Homeಮುಖಪುಟಒಬಿಸಿ ಪಟ್ಟಿಯಲ್ಲಿ ಮುಸ್ಲಿಮರ ಮೀಸಲಾತಿ ರದ್ದು; ಹೈಕೋರ್ಟ್‌ನಲ್ಲಿ ಪ್ರಶ್ನೆ

ಒಬಿಸಿ ಪಟ್ಟಿಯಲ್ಲಿ ಮುಸ್ಲಿಮರ ಮೀಸಲಾತಿ ರದ್ದು; ಹೈಕೋರ್ಟ್‌ನಲ್ಲಿ ಪ್ರಶ್ನೆ

- Advertisement -
- Advertisement -

ಒಬಿಸಿ ಪಟ್ಟಿಯೊಳಗಿನ 2 (ಬಿ) ವರ್ಗದ ಮೂಲಕ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ತೆಗೆದುಹಾಕಿ, ಅದನ್ನು ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚುವ ನಿರ್ಧಾರವನ್ನು ರಾಜ್ಯ ಸರ್ಕಾರ ಘೋಷಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿದೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, 2(ಬಿ) ವರ್ಗವನ್ನು ರದ್ದುಗೊಳಿಸಿದೆ; ಈ ಹಿಂದೆ ಮುಸ್ಲಿಮರಿಗೆ ನೀಡಲಾಗಿದ್ದ 4% ಮೀಸಲಾತಿಯನ್ನು ಈಗ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಸಮಾನವಾಗಿ ಹಂಚುವುದಾಗಿ ಹೇಳಿದೆ.

ಮುಸ್ಲಿಂ ಜನಾಂಗ ಜಾಗೃತ ವೇದಿಕೆಯು ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕಾನಾಥ್ ಅವರು ಇದಕ್ಕೆ ಕೈಜೋಡಿಸಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಆಗುವ ಅನ್ಯಾಯವನ್ನು ಪ್ರಶ್ನಿಸಲು ಮತ್ತು ಸಮುದಾಯದ ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಡಲು ಡಾ. ಗುಲ್ಶಾದ್ ಅಹ್ಮದ್ ಬಿ.ಝಡ್ ಅವರು ಈ ವೇದಿಕೆಯನ್ನು ಫೆಬ್ರುವರಿಯಲ್ಲಿ ಸ್ಥಾಪಿಸಿದ್ದಾರೆ.

ಒಬಿಸಿ ಕೋಟಾವನ್ನು ತೆರವು ಮಾಡಿರುವುದರಿಂದ ಮುಸ್ಲಿಮರು ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಬೊಮ್ಮಾಯಿ ಘೋಷಿಸಿದ್ದರು.

ಬಿಜೆಪಿ ಸರ್ಕಾರವು 3 (ಎ) ಮತ್ತು 3 (ಬಿ) ಒಬಿಸಿ ಉಪವರ್ಗಗಳನ್ನು 2 (ಸಿ) ಮತ್ತು 2 (ಡಿ) ನೊಂದಿಗೆ ಬದಲಾಯಿಸಿದೆ. ಕೊಡವರು ಮತ್ತು ಬಣಜಿಗರೊಂದಿಗೆ 3 (ಎ) ನಲ್ಲಿ ಒಕ್ಕಲಿಗರು ಇದ್ದರು. ಇತರ ಸಮುದಾಯಗಳೊಂದಿಗೆ ಹಲವಾರು ಲಿಂಗಾಯತ ಉಪಜಾತಿಗಳು 3(ಬಿ)ಯಲ್ಲಿ ಇದ್ದವು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಎಸ್.ದ್ವಾರಕಾನಾಥ್, “ಮುಸ್ಲಿಮರನ್ನು ಇಡಬ್ಲ್ಯೂಎಸ್‌ಗೆ ಸೇರಿಸಲು ಸಾಧ್ಯವಿಲ್ಲ. ಸಾಮಾಜಿಕವಾಗಿ ಬಲಿಷ್ಠವಾಗಿರುವ ಆದರೆ ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳಿಗೆ ಮಾತ್ರ ಇಡಬ್ಲ್ಯುಎಸ್‌. ಮುಸ್ಲಿಮರು ಆರ್ಥಿಕವಾಗಿ ದುರ್ಬಲರು ಎಂದು ಇದುವರೆಗೆ ಯಾವುದೇ ಆಯೋಗ ಹೇಳಿಲ್ಲ. ಆದರೆ ಅನೇಕ ಅಧ್ಯಯನಗಳು ಮುಸ್ಲಿಮರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ತೀರ್ಮಾನಿಸಿವೆ” ಎಂದಿದ್ದಾರೆ.

“ಒಬಿಸಿ ಪಟ್ಟಿಗೆ ಬದಲಾವಣೆಗಳನ್ನು ಮಾಡಲು ಈ ಅಧ್ಯಯನಗಳು ನಡೆದಿರಬೇಕು. ಮೇಲಾಗಿ, 3(ಎ), 3(ಬಿ) ವರ್ಗಗಳನ್ನು 2(ಸಿ) ಮತ್ತು 2(ಡಿ) ನೊಂದಿಗೆ ಬದಲಾಯಿಸುವ ಲಾಜಿಕ್ ಅರ್ಥವಾಗುತ್ತಿಲ್ಲ. ಹೆಸರು ಮಾತ್ರ ಬದಲಾಗಿದೆ, ಆದರೆ ಸಂಯೋಜನೆ ಬದಲಾಗಿಲ್ಲ. ವಾಸ್ತವವಾಗಿ, ಅಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರೊಂದಿಗೆ ಅನೇಕ ಸಮುದಾಯಗಳಿವೆ. 4% ಮೀಸಲಾತಿಯ ಪ್ರಯೋಜನಗಳನ್ನು ನೀವು ಇತರರಿಗೆ ಹೇಗೆ ನಿರಾಕರಿಸುತ್ತೀರಿ? ಈಗ ಹಂಚುವ ಮೀಸಲಾತಿಯು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮಾತ್ರ ಸಿಗುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಈ ಬಗ್ಗೆ ಅವರು ಸ್ಪಷ್ಟನೆ ನೀಡುತ್ತಿಲ್ಲ. ಅಲ್ಪಾವಧಿಯ ರಾಜಕೀಯ ಲಾಭವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಟೀಕಿಸಿದ್ದಾರೆ.

ಮುಸ್ಲಿಂ ಜನಾಂಗದ ಜಾಗೃತ ವೇದಿಕೆಯು ಪತ್ರಿಕಾ ಪ್ರಕಟಣೆ ನೀಡಿದೆ. “ಒಬಿಸಿ ಪಟ್ಟಿಯ ಪರಿಷ್ಕರಣೆ ಮತ್ತು ಮುಸ್ಲಿಮರಿಗೆ ಮೀಸಲಾತಿ ಸೌಲಭ್ಯಗಳನ್ನು ನಿರಾಕರಿಸುವುದು ಸಮಾಜವನ್ನು ಶೋಚನೀಯ ಸ್ಥಿತಿಯತ್ತ ಕೊಂಡೊಯ್ಯುವ ಪ್ರಯತ್ನವಾಗಿದೆ. ಮುಸ್ಲಿಂ ಸಮುದಾಯದ ಜನಸಂಖ್ಯೆ ಮತ್ತು ಪರಿಸ್ಥಿತಿಗಳನ್ನು ಪರಿಗಣಿಸಿ, ನಾವು ಮೀಸಲಾತಿಯನ್ನು ನಮ್ಮ ಸಾಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸುತ್ತೇವೆ. ಅದನ್ನು ಮರುಸ್ಥಾಪಿಸಲು ನಾವು ಒತ್ತಾಯಿಸುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಚಪ್ಪರ್‌ಬಂದ್‌ನಂತಹ ಸಮುದಾಯಗಳನ್ನು ಒಳಗೊಂಡಂತೆ ಕರ್ನಾಟಕ ಒಬಿಸಿ ಪಟ್ಟಿಯ ವರ್ಗ 1ರಲ್ಲಿ ಎಂಟು ಮುಸ್ಲಿಂ ಉಪಜಾತಿಗಳಿವೆ ಎಂಬುದನ್ನು ಗಮನಿಸಬಹುದು. ಈ ಸಮುದಾಯಗಳು ಇನ್ನೂ ಒಬಿಸಿ ಮೀಸಲಾತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...