ರಷ್ಯಾ ಸರ್ಕಾರವು ತನ್ನದೇ ಆದ ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದ್ದು, 2025ರ ಆರಂಭದಲ್ಲಿ ಅದನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
“ಕ್ಯಾನ್ಸರ್ ವಿರುದ್ಧ ರಷ್ಯಾ ತನ್ನದೇ ಆದ mRNA ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಅದನ್ನು ರೋಗಿಗಳಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ಜನರಲ್ ಡೈರೆಕ್ಟರ್ ಆಂಡ್ರೆ ಕಪ್ರಿನ್ ರೇಡಿಯೊ ರೊಸ್ಸಿಯಾಗೆ ತಿಳಿಸಿದ್ದಾರೆ” ಎಂದು ರಷ್ಯಾದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ.
“ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಅದು ಕ್ಯಾನ್ಸರ್ ಗೆಡ್ಡೆಯ (ಟ್ಯೂಮರ್) ಬೆಳವಣಿಗೆ ಮತ್ತು ಸಂಭಾವ್ಯ ಮೆಟಾಸ್ಟೇಸ್‌ಗಳನ್ನು ನಿಗ್ರಹಿಸಿರುವುದನ್ನು ತೋರಿಸಿದೆ ಎಂದು” ಗಮಾಲೆಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿಯ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ ತಿಳಿಸಿರುವುದಾಗಿ TASS ವಿವರಿಸಿದೆ.
ಈ ವರ್ಷದ ಆರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು,”ನಾವು ಕ್ಯಾನ್ಸರ್ ಲಸಿಕೆಗಳು ಮತ್ತು ಹೊಸ ಪೀಳಿಗೆಯ ಇಮ್ಯುನೊಮಾಡ್ಯುಲೇಟರಿ ಔಷಧಿಗಳ ಸೃಷ್ಟಿಗೆ ಬಹಳ ಹತ್ತಿರವಾಗಿದ್ದೇವೆ” ಎಂದು ಹೇಳಿದ್ದರು.
mRNA ಲಸಿಕೆ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉತ್ಪಾದಿಸಲು ಮೆಸೆಂಜರ್ RNA (mRNA) ಎಂಬ ಅಣುವಿನ ನಕಲನ್ನು ಬಳಸುತ್ತದೆ. ಈಗ, ರಷ್ಯಾದ ವಿಜ್ಞಾನಿಗಳು ಕ್ಯಾನ್ಸರ್ ವಿರುದ್ಧ mRNA ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ರಷ್ಯಾದ ಎಲ್ಲಾ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ವಿತರಿಸಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಅಂಬೇಡ್ಕರ್‌ಗೆ ಅವಮಾನ | ಅಮಿತ್ ಶಾ ವಿರುದ್ಧ ಟಿಎಂಸಿಯಿಂದ ಹಕ್ಕುಚ್ಯುತಿ ನೋಟಿಸ್


