ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗುಂಪಿನಿಂದ ಜೀವ ಬೆದರಿಕೆ ಇರುವ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಜೀವ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.
ಸಲ್ಮಾನ್ ಖಾನ್ ಅವರಿಂದ 5 ಕೋಟಿ ರೂಪಾಯಿ ಕೊಡಿಸುವಂತೆ ಮುಂಬೈ ಸಂಚಾರ ಪೊಲೀಸರಿಗೆ ಗುರುವಾರ ಮಧ್ಯಾಹ್ನ ವಾಟ್ಸಾಪ್ ಮುಖಾಂತರ ಬೆದರಿಕೆ ಸಂದೇಶ ಬಂದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಹೊಸದಾಗಿ ಬೆದರಿಕೆ ಸಂದೇಶ ಕಳುಹಿಸಿದವರಿಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದು, ಹಣ ಪಾವತಿಸದಿದ್ದರೆ ಸಲ್ಮಾನ್ ಖಾನ್ ಅವರ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ ಎಂಬುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮುಂಬೈನ ವರ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಬೆದರಿಕೆ ಮತ್ತು ಸುಲಿಗೆ ಪ್ರಕರಣ ದಾಖಲಿಸಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ, ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದೆ, ಲಾರೆನ್ಸ್ ಬಿಷ್ಣೋಯ್ ಜೊತೆಗಿನ ದೀರ್ಘಕಾಲದ ಸಂಘರ್ಷ ಅಥವಾ ದ್ವೇಷ ಕೊನೆಗೊಳಿಸಲು ನಟ ಸಲ್ಮಾನ್ ಖಾನ್ ಅವರಿಂದ 5 ಕೋಟಿ ರೂ. ಕೊಡಿಸುವಂತೆ ಬೇಡಿಕೆ ಇಡಲಾಗಿದೆ.
ಮುಂದುವರೆದು, ಈ ಸಂದೇಶವನ್ನು ಲಘುವಾಗಿ ಪರಿಗಣಿಸಬೇಡಿ. ಸಲ್ಮಾನ್ ಖಾನ್ ಬದುಕಲು ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ, ಅವರು 5 ಕೋಟಿ ರೂಪಾಯಿ ಪಾವತಿಸಬೇಕಾಗುತ್ತದೆ. ಹಣ ನೀಡದಿದ್ದರೆ, ಸಲ್ಮಾನ್ ಖಾನ್ ಸ್ಥಿತಿ ಬಾಬಾ ಸಿದ್ದಿಕ್ ಅವರಿಗಿಂತ ಕೆಟ್ಟದಾಗಿರಲಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ.
ಮುಂಬೈ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದ್ದಾರೆ. ಅಕ್ಟೋಬರ್ 12ರಂದು ನಿರ್ಮಲ್ ನಗರದಲ್ಲಿನ ತನ್ನ ಕಚೇರಿಯ ಹೊರಗೆ ಗುಂಡಿಕ್ಕಿ ಕೊಲ್ಲಲ್ಪಟ್ಟ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಹತ್ಯೆಯ ನಂತರ ಸಲ್ಮಾನ್ ಖಾನ್‌ಗೆ ಹೊಸ ಬೆದರಿಕೆ ಬಂದಿದೆ.
ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆಗಳು ಬಂದಿದ್ದವು. ಕಳೆದ ಏಪ್ರಿಲ್‌ನಲ್ಲಿ ನಟನ ಬಾಂದ್ರಾ ಮನೆಯ ಹೊರಗೆ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಗುಂಡು ಹಾರಿಸಿದ್ದರು.
ಜೂನ್‌ನಲ್ಲಿ ಬಿಷ್ಣೋಯ್ ಗ್ಯಾಂಗ್ ಖಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿತ್ತು ಎಂದು ನವಿ ಮುಂಬೈ ಪೊಲೀಸರು ಗುರುವಾರ ಬಹಿರಂಗಪಡಿಸಿದ್ದಾರೆ. ಸಲ್ಮಾನ್ ಹತ್ಯೆ ಅಣಿಯಾಗಿದ್ದ ಶೂಟರ್‌ಗಳಲ್ಲಿ ಒಬ್ಬನನ್ನು ಹರಿಯಾಣದ ಪಾಣಿಪತ್‌ನ ಸುಖಬೀರ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.\
ಇದನ್ನೂ ಓದಿ : ಬಿಜೆಪಿ ಟಿಕೆಟ್ ಕೊಡಿಸುವುದಾಗಿ ₹ 2 ಕೋಟಿ ಸುಲಿಗೆ ಆರೋಪ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರರ ವಿರುದ್ಧ ಎಫ್ಐಆರ್


