿಜೆಪಿಯವರು 40% ಕಮಿಷನ್ ತಿನ್ನುತ್ತಿದ್ದಾರೆ. ನಾನು ತಿನ್ನೋಲ್ಲ, ಬೇರೆಯವರು ತಿನ್ನಲು ಬಿಡುವುದಿಲ್ಲ ಎಂದು ಭಾಷಣ ಮಾಡಿದ ಮೋದಿಯವರು ಈಗ ಕಣ್ಮುಚ್ಚಿ ಕುಳಿತಿದ್ದಾರೆ. ಇದು ಹೀಗೆ ಮುಂದುವರೆದಲ್ಲಿ ರಾಜ್ಯ ಮತ್ತು ದೇಶ ಸಾಲದ ಸುಳಿಗೆ ಸಿಲುಕಿ ಈಗ ಶ್ರೀಲಂಕಾ ಎದುರಿಸುತ್ತಿರುವ ಪರಿಸ್ಥಿತಿಗಿಂತ ಹೀನಾಯ ಮಟ್ಟಕ್ಕೆ ತಲುಪುತ್ತದೆ. ಅದಕ್ಕೂ ಮುಂಚೆಯೇ ಜನತೆ ಎಚ್ಚೆತ್ತುಕೊಂಡು ದನಿ ಎತ್ತಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಸಂತೋಷ್‌ ಸಾವು ಪ್ರಕರಣ: ಆರೋಪಿ ನಂ.1 ಈಶ್ವರಪ್ಪನವರಿಂದ ಅಧಿಕೃತ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...