ರೈತ ಪರ ಸಂಘಟನೆಗಳ ಒಕ್ಕೂಟ ಸಂಯುಕ್ತ ಹೋರಾಟ ಕರ್ನಾಟಕವು ಎಲ್ಲಾ ಸಂಸತ್ ಸದಸ್ಯರಿಗೆ ಮತದಾರರ ವಿಪ್ ಎಂಬ ಅಭಿಯಾನ ದೇಶಾದ್ಯಂತ ಹಮ್ಮಿಕೊಂಡಿದೆ. ಒಕ್ಕೂಟ ಸರಕಾರ ಪಾರ್ಲಿಮೆಂಟ್ ಮೂಲಕ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕಾನೂನುಗಳ ವಿರುದ್ಧ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕೆಂದು ಈ ವಿಪ್ ಆಗ್ರಹಿಸುತ್ತಿದೆ. ರೈತ ವಿರೋಧಿ ಕಾನೂನುಗಳ ಪರ ನಿಮ್ಮ ಪಕ್ಷ ಕೊಡುವ ವಿಪ್ ಕಡೆಗಣಿಸಿದರೆ ಅಪಚಾರವೇನಾಗದು; ಆದರೆ ರೈತರ ವಿಪ್ ಧಿಕ್ಕರಿಸಿದರೆ ನಿಮ್ಮ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾರತದ ರೈತ ಸಮೂಹದ ತೀವ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಆಳುವ ಕೂಟದ ಸಂಸತ್ ಸದಸ್ಯರಿಗೆ ರೈತ ಸಂಘಟನಗಳು ಎಚ್ಚರಿಸಿವೆ.
ಉತ್ತರ ಕನ್ನಡದ ಸಂಯುಕ್ತ ಕಿಸಾನ್ ಮೋರ್ಚಾವು ಸ್ಥಳೀಯ ಸಂಸದ ಅನಂತಕುಮಾರ್ ಹೆಗಡೆಗೆ ಮತದಾರರ ವಿಪ್ ಜಾರಿ ಮಾಡಿದೆ. ಸಿದ್ದಾಪುರ ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ್ ಹೆಗಡೆಗೆ ವಿಪ್ ಕಳಿಸಿದ್ದಾರೆ.

ಪ್ರಿಯ ಸಂಸತ್ ಸದಸ್ಯರೆ ಕೇಂದ್ರ ಸರಕಾರ ಸೆಪ್ಟೆಂಬರ್ 2020ರಲ್ಲಿ ಜಾರಿಗೊಳಿಸಿರುವ ಮೂರು ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೇಶದ ರೈತರು ಪ್ರತಿಭಟಿಸುತ್ತಿರುವುದು ತಮಗೆ ತಿಳಿದಿರುವ ಸಂಗತಿ. ಈ ಮೂರು ರೈತ ವಿರೋಧಿ ಕಾನೂನುಗಳನ್ನು ರದ್ದುಮಾಡಬೇಕು; ಎನ್‌ಸಿಆರ್ ವಾಯು ಮಾಲಿನ್ಯ ಕಾಯ್ದೆಯಲ್ಲಿನ ರೈತ ವಿರೋಧಿ ಅಂಶಗಳನ್ನು ಮತ್ತು ಕರಡು ವಿದ್ಯುತ್ ಮಸೂದೆಯನ್ನು ವಾಪಸ್ ಪಡೆಯಬೇಕೆಂದು ರೈತರು ಆಗ್ರಹಿಸುತ್ತಿದ್ಧಾರೆ. ದೇಶದ ಎಲ್ಲ ರೈತರ ಕೃಷಿ ಉತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿಸುವುದನ್ನು ಖಾತರಿಪಡಿಸುವ ಶಾಸನವನ್ನು ಕೇಂದ್ರ ಸರಕಾರ ತರಬೇಕೆಂಬುದು ರೈತರ ಬೇಡಿಕೆಯಾಗಿದೆ. ಆದ್ದರಿಂದ ಮತದಾರರಾದ ನಾವು ನಮ್ಮ ಸಾರ್ವಭೌಮತ್ವ ಅಧಿಕಾರವನ್ನು ಚಲಾಯಿಸಿ ಈ ಕೆಳಗಿನಂತೆ ನಿರ್ದೆಶಿಸುತ್ತಿದ್ದೆವೆ.
2021ರ ಜುಲೈ 19ರಿಂದ ಆರಂಭವಾಗುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ತಪ್ಪದೆ ಹಾಜರಿರಬೇಕು. ನೀವು ಮತ್ತು ನಿಮ್ಮ ಪಕ್ಷ ನಿರಂತರವಾಗಿ ರೈತರ ವಿಷಯಗಳ ಪರ ದನಿ ಎತ್ತಬೇಕು; ಮೇಲೆ ತಿಳಿಸಿದ ರೈತ ಚಳುವಳಿ ಬೇಡಿಕೆಗಳನ್ನು ಸದನದಲ್ಲಿ ಬೆಂಬಲಿಸಬೇಕು. ಕೇಂದ್ರ ಸರಕಾರ ರೈತರ ಬೇಡಿಕೆಗಳನ್ನು ಈಡೇರಿಸುವ ತನಕ ಯಾವುದೆ ಕಲಾಪಗಳಿಗೆ ಅವಕಾಶ ಕೊಡಬಾರದು; ರೈತರ ಬೇಡಿಕೆಗಳ ಪರವಾದ ಯಾವುದೇ ನಿರ್ಣಯಗಳು ಸದನದಲ್ಲಿ ಮಂಡಿಸಿದಾಗ ನೀವಾಗಲಿ ಅಥವಾ ನಿಮ್ಮ ಪಕ್ಷದ ಬೇರೆ ಸದಸ್ಯರಾಗಲಿ ವಿರೊಧಿಸಬಾರದು; ಮತದಾನದಿಂದ ದೂರ ಉಳಿಯಬಾರದು. ಇದನ್ನು ತಾವು ಮತದಾರರ ವಿಪ್ ಎಂದು ಪರಿಗಣಿಸಿ ನಿಮ್ಮ ಪಕ್ಷ ಜಾರಿ ಮಾಡುವ ವಿಪ್ ಕಡೆಗಣಿಸಬಹುದು. ನೀವೇನಾದರು ಮತದಾರರ ಈ ವಿಪ್ ಉಲ್ಲಂಘಿಸಿದರೆ, ನಿಮ್ಮ ಎಲ್ಲ ಸಾರ್ವಜನಿಕ ವೇದಿಕೆಗಳಲ್ಲೂ ಭಾರತೀಯ ರೈತರ ತೀವ್ರವಾದ ಪ್ರತಿಭಟನೆ ಎದುರಿಸುವುದು ಅನಿವಾರ್ಯವಾಗಲಿದೆ. ನಿಮ್ಮ ಮತದಾರರು, ದೇಶದ ಸಮಸ್ತ ರೈತ ಬಾಂಧವರು, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ತಾಲೂಕು ರೈತ ಸಂಘಗಳ ಪರವಾಗಿ ಹಸಿರು ಸೇನೆಯ ಅಧ್ಯಕ್ಷನ ವಿನಂತಿ ಎಂದು ವಿಪ್‌ನಲ್ಲಿ ಬರೆಯಲಾಗಿದೆ.
ದೇಶದ ಎಲ್ಲಾ ಸಂಸತ್ ಸದಸ್ಯರಿಗೆ ಇಂಥದೊಂದು ವಿಪ್ ರೈತ ಸಂಘಟನೆಗಳು ಕಳಿಸಿವೆ; ಕರ್ನಾಟಕ ಪ್ರಾಂತ ರೈತ ಸಂಘ ಕೂಡ ರಾಜ್ಯದ ಹಲವು ಸಂಸದರಿಗೆ ಈ ವಿಪ್ ಜಾರಿಗೊಳಿಸಿದೆ.
ಇದನ್ನೂ ಓದಿ: ಮಾನ್ಸೂನ್ ಅಧಿವೇಶನ: ಇಂದಿನಿಂದ ಜಂತರ್ ಮಂತರ್‌ನಲ್ಲಿ ಕಿಸಾನ್ ಸಂಸತ್ ಆರಂಭ


