ಇನ್ನು ಮುಂದೆ ತಮಗಿಂತ ಮೇಲಿನ ಶ್ರೇಣಿಯ ಮತ್ತು ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದ ನಂತರ ಜೈಹಿಂದ್ ಹೇಳಬೇಕೆಂದು HAL ಠಾಣೆಯ ಇನ್ಸ್‌ಪೆಕ್ಟರ್ ಎಲ್ಲಾ ಸಿಬ್ಬಂದಿಗಳಿಗೆ ಸುತ್ತೋಲೆ ಕಳಿಸಿದ್ದಾರೆ.
HAL ಠಾಣೆಯ ಇನ್ಸ್‌ಪೆಕ್ಟರ್ ಮೋಹನ್ ಕುಮಾರ್ ತಮ್ಮ ಹೊರಡಿಸಿರುವ ಈ ಆದೇಶವು ಎಲ್ಲೆಡೆ ವೈರಲ್ ಆಗಿದ್ದು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.
“ಈ ಮೂಲಕ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸುವುದೇನೆಂದರೆ, ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಿ ರಾಷ್ಟ್ರೀಯ ಭಾವನೆಯ ಅಂಗವಾಗಿ ಜೈ ಹಿಂದ್ ಹೇಳುವ ಹೊಸ ಪದ್ದತಿಯನ್ನು ರೂಡಿಸಿಕೊಳ್ಳಲು ಸೂಚಿಸಲಾಗಿದ್ದು, ನಿಮ್ಮಿಂದ ಮೇಲಿನ ರ್‍ಯಾಂಕ್‌ನ ಸಿಬ್ಬಂದಿಗಳಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಿದ ನಂತರ ಜೈ ಹಿಂದ್ ಹೇಳಲು ಸೂಚಿಸಲಾಗಿದೆ” ಎಂದು ಜೂನ್ 05 ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದು ಕೇವಲ ಅವರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಕಳಿಸಿದ ಸುತ್ತೋಲೆಯಾಗಿದ್ದು, ವೈರಲ್ ಆಗುತ್ತದೆ ಎಂದು ತಿಳಿದಿರಲಿಲ್ಲ. ಸೈನ್ಯ ಸೇರಿದಂತೆ ಹಲವೆಡೆ ಈಗಾಗಲೇ ಜೈ ಹಿಂದ್ ಹೇಳುವ ಪದ್ಧತಿ ಜಾರಿಯಲ್ಲಿದೆ. ಇದರಿಂದ ರಾಷ್ಟ್ರೀಯ ಭಾವನೆ ಹೆಚ್ಚಾಗುತ್ತದೆ ಎಂದು ಇನ್ಸ್‌ಪೆಕ್ಟರ್ ಮೋಹನ್ ಕುಮಾರ್ ತಿಳಿಸಿದ್ದಾರೆ. ಅಲ್ಲದೇ ಇದು ರಾಷ್ಟ್ರೀಯ ಭಾವೈಕ್ಯತೆ ತರುವುದಕ್ಕಾಗಿ ಮಾಡಿದ ಸೂಚನೆಯಾಗಿದ್ದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸರು ದೇಶಕ್ಕಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ ಎಂದ ಮೇಲೆ ಅವರಲ್ಲಿ ದೇಶಪ್ರೇಮ, ರಾಷ್ಟ್ರೀಯ ಭಾವನೆ ಇದ್ದೇ ಇರುತ್ತದೆ ಅಲ್ಲವೇ? ಅದರಲ್ಲಿ ಸಂಶಯವೇಕೆ? ಈಗಿರುವಾಗ ಜೈಹಿಂದ್ ಹೇಳಿಸುವ ಅಗತ್ಯವೇನಿದೆ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.
ಇದನ್ನೂ ಓದಿ: ನಮಗೆ ಪಾಕಿಸ್ತಾನ, ಚೀನಾದ ಭೂಮಿ ಬೇಡ ಬದಲಿಗೆ ಶಾಂತಿ ಬೇಕು: ನಿತಿನ್ ಗಡ್ಕರಿ


