ಸ್ಯಾಮ್‌ಸಂಗ್ ಇಂಡಿಯಾದ ಶ್ರೀಪೆರಂಬದೂರ್ ಘಟಕದ ಕಾರ್ಮಿಕರ ಸುದೀರ್ಘ ಹೋರಾಟಕ್ಕೆ ಮಣಿದ ತಮಿಳುನಾಡು ಕಾರ್ಮಿಕ ಇಲಾಖೆಯು ಜನವರಿ 27, ಸೋಮವಾರದಂದು ‘ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್’ (ಎಸ್‌ಐಡಬ್ಲ್ಯೂಯು) ಅನ್ನು ಅಧಿಕೃತವಾಗಿ ನೋಂದಾಯಿಸಿದೆ. ಈ ಮೂಲಕ ಕಾರ್ಮಿಕರ ಹೋರಾಟಕ್ಕೆ ಬಹುದೊಡ್ಡ ಜಯ ಸಿಕ್ಕಂತಾಗಿದೆ.
ಕೆಲಸದ ಸ್ಥಳದ ವಾತಾವರಣ ಸುಧಾರಿಸಬೇಕು, ವೇತನ ಪರಿಷ್ಕರಣೆ ಮತ್ತು ಕಾರ್ಮಿಕ ಒಕ್ಕೂಟದ ನೋಂದಣಿಗೆ ಆಗ್ರಹಿಸಿ ಸೆಪ್ಟೆಂಬರ್ 9, 2024ರಿಂದ ಅಕ್ಟೋಬರ್ 15, 2024ರವರೆಗೆ ‘ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್'(ಎಸ್‌ಐಡಬ್ಲ್ಯೂಯು) ಬ್ಯಾನರ್ ಅಡಿಯಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಇವರಿಗೆ ಸಾಥ್ ನೀಡಿತ್ತು.
ಸೆಪ್ಟೆಂಬರ್ 9ರಿಂದ ಕೆಲಸ ಸ್ಥಗಿತಗೊಳಿಸಿದ್ದ ಕಾರ್ಮಿಕರು, ತಮ್ಮ ಒಕ್ಕೂಟ ‘ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್ (ಎಸ್‌ಐಡಬ್ಲ್ಯೂಯು) ಅನ್ನು ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಬೇಕು ಎಂಬ ಪ್ರಮುಖ ಬೇಡಿಕೆಯಿಟ್ಟಿದ್ದರು. ಸರ್ಕಾರ ಕಾನೂನಿನ ಪ್ರಕಾರ 45 ದಿನಗಳ ನಂತರವೂ ಒಕ್ಕೂಟವನ್ನು ನೋಂದಣಿ ಮಾಡದ ಕಾರಣ ಸಿಐಟಿಯು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು.
ಒಕ್ಕೂಟದ ನೋಂದಣಿಯು ಮುಷ್ಕರ ನಿರತ ಕಾರ್ಮಿಕರ ಪ್ರಮುಖ ಬೇಡಿಕೆಯಾಗಿತ್ತು. ಅವರು ಕಂಪನಿಯೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕಾದರೆ ಅಥವಾ ಅನ್ಯಾಯವನ್ನು ಪ್ರಶ್ನಿಸಬೇಕಾದರೆ ಸಾಮೂಹಿಕ ಧ್ವನಿಯ ಅಗತ್ಯವಿತ್ತು.
Victory for Samsung workers!
The Samsung India Thozhilalargal Sangam, the trade union under the banner of @cituhq, has been formally registered under the Trade Unions Act, 1926, after sustained battles on the street and in the court of law. The Labour Welfare Department of the… pic.twitter.com/On1QGmCPQt— CPI (M) (@cpimspeak) January 27, 2025
ಪ್ರತಿಭಟನೆ ಪ್ರಾರಂಭಗೊಂಡ ಒಂದು ತಿಂಗಳ ನಂತರ, ಸ್ಯಾಮ್‌ಸಂಗ್ ಕಂಪನಿಯು ಕೆಲವು ಉದ್ಯೋಗಿಗಳೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿತ್ತು. ಆದರೆ, ಅದನ್ನು ಸಿಐಟಿಯು ತಿರಸ್ಕರಿಸಿತ್ತು. “ಮುಷ್ಕರಕ್ಕೆ ಹಾಜರಾಗದ ಸುಮಾರು 200 ಮಂದಿಯನ್ನು ಆಯ್ಕೆ ಮಾಡಿ ಸೆಕ್ರೆಟರಿಯೇಟ್‌ಗೆ ಕರೆದೊಯ್ದು ಮೂವರು ಮಂತ್ರಿಗಳ ಮುಂದೆ ಕುಳಿತುಕೊಳ್ಳಲು ಹೇಳಿದ್ದಾರೆ. ಕಂಪನಿಯು ಕೆಲವು ನಿಯಮಗಳನ್ನು ನಿರ್ದೇಶಿಸಿದೆ. ಅದನ್ನೇ ಎಂಒಯು ಎಂದು ಕರೆಯುತ್ತಿದ್ದಾರೆ. ಆದ್ದರಿಂದ ಮುಷ್ಕರ ನಿರತ ಕಾರ್ಮಿಕರಿಗೂ ಆ ಎಂಒಯುಗೂ ಯಾವುದೇ ಸಂಬಂಧವಿಲ್ಲ. ಪ್ರತಿಭಟನೆ ಮುಂದುವರಿಯಲಿದೆ” ಎಂದು ಸಿಐಟಿಯು ತಿಳಿಸಿತ್ತು.
ಈ ಬೆಳವಣಿಗೆಯ ನಂತರ, ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಇದರಿಂದಾಗಿ ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಮಧ್ಯರಾತ್ರಿಯ ಸಮಯದಲ್ಲಿ ಹಲವಾರು ಯೂನಿಯನ್ ಮುಖಂಡರನ್ನು ಬಂಧಿಸಲಾಗಿತ್ತು ಮತ್ತು ಪ್ರತಿಭಟನಾ ಸ್ಥಳದಲ್ಲಿದ್ದ ಪೆಂಡಾಲ್ ಅನ್ನು ತೆಗೆದು ಹಾಕಲಾಗಿತ್ತು. ಕಾರ್ಮಿಕರಿಗೆ ಶಾಂತಿಯುತ ಪ್ರತಿಭಟನೆಗೆ ಹಕ್ಕಿದೆ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ ನಂತರವೂ ಪೊಲೀಸ್ ಸಿಬ್ಬಂದಿ ಕಾರ್ಮಿಕರನ್ನು ಬಂಧಿಸಿದ್ದರು. ಇದರ ವಿರುದ್ದ ಸಿಐಟಿಯು ನ್ಯಾಯಾಲಯಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಕಂಪನಿಯ ಹೆಸರನ್ನು ಬಳಸುವುದರಿಂದ ಕಂಪನಿಯ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾ ವಾದಿಸಿತ್ತು. “ಸ್ಯಾಮ್‌ಸಂಗ್ ಒಂದು ಅಂತಾರಾಷ್ಟ್ರೀಯ ಕಂಪನಿ. ಕಾರ್ಮಿಕರು ಒಕ್ಕೂಟ ರಚಿಸುವ ಹಕ್ಕನ್ನು ಹೊಂದಿದ್ದರೂ, ಸ್ಯಾಮ್‌ಸಂಗ್ ಹೆಸರನ್ನು ಬಳಸುವ ಮೂಲಭೂತ ಹಕ್ಕನ್ನು ಅವರು ಹೊಂದಿಲ್ಲ. ಮುಷ್ಕರದಿಂದಾಗಿ ನಮಗೆ 100 ಮಿಲಿಯನ್ ಡಾಲರ್ ನಷ್ಟವಾಗಿದೆ” ಎಂದು ಕಂಪನಿಯ ವಕೀಲರು ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದರು.
ಡಿಸೆಂಬರ್ 5, 2024ರಂದು, ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಆರು ವಾರಗಳಲ್ಲಿ ಒಕ್ಕೂಟದ ನೋಂದಣಿ ಬಗ್ಗೆ ನಿರ್ಧರಿಸುವಂತೆ ನಿರ್ದೇಶನ ನೀಡಿತ್ತು. ಜನವರಿ 27, 2025ರಂದು ಕಾರ್ಮಿಕ ಇಲಾಖೆಯು ‘ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್’ (ಎಸ್‌ಐಡಬ್ಲ್ಯೂಯು) ಅನ್ನು ಅಧಿಕೃತವಾಗಿ ನೋಂದಾಯಿಸಿದೆ. ಈ ಮೂಲಕ ಕಾರ್ಮಿಕರ ಹೋರಾಟಕ್ಕೆ ಜಯ ದೊರೆತಿದೆ.
ವಕ್ಫ್ ತಿದ್ದುಪಡಿ ಪರಿಶೀಲನೆ – ವಿಪಕ್ಷಗಳ ಎಲ್ಲಾ ಪ್ರಸ್ತಾಪ ತಿರಸ್ಕೃತ!


