1878ರಲ್ಲಿ, ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸರ್ ರಾಬರ್ಟ್ ಸ್ಟುವರ್ಟ್ ಅವರು, 16ನೇ ಶತಮಾನದ ಮೊಘಲ್ ಯುಗದ ಸಂಭಾಲ್‌ನ ಶಾಹಿ ಜಾಮಾ ಮಸೀದಿಯನ್ನು 100 ವರ್ಷಗಳಿಗೂ ಹೆಚ್ಚು ಕಾಲ ಮಸೀದಿಯಾಗಿ ಬಳಸಲಾಗುತ್ತಿತ್ತು ಎಂದು ತೀರ್ಪು ನೀಡಿದ್ದರು. ಇದು ಮೂಲತಃ ಹಿಂದೂ ದೇವಾಲಯವಾಗಿತ್ತು ಎಂಬ ವಾದವನ್ನು ಅವರು ತಿರಸ್ಕರಿಸಿದ್ದರು. ಮಸೀದಿ ಸಮಿತಿಯ ಪರವಾಗಿ ಬಂದ ತೀರ್ಪು, ಮುಸ್ಲಿಂ ಅರ್ಜಿದಾರರು 12 ವರ್ಷಗಳಿಗೂ ಹೆಚ್ಚು ಸಮಯದಿಂದ ಮಸೀದಿ ಮೇಲೆ ನಿಯಂತ್ರಣ ಹೊಂದಿದ್ದಾರೆ ಎಂಬುವುದಾಗಿ ಹೇಳಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
1875ರಲ್ಲಿ ಚೆಡಾ ಸಿಂಗ್ ಎಂಬ ಅರ್ಚಕ ಮತ್ತು ಇತರರು ಮಸೀದಿ ವಾಸ್ತವವಾಗಿ ದೇವಾಲಯವಾಗಿದ್ದು, ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಅಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂದು ವಾದಿಸಿ ಪ್ರಕರಣ ದಾಖಲಿಸಿದಾಗ ಕಾನೂನು ವಿವಾದ ಪ್ರಾರಂಭವಾಯಿತು. ಈ ಸ್ಥಳವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯ ವಶಕ್ಕೆ ಬರುವ ಮೊದಲು, ಪ್ರಕರಣವು ನ್ಯಾಯಾಲಯಗಳ ಮೂಲಕ ಹೋಗಿ 1878ರ ತೀರ್ಪಿನಲ್ಲಿ ಕೊನೆಗೊಂಡಿತು. ನ್ಯಾಯಾಲಯದಲ್ಲಿ, ಹಳೆಯ ಕಟ್ಟಡವು ರಾಜ್ಯದ ಆಸ್ತಿಯಾಗಿದೆ. ಆದರೆ, ಮುಸ್ಲಿಮರು ಅದನ್ನು ಮಸೀದಿಯಾಗಿ ಬಳಸುತ್ತಿದ್ದಾರೆ ಎಂದು ಎರಡೂ ಪಕ್ಷಗಳು ಒಪ್ಪಿಕೊಂಡಿತ್ತು ಎಂದು ವರದಿ ವಿವರಿಸಿದೆ.
“ಹಳೆಯ ಕಟ್ಟಡ (ಮಸೀದಿ) ಯನ್ನು ಹಿಜರಿ 933 (ಕ್ರಿ.ಶ. 1526) ರಲ್ಲಿ ದೆಹಲಿಯ ಬಾಬರ್ ಬಾದ್‌ಶಾ (ರಾಜ) ಅವಧಿಯಲ್ಲಿ ಮತ್ತು ಅವರ ಆದೇಶದ ಮೇರೆಗೆ ನಿರ್ಮಿಸಲಾಗಿದೆ ಎಂದು ಮುಸ್ಲಿಮರು ಪ್ರತಿಪಾದಿಸಿದ್ದಾರೆ. ಸಂಭಾಲ್ ಕೋಟೆಯು ಸುಮಾರು 450 ವರ್ಷಗಳ ಹಿಂದೆ ಪೃಥ್ವಿರಾಜನ ಕಾಲದಿಂದಲೂ ಅಸ್ತಿತ್ವದಲ್ಲಿತ್ತು. ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು. ಅಂದಿನಿಂದ ಅದನ್ನು ಪಟ್ಟಣದ ಜುಮ್ಮಾ ಮಸೀದಿಯಾಗಿಯೇ ಬಳಸಲಾಗುತ್ತಿದೆ. ಅದರಲ್ಲಿ ಹಿಂದೂಗಳಿಗೆ ಯಾವುದೇ ಹಕ್ಕಿಲ್ಲ ಅಥವಾ ಅದನ್ನು ಎಂದಿಗೂ ದೇವಾಲಯವಾಗಿ ಬಳಸಿಲ್ಲ” ಎಂದು ಹೈಕೋರ್ಟ್ ತೀರ್ಪು ಹೇಳಿತ್ತು ಎಂದು ವರದಿ ತಿಳಿಸಿದೆ.
ತೀರ್ಪು ನೀಡುವಾಗ ಮಸೀದಿಗೆ ಸಂಬಂಧಿಸಿದ ಐತಿಹಾಸಿಕ ಶಾಸನಗಳು ಮತ್ತು ದಾಖಲೆಗಳನ್ನು ಸಹ ಕೋರ್ಟ್ ಉಲ್ಲೇಖಿಸಿತ್ತು. ಅದರಲ್ಲಿ ಕಟ್ಟಡದ (ಮಸೀದಿಯ) ಗೋಡೆಗಳಲ್ಲಿನ ಕಲ್ಲಿನ ಶಾಸನಗಳ ಜೊತೆಗೆ, ದೆಹಲಿ ನ್ಯಾಯಾಲಯದಿಂದ ಹೊರಡಿಸಲಾದ ಪರ್ವಾನಗಳು (ಲಿಖಿತ ಸಂದೇಶಗಳು) ಮತ್ತು ಪರ್ಷಿಯನ್ ಭಾಷೆಯಲ್ಲಿರುವ ಸರಣಿ ಆದೇಶಗಳು ಒಳಗೊಂಡಿವೆ. ಈ ಆದೇಶಗಳಲ್ಲಿ ಸಂಭಾಲ್‌ನ ಪೃಥ್ವಿರಾಜ್ ಕೋಟೆಯಲ್ಲಿರುವ ಜಾಮಾ ಮಸೀದಿಯ ನಿರ್ವಹಣೆ ಕುರಿತ ನಿಬಂಧನೆಗಳಿವೆ ಎಂದು ವರದಿ ಹೇಳಿದೆ.
“ಪೃಥ್ವಿರಾಜನ ಕಾಲದ ಯಾವುದೋ ಹಳೆಯ ಹಿಂದೂ ದೇವಾಲಯವನ್ನು ಕೆಡವಿ ಅದರ ಸ್ಥಳದಲ್ಲಿ ಬಾಬರ್ ಆಡಳಿತಾವಧಿಯಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು ಅಥವಾ ಹಳೆಯ ದೇವಾಲಯವನ್ನು ಮಸೀದಿಯ ಉದ್ದೇಶಕ್ಕೆ ಬಳಸಲಾಯಿತು. ಅಂದಿನಿಂದ ಅದನ್ನು ಹಾಗೆಯೇ ಬಳಸಲಾಗುತ್ತಿದೆ. ಈ ರೀತಿ ಏನೇ ವಾದಗಳಿರಲಿ, 100 ವರ್ಷಗಳ ಕಾಲ ಅದು ಮೊಹಮ್ಮದೀಯ (ಮುಸ್ಲಿಂ) ಮಸೀದಿಯಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ನ್ಯಾಯಾಲಯ ಹೇಳಿತ್ತು ಎಂದು ವರದಿ ತಿಳಿಸಿದೆ.
“ಅಲಹಾಬಾದ್ ಹೈಕೋರ್ಟ್ ತೀರ್ಪಿನ ಪ್ರಮಾಣೀಕೃತ ಪ್ರತಿಯನ್ನು ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿ ಸಮಿತಿಯು ನಮ್ಮೊಂದಿಗೆ ಹಂಚಿಕೊಂಡಿದೆ. ಮಸೀದಿಯ ಸದರ್ ಜಾಫರ್ ಅಲಿ, “1878ರಲ್ಲಿ ಅಲಹಾಬಾದ್ ಹೈಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿತ್ತು. ಈ ಸತ್ಯ ಗೊತ್ತಿಲ್ಲದೆ ಜಾಮಾ ಮಸೀದಿಯನ್ನು ‘ವಿವಾದಿತ ರಚನೆ’ ಎಂದು ಹೇಳುತ್ತಿರುವುದು ನಮಗೆ ಬೇಸರ ತರಿಸಿದೆ. ಮಸೀದಿಯ ಬಗ್ಗೆ ಯಾರೂ ತಪ್ಪು ಕಲ್ಪನೆಗಳನ್ನು ಹರಡದಂತೆ ನೋಡಿಕೊಳ್ಳಲು ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ” ಎಂದು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವಿವರಿಸಿದೆ.
“1878ರಲ್ಲಿ, ಜಾಮಾ ಮಸೀದಿ ಪ್ರಕರಣದಲ್ಲಿ ಮೊರಾದಾಬಾದ್ ಜಿಲ್ಲಾ ನ್ಯಾಯಾಲಯ ಮತ್ತು ಅಲಹಾಬಾದ್ ಹೈಕೋರ್ಟ್ ಮುಸ್ಲಿಮರ ಪರವಾಗಿ ತೀರ್ಪು ನೀಡಿತ್ತು. ಹಾಗಾಗಿ, ಮಸೀದಿಯ ಸಮೀಕ್ಷೆಗೆ ಆದೇಶಿಸುವ ಅಧಿಕಾರ ಸಂಭಾಲ್ ನ್ಯಾಯಾಲಯಕ್ಕೆ ಇರಲಿಲ್ಲ. 1877ರಲ್ಲಿ ಮೊರಾದಾಬಾದ್ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ನೀಡಿದ ಆದೇಶಗಳ ಪ್ರಮಾಣೀಕೃತ ಪ್ರತಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಆ ಸಮಯದಲ್ಲಿ, ಆಗಿನ ಮೊರಾದಾಬಾದ್‌ನ ಜಿಲ್ಲಾ ನ್ಯಾಯಾಧೀಶರು (ಆಗ ಸಂಭಾಲ್ ಮೊರಾದಾಬಾದ್‌ನ ಭಾಗವಾಗಿತ್ತು) ತಮ್ಮ ಆದೇಶವನ್ನು ನೀಡುವ ಮೊದಲು ಶಾಹಿ ಜಾಮಾ ಮಸೀದಿಗೆ ವೈಯಕ್ತಿಕವಾಗಿ ಭೇಟಿ ನೀಡಿದ್ದರು. ಆಗ ನ್ಯಾಯಾಲಯವು ಹಿಂದೂ ಪಕ್ಷಕಾರರಿಗೆ ದಂಡ ವಿಧಿಸಿತ್ತು” ಎಂದು ಮಸೀದಿ ಸಮಿತಿಯ ವಕೀಲ ತೌಫೀಕ್ ಅಹ್ಮದ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಮನೆಗೆ ನುಗ್ಗಿ ಪೊಲೀಸ್ ದಾಳಿ ಸಂದರ್ಭ ತುಳಿದು ಒಂದು ತಿಂಗಳ ಮುಸ್ಲಿಂ ಶಿಶು ಸಾವು: ಪ್ರತಿಭಟನೆ


