ಹಿಂದುತ್ವ ಗುಂಪುಗಳು ಹಿಂದೂ ರಾಷ್ಟ್ರ ರಚನೆಗೆ ಕರೆ ನೀಡುವ ಮತ್ತು ಅಲ್ಪಸಂಖ್ಯಾತರಿಗೆ ನೇರ ಅಥವಾ ಪರೋಕ್ಷ ಬೆದರಿಕೆಗಳನ್ನು ಹಾಕುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಆದರೆ, ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ ‘ಸನಾತನ ರಾಷ್ಟ್ರ ಶಂಕನಾದ್ ಮಹೋತ್ಸವ’ ಅವುಗಳಿಗಿಂತ ಹೆಚ್ಚು ಗಮನಾರ್ಹವಾಗಿದೆ. ಏಕೆಂದರೆ, ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವೇ ಅಧಿಕೃತವಾಗಿ ಸಹಕಾರ ನೀಡಿತ್ತು.
ಡಿಸೆಂಬರ್ 13 ಮತ್ತು 14ರಂದು ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಹಿಂದೂ ರಾಷ್ಟ್ರ ರಚನೆ, ಮುಸ್ಲಿಮರ ಸಾಮೂಹಿಕ ಗಡಿಪಾರು ಮತ್ತು ಮತಾಂತರ ಹಾಗೂ ದೇಶವನ್ನು ಹಿಂದೂ ರಾಷ್ಟ್ರವೆಂದು ಔಪಚಾರಿಕವಾಗಿ ಘೋಷಿಸಲು ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಬೇಕೆಂಬ ಕರೆಗಳು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮಂಡಿಸಲಾಗಿದೆ. ಇದನ್ನು ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್ ಮತ್ತು ಸನಾತನ ಸಂಸ್ಥೆ ಎಂಬ ಎರಡು ಸಂಸ್ಥೆಗಳು ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ದೆಹಲಿ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದವು.
ದೆಹಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಅವರೊಂದಿಗೆ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಶ್ರೀಪಾದ ನಾಯಕ್ ಮತ್ತು ಸಂಜಯ್ ಸೇಠ್ ಅವರು ಸನಾತನ ರಾಷ್ಟ್ರ ಶಂಕನಾದ್ ಮಹೋತ್ಸವದಲ್ಲಿ ಬಲಪಂಥೀಯ ವಿಚಾರವಾದಿಗಳ ಗುಂಪಿನೊಂದಿಗೆ ಮಾತನಾಡಿದ್ದಾರೆ. ಮಂತ್ರಿಗಳ ಈ ಭಾಗವಹಿಸುವಿಕೆ ಮತ್ತು ಸರ್ಕಾರದ ಒಳಗೊಳ್ಳುವಿಕೆ ಭಾರತೀಯ ಗಣರಾಜ್ಯದ ಜಾತ್ಯತೀತ ಅಡಿಪಾಯಗಳನ್ನು ಬಹಿರಂಗವಾಗಿ ಪ್ರಶ್ನಿಸುವ ಹಲವಾರು ಭಾಷಣಕಾರರಿಗೆ ನ್ಯಾಯಸಮ್ಮತತೆಯನ್ನು ನೀಡಿದೆ. ಕಾರ್ಯಕ್ರಮದ ಎಲ್ಲಾ ಬ್ಯಾನರ್ಗಳು ಮತ್ತು ಪ್ರಚಾರ ಸಾಮಗ್ರಿಗಳು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ಹೆಸರು ಮತ್ತು ಲೋಗೋವನ್ನು ಹೊಂದಿದ್ದವು. ಕೆಳಗೆ ಎರಡು ಉದಾಹರಣೆಗಳಿವೆ:

ಕಾರ್ಯಕ್ರಮಕ್ಕೂ ಮುನ್ನ ಡಿಸೆಂಬರ್ 8ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಆಯೋಜಕರು ಕಾರ್ಯಕ್ರಮದ ಉದ್ದೇಶ ಮತ್ತು ಸ್ವರೂಪವನ್ನು ವಿವರಿಸಿದ್ದರು. ಇದು ಸನಾತನ ರಾಷ್ಟ್ರದ ಪರಿಕಲ್ಪನೆಯನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುವ ಎರಡು ದಿನಗಳ ‘ಜ್ಞಾನ ಗಂಗೆ’ ಆಗಿರುತ್ತದೆ ಎಂದು ಅವರು ಹೇಳಿದ್ದರು. ಸನಾತನ ರಾಷ್ಟ್ರವು ಕೇವಲ ಒಂದು ಕಲ್ಪನೆಯಲ್ಲ, ಬದಲಾಗಿ ಅದು ‘ನಮ್ಮ ರಾಷ್ಟ್ರದ ಆತ್ಮ’ ಎಂದು ಸನಾತನ ಸಂಸ್ಥೆಯ ಅಧ್ಯಕ್ಷ ಅಭಯ್ ವರ್ಧಕ್ ತಿಳಿಸಿದ್ದರು. ಈ ಕಾರ್ಯಕ್ರಮವು ಹಿಂದೂ ರಾಷ್ಟ್ರದ ಸಿದ್ಧಾಂತವನ್ನು ಉತ್ತೇಜಿಸಲು ಮತ್ತು ಮರಾಠಾ ರಾಜರ ವೈಭವ ಮತ್ತು ಶೌರ್ಯದ ಬಗ್ಗೆ ಪಾಲ್ಗೊಂಡವರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಏಕೆಂದರೆ, ಅವರು ಮೊಘಲರನ್ನು ದೇಶ ತೊರೆಯುವಂತೆ ಮಾಡಿದರು ಎಂದು ಆಯೋಜಕರು ಹೇಳಿಕೊಂಡಿದ್ದರು.
ದೇಶದ ವಿವಿದೆಡೆಗಳಿಂದ 3000ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು 800ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸನಾತನ ಸಂಸ್ಥೆ ತಿಳಿಸಿತ್ತು.
ಸನಾತನ ಸಂಸ್ಥೆಯು 1999ರಲ್ಲಿ ಗೋವಾದಲ್ಲಿ ‘ಸಂಮೋಹನ ಚಿಕಿತ್ಸಕ’ ಜಯಂತ್ ಬಾಲಾಜಿ ಆಠಾವಲೆ ಅವರಿಂದ ಸ್ಥಾಪಿಸಲ್ಪಟ್ಟ ಹಿಂದುತ್ವ ಸಂಘಟನೆಯಾಗಿದೆ. ಕರ್ನಾಟಕ ಪೊಲೀಸರು ಪ್ರಸ್ತುತ ಗೌರಿ ಲಂಕೇಶ್ ಮತ್ತು ಎಂ.ಎಂ ಕಲಬುರ್ಗಿ ಅವರ ಹತ್ಯೆಗಳಿಗೆ ಸಂಬಂಧಿಸಿದಂತೆ ಈ ಸಂಸ್ಥೆಯ ವಿರುದ್ದ ತನಿಖೆ ನಡೆಸುತ್ತಿದ್ದಾರೆ. ಆದಾಗ್ಯೂ, ಈ ಹತ್ಯೆಗಳಲ್ಲಿ ಯಾವುದೇ ಪಾತ್ರವಿಲ್ಲ ಎಂದು ಸಂಸ್ಥೆ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ.
ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್ ಅನ್ನು ವಿಡಿ ಸಾವರ್ಕರ್ ಅವರ ಸಿದ್ಧಾಂತದ ಅನುಯಾಯಿ ಉದಯ್ ಮಹೂರ್ಕರ್ ಸ್ಥಾಪಿಸಿದ್ದಾರೆ. ಮಹೂರ್ಕರ್ ಒಬ್ಬ ಲೇಖಕರಾಗಿದ್ದು, ಅವರು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಒಂದು ಪ್ರಧಾನಿ ಮೋದಿಯವರ ಆಡಳಿತದ ಬಗ್ಗೆ ಮತ್ತು ಇನ್ನೊಂದು ವಿಡಿ ಸಾವರ್ಕರ್ ಬಗ್ಗೆಯಿದೆ. ಈ ಫೌಂಡೇಶನ್ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವತ್ತ ಗಮನಹರಿಸುತ್ತದೆ ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳು, ಸಾಮಾಜಿಕ ಮಾಧ್ಯಮ ಮತ್ತು ಚಲನಚಿತ್ರಗಳಲ್ಲಿ ‘ಅಶ್ಲೀಲ ಮತ್ತು ಲೈಂಗಿಕ ವಿಷಯ’ದ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದನ್ನು ಪ್ರತಿಪಾದಿಸುತ್ತದೆ ಎಂದು ಹೇಳಲಾಗ್ತಿದೆ. ರಾಷ್ಟ್ರದ ಸಂಸ್ಕೃತಿಯನ್ನು ರಕ್ಷಿಸಲು ಸಹಾಯ ಮಾಡುವ ಸಲುವಾಗಿ ಭಾರತದಲ್ಲಿ ಅಶ್ಲೀಲತೆಯನ್ನು ನಿಷೇಧಿಸುವ ಗುರಿಯನ್ನು ಇದು ಹೊಂದಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.
ಭಾರತವನ್ನು ಸಾಂಸ್ಕೃತಿಕ ಕತ್ತಲೆಯಿಂದ ಮುಕ್ತಗೊಳಿಸಿದ್ದು ರಾಮಮಂದಿರ : ಶೇಖಾವತ್
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕಾರ್ಯಕ್ರಮದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ, ದೇಶವು ‘ಸಾಂಸ್ಕೃತಿಕ ಪುನರುಜ್ಜೀವನದ ಯುಗ’ದ ಮೂಲಕ ಸಾಗುತ್ತಿದೆ. ರಾಮ ಮಂದಿರ ಧ್ವಂಸದ ನಂತರದ ಶತಮಾನಗಳು ಸಾಂಸ್ಕೃತಿಕ ಕತ್ತಲೆಯ ದೀರ್ಘ ಅವಧಿಯಾಗಿತ್ತು, ‘ಭಾರತದ ಸಂಸ್ಕೃತಿಯ ಸೂರ್ಯ ಮುಳುಗಿದಂತೆ’, ಈಗ ಅದರ ಪುನರ್ನಿರ್ಮಾಣದ ಮೂಲಕ ‘ಭಾರತದ ಸಾಂಸ್ಕೃತಿಕ ಪರಂಪರೆಯ ಕಾಂತಿ’ ದೇಶಾದ್ಯಂತ ಗೋಚರಿಸಲು ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. ‘ರಾಮ ಮಂದಿರ ಸ್ಥಾಪನೆಯೊಂದಿಗೆ ಇಂದು ಭಾರತದ ಸಂಸ್ಕೃತಿ, ಅದರ ಸಾಂಸ್ಕೃತಿಕ ಮೌಲ್ಯಗಳು ಮತ್ತು ಭಾರತದ ನೆಲದಿಂದ ಹುಟ್ಟಿಕೊಂಡ ಜ್ಞಾನವನ್ನು ಹೊಸ ಗೌರವ ಮತ್ತು ಸ್ವೀಕಾರದೊಂದಿಗೆ ಪ್ರಪಂಚದಾದ್ಯಂತ ಮರು ಗುರುತಿಸಲಾಗುತ್ತಿದೆ. ನಮ್ಮ ದೇಶವು ಸಾಂಸ್ಕೃತಿಕ ಪುನರುಜ್ಜೀವನದ ಯುಗಕ್ಕೆ ಒಳಗಾಗುತ್ತಿದೆ ಎಂದಿದ್ದಾರೆ.
ಸನಾತನ ಸಂಘಟನೆ ಆಯೋಜಿಸಿದ್ದ ಸನಾತನ ಶಂಖನಾದ್ ಕಾರ್ಯಕ್ರಮಕ್ಕೆ ಶೇಖಾವತ್ ತಮ್ಮ ಕೃತಜ್ಞತೆ ಮತ್ತು ಗೌರವವನ್ನು ವ್ಯಕ್ತಪಡಿಸಿದ್ದು, ಇದನ್ನು ಅವರು ಸಾಂಸ್ಕೃತಿಕ ಪುನರುಜ್ಜೀವನದ ಸಂಕೇತವೆಂದು ಕೊಂಡಾಡಿದ್ದಾರೆ.
‘ನಾವು ಮತ್ತು ಅವರು’ : ಕಪಿಲ್ ಮಿಶ್ರಾ ಧ್ರುವೀಕರಣದ ಮಾತು
ದೆಹಲಿಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಅವರು ಇಂತಹ ಕಾರ್ಯಕ್ರಮವನ್ನು ಸರ್ಕಾರದ ಬೆಂಬಲದೊಂದಿಗೆ ಆಯೋಜಿಸುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅವರ ಬಹಿರಂಗ ಧ್ರುವೀಕರಣದ ಭಾಷಣವು ಮುಸ್ಲಿಮರನ್ನು ನಿಂದಿಸುವ ಹೇಳಿಕೆಗಳನ್ನು ಒಳಗೊಂಡಿತ್ತು.
ಸುಮಾರು 10-11 ವರ್ಷಗಳ ಹಿಂದೆ, ಭಾರತದ ರಾಜಧಾನಿಯಾದ ದೆಹಲಿಯ ಹೃದಯಭಾಗದಲ್ಲಿ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸುವುದು ಕಲ್ಪನೆಗೂ ನಿಲುಕದ ವಿಷಯವಾಗಿತ್ತು. ಆದರೆ, ಇಂದು ರಾಜ್ಯ ಸರ್ಕಾರದ ಜೊತೆಗೆ ಭಾರತ ಸರ್ಕಾರದ ಬೆಂಬಲದೊಂದಿಗೆ ಇದು ಸಾಧ್ಯವಾಗಿದೆ. ಹಿಂದೆ, ರಾಷ್ಟ್ರದ ಪ್ರಮುಖ ಸವಾಲುಗಳ ಬಗ್ಗೆ ಚರ್ಚೆ ಅಥವಾ ಚಿಂತನೆ ನಡೆಸಬೇಕಾದರೂ, ಎಲ್ಲಿ ಕುಳಿತುಕೊಳ್ಳಬೇಕು, ಎಲ್ಲಿ ಚರ್ಚಿಸಬೇಕು, ಎಲ್ಲಿ ನಡೆಸಬೇಕು ಎಂದು ಎಚ್ಚರಿಕೆಯಿಂದ ಯೋಚಿಸಬೇಕಾಗಿತ್ತು. ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ಅಥವಾ ಚಿಂತನೆಯನ್ನು ಸರ್ಕಾರವೇ ನಿಯಂತ್ರಿಸಬೇಕು ಅಥವಾ ನಿಯಮಗೊಳಿಸಬೇಕು ಎಂಬ ಭಾವನೆಯಿತ್ತು. ಆದರೆ, ಇಂದು ಈ ವೇದಿಕೆಯನ್ನು ನೋಡಿದಾಗ, ಅಲ್ಲಿ ‘ಸಂಸ್ಕೃತಿ ಸಚಿವಾಲಯ’ ಮತ್ತು ‘ದೆಹಲಿ ಪ್ರವಾಸೋದ್ಯಮ’ ಎಂದು ಬರೆದಿರುವುದು ಕಾಣುತ್ತದೆ ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.
ನೀವು ಈ ರೀತಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದರೂ, ನಾವು ನಮ್ಮ ಎಲ್ಲಾ ಬೆಂಬಲ ಮತ್ತು ಸಹಕಾರದೊಂದಿಗೆ ದೆಹಲಿ ಸರ್ಕಾರದ ಪರವಾಗಿ ಸಂಪೂರ್ಣವಾಗಿ ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ಹೇಳುವ ಮೂಲಕ ಮಿಶ್ರಾ ಸಂಸ್ಥೆಗೆ ಸಂಪೂರ್ಣ ಸಾಂಸ್ಥಿಕ ಬೆಂಬಲದ ಭರವಸೆ ನೀಡಿದ್ದಾರೆ.
ಯಾರೋ ಒಬ್ಬರು ಸನಾತನ ಧರ್ಮದಿಂದ ಮತ್ತು ಮಾನವತೆಯ ಮೂಲಭೂತ ಸ್ವಭಾವದಿಂದ ಸಂಪೂರ್ಣವಾಗಿ ವಿಚ್ಛೇದಿತರಾದಾಗ ಮಾತ್ರ, ಶಿಕ್ಷಣ ಪಡೆದು ವೈದ್ಯರಾದರೂ ಕೂಡ ಜನರನ್ನು ಕೊಲ್ಲುವ ಯೋಜನೆಗಳನ್ನು ರೂಪಿಸಬಹುದು ಎಂದು ಹೇಳಿದ್ದಾರೆ.
ಮಹಿಳೆಯರನ್ನು ದಮನ ಮಾಡಿ, ದಬ್ಬಾಳಿಕೆಗೆ ಒಳಪಡಿಸಿ, ಶಿಕ್ಷಣ ನಿರಾಕರಿಸಿ, ತುಳಿದು ಹಾಕಿ ತ್ರಿವಳಿ ತಲಾಕ್, ಹಲಾಲಾ ಎಂಬಂತಹ ದೌರ್ಜನ್ಯಗಳಿಗೆ ಒಳಪಡಿಸಿದಾಗ, ಅಂತಹ ದಮನಿತ ಮಾತೃಶಕ್ತಿಯಿಂದ ಹುಟ್ಟುವ ಸಂತಾನದಲ್ಲಿ ಕೂಡ ಅದೇ ರೀತಿಯ ವಿಷಕಾರಿ ಗುಣಗಳು ಬರುವ ಸಾಧ್ಯತೆಯಿದೆ. ಆದರೆ, ಮಾತೃಶಕ್ತಿಯು ಜಗದಂಬೆಯ ಬಲದೊಂದಿಗೆ ಪ್ರಕಾಶಿಸಿದರೆ, ಒಬ್ಬ ಜಿಹಾದಿಯನ್ನು ಸೃಷ್ಟಿಸಲು ಯಾರೂ ಪ್ರಯತ್ನಿಸಿದರೂ, ಅದಕ್ಕೆ ಪ್ರತಿಯಾಗಿ ಒಬ್ಬ ಶಿವಾಜಿ ಹುಟ್ಟುತ್ತಾನೆ ಎಂದಿದ್ದಾರೆ.
ಕಪಿಲ್ ಮಿಶ್ರಾ ತನ್ನ ಭಾಷಣದಲ್ಲಿ ಹಿಂದೂ ಸಾಂಸ್ಕೃತಿಕ ಆದರ್ಶಗಳನ್ನು ಮುಸ್ಲಿಂ ಸಮುದಾಯದೊಂದಿಗೆ ಸಂಬಂಧ ಹೊಂದಿರುವ ಆದರ್ಶಗಳೊಂದಿಗೆ ವ್ಯತಿರಿಕ್ತಗೊಳಿಸುವ ಮೂಲಕ ಒಂದು ಸ್ಪಷ್ಟವಾದ ಧ್ರುವೀಕರಣದ ನಿರೂಪಣೆಯನ್ನು ರಚಿಸಿದ್ದರು. ಅವರು ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ‘ನಾವು vs ಅವರು’ ಎಂಬ ಸನ್ನಿವೇಶವನ್ನು ರೂಪಿಸಿದ್ದರು. ಇದಲ್ಲದೆ, ‘ಲವ್ ಜಿಹಾದ್’ ಅನ್ನು ಎದುರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದರು. ನಮ್ಮ ಮಹಿಳೆಯರ ಮೇಲೆ ತೀವ್ರ ದೌರ್ಜನ್ಯಗಳು ನಡೆಯುತ್ತಿವೆ ಎಂದು ಪ್ರತಿಪಾದಿಸಿದ್ದರು.
ಬಂಗಾಳದಲ್ಲಿ 1 ಕೋಟಿ ನಕಲಿ ಮತದಾರರು, ಪ್ರತಿದಿನ ಒಬ್ಬ ಹುಡುಗಿ ‘ಲವ್ ಜಿಹಾದ್’ಗೆ ಬಲಿಯಾಗುತ್ತಾಳೆ : ಅಶ್ವಿನಿ ಉಪಾಧ್ಯಾಯ
ಬಿಜೆಪಿ ನಾಯಕ ಮತ್ತು ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಉಪಾಧ್ಯಾಯ ತಮ್ಮ ಬಹಿರಂಗ ಇಸ್ಲಾಮೋಫೋಬಿಕ್ ಭಾಷಣದ ಮೂಲಕ ದ್ವೇಷವನ್ನು ಹೊರಹಾಕಿದ್ದರು. “ಪ್ರತಿ ವರ್ಷ ಐದು ಲಕ್ಷ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಕಾಣೆಯಾಗುತ್ತಾರೆ. ಇವರಲ್ಲಿ 1.5 ಲಕ್ಷ ಜನರು ಪತ್ತೆಯಾಗುತ್ತಾರೆ, ಆದರೆ 3.5 ಲಕ್ಷ ಜನರು ಪತ್ತೆಯಾಗುತ್ತಿಲ್ಲ. ಇದರರ್ಥ ಪ್ರತಿದಿನ ಒಬ್ಬ ಹುಡುಗಿ ‘ಲವ್ ಜಿಹಾದ್’ಗೆ ಬಲಿಯಾಗುತ್ತಾಳೆ” ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಒಂದು ಕೋಟಿಗೂ ಹೆಚ್ಚು ನಕಲಿ ಮತದಾರರನ್ನು ಗುರುತಿಸಲಾಗಿದೆ ಎಂದಿದ್ದಾರೆ. ಉಪಾಧ್ಯಾಯ ಅವರ ಪ್ರಕಾರ, “ಲವ್ ಜಿಹಾದ್, ಭೂ ಜಿಹಾದ್, ನಕಲಿ ಮತದಾರರು, ಅಕ್ರಮ ಅತಿಕ್ರಮಣ ಮತ್ತು ಜನಸಂಖ್ಯಾ ಉತ್ಕರ್ಷ” ಭಾರತ ಮುಂಚೂಣಿಯಲ್ಲಿದೆ.
ದೇಶದ ಈ ಎಲ್ಲಾ ಪ್ರಮುಖ ಸಮಸ್ಯೆಗಳಿಗೆ ಉಪಾಧ್ಯಾಯ ತನ್ನದೇ ಪರಿಹಾರವನ್ನು ಮುಂದಿಟ್ಟಿದ್ದು, ಸಮಾಜವು ಜನರನ್ನು ಹಿಂದೂಗಳು ಮತ್ತು ಮುಸ್ಲಿಮರು ಎಂದು ಕರೆಯುವುದನ್ನು ನಿಲ್ಲಿಸಬೇಕು, ಬದಲಿಗೆ ಅವರನ್ನು ಹಿಂದೂಗಳು ಮತ್ತು ‘ಮತಾಂತರಗೊಂಡ ಹಿಂದೂಗಳು’ ಎಂದು ಕರೆಯಬೇಕು. ಮತಾಂತರಗೊಂಡವರನ್ನು ಮರು ಮತಾಂತರಗೊಳಿಸಬೇಕು ಎಂದು ಕರೆ ನೀಡಿದ್ದಾರೆ.
ಭಾರತದಲ್ಲಿ ಅನೇಕ ದೊಡ್ಡ ಕೈಗಾರಿಕೋದ್ಯಮಿಗಳಿದ್ದಾರೆ. ಅವರು ತಮ್ಮ ಎಲ್ಲಾ ಉದ್ಯೋಗಿಗಳು ಘರ್ ವಾಪಸಿಗೆ ಒಳಗಾಗಬೇಕೆಂದು ನಿರ್ಧರಿಸಿದರೆ, ಅದನ್ನು ಬಹಳ ಸುಲಭವಾಗಿ ಮಾಡಬಹುದು ಮತ್ತು ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಹೇಳಿದ್ದಾರೆ.
ಯಾವುದೇ ತಂದೆ ತನ್ನ ಮಗಳು “ತ್ರಿವಳಿ ತಲಾಖ್, ಹಲಾಲಾ” ನಂತಹ ಪದ್ಧತಿಗಳನ್ನು ಎದುರಿಸಬೇಕೆಂದು ಅಥವಾ “ಮಕ್ಕಳನ್ನು ಹೆರುವ ಯಂತ್ರ” ಆಗಬೇಕೆಂದು ಬಯಸುವುದಿಲ್ಲ. ಯಾವುದೇ ಸಹೋದರನು ತನ್ನ ಸಹೋದರಿಯ ಪಕ್ಕದಲ್ಲಿ ಇನ್ನೊಬ್ಬ ಮಹಿಳೆ ಶೈತಾನ್ ಆಗಿ ನಿಲ್ಲಬೇಕೆಂದು ಬಯಸುವುದಿಲ್ಲ. ಇದು ನಡೆಯುತ್ತಿರುವುದರಿಂದ, “ನಾವೇ ಪರಿಹಾರವನ್ನು ಕಂಡುಕೊಳ್ಳಬೇಕು” ಎಂದಿದ್ದಾರೆ.
ಘರ್ ವಾಪಸಿ ಮೂಲಕ “ಭಯೋತ್ಪಾದನೆ, ಜಿಹಾದ್ ಮತ್ತು ಕಲ್ಲು ತೂರಾಟ ಕೊನೆಗೊಳ್ಳುತ್ತದೆ” ಎಂದು ಅಶ್ವಿನಿ ಹೇಳಿದ್ದು, ಆಹಾರ ಮಾಲಿನ್ಯದ ಬಗ್ಗೆಯೂ ಅವರು ಅವಮಾನಕರ ಹೇಳಿಕೆಗಳನ್ನು ನೀಡಿದ್ದಾರೆ. ಮುಸ್ಲಿಮರು ಉದ್ದೇಶಪೂರ್ವಕವಾಗಿ ಆಹಾರವನ್ನು ಕಲಬೆರಕೆ ಮಾಡುತ್ತಾರೆ. ಅದನ್ನು ಮತ್ತೆ ಶುದ್ಧಗೊಳಿಸಬೇಕಾಗುತ್ತದೆ. ಘರ್ ವಾಪಸಿ ಆದಲ್ಲಿ ಯಾರೂ ಬ್ರೆಡ್ಗೆ ಉಗುಳುವುದಿಲ್ಲ, ಹಣ್ಣುಗಳ ಮೇಲೆ ಮೂತ್ರ ವಿಸರ್ಜಿಸುವುದಿಲ್ಲ ಅಥವಾ ಆಹಾರವನ್ನು ಕಲುಷಿತಗೊಳಿಸುವುದಿಲ್ಲ ಎಂದು ಉಪಾಧ್ಯಾಯ ದ್ವೇಷ ಕಕ್ಕಿದ್ದಾರೆ.
ಮನುಷ್ಯರು ಮತ್ತು ರಾಕ್ಷಸರು ಒಂದೇ ಅಲ್ಲ ಎಂದ ಉಪಾಧ್ಯಾಯ ಹೇಳಿದ್ದಾರೆ. ಅವರ ಪ್ರಕಾರ, ಕಾನೂನಿನ ಮುಂದೆ ಸಮಾನತೆ ಎಲ್ಲರಿಗೂ ಅನ್ವಯಿಸಬಾರದು. ಸಮಾನತೆ ಅಥವಾ ಚಿಂತನೆಯ ಸ್ವಾತಂತ್ರ್ಯದಲ್ಲಿ ನಂಬಿಕೆ ಇಡದ ಧರ್ಮಕ್ಕೆ ಸಂವಿಧಾನ ಏಕೆ ಅನ್ವಯಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಅವರು ಸಾಮೂಹಿಕವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗೆ ಕರೆ ನೀಡುವ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ್ದಾರೆ.
ಭಾರತ ಇಸ್ಲಾಮಿಕ್ ರಾಷ್ಟ್ರವಾಗುವ ಅಂಚಿನಲ್ಲಿದೆ : ಸುರೇಶ್ ಚಾವಂಕೆ
ಪ್ರಪೊಗಂಡ ಸುದ್ದಿ ವಾಹಿನಿ ಸುದರ್ಶನ್ ನ್ಯೂಸ್ನ ಮಾಲೀಕ ಸುರೇಶ್ ಚಾವಂಕೆ ತಮ್ಮ ಭಾಷಣದಲ್ಲಿ ‘ಜನಸಂಖ್ಯೆ’ಯ ವಿಷಯದ ಮೇಲೆ ಕೇಂದ್ರೀಕರಿಸಿದ್ದು, ಅತ್ಯಂತ ಅವಹೇಳನಕಾರಿ ಮತ್ತು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ.
ತನ್ನ ಭಾಷಣದಲ್ಲಿ ಚಾವಂಕೆ ಅವರು ಭಾರತವು ಅಸಮಾನ ಜನಸಂಖ್ಯಾ ಬೆಳವಣಿಗೆಯಿಂದಾಗಿ ‘ಇಸ್ಲಾಮಿಕ್ ದೇಶ’ವಾಗುವ ಅಂಚಿನಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕೇವಲ ಸಂಖ್ಯೆಗಳೇ ಮುಖ್ಯ ಎಂದು ವಾದಿಸಿದ ಅವರು, ಹಿಂದೂಗಳು ಜನಸಂಖ್ಯಾ ಯುದ್ಧದಲ್ಲಿ ಸೋತಿದ್ದೇವೆ ಎಂದು ಹೇಳಿದ್ದಾರೆ. ಮುಸ್ಲಿಮರು ಬಹುಪತ್ನಿತ್ವವನ್ನು ಅನುಸರಿಸಿ ಅತಿಯಾದ ದೊಡ್ಡ ಕುಟುಂಬಗಳನ್ನು ಹೊಂದಿದ್ದಾರೆ. ಅವರಿಗೆ ನಾಲ್ಕು ಜನರ ಹೆಂಡತಿಯರು ಮತ್ತು 44 ಜನ ಮಕ್ಕಳು. ಆದರೆ ,ಹಿಂದೂಗಳು ಕುಟುಂಬ ನಿಯಂತ್ರಣದ ಘೋಷವಾಕ್ಯವಾದ “ಹುಮ್ ದೋ ಹಮಾರೆ ದೋ” ಅನ್ನು ವೇದ ಮಂತ್ರದಂತೆ ಅನುಸರಿಸುತ್ತಿದ್ದಾರೆ. ಇದರಿಂದ ಹಿಂದೂ ಜನಸಂಖ್ಯಾ ಬೆಳವಣಿಗೆಯು ತೀವ್ರವಾಗಿ ಕುಸಿದಿದೆ. ಇದು ದೇಶದ ಜನಸಂಖ್ಯಾ ಸಂಯೋಜನೆಯನ್ನು ವಕ್ರಗೊಳಿಸುವ ದೀರ್ಘಕಾಲೀನ ಷಡ್ಯಂತ್ರ ಎಂದು ಅವರು ಆರೋಪಿಸಿದ್ದಾರೆ.
58 ಇಸ್ಲಾಮಿಕ್ ರಾಷ್ಟ್ರಗಳಲ್ಲಿ, ಕೇವಲ 13 ದೇಶಗಳು ಸಶಸ್ತ್ರ ಸಂಘರ್ಷದ ಮೂಲಕ ಇಸ್ಲಾಮಿಕ್ ಆಗಿವೆ. ಉಳಿದ 45-35 ದೇಶಗಳು ‘ಶಿಶುಗಳನ್ನು ಉತ್ಪಾದಿಸುವ’ ಮೂಲಕ ಇಸ್ಲಾಮಿಕ್ ಆಗಿವೆ ಎಂದು ಹೇಳಿದ್ದಾರೆ. ಮುಂದಿನ 12 ವರ್ಷಗಳಲ್ಲಿ, ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಹಿಂದೂಗಳು ಮತ್ತು ಮುಸ್ಲಿಮರ ಪ್ರಸ್ತುತ ಜನನ ಅನುಪಾತ ಮುಂದುವರಿದರೆ ದೇಶವು ನಮ್ಮ ಕೈಯಿಂದ ಜಾರಿ ಹೋಗುತ್ತದೆ. ಚಾಟ್ಜಿಪಿಟಿ ಮತ್ತು ಜೆಮಿನಿಯಂತಹ ಕೃತಕ ಬುದ್ಧಿಮತ್ತೆ ಸಾಫ್ಟ್ವೇರ್ಗಳು ಸಹ ಇದನ್ನು ಹೇಳಿವೆ ಎಂದು ಚಾವಂಕೆ ಹೇಳಿದ್ದಾರೆ.
ಈ ಸಮಸ್ಯೆಗೆ ಚಾವಂಕೆ ಮೂರು ಪರಿಹಾರಗಳನ್ನು ಪ್ರಸ್ತಾಪಿಸಿದ್ದಾರೆ
ಮೊದಲನೆಯದಾಗಿ, ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಜಾರಿಗೆ ತರಬೇಕು ಮತ್ತು ಎಲ್ಲಾ ಒಳನುಸುಳುವವರು ಮತ್ತು ಅತಿಕ್ರಮಣಕಾರರನ್ನು ದೇಶದಿಂದ ಹೊರಹಾಕಬೇಕು. ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಯ ಶೇ. 25ರಷ್ಟು ಜನರು ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇತರ ನೆರೆಯ ದೇಶಗಳಿಂದ ಒಳನುಸುಳುವವರಾಗಿದ್ದಾರೆ ಎಂದು ಚಾವಂಕೆ ಹೇಳಿದ್ದಾರೆ.
ಎರಡನೆಯದಾಗಿ, ಮುಸ್ಲಿಮರಿಗೆ ನಾಲ್ಕು ಮದುವೆಗಳನ್ನು ನಿಷೇಧಿಸುವುದು ಮತ್ತು ಹಲವು ಮಕ್ಕಳನ್ನು ಹೊಂದುವುದನ್ನು ನಿಷೇಧಿಸುವುದು ಸೇರಿದಂತೆ ಮುಸ್ಲಿಮರ ಮೇಲೆ ಮಾತ್ರ ನಿರ್ಬಂಧಗಳನ್ನು ವಿಧಿಸುವುದನ್ನು ಚಾವಂಕೆ ಪ್ರತಿಪಾದಿಸಿದ್ದಾರೆ. ಏನು ಬೇಕಾದರು ಮಾಡಲು ಭಾರತ ನಿಮ್ಮ ಅಪ್ಪನ ಆಸ್ತಿಯಲ್ಲ ಎಂದಿದ್ದಾರೆ.
ಒಂದಕ್ಕಿಂತ ಹೆಚ್ಚು ಮದುವೆಗಳು ಇರಬಾರದು ಮತ್ತು ಎರಡಕ್ಕಿಂತ ಹೆಚ್ಚು ಮಕ್ಕಳು ಇರಬಾರದು. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಇದ್ದ ಮುಸ್ಲಿಮರ ಶೇಕಡಾವಾರು ಪ್ರಮಾಣಕ್ಕಿಂತ 1% ಹೆಚ್ಚಿರಬಾರದು ಎಂಬ ಮಿತಿಯನ್ನು ಜಾರಿಗೆ ತರುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಅಂತಹ ಮಿತಿಗಳನ್ನು ವಿಧಿಸಲು ವಿಫಲವಾದರೆ ಅದು “ಹಿಂದೂಗಳಿಗೆ ದ್ರೋಹ” ಮಾಡಿದಂತೆ. ಧಾರ್ಮಿಕ ಆಧಾರದ ಮೇಲೆ ಪ್ರತ್ಯೇಕ ದೇಶವನ್ನು ರಚಿಸಲಾಗಿದ್ದರೂ, ಜನಸಂಖ್ಯೆಯ ಬೆಳವಣಿಗೆಯ ಮೂಲಕ ಮುಸ್ಲಿಮರು ಭಾರತವನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಆದರೆ ಹಿಂದೂಗಳು ಈಗ ಎಚ್ಚರಗೊಂಡಿದ್ದಾರೆ ಅವರು ಮತ್ತೆ ಈ ತಪ್ಪನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಚಾವಂಕೆ ಅವರು ಪ್ರಸ್ತುತ ಬಿಜೆಪಿ/ಮೋದಿ ಸರ್ಕಾರಕ್ಕೆ ನಿಸ್ಸಂದಿಗ್ಧ ಬೆಂಬಲ ವ್ಯಕ್ತಪಡಿಸಿದ್ದು, ಪಕ್ಷದ ಉದ್ದೇಶಗಳ ಬಗ್ಗೆ ಅಥವಾ ಪ್ರಧಾನಿ ಮೋದಿಯವರ ನಾಯಕತ್ವದ ಬಗ್ಗೆ ತಮಗೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಮುಸ್ಲಿಂ ಜನಸಂಖ್ಯೆಯನ್ನು ಕಡಿಮೆ ಮಾಡುವುದು ಸರ್ಕಾರದ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿರಬೇಕು. ಮುಸ್ಲಿಂ ಜನಸಂಖ್ಯೆಯನ್ನು ಕಡಿಮೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಿರಬೇಕು. ಇದನ್ನೇ ನಾವು ಬೇಡುತ್ತೇವೆ ಎಂದಿದ್ದಾರೆ.
ಮೂರನೆಯದಾಗಿ, ಜನಸಂಖ್ಯಾ ಸಮತೋಲನದ ಒಂದು ರೂಪವಾಗಿ ಹಿಂದೂಗಳ ಕುಟುಂಬದ ಗಾತ್ರವನ್ನು ಹೆಚ್ಚಿಸಬೇಕೆಂದು ಅವರು ಕರೆ ನೀಡಿದ್ದು, ಹಿಂದೂಗಳು ಹೆಚ್ಚಿನ ಮಕ್ಕಳನ್ನು ಹೊಂದಬೇಕು. ನೀವು ಎಷ್ಟು ಮಕ್ಕಳನ್ನು ನೋಡಿಕೊಳ್ಳಬಹುದೋ ಅಷ್ಟು ಮಕ್ಕಳನ್ನು ಹೊಂದಿರಿ. ಯಾರಿಗಾದರೂ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ, ಅವರ ಶಿಕ್ಷಣವನ್ನು ನಾನು ನೋಡಿಕೊಳ್ಳುತ್ತೇನೆ. ಈ ಉದ್ದೇಶಕ್ಕಾಗಿ ನಾವು ನಾಸಿಕ್ನಲ್ಲಿ ಗುರುಕುಲವನ್ನು ಪ್ರಾರಂಭಿಸುತ್ತಿದ್ದೇವೆ. ಮಕ್ಕಳನ್ನು ಹೊಂದಲು ತುಂಬಾ ತಡ ಆದವರು ತಮ್ಮ ಮಕ್ಕಳಿಗೆ ಮತ್ತು ಸಂಬಂಧಿಕರಿಗೆ ಮಕ್ಕಳನ್ನು ಹೊಂದಲು ಹೇಳಬೇಕು ಎಂದು ಕರೆ ನೀಡಿದ್ದಾರೆ.
ಚಾವಂಕೆ ಅವರು ಒಂದು ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು, ಅಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವಾಗ ಅವರ ಆರಂಭಿಕ ಸಾಲುಗಳು ಅತ್ಯಂತ ಪ್ರಚೋದನಕಾರಿಯಾಗಿದ್ದವು. “ಈ ಮಾಲ್ ಒಳಗೆ ಇರುವ ಜನರು ಮಾತ್ರವಲ್ಲ, ದೆಹಲಿಯಲ್ಲಿ ವಾಸಿಸುವ ಎಲ್ಲಾ ಕಟ್ಮುಲ್ಲಾಗಳು (ಮುಸ್ಲಿಮರನ್ನು ಉಲ್ಲೇಖಿಸಲು ಬಳಸುವ ಅವಹೇಳನಕಾರಿ ಆಡುಭಾಷೆ) ಇಂದು ಇಲ್ಲಿ ಏನು ನಡೆಯುತ್ತಿದೆ ಎಂದು ತಿಳಿದಿರಬೇಕು. ಭಾರತ್ ಮಾತಾ ಕಿ ಜೈ! ಜೈ ಶ್ರೀ ರಾಮ್!” ಎಂದು ಚಾವಂಕೆ ಭಾಷಣ ಮುಗಿಸಿದ್ದಾರೆ.
ತನ್ನ ಭಾಷಣದಲ್ಲಿ “ಮೋದಿ ಜಿ, ದಯವಿಟ್ಟು ಭಾರತದ ಮುಸ್ಲಿಮರಿಗೆ ಅನುಕೂಲವಾಗುವ ಎಲ್ಲಾ ಯೋಜನೆಗಳನ್ನು ನಿಲ್ಲಿಸಿ” ಎಂದು ಚಾವಂಕೆ ಮನವಿ ಮಾಡಿದ್ದು, ಅವರ ಪ್ರಕಾರ ಇದು ಘರ್ ವಾಪಸಿಗೆ ಅನುಕೂಲವಾಗುತ್ತದೆ.

ಹಿಂದೂಗಳನ್ನು ಸ್ಥಳಾಂತರಿಸಲಾಗುತ್ತಿದೆ: ಪ್ರದೀಪ್ ಭಂಡಾರಿ
ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, “ಜನಸಂಖ್ಯೆಯು ಪ್ರಜಾಪ್ರಭುತ್ವದ ಹಣೆಬರಹ” ಎಂದು ಹೇಳುತ್ತಾ, ದೇಶದ ಜನಸಂಖ್ಯಾಶಾಸ್ತ್ರ ಬದಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ನುಸುಳುಕೋರರು ವಾಸಿಸುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದು, ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರು ಹಿಂದೂ ಬಹುಸಂಖ್ಯಾತರಾಗಿರುವ ಯಾವುದೇ ಪ್ರದೇಶಗಳಿಲ್ಲ. ಮುಸ್ಲಿಂ ಬಹುಸಂಖ್ಯಾತ ಸಮುದಾಯಗಳಿಂದ ಸುತ್ತುವರೆದಿರುವ ಪ್ರದೇಶಗಳಿಂದ ಹಿಂದೂಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹಿಂದೂ ಅಲ್ಪಸಂಖ್ಯಾತ ಪ್ರದೇಶಗಳಿಂದ ಹಿಂದೂಗಳ ಕುರುಹುಗಳು ಅಳಿಸಲಾಗುತ್ತಿದೆ ಎಂದಿದ್ದಾರೆ.
‘ಆಕ್ರಮಣಕಾರಿ ತಂತ್ರ ಬೇಕು’, ‘ಮಸೀದಿಗಳನ್ನು ಮರಳಿ ಪಡೆಯಿರಿ’
ಇತರ ಭಾಷಣಕಾರರಲ್ಲಿ ಹಿಂದೂ ಫಂಡ್ ಎಂಬ ಸಂಘಟನೆಯ ರಾಹುಲ್ ದಿವಾನ್ ಮಾತನಾಡಿ, ಮುಸ್ಲಿಮರ ಸಾಮೂಹಿಕ ಮತಾಂತರವನ್ನು ಪ್ರತಿಪಾದಿಸಿದ್ದು, ಸಾಂವಿಧಾನಿಕ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಆಕ್ರಮಣಕಾರಿ ತಂತ್ರವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಮತಾಂತರ ವಿರೋಧಿ ಕಾನೂನುಗಳು, ಬುಲ್ಡೋಜರ್ ನ್ಯಾಯ, ಲವ್ ಜಿಹಾದ್ ಬಗ್ಗೆ ಜಾಗೃತಿ, ಎಸಿ ಮೆಕ್ಯಾನಿಕ್ಗಳು ಮತ್ತು ವರ್ಣಚಿತ್ರಕಾರರ ಉದ್ಯೋಗಗಳನ್ನು ಹಿಂದೂಗಳಿಗೆ ಪ್ರತ್ಯೇಕವಾಗಿ ಕಾಯ್ದಿರಿಸುವುದು ಮತ್ತು ಏಕರೂಪ ನಾಗರಿಕ ಸಂಹಿತೆ ಎಲ್ಲವೂ ರಕ್ಷಣಾತ್ಮಕ ತಂತ್ರಗಳಾಗಿವೆ. ನಮಗೆ ಆಕ್ರಮಣಕಾರಿ ತಂತ್ರ ಬೇಕು… ನಮಗೆ ಸಾಂವಿಧಾನಿಕ ಹಿಂದೂ ರಾಷ್ಟ್ರ ಬೇಕು. ಯಾವುದೇ ಹಿಂದುತ್ವ ಸಂಘಟನೆಯು ಹಿಂದೂ ರಾಷ್ಟ್ರದ ಕಾರಣಕ್ಕಾಗಿ ಏನನ್ನೂ ಮಾಡುತ್ತಿಲ್ಲ ಎಂದು ಅವರು ದೂರಿದ್ದಾರೆ.
ಸಾವಿರಾರು ದೇವಾಲಯಗಳನ್ನು ಕೆಡವಿ ಮಸೀದಿಗಳು ಮತ್ತು ದರ್ಗಾಗಳಾಗಿ ಪರಿವರ್ತಿಸಲಾಗಿದ್ದು, ಅವುಗಳನ್ನು ಮರಳಿ ಪಡೆಯಬೇಕಾಗಿದೆ ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಪ್ರತಿಪಾದಿಸಿದ್ದಾರೆ.
ಒಟ್ಟಾರೆಯಾಗಿ, ಕಾರ್ಯಕ್ರಮದಲ್ಲಿ ಮಾಡಿದ ಪ್ರತಿಯೊಂದು ಭಾಷಣವೂ ಭಾರತದ ಬಹುತ್ವದ ರಚನೆ ಮತ್ತು ಜಾತ್ಯತೀತ ಸ್ಥಾನಮಾನವನ್ನು ಪ್ರಶ್ನಿಸಿವೆ. ಕೆಲವು ಭಾಷಣಗಳು ಸ್ಪಷ್ಟವಾಗಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುವಂತಿದ್ದವು. ಇನ್ನು ಕೆಲವು ಭಾಷಣಗಳಲ್ಲಿ ಪರೋಕ್ಷವಾಗಿ ಇದೇ ರೀತಿಯ ಅಂಶಗಳನ್ನು ಮಂಡಿಸಲಾಗಿದೆ. ಇವೆಲ್ಲದಕ್ಕೂ ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ದೆಹಲಿ ಸರ್ಕಾರ ವೇದಿಕೆ ಒದಗಿಸಿತ್ತು.
Courtesy : altnews.in


