ಬಲವಂತದ ಭೂ ಸ್ವಾಧೀನ ವಿರೋಧಿಸಿ ‘ದೇವನಹಳ್ಳಿ ಚಲೋ’ ಹಮ್ಮಿಕೊಂಡಿದ್ದ ರೈತರು, ಹೋರಾಟಗಾರರ ಬಂಧನ ಖಂಡಿಸಿ ನಾಳೆ (ಜೂ.26, ಗುರುವಾರ) ಸಿಎಂ ಮನೆಗೆ ಮುತ್ತಿಗೆ ಹಾಕಲು ಸಂಯುಕ್ತ ಹೋರಾಟ ಕರ್ನಾಟಕ ತೀರ್ಮಾನಿಸಿದೆ ಹಾಗೂ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ.
ಅಲ್ಲದೆ, ರೈತರು, ಹೋರಾಟಗಾರರ ಜೊತೆ ಅಮಾನುಷವಾಗಿ ವರ್ತಿಸಿದ ಡಿಎಸ್‌ಪಿ ಸಜೀತ್ ವಿರುದ್ದ ಕ್ರಮ ಕೈಗೊಳ್ಳಬೇಕು. ಅವರನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಆದೇಶಿಸಬೇಕು ಎಂದು ಸಂಯುಕ್ತ ಹೋರಾಟ ಆಗ್ರಹಿಸಿದೆ.
ನಮ್ಮನ್ನು ಬಂಧಿಸಿದರೆ ಜಾಮೀನು ಪಡೆಯುವುದಿಲ್ಲ ಎಂದು ಹೋರಾಟಗಾರರು ಹೇಳಿದ್ದರು. ಇದೀಗ ಅವರ ಬಂಧನವಾಗಿದೆ. ಹೇಳಿದಂತೆ ಜಾಮೀನು ಪಡೆಯದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರ ಸುಮಾರು 1700 ಎಕರೆ ಕೃಷಿ ಭೂಮಿಯ ಸ್ವಾಧೀನಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ನಿಗಮ (ಕೆಐಎಡಿಬಿ) ಮುಂದಾಗಿದೆ. ಇದನ್ನು ವಿರೋಧಿಸಿ ಕಳೆದ 1,180 ದಿನಗಳಿಂದ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಹೋರಾಟದ ನಿರ್ಣಾಯಕ ಹಂತವಾಗಿ ಇಂದು (ಜೂನ್ 25, ಬುಧವಾರ) ದೇವನಹಳ್ಳಿ ಪಟ್ಟಣದಲ್ಲಿ ‘ದೇವನಹಳ್ಳಿ ಚಲೋ’ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಶಾಂತಿಯುತವಾಗಿ ಸಮಾವೇಶ ನಡೆಯಿತು. ಆದರೆ, ಸಂಜೆ 5 ಗಂಟೆಯ ಬಳಿಕ ಹೋರಾಟ ಮುಂದುವರಿಸಲು ಅವಕಾಶ ನಿರಾಕರಿಸಿದ ಪೊಲೀಸರು ರೈತರು, ವಿವಿಧ ಸಂಘಟನೆಗಳ ಮುಖಂಡರು, ವೃದ್ದರು, ಮಹಿಳೆಯರನ್ನು ಬಂಧಿಸಿದರು.
LIVE UPDATES ‘ದೇವನಹಳ್ಳಿ ಚಲೋ’| ಅನ್ನದಾತರನ್ನು ಬಂಧಿಸಿದ ಸಿದ್ದರಾಮಯ್ಯ ಸರ್ಕಾರ


