ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಬಾಂದ್ರಾ ಮನೆಯಲ್ಲಿ ಗುರುವಾರ ಮುಂಜಾನೆ ಅಪರಿಚಿತ ವ್ಯಕ್ತಿಯೊಬ್ಬ ಕಳ್ಳತನ ಯತ್ನ ನಡೆಸಿದ್ದು, ಈ ವೇಳೆ ಕನಿಷ್ಠ ಆರು ಬಾರಿ ನಟನಿಗೆ ಚಾಕುವಿನಿಂದ ಇರಿದಿದ್ದಾನೆ.
ದಾಳಿಯಿಂದ ಸೈಫ್ ಆಲಿ ಖಾನ್ ಅವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಬೆಳಗಿನ ಜಾವ 3.30 ಕ್ಕೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಮತ್ತು ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ವೈದ್ಯರ ಪ್ರಕಾರ, ಚಾಕುವಿನಿಂದ ಆದ ಒಂದು ಗಾಯವು ನಟನ ಬೆನ್ನುಹುರಿಯ ಹತ್ತಿರದಲ್ಲಿದೆ.
ಪೊಲೀಸರ ಪ್ರಕಾರ, ಶಂಕಿತ ಸೈಫ್ ಅಲಿ ಖಾನ್ ಅವರ ಮನೆಗೆ ಪ್ರವೇಶಿಸಿದಾಗ ಅವರಿಬ್ಬರ ನಡುವೆ ಜಗಳವಾಗಿದ್ದು, ಈ ಸಮಯದಲ್ಲಿ ನಟನಿಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ಸಮಯದಲ್ಲಿ ನಟನ ಕೆಲವು ಕುಟುಂಬ ಸದಸ್ಯರು ಮನೆಯಲ್ಲಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ಪತ್ತೆಹಚ್ಚಲು ಮತ್ತು ಆತನ ಬಂಧನವನ್ನು ಖಚಿತಪಡಿಸಿಕೊಳ್ಳಲು ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
“ನಟ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬರು ನುಗ್ಗಿದ್ದಾನೆ. ನಟ ಮತ್ತು ವ್ಯಕ್ತಿಯಿಬ್ಬರೂ ಜಗಳವಾಡಿದ್ದಾರೆ. ನಟ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದು, ತನಿಖೆ ನಡೆಯುತ್ತಿದೆ” ಎಂದು ಸ್ಥಳೀಯ ಪ್ರದೇಶದ ಉಪ ಪೊಲೀಸ್ ಆಯುಕ್ತ ದೀಕ್ಷಿತ್ ಗೆಡಮ್ ಅವರು ಈ ವಿಷಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಸೈಫ್ ಅಲಿ ಖಾನ್ ಅವರ ತಂಡವು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅವರು ‘ಮಾಧ್ಯಮಗಳು ಮತ್ತು ಅಭಿಮಾನಿಗಳು ತಾಳ್ಮೆಯಿಂದಿರಿ’ ಎಂದು ವಿನಂತಿಸಿದ್ದಾರೆ.
“ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಮಾಧ್ಯಮಗಳು ಮತ್ತು ಅಭಿಮಾನಿಗಳು ತಾಳ್ಮೆಯಿಂದಿರಿ ಎಂದು ನಾವು ವಿನಂತಿಸುತ್ತೇವೆ. ಇದು ಪೊಲೀಸ್ ವಿಷಯ; ಪರಿಸ್ಥಿತಿಯ ಕುರಿತು ನಾವು ನಿಮಗೆ ಮಾಹಿತಿ ನೀಡುತ್ತೇವೆ” ಎಂದು ಸೈಫ್ ಅಲಿ ಖಾನ್ ಅವರ ತಂಡವು ಹೇಳಿಕೆಯಲ್ಲಿ ತಿಳಿಸಿದೆ.
ದಾಳಿಯ ನಂತರ, ಲೀಲಾವತಿ ಆಸ್ಪತ್ರೆ ಹೇಳಿಕೆಯಲ್ಲಿ, ಸೈಫ್ ಅಲಿ ಖಾನ್ ಅವರಿಗೆ ಕನಿಷ್ಠ ಆರು ಬಾರಿ ಇರಿತಕ್ಕೊಳಗಾಗಿದ್ದು, ಎರಡು ಆಳವಾದ ಗಾಯಗಳಾಗಿವೆ ಎಂದು ತಿಳಿಸಿದೆ. ಇದಲ್ಲದೆ, ಚಾಕುವಿನಿಂದ ಆದ ಗಾಯಗಳಲ್ಲಿ ಒಂದು ಅವರ ಬೆನ್ನುಹುರಿಗೆ ತುಂಬಾ ಹತ್ತಿರದಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
“ಸೈಫ್ ಅಲಿ ಖಾನ್ ಅವರನ್ನು ಬಾಂದ್ರಾದಲ್ಲಿರುವ ಅವರ ಮನೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಇರಿದಿದ್ದು, ಬೆಳಗಿನ ಜಾವ 3.30 ಕ್ಕೆ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಅವರಿಗೆ ಆರು ಇರಿತಗಳಾಗಿದ್ದು, ಎರಡು ಆಳವಾಗಿದ್ದವು. ಇದರಲ್ಲಿ ಒಂದು ಬೆನ್ನುಮೂಳೆಯ ಹತ್ತಿರದಲ್ಲಿದೆ. ನರಶಸ್ತ್ರಚಿಕಿತ್ಸಕ ಡಾ. ನಿತಿನ್ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಡಾ. ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞೆ ಡಾ. ನಿಶಾ ಗಾಂಧಿ ನೇತೃತ್ವದ ವೈದ್ಯರ ತಂಡವು ಅವರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದೆ” ಎಂದು ಲೀಲಾವತಿ ಆಸ್ಪತ್ರೆಯ ಡಾ. ಉತ್ತಮಮಣಿ ತಿಳಿಸಿದ್ದಾರೆ.
ಇದನ್ನೂ ಓದಿ; ಜನವರಿ 19 ರಿಂದ ಇಸ್ರೇಲ್-ಹಮಾಸ್ ಕದನ ವಿರಾಮ ಒಪ್ಪಂದ ಜಾರಿ ಸಾಧ್ಯತೆ?


