ಸಂಭಾಲ್ ಹಿಂಸಾಚಾರ ಸಂಬಂಧ ಪೊಲೀಸರ ಮೇಲೆ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ವಿಭಾಂಶು ಸುಧೀರ್ ಸೇರಿದಂತೆ 14 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಅಲಹಾಬಾದ್ ಹೈಕೋರ್ಟ್ ಆಡಳಿತಾತ್ಮಕ ಆದೇಶ ಹೊರಡಿಸಿದೆ. ಸುಧೀರ್ ಅವರನ್ನು ಸುಲ್ತಾನ್‌ಪುರದ ಸಿವಿಲ್ ನ್ಯಾಯಾಧೀಶರಾಗಿ (ಹಿರಿಯ ವಿಭಾಗ) ವರ್ಗಾಯಿಸಲಾಗಿದೆ.
ನವೆಂಬರ್ 2024ರ ಸಂಭಾಲ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸರ್ಕಲ್ ಆಫೀಸರ್ (ಸಿಒ) ಅನುಜ್ ಚೌಧರಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶನ ನೀಡಿ ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ ಸಿಜೆಎಂ ಸುಧೀರ್ ಅವರ ವರ್ಗಾವಣೆಯಾಗಿದೆ.
ನವೆಂಬರ್ 2024ರ ಸಂಭಾಲ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಭಾಲ್ ಸರ್ಕಲ್ ಆಫೀಸರ್ ಆಗಿದ್ದ ಅನುಜ್ ಚೌಧರಿ, ಸಂಭಾಲ್ ಕೊತ್ವಾಲಿ ಚಂದೌಸಿಯ ಆಗಿನ ಸ್ಟೇಷನ್ ಹೌಸ್ ಆಫೀಸರ್ ಅನುಜ್ ತೋಮರ್ ಮತ್ತು 15 ರಿಂದ 20 ಅಪರಿಚಿತ ಪೊಲೀಸ್ ಸಿಬ್ಬಂದಿ ವಿರುದ್ದ ಎಫ್‌ಐಆರ್ ದಾಖಲಿಸಲು ಸಿಜೆಎಂ ಸುಧೀರ್ ಅವರು ಪೊಲೀಸರಿಗೆ ನಿರ್ದೇಶನ ನೀಡಿದ್ದರು.
ಪೊಲೀಸರು ಕೊಲ್ಲುವ ಉದ್ದೇಶದಿಂದ ಗುಂಡಿಕ್ಕಿದ್ದು, ಇದರಿಂದ ಆಲಂ ಎಂಬ ಸ್ಥಳೀಯ ಯುವಕ ತೀವ್ರವಾಗಿ ಗಾಯಗೊಂಡಿದ್ದ. ಈ ಸಂಬಂಧ ಪೊಲೀಸರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಆತನ ತಂದೆ ಯಮೀನ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 173 (4) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಸಿಜೆಎಂ ವಿಭಾಂಶು ಸುಧೀರ್ ಅವರು ಪೊಲೀಸರ ಮೇಲೆ ಎಫ್‌ಐಆರ್‌ಗೆ ಆದೇಶಿಸಿದ್ದರು.
2024ರ ನವೆಂಬರ್ 24 ರಂದು ಶಾಹಿ ಜಾಮಾ ಮಸೀದಿ ಪ್ರದೇಶದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ನನ್ನ ಮಗ ಆಲಂ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು ಎಂದು ಯಾಮೀನ್ ಆರೋಪಿಸಿದ್ದರು. ಅರ್ಜಿಯ ಪ್ರಕಾರ, ಆಲಂ ರಸ್ಕ್ ಮತ್ತು ಬಿಸ್ಕತ್ತುಗಳನ್ನು ಮಾರಾಟ ಮಾಡಲು ತೆರಳಿದ್ದಾಗ ಗಲಭೆಯ ನಡುವೆ ಸಿಲುಕಿದ್ದರು. ಪೊಲೀಸರು ಅವರ ಮೇಲೆ ಗುಂಡು ಹಾರಿಸಿದ್ದರು.
ಪ್ರತ್ಯಕ್ಷದರ್ಶಿಗಳು ಮತ್ತು ಕುಟುಂಬಸ್ಥರ ಪ್ರಕಾರ, ಹಿಂಸಾಚಾರದಲ್ಲಿ ಕನಿಷ್ಠ ಐವರು ಮುಸ್ಲಿಮರು ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
ಭಯದಿಂದ ನನ್ನ ಮಗ ತಲೆಮರೆಸಿಕೊಂಡು ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾನೆ. ನಂತರ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾನೆ ಎಂದು ಯಾಮೀನ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ಜನವರಿ 9ರಂದು ನಡೆದ ವಿಚಾರಣೆಯ ನಂತರ, ನ್ಯಾಯಾಲಯವು ಎಲ್ಲಾ ಹೆಸರಿಸಲಾದ ಮತ್ತು ಹೆಸರಿಸದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಿಜೆಎಂ ವಿಭಾಂಶು ಸುಧೀರ್ ನಿರ್ದೇಶಿಸಿದ್ದರು.


