ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಗುಜರಾತ್‌ನ ಬುಡಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ಕಾರ್ಯಕ್ರಮಕ್ಕೆ 50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೋಮವಾರ (ಜ.19) ಆರೋಪಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್‌ಟಿಐ ಮಾಹಿತಿಯನ್ನು ಉಲ್ಲೇಖಿಸಿದ ಕೇಜ್ರಿವಾಲ್, 50 ಕೋಟಿಯಲ್ಲಿ 2 ಕೋಟಿ ರೂಪಾಯಿಯನ್ನು ಸಮೋಸ ವಿತರಣೆಗೆ ಮಾತ್ರ ಖರ್ಚು ಮಾಡಲಾಗಿದೆ ಎಂದಿದ್ದಾರೆ.
“ಆದಿವಾಸಿ ಪ್ರದೇಶಗಳು ಇನ್ನೂ ಅತ್ಯಂತ ಹಿಂದುಳಿದಿವೆ? ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತಿದ್ದರೂ ಏಕೆ ಬದಲಾವಣೆ ಆಗುತ್ತಿಲ್ಲ? ನಾವು ಹಣವನ್ನು ಪ್ರಾಮಾಣಿಕವಾಗಿ ಖರ್ಚು ಮಾಡಿದರೆ, ಅದ್ಭುತ ಆಸ್ಪತ್ರೆಗಳನ್ನು ಕಟ್ಟಬಹುದು, ಉತ್ತಮ ಶಾಲೆಗಳನ್ನು ತೆರೆಯಬಹುದು, ಉಚಿತ ವಿದ್ಯುತ್ ಒದಗಿಸಬಹುದು, ಉತ್ತಮ ರಸ್ತೆಗಳನ್ನು ನಿರ್ಮಿಸಬಹುದು. ಆದರೆ, ಆದಿವಾಸಿಗಳಿಗೆ ಹಣ ಸರಿಯಾಗಿ ತಲುಪುತ್ತಿಲ್ಲ ಎಂದು ಕೇಜ್ರಿವಾಲ್ ತಮ್ಮ ಮೂರು ದಿನಗಳ ಗುಜರಾತ್ ಭೇಟಿಯ ಕೊನೆಯ ದಿನದಂದು ವಡೋದರಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
ಎಎಪಿಯ ದೇದಿಯಾಪಾಡಾದ ಶಾಸಕ ಚೈತರ್ ವಾಸವ ಅವರು ಆರ್‌ಟಿಐ ಮೂಲಕ ಪಡೆದ ಮಾಹಿತಿಯನ್ನು ಕೇಜ್ರಿವಾಲ್ ಉಲ್ಲೇಖಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯನ್ನು ಆಯೋಜಿಸಲು ನರ್ಮದಾ ಜಿಲ್ಲಾಡಳಿತವು 50 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಹೇಳಿದ್ದಾರೆ ಎಂಬುವುದಾಗಿ ವರದಿಯಾಗಿದೆ.
2025ರ ನವೆಂಬರ್ 15 ರಂದು ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಗುಜರಾತ್‌ನ ನರ್ಮದಾ ಜಿಲ್ಲೆಯ ದೇದಿಯಾಪಾಡಾದಲ್ಲಿ ಆಯೋಜಿಸಿದ್ದ ‘ಜನಜಾತೀಯ ಗೌರವ್ ದಿವಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದರು.
“ದೇಶದ ಪ್ರಧಾನಿ ಬಂದಿದ್ದು ಒಳ್ಳೆಯದೇ ಆಯ್ತು, ಅದಕ್ಕಾಗಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದಿವಾಸಿ ನಿಧಿಯಿಂದ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂದು ವಾಸವ ಅವರು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದರು. ಜಿಲ್ಲಾಡಳಿತ 50 ಕೋಟಿ ರೂ. ಖರ್ಚು ಮಾಡಿದೆ ಎಂದು ಆರ್‌ಟಿಐ ಪ್ರತಿಕ್ರಿಯೆಯಿಂದ ತಿಳಿದುಬಂದಿದೆ. ಅದರಲ್ಲಿ 5 ಕೋಟಿ ರೂ. ಪೆಂಡಾಲ್‌ಗೆ, 7 ಕೋಟಿ ರೂ. ಬಸ್‌ಗಳಿಗೆ ಮತ್ತು 2 ಕೋಟಿ ರೂ. ಸಮೋಸಗೆ ಖರ್ಚು ಮಾಡಲಾಗಿದೆ. ಬುಡಕಟ್ಟು ನಿಧಿಯಿಂದ 2 ಕೋಟಿ ರೂ. ಮೌಲ್ಯದ ಸಮೋಸವನ್ನು ತಿಂದವರು ಯಾರು? ಕೇಂದ್ರ ಸರ್ಕಾರದ ಹಣವನ್ನು ಏಕೆ ಬಳಸಿಲ್ಲ? ಪ್ರಧಾನಿಯವರು ಸಮೋಸಗೆ 20 ಕೋಟಿ ಅಥವಾ 30 ಕೋಟಿ ರೂ. ಖರ್ಚು ಮಾಡಬಹುದಿತ್ತು. ಆದರೆ, ಕೇಂದ್ರ ನಿಧಿಯಿಂದ ಏಕೆ ಖರ್ಚು ಮಾಡಿಲ್ಲ? 2 ಕೋಟಿ ರೂ.ಗಳಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ ಅನೇಕ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಿರ್ಮಿಸಬಹುದಿತ್ತು” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ವಡೋದರಾದ ಐವರು ಹಾಲಿ ಬಿಜೆಪಿ ಶಾಸಕರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಪತ್ರ ಬರೆದಿರುವುದನ್ನು ಉಲ್ಲೇಖಿಸಿದ ಕೇಜ್ರಿವಾಲ್, ಅಧಿಕಾರಶಾಹಿ ತಮ್ಮ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ದೂರಿದ್ದಾರೆ.
“ವಡೋದರಾದ ಬಿಜೆಪಿ ಶಾಸಕರಾದ ಶೈಲೇಶ್ ಮೆಹ್ತಾ, ಕೇತನ್ ಇನಾಮದಾರ್, ಧರ್ಮೇಂದ್ರ ಸಿಂಗ್ ವಘೇಲಾ, ಅಕ್ಷಯ್ ಪಟೇಲ್ ಮತ್ತು ಚೈತನ್ಯ ಸಿಂಗ್ ಜಾಲಾ ಮುಖ್ಯಮಂತ್ರಿಗೆ ಪತ್ರ ಬರೆದು, ಅಧಿಕಾರಿಗಳು ತಮ್ಮ ಮನವಿಗಳನ್ನು ಕೇಳುತ್ತಿಲ್ಲ ಎಂದು ಹೇಳಿದ್ದಾರೆ. ನನಗೆ ತಿಳಿದಿರುವ ಮಾಹಿತಿ ಪ್ರಕಾರ, ಪತ್ರ ಸ್ವೀಕರಿಸಿರುವ ಮುಖ್ಯಮಂತ್ರಿ, “ಅಧಿಕಾರಿಗಳು ಸ್ವತಃ ನನ್ನ ಮಾತೇ ಕೇಳುತ್ತಿಲ್ಲ” ಎಂದಿದ್ದಾರೆ. ಶಾಸಕರ ಪತ್ರವು ಆಡಳಿತ ವ್ಯವಸ್ಥೆಯಲ್ಲಿನ ಕುಸಿತವನ್ನು ಎತ್ತಿ ತೋರಿಸಿದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ಸಾಮಾನ್ಯ ಜನರು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಳ್ಳುವುದು ಕೂಡ ಯುದ್ದದಂತಾಗಿದೆ ಎಂದು ಸ್ವತಃ ಬಿಜೆಪಿ ಶಾಸಕರೇ ಹೇಳಿದ್ದಾರೆ. ಇದು ಕಳೆದ 30 ವರ್ಷಗಳಿಂದ ಬಿಜೆಪಿಗೆ ಮತ ಹಾಕಿದ್ದರ ಪರಿಣಾಮ” ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.


