ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರವನ್ನು ಟೀಕಿಸಿದ ನಿವೃತ್ತ ಶಿಕ್ಷಕನಿಗೆ ಸೌದಿ ಅರೇಬಿಯಾದ ನ್ಯಾಯಾಲಯ 30 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.
ಮುಹಮ್ಮದ್ ಅಲ್-ಘಮ್ಡಿ ಶಿಕ್ಷೆಗೊಳಗಾದ ವ್ಯಕ್ತಿ. ಇವರನ್ನು 2022ರ ಜೂನ್‍ನಲ್ಲಿ ಬಂಧಿಸಲಾಗಿತ್ತು. ಸೌದಿ ನಾಯಕತ್ವದ ವಿರುದ್ಧ ಪಿತೂರಿ, ಸರ್ಕಾರಿ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಮತ್ತು ಭಯೋತ್ಪಾದಕ ಸಿದ್ಧಾಂತಕ್ಕೆ ಬೆಂಬಲ ಇತ್ಯಾದಿ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಘಮ್ಡಿ ಅವರಿಗೆ 2023ರ ಜುಲೈಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಶಿಕ್ಷೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. 2023ರ ಸೆಪ್ಟೆಂಬರ್‌ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ್ದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್, ನ್ಯಾಯಾಲಯ ಶಿಕ್ಷೆಯನ್ನು ಬದಲಾಯಿಸುವ ನಿರೀಕ್ಷೆಯಿದೆ ಎಂದಿದ್ದರು.
ಬಳಿಕ ಆರೋಪಿ ಮರಣದಂಡನೆ ಶಿಕ್ಷೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಕಳೆದ ಆಗಸ್ಟ್‌ನಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿ 30 ವರ್ಷದ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಆರೋಪಿಯ ಸಹೋದರನನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಇದೇ ಪ್ರಕರಣದಲ್ಲಿ ಮುಹಮ್ಮದ್ ಘಮ್ದಿಯ ಸಹೋದರ, 47 ವರ್ಷದ ಅಸಾದ್ ಅಲ್-ಘಮ್ಡಿಗೆ ಕೂಡ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರ ಶಿಕ್ಷೆಯನ್ನು ಮರುಪರಿಶೀಲಿಸಲಾಗುತ್ತದೆಯೇ? ಎಂಬುದರ ಕುರಿತು ಮಾಹಿತಿ ಇಲ್ಲ ಎಂದು ದಿ ಡೈಲಿ ಗಾರ್ಡಿಯನ್ ವರದಿ ಮಾಡಿದೆ.
ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ದೇಶವನ್ನು ಪ್ರವಾಸೋದ್ಯಮ ಮತ್ತು ವ್ಯಾಪಾರದ ಜಾಗತಿಕ ಕೇಂದ್ರವಾಗಿ ಪರಿವರ್ತಿಸುವ ಗುರಿಯೊಂದಿಗೆ ವಿಷನ್-2030 ಸುಧಾರಣಾ ಉಪಕ್ರಮವನ್ನು ಕೈಗೊಂಡಿದ್ದಾರೆ. ಆದರೆ, ದೇಶದಲ್ಲಿ ಮಾನವ ಹಕ್ಕುಗಳು ಈಗಲೂ ಚರ್ಚಾ ವಿಷಯವಾಗಿ ಉಳಿದಿದೆ. ವಿಶೇಷವಾಗಿ ವಾಕ್ ಸ್ವಾತಂತ್ರ್ಯದ ವಿಚಾರದಲ್ಲಿ ಸೌದಿ ಸರ್ಕಾರ ಜಾಗತಿಕ ಮಟ್ಟದಲ್ಲಿ ಟೀಕೆಗೆ ಒಳಗಾಗುತ್ತಲೇ ಇದೆ.
ಇದನ್ನೂ ಓದಿ : ತಮಟೆ ಬಡಿಯಲು ನಿರಾಕರಿಸಿದ ದಲಿತ ಕುಟುಂಬಕ್ಕೆ ಬಹಿಷ್ಕಾರ; 19 ಮಂದಿ ಬಂಧನ


