ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಆಡಳಿತರೂಢ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ಪ್ರಚಾರದ ಮೂಲಕ ತಯಾರಿ ನಡೆಸುತ್ತಿದೆ. ಈ ನಡುವೆ ಸರ್ಕಾರದ ಯೋಜನೆಯೊಂದರ ವಿಷಯದಲ್ಲಿ ಎಎಪಿ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಜಟಾಪಟಿ ಏರ್ಪಟ್ಟಿದೆ.
ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ ನೀಡುವ ‘ಸಂಜೀವಿನಿ’ ಎಂಬ ಯೋಜನೆಯನ್ನು ಡಿಸೆಂಬರ್ 18ರಂದು ಮಾಜಿ ಸಿಎಂ ಹಾಗೂ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಇದಕ್ಕೂ ಮುನ್ನ ಮಹಿಳೆಯರಿಗೆ ಮಾಸಿಕ 1 ಸಾವಿರ ರೂಪಾಯಿ ಧನ ಸಹಾಯ ನೀಡುವ ಯೋಜನೆಯನ್ನು ಕೇಜ್ರಿವಾಲ್ ಘೋಷಿಸಿದ್ದರು. ಚುನಾವಣೆಗೂ ಮೊದಲು 1 ಸಾವಿರ ರೂ. ಕೊಡಲಾಗುವುದು. ಚುನಾವಣೆ ಬಳಿಕ ಮತ್ತೆ ಅಧಿಕಾರಕ್ಕೆ ಬಂದರೆ 2, 100 ರೂ. ನೀಡಲಾಗುವುದು ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಚುನಾವಣೆ ಪ್ರಚಾರದ ಭಾಗವಾಗಿ ಮನೆ ಮನೆಗೆ ತೆರಳಿ ಎರಡೂ ಯೋಜನೆಗಳಿಗೆ ಅರ್ಹ ಜನರನ್ನು ನೋಂದಣಿ ಮಾಡಿಸುವ ಕಾರ್ಯವನ್ನು ಸ್ವತಃ ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕರು, ಕಾರ್ಯಕರ್ತರು ಮಾಡುತ್ತಿದ್ದಾರೆ. ಆದರೆ, ಈ ನಡುವೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ “ನಮ್ಮ ಇಲಾಖೆಯಡಿ ‘ಸಂಜೀವಿನಿ’ ಎಂಬ ಯೋಜನೆಯೇ ಇಲ್ಲ ಎಂದಿದೆ.
“ಈ ದಿನದವರೆಗೆ ನಮ್ಮಲ್ಲಿ ‘ಸಂಜೀವಿನಿ’ ಎಂಬ ಯೋಜನೆಯೇ ಇಲ್ಲ. ಈ ಯೋಜನೆಗಾಗಿ ಹಿರಿಯ ನಾಗರಿಕರ ಮಾಹಿತಿಗಳನ್ನು ಸಂಗ್ರಹಿಸಲು ನಾವು ಯಾವುದೇ ಅಧಿಕಾರಿಗಳನ್ನು ನೇಮಿಸಿಲ್ಲ. ಯಾವುದೇ ಸಂಸ್ಥೆಗೆ ಜವಾಬ್ದಾರಿ ಕೊಟ್ಟಿಲ್ಲ. ಯೋಜನೆಯ ಹೆಸರಿನಲ್ಲಿ ಯಾವುದೇ ಕಾರ್ಡ್‌ಗಳನ್ನು ವಿತರಿಸುತ್ತಿಲ್ಲ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
#Delhi senior citizens DON'T fall prey to #Kejriwal bogus scheme's.
Govt. Of NCT of Delhi, Women & Child Welfare Dept says there is no such scheme named as Sanjeevni Yojna which exists..
Don't share your private, confidential information with anyone/party. pic.twitter.com/IsZHURQOGz— Anshul (@Anshulk19Anshul) December 25, 2024
“ಅಸ್ತಿತ್ವದಲ್ಲಿ ಇಲ್ಲದ ‘ಸಂಜೀವಿನಿ’ ಎಂಬ ಯೋಜನೆಯ ಹೆಸರಿನಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಮಾಹಿತಿ ಸಂಗ್ರಹಿಸಲು ಯಾರಾದರು ಬಂದರೆ ಮಾಹಿತಿ ಕೊಡಬೇಡಿ. ಯಾವುದೇ ದಾಖಲೆಗೆ ನಿಮ್ಮ ಸಹಿ, ಹೆಬ್ಬೆಟ್ಟಿನ ಗುರುತು ಹಾಕಬೇಡಿ” ಎಂದು ಪ್ರಕಟಣೆಯಲ್ಲಿ ಎಚ್ಚರಿಕೆಯ ಸಲಹೆ ನೀಡಿದೆ.
ಕೇಜ್ರಿವಾಲ್ ಘೋಷಣೆ ಮಾಡಿರುವ ಮತ್ತು ನೋಂದಣಿ ಮಾಡಿಸುತ್ತಿರುವ ಯೋಜನೆಯನ್ನು ಅವರದ್ದೇ ಸರ್ಕಾರದ ಅಧಿಕಾರಿಗಳು ನಕಲಿ ಎಂದು ಪ್ರಕಟಣೆ ಹೊರಡಿಸಿರುವುದು ಎಎಪಿ ನಾಯಕರು ಮುಖಭಂಗ ಅನುಭವಿಸುವಂತೆ ಮಾಡಿದೆ.
ಅಧಿಕಾರಿಗಳ ವಿರುದ್ದ ಕ್ರಮ : ಸಂಜಯ್ ಸಿಂಗ್
ಬಿಜೆಪಿಯ ಒತಡಕ್ಕೆ ಒಳಗಾಗಿ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ ಎಂದು ಎಎಪಿ ಹೇಳಿದೆ. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಎಎಪಿ ಸಂಸದ ಸಂಜಯ್ ಸಿಂಗ್ ತಿಳಿಸಿದ್ದಾರೆ.
“ಯಾಕೆ ಇಷ್ಟೊಂದು ದ್ವೇಷ? ಕೇಜ್ರಿವಾಲ್ ಘೋಷಣೆ ಮಾಡಿರುವ ಯೋಜನೆಯ ವಿರುದ್ದ ಪ್ರಕಟಣೆ ಹೊರಡಿಸುವಂತೆ ಬಿಜೆಪಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದೆ. ಒತ್ತಡಕ್ಕೆ ಮಣಿದು ಪ್ರಕಟಣೆ ಹೊರಡಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿ ಹಬ್ಬಿಸುವ ಸುಳ್ಳುಗಳನ್ನು ಸಾರ್ವಜನಿಕರು ನಂಬುವುದಿಲ್ಲ” ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ದೆಹಲಿ ಜನರನ್ನು ವಂಚಿಸಿದ ಕೇಜ್ರಿವಾಲ್
“ಅರವಿಂದ್ ಕೇಜ್ರಿವಾಲ್ ಅಥವಾ ಎಎಪಿ ಸರ್ಕಾರ ದೆಹಲಿ ಸುಳ್ಳು ಯೋಜನೆಯ ಹೆಸರಿನಲ್ಲಿ ದೆಹಲಿಯ ಜನರನ್ನು ವಂಚಿಸಿದೆ. ಅವರ ವಂಚನೆಯನ್ನು ಅಧಿಕಾರಿಗಳು ಬಯಲು ಮಾಡಿದ್ದಾರೆ. ಈ ಕಾರಣಕ್ಕೆ ಈಗ ಅಧಿಕಾರಿಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಸುಳ್ಳು ಯೋಜನೆಯ ಬಗ್ಗೆ ಡಿಜಿಟಲ್ ವೇದಿಕೆಗಳಲ್ಲಿ ಪ್ರಚಾರ ಮಾಡಿ ಕೇಜ್ರಿವಾಲ್ ದೆಹಲಿ ಜನರಿಗೆ ಮೋಸ ಮಾಡಿದ್ದಾರೆ. ಸಿಎಂ ಅತಿಶಿ ಅವರ ಖಾತೆಯಿಂದ ಹಣ ಡ್ರಾ ಅಗ್ತಿದೆ. ಅದು ಎಲ್ಲಿಗೆ ಹೋಗುತ್ತಿದೆ ಗೊತ್ತಿಲ್ಲ. ಇದರ ಬಗ್ಗೆ ಅವರು ಏಕೆ ಸುಮ್ಮನಿದ್ದಾರೆ?” ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ವಾಗ್ದಾಳಿ ನಡೆಸಿದ್ದಾರೆ.
ಕೇಜ್ರಿವಾಲ್ V/S ಅತಿಶಿ
ಅರವಿಂದ್ ಕೇಜ್ರಿವಾಲ್ ಮತ್ತು ಸಿಎಂ ಅತಿಶಿ ನಡುವೆ ಹೊಂದಾಣಿಕೆಯಿಲ್ಲ. ಈ ಕಾರಣಕ್ಕೆ ಕೇಜ್ರಿವಾಲ್ ಘೋಷಣೆ ಮಾಡಿರುವ ಯೋಜನೆಯನ್ನು ಅಧಿಕಾರಿಗಳು ನಕಲಿ ಎಂದಿದ್ದಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.
ಕೇಜ್ರಿವಾಲ್ ಘೋಷಿಸಿದ ಯೋಜನೆ ನಕಲಿ : ಕಾಂಗ್ರೆಸ್
ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಕೂಡ ಕೇಜ್ರಿವಾಲ್ ಘೋಷಣೆ ಮಾಡಿರುವ ಯೋಜನೆಯನ್ನು ವಂಚನೆ ಎಂದು ಹೇಳಿದ್ದಾರೆ. “ಈ ಹಿಂದೆಯೂ ನಾವು ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದೆವು… ಹಣಕಾಸು ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿದಾಗ ಹಣ ಬಿಡುಗಡೆ ಮಾಡಲಾಗ್ತಿದೆ. ಇದು ವಂಚನೆಯಾಗಿದೆ. ಯೋಜನೆಗಳಿಗೆ ನೋಂದಾಯಿಸಲು ಜನರ ಮಾಹಿತಿ ಸಂಗ್ರಹಿಸುವುದು ಡೇಟಾ ಸಂಗ್ರಹಿಸುವ ಮಾರ್ಗವಾಗಿದೆ” ಎಂದಿದ್ದಾರೆ.
ಸಿಎಂ ಅತಿಶಿ ಅವರನ್ನು ಶೀಘ್ರದಲ್ಲೇ ಬಂದಿಸಬಹುದು : ಕೇಜ್ರಿವಾಲ್
ಮುಖ್ಯಮಂತ್ರಿ ಅತಿಶಿ ಅವರನ್ನು ಶೀಘ್ರದಲ್ಲೇ ನಕಲಿ ಪ್ರಕರಣದಲ್ಲಿ ಬಂಧಿಸುವ ಸಾಧ್ಯತೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತು ಇಂದು (ಡಿ.25) ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು “ನಕಲಿ ಪ್ರಕರಣದಲ್ಲಿ ಅತಿಶಿ ಅವರ ಬಂಧನಕ್ಕೂ ಮುನ್ನ ಎಎಪಿಯ ಹಿರಿಯ ನಾಯಕರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವಿನಿ ಯೋಜನೆಯಂತಹ ಕಲ್ಯಾಣ ಯೋಜನೆಗಳನ್ನು ಕಂಡು ಕೆಲವರು ನಲುಗಿ ಹೋಗಿದ್ದಾರೆ. ಹೀಗಾಗಿ, ಇಂತಹ ಕೆಲಸಕ್ಕೆ ಕೈ ಹಾಕಬಹುದು” ಎಂದಿದ್ದಾರೆ.
ಇದನ್ನೂ ಓದಿ : ʼಮುಖ್ಯಮಂತ್ರಿ ಅತಿಶಿ ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆʼ : ಅರವಿಂದ್ ಕೇಜ್ರಿವಾಲ್


