ಇಂಗ್ಲಿಷ್ ಮೂಲ- ಸಂಜೀವ್ ಭಟ್
ಕನ್ನಡಕ್ಕೆ – ಅನನ್ಯಶಿವು
ನನ್ನಲ್ಲಿ ತತ್ವವಿದೆ
ಅಧಿಕಾರವಿಲ್ಲ
ನಿಮ್ಮಲ್ಲಿ ಅಧಿಕಾರವಿದೆ
ಆದರೆ ತತ್ವವೇ ಇಲ್ಲ
ನೀವು ನೀವಾಗಿಯೇ ಇರುತ್ತೀರಿ
ನಾನು ನಾನಾಗಿಯೇ ಬದುಕುತ್ತೇನೆ
ನಮ್ಮ ನಡುವೆ ರಾಜಿಯೆಲ್ಲಿ ಸಾಧ್ಯ?
ಆರಂಭವಾಗಲಿ ಬಿಡಿ ಯುದ್ಧ….
ನನ್ನಲ್ಲಿ ಸತ್ಯದ ಸತ್ವವಿದೆ
ಸೈನ್ಯದ ಬಲವಿಲ್ಲ
ನಿಮ್ಮಲ್ಲಿ ಸೇನೆಯಿದೆ
ಆದರೆ ಸತ್ಯದ ಸುಳಿವಿಲ್ಲ
ನೀವು ನೀವಾಗಿಯೇ ಇರುತ್ತೀರಿ
ನಾನು ನಾನಾಗಿಯೇ ಬದುಕುತ್ತೇನೆ
ನಮ್ಮ ನಡುವೆ ರಾಜಿಯೆಲ್ಲಿ ಸಾಧ್ಯ?
ಆರಂಭವಾಗಲಿ ಬಿಡಿ ಯುದ್ಧ....
ನೀವು,
ನನ್ನ ತಲೆಬುರುಡೆಯನ್ನು
ಹೋಳು ಮಾಡಬಹುದು
ಆದರೂ ನಾನು ಹೋರಾಡುತ್ತೇನೆ
ನನ್ನ ಮೂಳೆಗಳನ್ನು
ಪುಡಿಗಟ್ಟಿ ಹೂತು ಹಾಕಬಹುದು
ಆದರೂ ನಾನು ಹೋರಾಡುತ್ತೇನೆ
ನನ್ನನ್ನು ಜೀವಂತವಾಗಿ
ಸುಟ್ಟು ಹಾಕಬಹುದು
ಆದರೂ ನಾನು ಹೋರಾಡುತ್ತೇನೆ
ನನ್ನ ನರನಾಡಿಗಳಲ್ಲಿ ಹರಿಯುವ
ಸತ್ಯದ ಬಲದಿಂದ
ನಾನು ಹೋರಾಡುತ್ತೇನೆ
ನನ್ನ ಕಸುವಿನ ಕಣ ಕಣಗಳನ್ನು ಪಣಕಿಟ್ಟು
ನಾನು ಹೋರಾಡುತ್ತೇನೆ
ನನ್ನೊಡಲಿನ ಕೊನೆಯುಸಿರನ್ನೂ ಬಳಸಿ
ನಾನು ಹೋರಾಡುತ್ತೇನೆ
ನೀವು ಸುಳ್ಳುಗಳಿಂದ ಕಟ್ಟಿರುವ ಕೋಟೆಗಳು
ಒಡೆದು ಚೂರಾಗುವವರೆಗೆ
ನಿಮ್ಮ ಸುಳ್ಳುಗಳಿಂದ
ಪೂಜಿಸಲ್ಪಡುವ ಕೆಡುಕಿನ ದೆವ್ವ
ನನ್ನ ಸತ್ಯದೇವತೆಯೆದುರು ಮಂಡಿಯೂರುವವರೆಗೆ
ನಾನು
ಹೋರಾಡುತ್ತಲೇ ಇರುತ್ತೇನೆ.


