| ನಾನುಗೌರಿ ಡೆಸ್ಕ್ |
ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ಯೋಜನೆಗೆ ಮಲೆನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಜೂನ್ 22 ರಂದು ಸಾಗರದಲ್ಲಿ ಸಭೆ ಸೇರಿದ್ದ ನೂರಾರು ಜನರು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಅಸ್ತಿತ್ವಕ್ಕೆ ತಂದಿದ್ದು ಒಕ್ಕೂಟದ ವತಿಯಿಂದ ಈ ಯೋಜನೆ ವಿರೋಧಿಸಿ ಜುಲೈ 10 ರಂದು ಶಿವಮೊಗ್ಗ ಬಂದ್ ಗೆ ಕರೆ ನೀಡಲಾಗಿದೆ.
ಸಾಗರ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಭಾಗದಲ್ಲಿ ಶರಾವತಿ ನದಿ ಇದ್ದರೂ ಸಮಗ್ರ ನೀರಾವರಿ ಯೋಜನೆ ಇಲ್ಲ. ಮುಳುಗಡೆಯಾಗುವ ಸಾಗರ, ಹೊಸನಗರಕ್ಕೆ ನೀರಾವರಿಗಾಗಿ ನೀರು ಕೊಡಬೇಕು. ಜೋಗದ ಪಕ್ಕದ ತಾಲ್ಲೂಕು ಸೊರಬ, ಶಿಕಾರಿಪುರ ಬರದಿಂದ ನರಳುತ್ತಿವೆ. ಸಾಗರ ತಾಲ್ಲೂಕಿನ 133 ಹಳ್ಳಿಗಳಗೆ ಟ್ಯಾಂಕರ್ ಮೂಲಕ ನೀರು ಕೊಡುವ ಪರಿಸ್ಥಿತಿ ಬಂದಿದೆ. ಸಾಗರದ ಅರ್ಧ ಭಾಗದಲ್ಲಿ ನೀರಿನ ಅಭಾವವಿದೆ. ಮೊದಲು ನಮಗೆ ನೀರು ಕೊಟ್ಟು ನಂತರ ಯೋಜನೆಯನ್ನು ಜಾರಿಗೊಳಿಸಲಿ. ಡಿಪಿಆರ್ ಪ್ರಸ್ತಾಪ ಕೈಬಿಟ್ಟು ಇಲ್ಲಿನ ಕುಡಿಯುವ ನೀರಿನ ಕೊರತೆಯ ಡಿಪಿಆರ್ ಮಾಡಬೇಕು. ಇಲ್ಲಿನ ನೀರು ಮೊದಲು ಶಿವಮೊಗ್ಗ ಜಿಲ್ಲೆಯ ಕೃಷಿ ಉದ್ದೇಶಕ್ಕೆ ಬಳಕೆಯಾಗಬೇಕು. ಸಮುದ್ರಕ್ಕೆ ಹೋಗುವ ನೀರನ್ನು ನಮಗೆ ನೀಡಿ ಎಂಬುದು ಸ್ಥಳೀಯರ ಹಕ್ಕೊತ್ತಾಯವಾಗಿದೆ.

ವಿದ್ಯುತ್ ಉತ್ಪಾದನೆಗೆ ಇರುವ ಈ ನದಿಯಿಂದ ನಾವು ಪ್ರಯೋಜನ ಪಡೆದಿಲ್ಲ. ಬರೀ ತ್ಯಾಗ ಮಾಡಿದ್ದೀವಿ. ನೀವು ಕುಡಿಯುವ ನೀರಿಗಾಗಿ ಬಳಸಿದರೆ ನಮಗೆ ಮೊದಲು ಆದ್ಯತೆ ನೀಡಿ. 3ಲಕ್ಷ ಎಕರೆ ಭೂಮಿ ನೀರಾವರಿ ಸೌಲಭ್ಯವಿಲ್ಲದೇ ಒಂದೂ ಬೆಳೆ ಬೆಳೆಯಲಾಗದೆ ಉಳಿದಿದೆ. ಹೀಗಿರುವಾಗ ನಮ್ಮನ್ನು ಕಡೆಗಣಿಸುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.
ಯೋಜನೆ ಕೈಬಿಡಲು ಸರ್ಕಾರಕ್ಕೆ ಹದಿನೈದು ದಿನಗಳ ಗಡುವು ನೀಡಿದ್ದು ಸರ್ಕಾರ ಹಿಂದೆ ಸರಿಯದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಜಿಲ್ಲೆಯ ಪ್ರತಿಯೊಂದು ಸಂಘ ಸಂಸ್ಥೆಗಳು ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಬೇಕೇಂದು ಮನವಿ ಮಾಡಿದ್ದಾರೆ.

ಸಭೆಯಲ್ಲಿ ಎಚ್.ಬಿ ರಾಘವೇಂದ್ರ, ನಾ.ಡಿಸೋಜಾ, ಹೆಗ್ಗೋಡು ಪ್ರಸನ್ನ, ಶಂಕರ್ ಶರ್ಮಾ, ಹರ್ಷ ಕುಮಾರ್ ಕುಗ್ವೆ, ಮೇಘರಾಜ್, ಪರಮೇಶ್ವರ್, ಶ್ರೀಂಕಂಠ ಕೂಡಿಗೆ, ಅಶೋಕ್ ಮುಂತಾದವರು ಭಾಗವಹಿಸಿದ್ದರು.
ಇನ್ನೊಂದು ಕಡೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ ಕೂಡ ಯೋಜನೆ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ವಿರೋಧ ವ್ಯಕ್ತವಾಗಿದೆ. #SaveSharavathiRiver ಎಂಬ ಹ್ಯಾಷ್ ಟ್ಯಾಗ್ ಬಳಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.


