“ನಾನು ಕೂಡ ಎಲ್ಲ ರೈತರಂತೆ ಹೊಲ ಮತ್ತು ದನಗಳ ಬಗ್ಗೆ ಕಾಳಜಿ ವಹಿಸುತ್ತಿದ್ದೆ. ಆದರೆ ರೈತರು ದೆಹಲಿ ಚಲೋಗೆ ಕರೆ ನೀಡಿದರು. ಈ ಪ್ರತಿಭಟನೆ ಪ್ರಾರಂಭವಾದಾಗ ಇದು ಐತಿಹಾಸಿಕವಾಗಲಿದೆ ಎಂದು ಭಾವಿಸಿದೆ ಮತ್ತು ನಾನು ಅಲ್ಲಿರಬೇಕು ಎಂದು ನಿರ್ಧರಿಸಿದೆ”.. ಇವು ಕಳೆದ ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ಹಗಲು ರಾತ್ರಿ ಎನ್ನದೆ, ದೆಹಲಿ ಗಡಿಗಳಲ್ಲಿನ ಮತ್ತು ದೇಶದ ರೈತ ಹೋರಾಟದ ಕ್ಷಣ ಕ್ಷಣದ ಅಧಿಕೃತ ಮಾಹಿತಿ ನೀಡುವ ಸಂದೀಪ್ ಸಿಂಗ್ ಎಂಬ ಯುವಕ/ಪತ್ರಕರ್ತ/ಹೋರಾಟಗಾರನ ಮಾತುಗಳು…
ದೆಹಲಿಯ ಗಡಿಗಳಲ್ಲಿ ಭದ್ರವಾಗಿ ಕೂತಿದ್ದ ಐತಿಹಾಸಿಕ ರೈತ ಹೋರಾಟ ಜಯಗಳಿಸಿದೆ. ಸಂಯುಕ್ತ ಕಿಸಾನ್ ಮೋರ್ಚಾದ ಎಲ್ಲಾ ಹಕ್ಕೊತ್ತಾಗಳನ್ನು ಒಕ್ಕೂಟ ಸರ್ಕಾರ ಒಪ್ಪಿಕೊಂಡಿದೆ. ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸಿರುವ ರೈತರು ಸಂಭ್ರಮದ ವಿಜಯೀ ಮೆರವಣಿಗೆ ಮೂಲಕ ತಮ್ಮ ಸ್ವಗ್ರಾಮಗಳನ್ನು ತಲುಪುತ್ತಿದ್ದಾರೆ. ಈ ವಿಜಯಕ್ಕೆ ಲಕ್ಷಾಂತರ ಜನರ ಕೊಡುಗೆಯಿದೆ. ಅಂತಯೇ ಸಂದೀಪ್ ಸಿಂಗ್ ತಮ್ಮ ವೇಗವಾದ, ವಸ್ತುನಿಷ್ಠ ವರದಿಗಾರಿಗೆ ಮೂಲಕ ರೈತ ಹೋರಾಟದ ಅಸಲಿ ವಿಷಯಗಳು ಪ್ರಪಂಚ ತಲುಪವಂತೆ ಮಾಡುವ ಮೂಲಕ ಹೋರಾಟದ ಭಾಗವಾಗಿದ್ದರು.
ಪ್ರತಿಭಟನಾನಿರತ ರೈತರ ಮಧ್ಯೆ ಗ್ರೌಂಡ್ ರಿಪೋರ್ಟ್ ಮಾಡುತ್ತ ಅತ್ಯಂತ ವಸ್ತುನಿಷ್ಟ ಪತ್ರಕರ್ತರಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಸಂದೀಪ್ ಸಿಂಗ್ “ದಯವಿಟ್ಟು ನನ್ನ ವರದಿಗಳಲ್ಲಿನ ಕಾಗುಣಿತ ತಪ್ಪುಗಳನ್ನು ಮರೆತುಬಿಡಿ, ಅದರ ಸಾರವನ್ನಷ್ಟೇ ಗಮನಿಸಿ. ಏಕೆಂದರೆ ಕಡಿಮೆ ಸಮಯದಲ್ಲಿ ಹೇಳಲು ಬಹಳಷ್ಟು ವಿಷಯಗಳಿವೆ” ಎನ್ನುತ್ತಾರೆ.
ಸಂದೀಪ್ ಸಿಂಗ್‌ರವರ ಟ್ವಿಟರ್ ಟೈಮ್‌ಲೈನ್ ಅನ್ನು ನೀವು ಗಮನಿಸಿದರೆ ತಿಳಿಯುತ್ತದೆ ಅವರೆಷ್ಟು ಆಳವಾಗಿ ರೈತ ಹೋರಾಟವನ್ನು ವರದಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು. ಪ್ರತಿ ಗಂಟೆಗೂ ಮೂರು-ನಾಲ್ಕು ವಿಷಯಗಳ ಕುರಿತು ವರದಿ ನೀಡಿರುತ್ತಾರೆ. ಅವೆಲ್ಲವೂ ಬ್ರೇಕಿಂಗ್ ನ್ಯೂಸ್‌ಗಳ ರೂಪದಲ್ಲಿರುತ್ತವೆ. ಅದರೊಂದಿಗೆ ಫೋಟೊ, ವಿಡಿಯೋಗಳು ಇದ್ದು ರೈತ ಹೋರಾಟದ ಸಮರ್ಪಕ ಮಾಹಿತಿ ನೋಡುಗರಿಗೆ ದೊರೆಯುತ್ತದೆ.
ಕಳೆದ ಒಂದು ವರ್ಷದಿಂದಲೂ ರೈತ ಹೋರಾಟದ ಪ್ರತಿ ಮಾಹಿತಿಯನ್ನು ಇಂಗ್ಲಿಷ್ ಭಾಷೆಯಲ್ಲಿ ತಲುಪಿಸಲು ಶ್ರಮಿಸುತ್ತಿರುವ ಸಂದೀಪ್ ಸಾವಿರಾರು ಟ್ವೀಟ್‌ಗಳನ್ನು ಮಾಡಿದ್ದಾರೆ. “ಈ ಮೊದಲು ಸಹ ಪಂಜಾಬಿ ಮಾಧ್ಯಮಗಳು ರೈತ ಹೋರಾಟದ ಪ್ರತಿಯೊಂದನ್ನು ವರದಿ ಮಾಡುತ್ತಿದ್ದವು. ಆದರೆ ಅದನ್ನು ದೇಶಕ್ಕೆ ಮತ್ತು ಪ್ರಪಂಚಕ್ಕೆ ತಿಳಿಸಬೇಕಾಗಿತ್ತು. ಅದಕ್ಕಾಗಿ ನಾನು ಪ್ರತಿಯೊಂದನ್ನು ವಿಡಿಯೋ ಮಾಡಿ, ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಲು ಆರಂಭಿಸಿದೆ. ಇದು ಕೆಲವೇ ದಿನಗಳಲ್ಲಿ ದೇಶದೆಲ್ಲೆಡೆ ತಲುಪಲು ಸಾಧ್ಯವಾಯಿತು. ಹಾಗಾಗಿ ಮತ್ತಷ್ಟು ತನ್ಮಯತೆಯೊಂದಿಗೆ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ” ಎನ್ನುತ್ತಾರೆ.
“2020ರ ನವೆಂಬರ್ 24 ರಂದು ನಾನು ಪಂಜಾಬ್‌ನ ಹಳ್ಳಿಯಿಂದ ಇಲ್ಲಿಗೆ ಬಂದೆ. ನನ್ನ ಕೆಲವು ವಿಡಿಯೋಗಳು ವೈರಲ್ ಆಗಿವೆ. ನನ್ನ ಟ್ವಿಟರ್ ಫಾಲೋವರ್ಸ್‌ಗಳ ಸಂಖ್ಯೆ ದ್ವಿಗುಣವಾಗಿದೆ. ಮೊದಲು ನಾಲ್ಕು ತಿಂಗಳು ಒಮ್ಮೆಯೂ ರಜೆ ತೆಗೆದುಕೊಳ್ಳಲಿಲ್ಲ. ದೆಹಲಿಯ ಗಡಿಗಳಲ್ಲಿಯೂ ತಿರುಗಾಡುತ್ತ ವರದಿ ಮಾಡುತ್ತಿದ್ದೇನೆ” ಎಂದು ಸಂದೀಪ್ ಸಿಂಗ್ ಹೇಳಿದ್ದಾರೆ.
ತಮ್ಮ ಮೊಬೈಲ್‌ನಲ್ಲಿಯೇ ಪ್ರತಿಭಟನೆಗಳ ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿ ಟ್ವೀಟ್ ಮಾಡುವ ಸಂದೀಪ್ ಸಿಂಗ್‌ರವರ ಕೆಲಸಕ್ಕೆ ಹಲವಾರು ಪತ್ರಕರ್ತರು, ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ. ಅಲ್‌ಜಜೀರಾ ಟಿವಿ ಸಹ ಅವರ ಬಗ್ಗೆ ವರದಿ ಮಾಡಿದೆ. ಅವರ ಟ್ವೀಟ್‌ಗಳನ್ನು ಸಾವಿರಾರು ಜನ ಹಂಚಿಕೊಂಡಿದ್ದಾರೆ. ಬಹಳಷ್ಟು ಮಾಧ್ಯಮಗಳು ರೈತ ಹೋರಾಟದ ವರದಿ ಮಾಡಲು ಸಂದೀಪ್ ಸಿಂಗ್‌ರವರನ್ನು ಸಂಪನ್ಮೂಲವನ್ನಾಗಿ ನೋಡುತ್ತಾರೆ.
ಒಟ್ಟಿನಲ್ಲಿ ಹವ್ಯಾಸಿ ಪತ್ರಕರ್ತರಾಗಿದ್ದ ಸಂದೀಪ್ ಸಿಂಗ್ ರೈತ ಹೋರಾಟವನ್ನು ಸವಿವರವಾಗಿ ವರದಿ ಮಾಡಿದ ನಂತರ ಖ್ಯಾತರಾಗಿದ್ದಾರೆ. ಗೋದಿ ಮಾಧ್ಯಮಗಳಿಂದ ಬೇಸತ್ತಿರುವ ಸಾವಿರಾರು ರೈತರು ಸಂದೀಪ್‌ರನ್ನು ಅಭಿಮಾನದಿಂದ ನೋಡುತ್ತಾರೆ. ಹಲವಾರು ಪತ್ರಿಕೆಗಳು ಅವರಿಂದ ವರದಿ ಬಯಸಿವೆ ಅಷ್ಟೇ ಅಲ್ಲದೆ ಉದ್ಯೋಗದ ಆಫರ್ ಕೂಡ ನೀಡಿವೆ. ಅವರು ಶ್ರದ್ಧೆಯಿಂದ ಮಾಡಿದ ಕೆಲಸ ದೇಶದ ಹಲವರಿಗೆ ಮಾಹಿತಿ ನೀಡಿದ್ದಲ್ಲದೆ ಅವರಿಗೂ ಖ್ಯಾತಿ ತಂದುಕೊಟ್ಟಿದೆ.
ಇಂದು ಸಹ ಸಂದೀಪ್ ಸಿಂಗ್ ರೈತರ ಫತೇ ಮಾರ್ಚ್ ಅನ್ನು ವರದಿ ಮಾಡಿದ್ದಾರೆ. ಅದಕ್ಕಾಗಿ ಪಂಜಾಬಿನ ಅವರ ಸ್ನೇಹಿತರೊಬ್ಬರು ರೈತರು ಮನೆಗೆ ಬರುತ್ತಿದ್ದಾರೆ. ನೀನು ಯಾವಾಗ ಬರುತ್ತೀ ಸಂದೀಪ್ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಸಂದೀಪ್‌ರವರ ಈ ಒಂದು ವರ್ಷದ ಶ್ರಮಕ್ಕೆ ಅಭಿನಂದನೆ ಸಲ್ಲಿಸಲೇಬೇಕು.
ಸಂದೀಪ್ ಸಿಂಗ್‌ರವರ ಟ್ವಿಟರ್ ಫಾಲೋ ಮಾಡಲು ಇಲ್ಲಿ ಮತ್ತು ಯೂಟ್ಯೂಬ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ರೈತರ ವಿಜಯೀ ಮೆರವಣಿಗೆ ಆರಂಭ: ವಿಡಿಯೋ – ಚಿತ್ರಗಳಲ್ಲಿ ನೋಡಿ


