‘ಇದೇ ಫೆಬ್ರವರಿ 25ರಂದು ನಡೆಯಬೇಕಾಗಿದ್ದ ಗಾಯ್ ಪರೀಕ್ಷಾ (ಗೋ-ಪರೀಕ್ಷೆ) ರದ್ದು ಮಾಡಿದ್ದಕ್ಕೆ ಪರೀಕ್ಷೆಗೆ ನೋಂದಾಯಿಸಿದ್ದ ಐದುವರೆ ಲಕ್ಷ ಜನರಲ್ಲದೇ ಅವರ ಕುಟುಂಬಗಳ ಸದಸ್ಯರು ನೊಂದಿದ್ದಾರೆ ಎಂದು COW-ACTION ಪೋರ್ಟಲ್ ವರದಿ ಮಾಡಿದೆ.
‘ನೋಡಿ, ನಾನು ಹಸುವನ್ನು ಹತ್ತಿರದಿಂದ ಎಂದೂ ನೋಡಿಲ್ಲ. ಆದರೆ, ಕಾಮಧೇನು ಆಯೋಗ್ ಹಸುವಿನ ಪ್ರಾಮುಖ್ಯತೆ ಕುರಿತು ಪ್ರಕಟಿಸಿದ್ದ ಸಿಲಬಸ್ ನೋಡಿದ ನಂತರ ಈ ಪರೀಕ್ಷೆಗೆ ಹಾಜರಾಗಲೇಬೇಕು ಅನಿಸಿತು’ ಎಂದು ಧಾರವಾಡದ ವಂದನಾ ಹೇಳಿದ್ದಾರೆ.
‘ಹಸುವಿನ ಸೆಗಣಿಯಲ್ಲಿ ವಿಕಿರಣ ಶಕ್ತಿ ಇರುವ ಬಗ್ಗೆ ನಮ್ಮ ಕಣ್ಣು ತೆರೆಸಿದ ಕಾಮಧೇನು ಆಯೋಗಕ್ಕೆ ನಾವು ಋಣಿಯಾಗಿದ್ದೇವೆ. ಈ ಸಲ ನನ್ನ ಮಗ ಗೋವಿಂದನ ಜೊತೆಗೆ ನಾನೂ ಪರೀಕ್ಷೆಗೆ ನೊಂದಾಯಿಸಿದ್ದೆ. ಆದರೆ ದೇಶದ್ರೋಹಿಗಳ ಅಪಪ್ರಚಾರದಿಂದ ಈ ಐತಿಹಾಸಿಕ ಪರೀಕ್ಷೆ ರದ್ದಾಗಿದ್ದನ್ನು ನಾನು ಖಂಡಿಸುತ್ತೇನೆ’ ಎಂದು ದಾವಣಗೆರೆಯ ಗೃಹಿಣಿ ಬಿಂದಕ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಏನೇನು ಪ್ರಶ್ನೆ ಬರಬಹುದು ಎಂದೆಲ್ಲ ಗೆಸ್ ಮಾಡಿದ್ದ ನಾವು ಅದಕ್ಕಾಗಿ ತಯ್ಯಾರಿ ನಡೆಸಿದ್ದೆವು. ನಮ್ಮ ಯುನಿವರ್ಸಿಟಿಯ ಖಾಲಿ ಜಾಗಗಳಲ್ಲಿ ಮಲಗುವ ಹಸುಗಳ ಬಳಿ ಹೋಗಿ ಸ್ಟಡಿ ಮಾಡಿದ್ದೆವು. ಮೊದಲೆಲ್ಲ ಸೆಗಣಿ ಹಸಿರು ಬಣ್ಣದ್ದು ಎಂದು ತಿಳಿದಿದ್ದೆವು. ಪರೀಕ್ಷೆ ಮಾಡಿದಾಗ, ಸೆಗಣಿ ಕಂದು ಮಿಶ್ರಿತ ಹಸಿರು, ಹಸಿರು ಮಿಶ್ರಿತ ಕಪ್ಪು… ಹೀಗೆ ಡಿಫರಂಟ್ ಕಲರ್ ಹೊಂದಿರುವುದನ್ನು ಗಮನಿಸಿದೆವು’ ಎಂದು ಬೆಂಗಳೂರು ವಿವಿಯ ಮನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಪ್ರಗ್ಯಾ ಹೇಳಿದ್ದಾರೆ.
‘ಪಂಚಗವ್ಯ-ಅಂದರೆ ಹಸುವಿನ ಸೆಗಣಿ, ಮೂತ್ರ ಇವೆಲ್ಲ ಆರೋಗ್ಯವರ್ಧಕ ಎನ್ನಲಾಗಿದೆ. ನಿಮ್ಮ ಸ್ವಂತ ಅಭಿಪ್ರಾಯವೇನು?’ ಎಂದು ಹಲವರನ್ನು COW-ACTION ಪ್ರಶ್ನಿಸಿದೆ.
‘ಖಂಡಿತ, ಆರೋಗ್ಯವರ್ಧಕಗಳು.. ನಾನು ಟೆಸ್ಟ್ ಮಾಡಲು 15 ದಿನದಿಂದ ದಿನಕ್ಕೆ ಮೂರು ಹೊತ್ತು 10 ಎಂಎಲ್ ಗೋಮೂತ್ರ ಸೇವಿಸುತ್ತಿದ್ದೇನೆ… ಫುಲ್ ರಿಲ್ಯಾಕ್ಸ್ ಆಗಿದ್ದೇನೆ’ ಎಂದು ಸುಳ್ಯದ ರಾಮಚಂದ್ರಭಟ್ಟರು ತಿಳಿಸಿದ್ದಾರೆ.
‘ಸೂರ್ಯನ ಕಿರಣಗಳನ್ನು ಡುಬ್ಬದಲ್ಲಿ ಹಿಡಿದು ಇಟ್ಟುಕೊಂಡು ಚಿನ್ನವನ್ನೇ ಉತ್ಪಾದಿಸುವ ಹಸುವಿನ ಪಂಚಗವ್ಯ ಅದ್ಭುತ… ಹಸುವಿನ ಮೂತ್ರ ನೋಡಿದ್ದೀರಾ? ಅದು ಹಳದಿ ಬಣ್ಣ ಇರಲು ಕಾರಣ, ಅದರಲ್ಲಿ ಚಿನ್ನದ ಅಂಶವಿರುತ್ತದೆ’ ಎಂದು ಮೈಸೂರಿನ ಬಿಎಸ್‌ಸಿ ವಿದ್ಯಾರ್ಥಿ ಅಕುಲ್ ಅಭಿಪ್ರಾಯಪಟ್ಟಿದ್ದಾರೆ,
‘ಜ್ವರಪೀಡಿಯ ಮನುಷ್ಯನ ಮೂತ್ರವೂ ಹಳದಿ ಇರುತ್ತಲ್ಲ’ ಎಂದು ಕೊಂಕು ನುಡಿಯುವವರ ಬಗ್ಗೆ ಕಿಡಿ ಕಾರಿರುವ ಬೀದರ್‌ನ ಗಂಗಾ, ‘ಛೇ, ಮಾನವ ಮೂತ್ರವನ್ನು ನಮ್ಮ ಗೋಮಾತೆಯ ಮೂತ್ರಕ್ಕೆ ಹೋಲಿಸಿತ್ತಾರಲ್ಲ? ದೆಹಲಿ ಆಗಿದ್ದರೆ ದೇಶದ್ರೋಹ ಕೇಸ್ ಜಡಿದು ಒಳಗೆ ಹಾಕುತ್ತಿದ್ದರು’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಈಗ ಕಾಮಧೇನು ಆಯೋಗ್‌ನ ಅಧ್ಯಕ್ಷ ವಲ್ಲಭ್‌ಭಾಯ್ ಕಥಿರಿಯಾ ಯಾರ ಫೋನನ್ನು ರಿಸೀವ್ ಮಾಡುತ್ತಿಲ್ಲ. ‘ಗಾಯ್‌ವಾಲಾ ಗಾಯಬ್’ ಎಂಬ ಟೀಕೆಗೆ ಸ್ಪಷ್ಟೀಕರಣ ನೀಡಿರುವ COW-ACTION ಪೋರ್ಟಲ್, ಕಥಿರಿಯಾ ಅವಧಿ ಫೆ. 20ಕ್ಕೆ ಮುಗಿದಿದೆ. ಗಾಯ್ ಪರೀಕ್ಷಾ ರದ್ದಾಗಿದ್ದಕ್ಕೆ ನೊಂದಿರುವ ಅವರು, ಹಿಮಾಲಯದ ತಪ್ಪಲಿನಲ್ಲಿ ಐದಾರು ಗೋಮಾತೆಯರೊಂದಿಗೆ ಗೋ-ತಪಸ್ ನಡೆಸುತ್ತಿದ್ದಾರೆ ಎಂದು ಹೇಳಿದೆ.
‘ಎರಡು ವರ್ಷದಲ್ಲಿ 750 ಕೋಟಿ ಬಜೆಟ್ ಅನ್ನು ಕಾಮಧೇನು ಆಯೋಗ್ ಏನು ಮಾಡಿತು?’ ಎಂದು ಹಿರಿಯ ನಾಗರಿಕರೊಬ್ಬರು ಕೇಳಿದ ಪ್ರಶ್ನೆಗೆ COW-ACTION ಉತ್ತರಿಸಿದ್ದು, ‘ನೋಡಿ ತಾತ, ಗೋಮಾತೆಯ ಬಗ್ಗೆ ಎಷ್ಟೊಂದು ಪ್ರಚಾರ ಮಾಡಲಾಗಿದೆ…. ಎಷ್ಟೊಂದು ಜಾಹಿರಾತು ನೀಡಲಾಗಿದೆ… ಎಷ್ಟೋ ಗೋರಕ್ಷಕರಿಗೆ ನಗದು ಬಹುಮಾನ ನೀಡಲಾಗಿದೆ’ ಎಂದು ವಿವರಿಸಿದೆ.
ಆಯೋಗ್‌ನ ಕಚೇರಿಯಿಂದ ನಾವು ಎಗರಿಸಿದ ಡಾಕ್ಯುಮೆಂಟ್ ಒಂದರ ಪ್ರಕಾರ, ಗೋ-ಪರೀಕ್ಷೆಗೆ ಸಿದ್ಧವಾಗಿದ್ದ ಪ್ರಶ್ನೆಗಳ ಸ್ಯಾಂಪಲ್ ಹೀಗಿವೆ:
1. ಮಗುವೊಂದು ಹೇಳುವ ವಾಕ್ಯವಿದು. ಇದರಲ್ಲಿ ಯಾವುದು ಸರಿ?
ಎ. ‘ಯವ್ವಾ ಆಕಳ ಸೆಗಣಿ ಹಾಕೈತಿ ನೋಡ್ಬೆ’
ಬಿ. ’ಅಮ್ಮಾ, ಹಸು ಸೆಗಣಿ ಹಾಕಿದೆ’
ಸಿ. ‘ಅಮ್ಮ, ಗೋಮಾತೆ ಪಂಚಗವ್ಯದ ಘನ ಪದಾರ್ಥವನ್ನು ಧರೆಗೆ ಇಳಿಸಿದ್ದಾಳೆ. ವಿಕಿರಣ ಹೊರಹೊಮ್ಮುತ್ತಿದೆ ಅಮ್ಮ’
ಡಿ. ‘ಬೇ ಯವ್ವಾ ಆಕ್ಳ ಹೇತೈತಿ ನೋಡು’
ಪರೀಕ್ಷೆ ರದ್ದಾಗಿದ್ದರೂ ಮುಂದೆ ನಡೆಯಲಿದೆಯಂತೆ. ಈಗಲೇ ತಯ್ಯಾರಿ ಶುರು ಮಾಡಿ ಭಕ್ತರೇ.
- ಪಿ.ಕೆ. ಮಲ್ಲನಗೌಡರ್
ಇದನ್ನೂ ಓದಿ: ಮದ್ದೂರು ಪೌರಕಾರ್ಮಿಕ ಆತ್ಮಹತ್ಯೆ ಪ್ರಕರಣ: ಇಬ್ಬರು ಪುರಸಭೆ ಅಧಿಕಾರಿಗಳ ಅಮಾನತು


