Homeಕರ್ನಾಟಕಶೋಷಿತರ ಪ್ರಬಲ ಮಿತ್ರ ಅವರದ್ದೇ ಆದ ಸಂಘಟನೆ: ಜಸ್ಟೀಸ್ ಕೆ.ಚಂದ್ರು

ಶೋಷಿತರ ಪ್ರಬಲ ಮಿತ್ರ ಅವರದ್ದೇ ಆದ ಸಂಘಟನೆ: ಜಸ್ಟೀಸ್ ಕೆ.ಚಂದ್ರು

‘ಜೈ ಭೀಮ್‌’ ಸಿನಿಮಾಕ್ಕೆ ಸ್ಫೂರ್ತಿಯಾಗಿರುವ ಜಸ್ಟೀಸ್ ಕೆ.ಚಂದ್ರು ಅವರು ಬೆಂಗಳೂರಿನ ಗಾಂಧಿಭವನದಲ್ಲಿ ಜಸ್ಟೀಸ್ ನಾಗಮೋಹನ ದಾಸ್ ಅವರ ‘ಮಾನವ ಹಕ್ಕುಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

- Advertisement -
- Advertisement -

“ಶೋಷಿತರ ಅತ್ಯಂತ ಪ್ರಬಲ‌ ಮಿತ್ರ ಅವರದ್ದೇ ಆದ ಸಂಘಟನೆ” ಎಂದು ಜೈಭೀಮ್‌ ಸಿನೆಮಾಕ್ಕೆ ಪ್ರೇರಣೆಯಾದ, ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಹೇಳಿದರು.

ಬೆಂಗಳೂರಿನ ಗಾಂಧಿಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಸ್ಟೀಸ್ ಎಚ್‌.ಎನ್‌.ನಾಗಮೋಹನ ದಾಸ್ ಅವರ ‘ಮಾನವ ಹಕ್ಕುಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನ್ಯಾಯಾಂಗ ಏನು ಮಾಡಲು ಸಾಧ್ಯವಾಗುತ್ತದೆ? ಸಮಾಜ ಬದಲಾಗಬೇಕಲ್ಲವೇ ಎಂದು ಅನೇಕರು ನಮ್ಮನ್ನು ಕೇಳುತ್ತಾರೆ. ಸಮಾಜ ಬದಲಾಗುವವರೆಗೆ ಶೋಷಿತರಿಗೆ ನ್ಯಾಯ ಬೇಕಲ್ಲವೇ? ಶೋಷಿತರು ಬದುಕಬೇಕಲ್ಲವೇ? ಪ್ರತಿದಿನ ಅವರು ಜೀವನ ಮಾಡಬೇಕಾದರೆ ನ್ಯಾಯಾಂಗ ರಕ್ಷಣೆ ನೀಡಬೇಕು. ಒಬ್ಬ ಸರಿಯಾದ ವಕೀಲ, ಒಬ್ಬ ದಿಟ್ಟತನ ಇರುವ ನ್ಯಾಯಾಧೀಶ, ಒಬ್ಬ ಸರಿಯಾದ ಅಧಿಕಾರಿ ಅಂತಹ ಬದಲಾವಣೆಗಳನ್ನು ತರಬಲ್ಲರು. ಆ ಶಕ್ತಿ ಅವರಿಗೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಾಜ ಬದಲಾಗುವವರೆಗೆ ಶೋಷಿತರು ಬದಕಬೇಕಾದ ರೀತಿಯಲ್ಲಿ ನ್ಯಾಯಾಂಗ ಇರಬೇಕು. ಭಾರತದೊಳಗೆ ಶೋಷಿತರ ಸ್ಥಿತಿ ಏನು ಎಂಬುದನ್ನು ನಾನು, ನಾಗಮೋಹನ್ ದಾಸ್ ಥರದವರು ನೋಡಿದ್ದೇವೆ. ‘ಜೈ ಭೀಮ್‌’ ಥರದ ಸಿನೆಮಾಗಳಿಂದ ಲಾಕಪ್‌ ಡೆತ್‌ಗಳು ನಿಂತು ಹೋಗುವುದಿಲ್ಲ. ಆದರೆ ಸಿನೆಮಾ ನೋಡಿದ ಜನರು ಎಚ್ಚೆತ್ತುಕೊಂಡು ಸಂಘಟಿತರಾದಾಗ ಖಂಡಿತ ಇಂತಹ ಘಟನೆಗಳು ನಿಲ್ಲುತ್ತವೆ. ಜೈ ಭೀಮ್‌ ಸಿನೆಮಾ ಬಂದ ಮೇಲೆ ಸಾಕಷ್ಟು ಕಡೆ ಜನರು ಸಂಘಟಿತರಾಗುತ್ತಿದ್ದಾರೆ. ಅನೇಕ ಆದಿವಾಸಿ ಗುಂಪುಗಳು ಸಂಘಟನೆ ಮಾಡಿಕೊಂಡು ಹೋರಾಟಕ್ಕೆ ಇಳಿಯುತ್ತಿರುವುದನ್ನು ನಾವು ಕೇಳಿದ್ದೇವೆ ಎಂದರು.

ಇದನ್ನೂ ಓದಿರಿ: ಆಂಧ್ರಪ್ರದೇಶ: ಅರ್ಧ ಯಕೃತ್ ದಾನ ಮಾಡಿ ತಂದೆ ಜೀವ ಉಳಿಸಿದ ಮಗಳು

ಬ್ರಿಟಿಷರ ಕಾಲದಲ್ಲಿ ಸಾರ್ವಜನಿಕರನ್ನು ಅಪರಾಧಿಗಳೆಂದು ಬಿಂಬಿಸುವ ಕಾನೂನುಗಳು ಜಾರಿಯಾದವು. ಅನೇಕ ಬುಡಕಟ್ಟು ಸಮುದಾಯಗಳನ್ನು ಕ್ರಿಮಿನಲ್‌ಗಳು ಎಂದು ಪಟ್ಟಿ ಮಾಡಲಾಯಿತು. ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಹೋದರೂ ಟ್ರೈಬ್‌ಗಳನ್ನು ಕ್ರಿಮಿನಲ್‌ಗಳಾಗಿ ನೋಡುವ ಮನಸ್ಥಿತಿ ಮಾತ್ರ ಪೊಲೀಸರಲ್ಲಿ ಇನ್ನೂ ಹಾಗೇ ಇದೆ ಎಂದು ವಿಷಾದಿಸಿದರು.

‘ಜೈ ಭೀಮ್‌’ ಸಿನಿಮಾಕ್ಕೆ ಸ್ಫೂರ್ತಿಯಾಗಿರುವ ಜಸ್ಟೀಸ್ ಕೆ.ಚಂದ್ರು ಅವರು ಬೆಂಗಳೂರಿನ ಗಾಂಧಿಭವನದಲ್ಲಿ ಜಸ್ಟೀಸ್ ನಾಗಮೋಹನ ದಾಸ್ ಅವರ ‘ಮಾನವ ಹಕ್ಕುಗಳು’ ಕೃತಿ ಬಿಡುಗಡೆಗೊಳಿಸಿದರು.

ಇಂದು ಪೊಲೀಸರು ಒಂದು ಚಾರ್ಜ್‌‌ಶೀಟ್‌ ಅಥವಾ ದೂರು ಬರೆದರೆ ಅದರ ಮೇಲೆ ‘ಕೆ.ಆರ್‌.’, ‘ಐ.ಆರ್‌.’ ಎಂದು ಬರೆಯುತ್ತಾರೆ. ಕೆ.ಆರ್‌. ಎಂದರೆ- ಕೊರಗ, ಐ.ಆರ್‌. ಎಂದರೆ ಇರುಳಿಗ ಎಂದರ್ಥ. ಪೊಲೀಸರ ಮನಸ್ಸಿನಲ್ಲಿರುವ ಪೂರ್ವಗ್ರಹದಿಂದಾಗಿ ಹೆಸರಿನ ಮುಂದೆ ಹೀಗೆ ಬರೆಯಲಾಗುತ್ತಿದೆ. ಹೆಸರಿನ ಮುಂದಿನ ಇನ್ಶಿಯಲ್‌ ನೋಡಿದ ತಕ್ಷಣ ಅಧಿಕಾರಿಗಳು, ಈ ಜನರನ್ನು ಅಪರಾಧಿಗಳು ಎಂದು ಮೊದಲೇ ತೀರ್ಮಾನ ಮಾಡಿಬಿಡುತ್ತಾರೆ. ಅಲ್ಲೇ ತೀರ್ಪು ಕೊಟ್ಟು, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತೆ ಶಿಕ್ಷೆಗೊಳಪಡಿಸುವುದನ್ನು ನೋಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಬುಡಕಟ್ಟು ಸಮುದಾಯಗಳನ್ನು ಬ್ರಿಟೀಷರು ‘ಕ್ರಿಮಿನಲ್ ಟ್ರೈಬ್’ ಗಳೆಂದು ಗುರುತಿಸುವ ಕಾಯ್ದೆ‌ಮಾಡಿದರು. ಇದನ್ನು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ವಿರೋಧಿಸಿದರೂ ಸ್ವಾತಂತ್ರ್ಯ ಬರುವವರೆಗೂ ಆ ಕಾನೂನು ಹಾಗೇ ಇತ್ತು.‌ 1947ರ ನಂತರ ಕಾಂಗ್ರೆಸ್‌ ಆ ಕಾಯ್ದೆಯನ್ನು ವಾಪಾಸ್ ತೆಗೆದುಕೊಂಡಿತು, ಆದರೆ ಪೊಲೀಸರ ದೃಷ್ಟಿಕೋನ ಬದಲಾಗಲಿಲ್ಲ. ಈಗಲೂ ಬುಡಕಟ್ಟು ಜನರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದು, ಎನ್ ಕೌಂಟರ್ ಮಾಡುವುದು, ಲಾಕಪ್‌ಗಳಲ್ಲಿ ಹಿಂಸಿಸುವುದು ಮತ್ತು ಕೊಲ್ಲುವುದು ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಹೇಳಿದರು.

ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಬೇಕಾಗಿದೆ. ಆ ಬದಲಾವಣೆಗಾಗಿ ಜನರನ್ನು ಬದಲಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಾನು ಮತ್ತು ನಾಗಮೋಹನ್ ದಾಸ್ ಥರದ ನಿವೃತ್ತ ನ್ಯಾಯಾಧೀಶರು ನಿಜವಾದ ಅಧಿಕಾರವನ್ನು ಈಗ ಹೊಂದಿಲ್ಲ. ಆದರೂ ಪರಿಣಾಮಕಾರಿಯಾದ ಒಂದು ಅಧಿಕಾರ ನಮಗಿದೆ. ನಾವು ಜನರ ಮುಂದೆ ಹೋಗಬಹುದು, ಈ ನ್ಯಾಯಾಂಗ ಜನರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಬಿಚ್ಚಿಡಬಹುದು. ನ್ಯಾಯಾಂಗ ಬದಲಿಸಲಾಗದ್ದನ್ನು ಜನರು ಬದಲಿಸಬಲ್ಲರು. ಹೀಗಾಗಿ ಶೋಷಿತರನ್ನು ಎಚ್ಚರಿಸಬೇಕು ಎಂಬ ಕಾರಣಕ್ಕಾಗಿ ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂದರು. ಈ ದೇಶದ ಶೋಷಿತರಿಗೆ ಶಿಕ್ಷಣ ಎನ್ನುವುದು ಖಂಡಿತವಾಗಿಯೂ ಬಿಡುಗಡೆಯ ಹಾದಿ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಜಸ್ಟೀಸ್‌ ನಾಗಮೋಹನ ದಾಸ್ ಮಾತನಾಡಿ, “ಭಾರತ ಗಣರಾಜ್ಯವಾದ ಬಳಿಕ ನಾವು ಒಂದಿಷ್ಟು ಸಾಧನೆಯನ್ನು ಮಾಡಿದ್ದೇವೆ. ಆದರೆ ಇಂದು ಹಲವು ಸಮಸ್ಯೆಗಳು, ಸವಾಲುಗಳು ನಮ್ಮನ್ನು ಕಾಡುತ್ತಿವೆ. ನಾವೆಲ್ಲ ಹೋರಾಟ ಮಾಡಿದಾಗ ಮೂಢನಂಬಿಕೆಗಳ ನಿಷೇಧ ಕಾಯ್ದೆ ಜಾರಿಗೆ ಬಂತು. ಆದರೆ ಒಂದೇ ಒಂದು ಪ್ರಕರಣ ದಾಖಲಾಗಲಿಲ್ಲ. ಚುನಾವಣೆಯಲ್ಲಿ ಜಾತಿ, ಹಣ, ಧರ್ಮದ ಪ್ರಭಾವವನ್ನು ಯಾವ ರೀತಿ ಮುಕ್ತ ಮಾಡಬೇಕು? ಜನಪ್ರತಿನಿಧಿಗಳು ತಮಗೆ ಇಷ್ಟಬಂದಾಗ ರಾಜೀನಾಮೆ ಕೊಟ್ಟು ಉಪಚುನಾವಣೆಯನ್ನು ನಮ್ಮ ಮೇಲೆ ಏರುವಂತಹ ಸಂದರ್ಭದಲ್ಲಿ ಏನು ಮಾಡಬೇಕು? ಪರಿಹಾರ ಏನು ಎಂಬುದನ್ನು ಪುಸ್ತಕದಲ್ಲಿ ಪ್ರಸ್ತಾಪ ಮಾಡಿದ್ದೇನೆ” ಎಂದು ತಿಳಿಸಿದರು.

ಚಿಂತಕರಾದ ಬಿ.ಟಿ ಲಲಿತಾ ನಾಯಕ್, ಮಾವಳ್ಳಿ ಶಂಕರ್, ರಾಜಶೇಖರ್ ಮೂರ್ತಿ, ಗೋಪಾಲಕೃಷ್ಣ, ಪ್ರೊ.ಬರಗೂರು ರಾಮಚಂದ್ರಪ್ಪ ಹಾಜರಿದ್ದರು.


ಇದನ್ನೂ ಓದಿರಿ: ‘ನರಿಕ್ಕುರವ’ ಕುಟುಂಬವನ್ನು ಕೆಳಗಿಳಿಸಿದ ತ.ನಾಡು ಸಾರಿಗೆ ಸಿಬ್ಬಂದಿ; ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...