ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಂಸದ ಸಂಜಯ್ ರಾವತ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಸಂದೇಶ ಬಂದಿದೆ ಎಂದು ಮುಂಬೈ ಪೊಲೀಸರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ರಾವತ್ ಅವರಿಗೆ ಜೀವ ಬೆದರಿಕೆ ಬಂದಿರುವ ಕುರಿತು ಶುಕ್ರವಾರ ರಾತ್ರಿಯೇ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪಂಜಾಬ್ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಪರವಾಗಿ ಸಂದೇಶ ಬಂದಿದೆ. ಈ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಬೆದರಿಕೆ ಸಂದೇಶದ ಕುರಿತು ಆತನ ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಸಂಜಯ್ ರಾವತ್ ಅವರು, ”ನಿನ್ನೆ ರಾತ್ರಿ ನನಗೆ ಕರೆ ಬಂದಿತ್ತು. ಬೆದರಿಕೆ ಕರೆ ಬಗ್ಗೆ ನಾನು ಪೊಲೀಸರಿಗೆ ತಿಳಿಸಿದ್ದೇನೆ, ಆದರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಇಂತಹ ಬೆದರಿಕೆಗಳ ಬಗ್ಗೆ ನಾನು ಸರ್ಕಾರ ಮತ್ತು ಗೃಹ ಸಚಿವರಿಗೆ ತಿಳಿಸಿದಾಗ ಅವರು ಸ್ಟಂಟ್ ಮಾಡುತ್ತಿದಿದೀರಿ ಎಂದು ನನ್ನನ್ನು ಅಣಕಿಸುತ್ತಾರೆ. ಗಲಭೆ, ಗೂಂಡಾಗಿರಿ ಮತ್ತು ಭಯೋತ್ಪಾದನೆಯನ್ನು ಪ್ರಾಯೋಜಿಸುವಲ್ಲಿ ಸರ್ಕಾರ ನಿರತವಾಗಿದೆ” ಎಂದು ರಾವುತ್ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಚುನಾವಣಾ ಆಯೋಗದೊಂದಿಗೆ ₹ 2,000 ಕೋಟಿ ಡೀಲ್ ಮಾಡಿದ ಶಿಂಧೆ ಬಣ: ಸಂಜಯ್ ರಾವತ್ ಆರೋಪ
”ನನಗೆ ಈ ಹಿಂದೆಯೂ ಬೆದರಿಕೆ ಒಡ್ಡಲಾಗಿತ್ತು. ಆದರೆ, ಈ ವಿಷಯವನ್ನು ರಾಜ್ಯ ಗೃಹ ಸಚಿವರು ನಟನೆ ಎಂದು ಗೇಲಿ ಮಾಡಿದ್ದರು. ರಾಜ್ಯ ಸರ್ಕಾರವು ವಿರೋಧ ಪಕ್ಷದ ನಾಯಕರಿಗೆ ಭದ್ರತೆ ಒದಗಿಸುವ ಕುರಿತು ಗಂಭೀರವಾಗಿಲ್ಲ” ಎಂದು ರಾವತ್ ಅವರು ಆರೋಪಿಸಿದ್ದಾರೆ.
ಈ ಬೆದರಿಕೆಯಿಂದ ನಾನು ವಿಚಲಿತನಾಗಿಲ್ಲ ಮತ್ತು ನನ್ನ ಭದ್ರತೆಯನ್ನು ಹಿಂಪಡೆದಾಗ ನಾನು ಆ ಕುರಿತು ಯಾವುದೇ ಪತ್ರ ಬರೆದಿರಲಿಲ್ಲ ಎಂದೂ ಅವರು ಹೇಳಿದ್ದಾರೆ.
ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಹಿಂದಿನ ಸೂತ್ರಧಾರಿ ಎಂದು ಹೇಳಲಾಗಿರುವ ಲಾರೆನ್ಸ್ ಬಿಷ್ಣೋಯ್ ಕುಖ್ಯಾತ ಅಪರಾಧಿಯಾಗಿದ್ದು, ಆತ ಗಾಯಕ ಸಿಧು ಮೂಸೆವಾಲಾರ ತಂದೆ ಬಾಲ್‌ಕೌರ್ ಸಿಂಗ್ ಹಾಗೂ ಖ್ಯಾತ ನಟ ಸಲ್ಮಾನ್ ಖಾನ್‌ಗೂ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿದ್ದಾನೆ.
ಈ ಬಗ್ಗೆ ಮುಂಬೈ ಪೊಲೀಸರು ಮಾತನಾಡಿದ್ದು, ”ರಾವತ್ ಅವರು ನೀಡಿರುವ ಲಿಖಿತ ದೂರನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.


