ಡಾ. ಸ್ವಾತಿ ಶುಕ್ಲ

ಕನ್ನಡಕ್ಕೆ : ಮಲ್ಲನಗೌಡರ್ ಪಿ.ಕೆ

ನಟರಂತೆ ಹಾವಭಾವ ಪ್ರದರ್ಶಿಸುತ್ತ ದಿನವೀಡೀ ಅರಚಾಡುವ ಟಿವಿ ನಿರೂಪಕರಿಂದ ತಲೆ ಚಿಟ್ಟು ಹಿಡಿದಿದೆಯಾ? ಮತ್ತದೇ ಮೋದಿ ವರ್ಸಸ್ ರಾಹುಲ್ ಎಂಬ ಎರಡೇ ಆಯ್ಕೆಗಳ ಮೂರ್ಖತನವೂ ನಿಮಗೆ ಬೋರ್ ಹೊಡೆಸಿದೆಯಾ? ಹಾಗಾದರೆ ನೀವು ಪರ್ಯಾಯ ಮಾಧ್ಯಮದತ್ತ ಮುಖ ಮಾಡಲೇಬೇಕಾದ ಸಮಯವಿದು.

ಯಾವ ಬಂಡವಾಳಶಾಹಿಯ ಹಂಗಿಲ್ಲದೇ ಜನರೇ ಹಲವು ಪತ್ರಿಕೆಗಳನ್ನು ತರುವ ಮೂಲಕ ತಳ ಸಮುದಾಯಗಳಲ್ಲಿ ಎಚ್ಚರ ಮೂಡಿಸುವ ಯತ್ನಗಳು ದೇಶದ ಅಲ್ಲಲ್ಲಿ ನಡೆದಿವೆ. ಅಂತಹ ಒಂದು ಅಮೋಘ ಸಾಹಸವೇ ‘ಖಬರ್ ಲಹರಿಯಾ’… ಅಂದರೆ ಸುದ್ದಿಯ ಅಲೆಗಳು.. ‘ಖಬರ್ ಲಹರಿಯಾ’ ಎಂಬ ಈ ವಾರಪತ್ರಿಕೆಗೆ ಹಲವು ವೈಶಿಷ್ಟ್ಯಗಳು ಮತ್ತು ತನ್ನದೇ ಆದ ಅನನ್ಯತೆಯಿದೆ. ಮಹಿಳೆಯರಿಂದ ನಡೆಸಲ್ಪಡುವ ಸ್ವತಂತ್ರ, ಗ್ರಾಮೀಣ ವಿಷಯಾಧಾರಿತ ಮೊದಲ ಭಾರತೀಯ ವಾರಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಯದ್ದು.

ಗ್ರಾಮೀಣ ಮಹಿಳೆಯರೇ ಸೇರಿಕೊಂಡು ಇಂತಹ ಪ್ರಯೋಗ ಮಾಡಿ ಉತ್ತರ ಭಾರತದ ಗ್ರಾಮಗಳಲ್ಲಿ ಯಶಸ್ವಿಯಾಗಿದ್ದು ಇದೇ ಮೊದಲು. ಮಹಿಳೆಯರೇ ಬರೆಯುತ್ತಾರೆ, ಎಡಿಟ್ ಮಾಡುತ್ತಾರೆ, ಫೋಟೊಗ್ರಫಿ ಕೂಡ ಅವರದೇ. ವಿಷಯ ಆಯ್ಕೆಯನ್ನು ಅವರೇ ಮಾಡುತ್ತಾರೆ ಮಾತ್ರವಲ್ಲ ಮಾರ್ಕೆಟಿಂಗ್ ಕೂಡ ಮಹಿಳೆಯರೆ ನಿಭಾಯಿಸುತ್ತಾರೆ. ಅಂದಂತೆ, ಈ ಮಹಿಳೆಯರ ಪೈಕಿ ಬಹುಪಾಲು ಜನ ದಲಿತ, ಆದಿವಾಸಿ ಮತ್ತು ಮುಸ್ಲಿಮ ಸಮುದಾಯಗಳಿಗೆ ಸೇರಿದವರು. ಈ ಸಮುದಾಯಗಳಿಂದಲೇ ಮಹಿಳೆಯರನ್ನು ಆಯ್ಕೆ ಮಾಡಿ, ಅವರಿಗೆ ವರದಿಗಾರಿಕೆ, ಫೋಟೊಗ್ರಫಿ, ವಿಡಿಯೋ ಮಾಡುವುದರ ಕುರಿತು ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ.

ಪತ್ರಿಕೆಗಳೇ ಇಲ್ಲದ ಗ್ರಾಮಗಳಿಗೆ ‘ಖಬರ್ ಲಹರಿಯಾ’ ಸುದ್ದಿಯ ಅಲೆಗಳನ್ನು, ಅದೂ ಬದುಕಿನ ಕುರಿತಾದ, ಮಹಿಳೆಯ ಬದುಕಿನ ಕುರಿತಾದ ವಿಷಯಗಳನ್ನು ತರುತ್ತಿದೆ. ಮೊದಲು ಇದು ಉತ್ತರಪ್ರದೇಶದ ಬುಂದೇಲ್‍ಖಂಡದಲ್ಲಿ ಶುರುವಾಗಿತು. ಲೈಂಗಿಕ ಹಕ್ಕುಗಳ ಕುರಿತು ಕೆಲಸ ಮಾಡುವ ದೆಹಲಿ ಮೂಲದ ‘ನಿರಂತರ್’ ಎಂಬ ಸಂಘಟನೆಯ ಆಸಕ್ತಿಯಿಂದ 2002ರಲ್ಲಿ ಈ ಪ್ರಯೋಗ ಅರಳಿತು. ಆಗ ಈ ಪತ್ರಿಕೆಯ ಹೆಸರು ‘ಮಹಿಳಾ ಢಾಕಿಯಾ’ (ಮಹಿಳಾ ಅಂಚೆಪೇದೆ).

ಇವತ್ತು ‘ಖಬರ್ ಲಹರಿಯಾ’ ಅಲ್ಲಿನ ಓದುಗರ ಹೃದಯದ ಪತ್ರಿಕೆಯಾಗಲು ಮುಖ್ಯ ಕಾರಣ, ಜನರಾಡುವ ಭಾಷೆಗಳಲ್ಲಿ ಇದು ಪ್ರಕಟವಾಗುವುದು. ಮೊದಲು ಬುಂದೇಲಿ ಭಾಷೆಯಲ್ಲಿ ಬಂದ ಪತ್ರಿಕೆ ಈಗ ತಳ ಸಮುದಾಯಗಳ ಐದು ಭಾಷೆಗಳಿಗೆ (ಬಜ್ಜಿಕಾ, ಅವಧಿ, ಹಿಂದೂಸ್ತಾನಿ, ಭೋಜಪುರಿ) ವಿಸ್ತರಣೆಗೊಂಡಿದೆ. ಗ್ರಾಮೀಣ ಮಹಿಳೆಯರಿಗಾಗಿಯೇ ಈ ಪತ್ರಿಕೆ ಬರುತ್ತಿದ್ದು, ಬಹಳಷ್ಟು ಕಡೆ, ಅನಕ್ಷರಸ್ಥರು ಇರುವಲ್ಲಿ ಪತ್ರಿಕೆ ವರದಿಗಾರೇ ಜನರ ಎದುರು ಪತ್ರಿಕೆಯನ್ನು ಓದಿ ವಿವರಿಸುತ್ತಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರಗಳಲ್ಲಿ 80 ಸಾವಿರ ಓದುಗರನ್ನು ಹೊಂದಿರುವ ಈ ಪತ್ರಿಕೆ ಎರಡು ವರ್ಷಗಳ ಹಿಂದೆ ತನ್ನ ಡಿಜಿಟಲ್ ಆವೃತ್ತಿಯನ್ನು ಹೊರ ತಂದು, ನಗರವಾಸಿಗಳನ್ನೂ ತಲುಪುತ್ತಿದೆ. ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ತಿಂಗಳಿಗೆ 50 ಲಕ್ಷ ಜನರನ್ನು ಇದು ತಲುಪುತ್ತಿದೆ.

ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ 13 ಜಿಲ್ಲೆಗಳಲ್ಲಿ 30 ವರದಿಗಾರು ಮತ್ತು ಸ್ಟಿಂಜರ್‌ಗಳನ್ನು ಹೊಂದಿರುವ ಲಹರಿಯಾ, ಗ್ರಾಮೀಣ ಸಮಸ್ಯೆಗಳು, ದುಡಿಯುವ ಜನರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುತ್ತ ಬಂದಿದೆ. ಜನಪ್ರತಿನಿಧಿಗಳು ಕುಡಿಯುವ ನೀರು, ಶೌಚಾಲಯ ವವ್ಯಸ್ಥೆ ಮಾಡಿದ್ದಾರೋ ಇಲ್ಲವೋ ಎಂಬ ಕುರಿತಾಗಿ ರಿಯಾಲಿಟಿ ಚೆಕ್ ವರದಿಗಳನ್ನು ಬರೆದು ಜನರಲ್ಲಿ ಅರಿವು ತುಂಬಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ವಿಶೇಷ ಪುರವಣಿಯನ್ನೂ ತರಲಾಗುತ್ತಿದೆ. 2018ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ‘ಯೋಗಿ ಟ್ರ್ಯಾಕರ್’ ಎಂಬ ಅಂಕಣವನ್ನೇ ಆರಂಭಿಸಲಾಗಿತು. ಗ್ರಾಮೀಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಬೆಳಕಿಗೆ ತರಲು ‘ಮೀಟೂ’ ಚಳವಳಿಯನ್ನು ಕೂಡ ಈ ಪತ್ರಿಕೆ ನಡೆಸುತ್ತಿದೆ.

ಖಬರ್ ಲಹರಿಯಾದ ಅನನ್ಯ ಸಾಧನೆಯನ್ನು ಮೆಚ್ಚಿ ಯುನೆಸ್ಕೊ ಪ್ರಶಸ್ತಿಯನ್ನು ನೀಡಿದೆ. ಜರ್ಮನಿಯ ಚಾನೆಲ್ಲೊಂದು ಕೂಡ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಗೌರವ, ಪ್ರಶಸ್ತಿ ಪಡೆದು ಮುನ್ನುಗುತ್ತಿರುವ ‘ಖಬರ್ ಲಹರಿಯಾ’ ಪ್ರಜಾಪ್ರಭುತ್ವದ ಬೆಳಕು, ಹೊಸತನದ ಅಲೆ…. ಜೊತೆಗೆ ಕನ್ನಡದ ಸ್ವತಂತ್ರ ಮಾಧ್ಯಮಗಳಿಗೆ ಮಾದರಿ.


ಇದನ್ನೂ ಓದಿ; ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಅನುವಾದಿತ ಲೇಖನ
+ posts

LEAVE A REPLY

Please enter your comment!
Please enter your name here