ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿ, ಧರ್ಮದ ಅಫೀಮನ್ನು ಯುವಜನರಲ್ಲಿ ತುಂಬುವ, ಸಮಾಜದ ವಿಚ್ಛಿದ್ರಕಾರಿ ಸಂಘಟನೆ ಆರ್‌ಎಸ್‌ಎಸ್ ತಾಲಿಬಾನ್ ಸಂಘಟನೆಗಿಂತಲೂ ಹೆಚ್ಚು ಅಪಾಯಕಾರಿ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಉದ್ದೇಶಿಸಿ ಪೋಸ್ಟ್ ಹಾಕಿರುವ ಹರಿಪ್ರಸಾದ್,”ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಸಂಘ ಪರಿವಾರದ ಆಳ ಅಗಲ ಅಷ್ಟೇ ಅಲ್ಲ, ಅದರ ಸುತ್ತಳತೆಯನ್ನೂ ಬಲ್ಲೆ”ಎಂದಿದ್ದಾರೆ.
ಆರ್‌ಎಸ್‌ಎಸ್ ನೂರು ವರ್ಷಗಳಲ್ಲಿ ನಡೆಸಿರುವ ಸಮಾಜ ಸೇವೆಯ ಎಣಿಕೆಯ ಲೆಕ್ಕ ನಂತರ ಕೊಡುವಿರಂತೆ, ಸಂಘ ನಡೆಸಿದ ಸಮಾಜ ಘಾತುಕ ಕೃತ್ಯಗಳ ದಾಖಲೆಗಳೇ ಹೇಳುವ ಲೆಕ್ಕಾ ಗೊತ್ತಾ? ಸಮಾಜ ಸೇವೆ ಎಂಬುವುದು ಕೇವಲ ಮುಖವಷ್ಟೇ, ಅದರ ಹಿಂದಿನ ಮುಖವಾಡಗಳು ಸಂವಿಧಾನಬಾಹೀರ ಚಟುವಟಿಕೆಗಳಿಗೆ ಲೆಕ್ಕವಿಲ್ಲ. ಅಗೆದಷ್ಟು, ಬಗೆದಷ್ಟು ಕರಾಳವಾಗಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.
ಆರ್‌ಎಸ್‌ಎಸ್ ಶಾಖೆಯಲ್ಲಿ ಮಾತ್ರ ಪ್ರವೇಶ ಇರುವ ವಿಜಯೇಂದ್ರ ಅವರೇ ಸಂಘವನ್ನು ಸಮರ್ಥಿಸುವ ಮೊದಲು ನನ್ನ ಪ್ರಶ್ನೆಗೆ ಉತ್ತರಿಸುವ ಧೈರ್ಯ ಮಾಡಿ ಎಂದು ಸವಾಲ್ ಹಾಕಿದ್ದಾರೆ.
ಮೂಲಭೂತವಾಗಿ ಆರ್‌ಎಸ್‌ಎಸ್ ಎನ್ನುವುದು ಏನು? ಅದೊಂದು ಸಾಂಸ್ಕೃತಿಕ ಸಂಘಟನೆಯೇ? ಸಾಮಾಜಿಕ ಸೇವಾ ಸಂಸ್ಥೆಯೇ? ಸಾರ್ವಜನಿಕ ದತ್ತಿಯೇ? ಗುಪ್ತ ರಾಜಕೀಯ ಉದ್ದೇಶ ಹೊಂದಿರುವ ಕಾರ್ಯಕರ್ತರ ಕೂಟವೇ? ಇಲ್ಲವೇ, ಕೇವಲ ಹಿಂದೂ ಸಂಘಟನೆಯೇ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸಮಾಜ ಸೇವೆಯ ಮುಖ ಹೊತ್ತಿರುವ ಆರ್‌ಎಸ್‌ಎಸ್ ನೊಂದಣಿ ಸಂಘಟನೆಯೇ? ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಂಘಟನೆಯ ಹಣದ ಮೂಲ ಯಾವುದು? ಜನರು ನೀಡುವ ದೇಣಿಗೆಯ ಲೆಕ್ಕಪತ್ರ ಒಮ್ಮೆಯಾದರೂ ಬಹಿರಂಗಗೊಳಿಸಿದ್ದೀರಾ? ಚೆಕ್ ಮೂಲಕ ಲಂಚ ಪಡೆಯುವ ನಿಮಿಗೆ ಸಂಘದ ಲೆಕ್ಕಪತ್ರ ಕೇಳುವ ಧೈರ್ಯ ಎಲ್ಲಿಂದ ಬರಬೇಕು ಬಿಡಿ ಎಂದಿದ್ದಾರೆ.
ಹಿಂದೂ ನಾವೆಲ್ಲ ಒಂದು ಎನ್ನುತ್ತಲೇ ಚಾತುರ್ವರ್ಣ ವ್ಯವಸ್ಥೆಯನ್ನು ಪಾಲಿಸುವ ಸಂಘಕ್ಕೆ ಹಿಂದೂ ಎನ್ನುವುದು ಕೇವಲ ರಾಜಕೀಯದ ಲಾಭ ಪಡೆಯಲು ಬಳಸುವ ಆಯುಧ ಅಷ್ಟೇ. ನಮಗೆ ರಾಜಕೀಯ ಎದುರಾಳಿ ಬಿಜೆಪಿ ಅಲ್ಲವೇ ಅಲ್ಲ, ರಾಜಕೀಯದ ಮುಖವಾಡ ಹೊಂದಿರುವ ಆರ್‌ಎಸ್‌ಎಸ್ ನಮ್ಮ ಸೈದ್ದಾಂತಿಕ ವಿರೋಧಿ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆರ್‌ಎಸ್‌ಎಸ್ ಬಗ್ಗೆ ಮಾತಾಡುವುದಕ್ಕೆ ಧೈರ್ಯ ಮಾತ್ರವಲ್ಲ, ಪ್ರಮಾಣಿಕತೆಯೂ ಇದೆ. ಅದರ ಹಿಡನ್ ಅಜೆಂಡಾಗಳನ್ನ ಸ್ಷಷ್ಟವಾಗಿ ಅರಿತಿದ್ದೇನೆ. ಸಂಘದ ಬಗ್ಗೆ ಮಾತಾಡಲು ಪ್ರೇರೇಪಿಸಿ ನನ್ನ ಮುಂದೆ ಸೈದ್ದಾಂತಿಕವಾಗಿ ಬೆತ್ತಲಾಗಬೇಡಿ. ರಾಜಕೀಯದ ಎಳಸುಗಾರಿಕೆ ಬಿಟ್ಟು ಒಂದಿಷ್ಟು ಪ್ರಬುದ್ಧತೆಗೆ ತೆರೆದುಕೊಳ್ಳಿ ಎಂದು ವಿಜಯೇಂದ್ರ ಅವರಿಗೆ ಕುಟುಕಿದ್ದಾರೆ.
ಬಿಹಾರದಲ್ಲಿ ‘ವೋಟರ್ ಅಧಿಕಾರ್’ ಯಾತ್ರೆಗೆ ಚಾಲನೆ ನೀಡಿದ ರಾಹುಲ್ ಗಾಂಧಿ: ದೇಶದಾದ್ಯಂತ ಮತಗಳ್ಳನ ನಡೆದಿದೆ ಎಂದು ಆರೋಪ


