ರಾಜ್ಯ ಬಿಜೆಪಿ ಹಿರಿಯ ನಾಯಕ, ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೆ ಇಲ್ಲ ಎಂದು ಬುಧವಾರ ಮಧ್ಯಾಹ್ನ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವಿನ ಹಿನ್ನೆಲೆಯಲ್ಲಿ ಅವರು ಇಂದು ರಾಜೀನಾಮೆ ನೀಡಲು ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರಕರಣ ಹೈಕಮಾಂಡ್ ತನಕ ಹೋಗಿಲ್ಲ. ಇಂತಹ ನೂರು ಕೇಸ್‌ಗಳನ್ನು ನೋಡಿದ್ದೇನೆ. ಯಾವುದೇ ಕಾರಣಕ್ಕೆ ರಾಜೀನಾಮೆ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವಿನ ಹಿನ್ನೆಲೆಯಲ್ಲಿ ಬಿಜೆಪಿಯ ಹೈಕಮಾಂಡ್ ರಾಜೀನಾಮೆ ನೀಡುವಂತೆ ಈಶ್ವರಪ್ಪ ಅವರಿಗೆ ಹೇಳಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿತ್ತು. ಇಂದು ಬೆಳಿಗ್ಗೆಯೆ ಅವರು ತಮ್ಮ ಕಾರ್ಯಕ್ಷೇತ್ರವಾದ ಶಿವಮೊಗ್ಗಕ್ಕೆ ತೆರಳಿದ್ದರು. ಹೀಗಾಗಿ ಅವರ ಪತ್ರಿಕಾಗೋಷ್ಠಿ ಭಾರಿ ಮಹತ್ವವನ್ನು ಪಡೆದಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಸಂತೋಷ್ ಪಾಟೀಲ್ ಮುಖ ಕೂಡಾ ನೋಡಿಲ್ಲ. ಅಂತದ್ದರಲ್ಲಿ ಅವರು ನನ್ನನ್ನು 80 ಬಾರಿ ಭೇಟಿ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅವರು ಡೆತ್ ನೋಟ್ ಬರೆದಿಲ್ಲ, ವಾಟ್ಸಪ್‌ನಲ್ಲಿ ಟೈಪ್ ಮಾಡಿದ್ದಾರೆ, ಅದು ಡೆತ್ ನೋಟ್ ಅಲ್ಲ. ಅವರು ಅವರಿಗೆ ದೆಹಲಿಗೆ ಫ್ಲೈಟ್ ಟಿಕೆಟ್ ಕೊಟ್ಟಿದ್ದು ಯಾರು. ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ತನಿಖೆ ಆಗಬೇಕು” ಎಂದು ಹೇಳಿದ್ದಾರೆ.
“ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಸಿಎಂ ದೂರು ನೀಡುತ್ತೇನೆ. ಮುಖ್ಯಮಂತ್ರಿಯನ್ನು ಭೇಟಿಯಾಗಿ ಎಲ್ಲಾ ಮಾಹಿತಿಯನ್ನು ನೀಡಲಿದ್ದೇನೆ. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಅವರಿಗೆ ಈಗಾಗಲೆ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ಈ ವಿಚಾರ ಹೈಕಮಾಂಡ್ ತನಕ ಹೋಗಿಲ್ಲ. ಘಟನೆಯ ಬಗ್ಗೆ ತನಿಖೆಯಾದರೆ ಅಸಲಿ ಸತ್ಯ ಹೊರಬರುತ್ತದೆ” ಎಂದು ಈಶ್ವರಪ್ಪ ತಿಳಿಸಿದ್ದಾರೆ.
“ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಯಾವುದೆ ದಾಖಲೆಯಿಲ್ಲದೆ ಆರೋಪ ಮಾಡುತ್ತಿದ್ದಾರೆ. ಇಲ್ಲಿ ರಾಜೀನಾಮೆ ಪ್ರಶ್ನೆ ಉದ್ಭವ ಆಗುವುದಿಲ್ಲ. ಇಂತಹ ನೂರು ಕೇಸ್‌ಗಳನ್ನು ನೋಡಿದ್ದೇನೆ. ಯಾವುದೇ ಕಾರಣಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: 40% ಕಮಿಷನ್: ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಯಾರೆಂದೇ ಗೊತ್ತಿಲ್ಲ- ಈಶ್ವರಪ್ಪ
ಈ ಹಿಂದೆಯೂ ಗುತ್ತಿಗೆದಾರರು ಪತ್ರ ಬರೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ಪತ್ರ ಬರೆದವರು ಯಾವ ಇಲಾಖೆಯ, ಯಾವ ಸಚಿವರು ಎಷ್ಟು ತೆಗೆದುಕೊಂಡಿದ್ದಾರೆ ಎಂಬ ದಾಖಲೆಯನ್ನು ಕೊಡಲಿ” ಎಂದು ಸವಾಲು ಹಾಕಿದರು. ಹಿಂಡಲಗ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಾಮಗಾರಿ ನಡೆದಿರುವ ಕುರಿತು ಪತ್ರ ಬರೆದಿರುವ ಕುರಿತು ಪ್ರಶ್ನೆಗೆ ಉತ್ತರಿಸಿ ಅವರು, “ಅಂತೆ, ಕಂತೆಗಳಿಗೆ ಆಧಾರವಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಧಾನ ಮಂತ್ರಿಯಲ್ಲ” ಎಂದಿದ್ದಾರೆ.
ಈ ಮಧ್ಯೆ ಅವರ ವಿರುದ್ಧ ವಿರುದ್ದ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸಂತೋಷ್ ಅವರ ಸಹೋದರ ಪ್ರಶಾಂತ್ ಪಾಟೀಲ್ ನೀಡಿದ ದೂರಿನ ಪ್ರಕಾರ ಪೊಲೀಸರು ಈಶ್ವರಪ್ಪ ಸೇರಿದಂತೆ ಅವರ ಆಪ್ತರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಗಾಗಿ ಎಫ್‌ಐಆರ್ ದಾಖಲಿಸಿದ್ದಾರೆ.
ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ಅವರು ಸಚಿವ ಕೆ.ಎಸ್. ಈಶ್ವರಪ್ಪ ಅವರು 40% ಕಮೀಷನ್‌ಗೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಧಾನಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಇದು ರಾಜ್ಯದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದರ ನಂತರ ಮಂಗಳವಾರದಂದು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಅವರು ಶವವಾಗಿ ಪತ್ತೆಯಾಗಿದ್ದರು.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಸಂತೋಷ್ ಸಾವು: ಎಫ್‌ಐಆರ್ ದಾಖಲು; ಸಚಿವ ಈಶ್ವರಪ್ಪ ಆರೋಪಿ ನಂ. 1
ಸಾವಿಗೂ ಮುಂಚೆ ಮಾಧ್ಯಮಗಳಿಗೆ ಕಳುಹಿಸಿದ ಡೆತ್ ನೋಟ್‌ನಲ್ಲಿ ಅವರು, ‘‘ತನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ” ಎಂದು ನೇರವಾಗಿ ಆರೋಪಿಸಿದ್ದಾರೆ.
ಉಡುಪಿ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ಒಂದನೇ ಆರೋಪಿಯಾಗಿ ಸಚಿವ ಕೆ.ಎಸ್. ಈಶ್ವರಪ್ಪ, ಎರಡನೇ ಆರೋಪಿಯಾಗಿ ಅವರ ಆಪ್ತ ಬಸವರಾಜ ಮತ್ತು ಮೂರನೇ ಆರೋಪಿಯಾಗಿ ಅವರ ಮತ್ತೊಬ್ಬ ಆಪ್ತ ರಮೇಶ್ ಸೇರಿದಂತೆ ಇತರರನ್ನು ಹೆಸರಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ತಾವು ಕೈಗೊಂಡಿರುವ 4 ಕೋಟಿ ರೂ.ಗಳ ಕಾಮಗಾರಿಯಲ್ಲಿ 40% ದಷ್ಟು ಕಮಿಷನ್ ನೀಡುವಂತೆ ಸಚಿವರ ಸಂಗಡಿಗರು ಒತ್ತಾಯಿಸಿದ್ದಾರೆ ಎಂದು ಪ್ರಶಾಂತ್ ಪಾಟೀಲ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಸಚಿವ ಈಶ್ವರಪ್ಪ ಅವರು, ಸಂತೋಷ್ ಯಾರೆಂದು ತನಗೆ ಗೊತ್ತಿಲ್ಲ ಎಂದು ನಿನ್ನೆಯೆ ಹೇಳಿದ್ದಾರೆ. ಜೊತೆಗೆ ಅವರ ಸಾವಿನ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಕೋರಿದ್ದ ಪ್ರತಿಪಕ್ಷ ಕಾಂಗ್ರೆಸ್‌ನ ಬೇಡಿಕೆಯನ್ನು ಅವರು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ:ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ಅಂತ್ಯಕ್ರಿಯೆ ನಡೆಸಲ್ಲ: ಮೃತ ಸಂತೋಷ್ ಸಹೋದರ ಪ್ರತಿಜ್ಞೆ
ಸಂತೋಷ್ ಪಾಟಿಲ್ ಅವರು ಬರೆದಿದ್ದಾರೆ ಎಂದು ಎನ್ನಲಾಗಿರುವ ಪತ್ರದಲ್ಲಿ, “ನನ್ನ ಸಾವಿಗೆ ನೇರ ಕಾರಣ ಸಚಿವ ಕೆ.ಎಸ್. ಈಶ್ವರಪ್ಪ. ಅವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ” ಎಂದು ಬರೆಯಲಾಗಿದೆ.
“ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಹಾಗೆ ಅವರಿವರಿಂದನೆ ಎಲ್ಲರು ಸಹಾಯ ಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು” ಎಂದು ಬರೆದಿದ್ದಾರೆ.
ಪತ್ರದಲ್ಲಿ ಅವರು “ನನ್ನ ಜೊತೆ ಬಂದ ನನ್ನ ಗೆಳಯರಾದ ಸಂತೋಷ ಮತ್ತು ಪ್ರಶಾಂತ್‌ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕಳೆದುಕೊಂಡ ಬಂದಿರುತ್ತೆನೆ ಅಷ್ಟೆ. ಅವರಿಗೆ ನನ್ನ ಸಾವಿನ ಬಗ್ಗೆ ಯಾವುದೆ ಸಂಬಂಧ ಇರುವುದಿಲ್ಲ” ಎಂದು ಪತ್ರವನ್ನು ಕೊನೆಗೊಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಇವರದೊಂದು ಜನ್ಮನಾ, ನಾಯಿ ಜನ್ಮ: ಈಶ್ವರಪ್ಪ ವಿರುದ್ಧ ಸಂತೋಷ್ ಪತ್ನಿ ಆಕ್ರೋಶ



Haagidre Ishvarappa nooru kole maadiddarendu naanu thilkolbeka….?. Vivara needi swami