ಐದು ಸದಸ್ಯರ ಕುಟುಂಬವೊಂದು ತಮಗೆ ಕೊರೊನಾ ಸೋಂಕು ಬರಬಹುದು ಎಂಬ ಭಯದಿಂದ 15 ತಿಂಗಳುಗಳಿಂದ ಗುಡಿಸಿಲಿನಲ್ಲೇ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದ ಘಟನೆ ಆಂಧ್ರಪ್ರದೇಶದ ಕಡಾಲಿ ಗ್ರಾಮದಲ್ಲಿ ನಡೆದಿದೆ.
ಕಡಾಲಿ ಗ್ರಾಮದಲ್ಲಿ 15 ತಿಂಗಳ ಹಿಂದೆ ಒಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಹೀಗಾಗಿ ಭಯಗೊಂಡ ಐದು ಸದಸ್ಯರ ಕುಟಂಬದ ಮೂವರು ಮಹಿಳೆಯರು ಅಂದಿನಿಂದಲೂ ಸ್ವಯಂ ಪ್ರೇರಿತರಾಗಿ ತಮ್ಮನ್ನು ಗೃಹಬಂಧನಕ್ಕೆ ಒಳಪಡಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಕುಟುಂಬದ ಇಬ್ಬರು ಪುರುಷರು ಕೆಲವೊಮ್ಮೆ ಕೆಲಸಕ್ಕಾಗಿ ಗುಡಿಸಲಿನಿಂದ ಹೊರ ಬಂದಿದ್ದಾರೆ. ಆದರೆ ಮೂವರು ಮಹಿಳೆಯರು ಮಾತ್ರ ಕಳೆದ 15 ತಿಂಗಳುಗಳಿಂದ ಹೊರ ಬಂದಿಲ್ಲ. ಕೇವಲ ಗುಡಿಸಲಿಗೆ ಸೀಮಿತರಾಗಿದ್ದರು ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ: ಹುತಾತ್ಮರ ದಿನಾಚರಣೆ: ಬಂಡಾಯದ ನೆಲ ನರಗುಂದದಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಿದ ರೈತರು
ಕಡಾಲಿ ಗ್ರಾಮದಲ್ಲಿ ವಾಸಿಸುತ್ತಿರುವ ಈ ಕುಟುಂಬದಲ್ಲಿ 50 ವರ್ಷದ ಜಾನ್ ಬೆನ್ನಿ ಮತ್ತು ಅವರ 29 ವರ್ಷದ ಮಗ ಚೀನಾಬಾಬು ಹಳ್ಳಿಯಲ್ಲಿ ಸೈಕಲ್ ದುರಸ್ತಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಬೆನ್ನಿಯ ಪತ್ನಿ ಋಥಮ್ಮ (45), ಮತ್ತು ಇಬ್ಬರು ಹೆಣ್ಣುಮಕ್ಕಳು, 30 ವರ್ಷದ ಕಾಂತಮಣಿ, ಮತ್ತು 32 ವರ್ಷದ ರಾಣಿ ಇದ್ದಾರೆ. ಜಾನ್ ಬೆನ್ನಿನ ಮತ್ತು ಮಗ ಚೀನಾಬಾಬು ಕೆಲವೊಮ್ಮೆ ಹೊರಗಡೆ ಹೋಗಿದ್ದಾರೆ. ಆದರೆ ಮೂವರು ಮಹಿಳೆಯರು ಗುಡಿಸಿಲಿನಲ್ಲೇ ಬಂಧಿಯಾಗಿದ್ದಾರೆ.
ಈ ಕುಟುಂಬಕ್ಕೆ ಸರ್ಕಾರಿ ಯೋಜನೆಯಡಿಯಲ್ಲಿ ವಸತಿಗಾಗಿ ಜಮೀನು ಮಂಜೂರು ಮಾಡಲಾಗಿತ್ತು. ಅದಕ್ಕಾಗಿ ಹಳ್ಳಿಯ ಸ್ವಯಂಸೇವಕರೊಬ್ಬರು ಅವರ ಹೆಬ್ಬೆಟ್ಟು (ಸಹಿ) ತೆಗೆದುಕೊಳ್ಳು ಹೋಗಿದ್ದ ಸಂದರ್ಭದಲ್ಲಿ ಅವರು ಸ್ವಯಂ ಗೃಹಬಂಧಿಯಾಗಿರುವುದು ಗೊತ್ತಾಗಿದೆ ಎಂದು ಗ್ರಾಮದ ಸರಪಂಚ್ ತಿಳಿಸಿದ್ದಾರೆ.
ವಿಷಯ ತಿಳಿದ ಬಳಿಕ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಆ ಕುಟುಂಬದ ಆರೋಗ್ಯ ಸ್ಥಿತಿಹದಗೆಟ್ಟಿದೆ. ಅವರು ಹಲವಾರು ದಿನಗಳಿಂದ ಸ್ಥಾನವನ್ನೂ ಮಾಡಿಲ್ಲ. ಅವರು ಸಾಯುವ ಪರಿಸ್ಥಿತಿಗೆ ತಲುಪಿದ್ದರು. ಗ್ರಾಮಕ್ಕೆ ಬಂದ ಪೊಲೀಸರ ತಂಡವು ಅವರನ್ನು ರಕ್ಷಿಸಿದೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸರಪಂಚ್ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ.ಪ್ರಭಾಕರ್ ರಾವ್ ಅವರು ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದರು, ಅವರಿಗೆ ವಿಟಮಿನ್ ಕೊರತೆಯಿದೆ ಎಂದು ಹೇಳಿದ್ದಾರೆ.
ಮುಖ್ಯವಾಗಿ ವಿಟಮಿನ್ ಡಿ (ಸೂರ್ಯನ ಬಿಸಿಲಿಗೆ ಬಾರದ ಕಾರಣ) ಮತ್ತು ಬಿ-ಕಾಂಪ್ಲೆಕ್ಸ್ ಕಡಿಮೆಯಿದೆ. ಮಹಿಳೆಯರ ಹಿಮೋಗ್ಲೋಬಿನ್ ಮಟ್ಟವು 4 ಗ್ರಾಂಗಳಷ್ಟಾಗಿತ್ತು(ಮಹಿಳೆಯರಲ್ಲಿ 12.3-15.3 ಗ್ರಾಂ ಅನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ). ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ಡಾ.ಪ್ರಭಾಕರ್ ರಾವ್ ಹೇಳಿದ್ದಾರೆ.
ಇದನ್ನೂ ಓದಿ: ದಲಿತ ಮಹಿಳೆಯ ಲಾಕಪ್ ಡೆತ್: ಮೂವರು ಪೊಲೀಸರು ಸೇವೆಯಿಂದ ವಜಾ