ದೇವನಹಳ್ಳಿ, ಬೆಂಗಳೂರು: ವಿಶ್ವ ವ್ಯಾಪಾರ ಒಪ್ಪಂದಗಳ ಪರಿಣಾಮವಾಗಿ ಕಾರ್ಪೊರೇಟ್ ಯೋಜನೆಗಳು ರೈತರು ಮತ್ತು ಜನಚಳವಳಿಗಳ ಹಕ್ಕುಗಳನ್ನು ಹತ್ತಿಕ್ಕಲು ಯತ್ನಿಸುತ್ತಿವೆ ಎಂದು ಬಡಗಲಪುರ ನಾಗೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಾಡ ಉಳಿಸಿ ಸಮಾವೇಶ’ದಲ್ಲಿ ಇಂದು (ಜುಲೈ 4) ಮಾತನಾಡಿದ ಅವರು, ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟವನ್ನು ರಾಜ್ಯದ ಇತಿಹಾಸದಲ್ಲಿ ‘ಐತಿಹಾಸಿಕ ದಾಖಲೆ’ ಎಂದು ಬಣ್ಣಿಸಿ, ಸರ್ಕಾರವು ಬ್ರಿಟಿಷರ ಪದ್ಧತಿಗಳನ್ನೇ ಮುಂದುವರೆಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
“ನಾವು ‘ನೇಗಿಲ ಯೋಗಿ’ಯ ಹಾಡನ್ನು ಕೇಳಿದ್ದೇವೆ. ಆ ಸಂದರ್ಭದಲ್ಲಿ ನಾಡಿನ ಜನಚಳವಳಿಗಳಲ್ಲಿ ಹಸಿರು, ನೀಲಿ, ಕೆಂಪು ಬಾವುಟುಗಳು ಒಂದಾಗಿದ್ದವು. ಈಗಲೂ ಅದೇ ಐಕ್ಯತೆ ಇದೆ” ಎಂದು ನಾಗೇಂದ್ರ ಸ್ಮರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೊರೇಟ್ ನೀತಿಗಳನ್ನು ಅನುಸರಿಸಿ ರೈತರ ಭೂಮಿಗೆ ಕೈ ಹಾಕುತ್ತಿವೆ ಎಂದು ಅವರು ಆರೋಪಿಸಿದರು.

ಐತಿಹಾಸಿಕ ದೇವನಹಳ್ಳಿ ಹೋರಾಟ – 1184 ದಿನಗಳ ಕೆಚ್ಚೆದೆಯ ಸತ್ಯಾಗ್ರಹ: ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಚಳವಳಿ 384 ದಿನಗಳ ಕಾಲ ನಡೆದಿತ್ತು. ಆದರೆ, ದೇವನಹಳ್ಳಿ ಹೋರಾಟ ಈಗಾಗಲೇ 1184 ದಿನಗಳನ್ನು ದಾಟಿದೆ. ಇದು ಸರಕಾರದ ವಿರುದ್ಧ ನಡೆದ ದಿಟ್ಟ ಹೋರಾಟವಾಗಿದೆ ಎಂದು ನಾಗೇಂದ್ರ ಒತ್ತಿ ಹೇಳಿದರು. “ಸಂಯುಕ್ತ ಹೋರಾಟವು ಈ ಚಳವಳಿಗೆ ಬೆನ್ನೆಲುಬಾಗಿ ನಿಂತು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಹೋರಾಟವನ್ನಾಗಿಸಿದೆ. ರೈತರ ಮತ್ತು ಭೂಮಿಯ ವಿಷಯದಲ್ಲಿ ರಾಜ್ಯದ ಎಲ್ಲ ವರ್ಗಗಳೂ ಒಂದಾಗಿರುವುದು ವಿಶಿಷ್ಟವಾಗಿದೆ” ಎಂದರು.
ಈ ಹೋರಾಟವು ನಾಡಿನ ಜಲ ಮತ್ತು ಸಂಪತ್ತನ್ನು ಉಳಿಸುವಲ್ಲಿ ರೂಪುಗೊಂಡ ಅಪರೂಪದ ಚಳವಳಿಯಾಗಿದೆ. ಇದು ಭವಿಷ್ಯದಲ್ಲಿ ಅನಿಷ್ಟ ದುಷ್ಟಕೂಟಗಳನ್ನು ನಾಶಮಾಡಲು ನಾಂದಿಯಾಗುತ್ತದೆ ಎಂದು ಬಡಗಲಪುರ ನಾಗೇಂದ್ರ ಭವಿಷ್ಯ ನುಡಿದರು.
ಬಿಜೆಪಿ-ಕಾಂಗ್ರೆಸ್ ಕಾರ್ಪೊರೇಟ್‌ಗಳ ‘ಒಂದೇ ನಾಣ್ಯದ ಎರಡು ಮುಖಗಳು’: “ಒಂದು ಕಡೆ ಮೋದಿ ಸರಕಾರ, ಮತ್ತೊಂದು ಕಡೆ ಸಿದ್ದರಾಮಯ್ಯ ಸರಕಾರ. ಎರಡು ಬೇರೆ ಬೇರೆ ಪಕ್ಷಗಳು, ಆದರೆ ಅವುಗಳ ನೀತಿಗಳು ಒಂದೇ. ಇವೆರಡೂ ಕಾರ್ಪೊರೇಟ್ ನೀತಿಗಳನ್ನು ಮುಂದುವರೆಸುತ್ತಿವೆ. ಆ ನಿಟ್ಟಿನಲ್ಲಿ ಭೂಮಿಗೆ ಕೈ ಹಾಕಕ್ಕೆ ಬಂದಿವೆ” ಎಂದು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇವನಹಳ್ಳಿ ಹೋರಾಟವು ಸರ್ಕಾರಗಳಿಗೆ ‘ಬಿಸಿ ಮುಟ್ಟಿಸಿದೆ’. “ಈಗ 10 ದಿನಗಳು ಸಮಯ ತೆಗೆದುಕೊಂಡು ಬ್ರಿಟಿಷರ ಪದ್ಧತಿಯನ್ನು ಮುಂದುವರೆಸಲು ಹೊರಟಿದೆ” ಎಂದು ಅವರು ತೀವ್ರವಾಗಿ ಖಂಡಿಸಿದರು.

ರೈತರು, ದಲಿತರು, ಕಾರ್ಮಿಕರ ಸ್ಪಷ್ಟ ಎಚ್ಚರಿಕೆ: “ಇದು ಬಸವಣ್ಣ, ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ, ಕಿತ್ತೂರು ರಾಣಿ ಚೆನ್ನಮ್ಮನ ನಾಡು. ಇಲ್ಲಿ ಸಾಧು-ಸಂತರು, ಸೂಫಿಗಳು ತಿರುಗಾಡಿದ ನೆಲ. ರೈತರು ಈಗ ಕೃಷಿ ಸಂಸ್ಕೃತಿಯನ್ನು ಉಳಿಸಲು ಹೊರಟಿದ್ದಾರೆ. ದಲಿತರು, ರೈತರು, ಕಾರ್ಮಿಕರು, ಕಲಾವಿದರು, ಸಾಹಿತಿಗಳು ನಾವೆಲ್ಲರೂ ಸರಕಾರಕ್ಕೆ ಸ್ಪಷ್ಟ ಸಂದೇಶ ಕೊಡುತ್ತಿದ್ದೇವೆ” ಎಂದು ನಾಗೇಂದ್ರ ಗುಡುಗಿದರು.
“ಸರಕಾರಕ್ಕೆ ಹೇಳುವುದು ಒಂದೇ, ನಾವು ಕೈಗಾರಿಕೆಗಳಿಗೆ ಭೂಮಿಯನ್ನು ಕೊಡುವುದಿಲ್ಲ. ಬಲವಂತದಿಂದ ಕಿತ್ತುಕೊಳ್ಳಲು ಪ್ರಯತ್ನ ಮಾಡಲು ಮುಂದಾದರೆ, ಒಂದಿಂಚು ಕೂಡ ಕೊಡುವುದಿಲ್ಲ. ಸಿದ್ದರಾಮಯ್ಯ ನಮ್ಮ ಭೂಮಿ ನಮಗೆ ನೀಡುವ ಭರವಸೆ ಇದೆ” ಎಂದು ಅವರು ಹೇಳಿದರು.

ಸಿಎಂ ಸಿದ್ದರಾಮಯ್ಯಗೆ ನೇರ ಸವಾಲು: ‘ಭೂಮಿ ತಂಟೆಗೆ ಬಂದರೆ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಿಲ್ಲ!’ “ನಂಜುಂಡಸ್ವಾಮಿ ಅವರ ಶಿಷ್ಯರಾಗಿರುವುದರಿಂದ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇದೆ. ಆ ನಂಬಿಕೆಯನ್ನು ಉಳಿಸಿಕೊಳ್ಳಿ. ಎಂ.ಬಿ. ಪಾಟೀಲ್ ಮುಖ್ಯಮಂತ್ರಿ ಆಗಬೇಕೆನ್ನುವ ವಿಶ್ವಾಸದಲ್ಲಿ ನೀವು ಇದ್ದೀರಿ. ಆದರೆ, ಇದೀಗ ಭೂಮಿಯನ್ನು ಕೈ ಬಿಡದಿದ್ದರೆ, ಮುಂದೆ ನೀವು ವಿಧಾನ ಸೌಧಕ್ಕೆ ಆಯ್ಕೆ ಆಗುವುದಕ್ಕೂ ಸಾಧ್ಯವಿಲ್ಲ. ಭೂಮಿ ತಂಟೆಗೆ ಬಂದರೆ, ನೀವು ರಸ್ತೆಯಲ್ಲಿ ಸುಲಭವಾಗಿ ತಿರುಗಾಡುವುದಕ್ಕೆ ಸಾಧ್ಯವಿಲ್ಲ” ಎಂದು ನಾಗೇಂದ್ರ ನೇರವಾಗಿ ಸವಾಲು ಹಾಕಿದರು.
“ನಮ್ಮ ಭೂಮಿ ನಮಗೆ ಸಿಗುವ ತನಕ ಹೋರಾಟ ನಿಲ್ಲಿಸುವುದಿಲ್ಲ, ನಾವು ಇಲ್ಲಿಂದ ಹೊರಡುವುದಿಲ್ಲ” ಎಂದು ದೃಢವಾಗಿ ಹೇಳಿದರು.
ವೇದಿಕೆಯಲ್ಲಿ ಮಾರೇಗೌಡ, ಗೋಪಿನಾಥ್, ರಮೇಶ್ ಚೀಮಾಚನಹಳ್ಳಿ, ಅಶ್ವಥ್ಥಪ್ಪ, ಪ್ರಭಾ ಬೆಳವಂಗಲ, ರಘು, ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿನಿಧಿಗಳಾದ ಬಡಗಲಪುರ ನಾಗೇಂದ್ರ, ಎಸ್ ವರಲಕ್ಷ್ಮೀ, ನೂರ್ ಶ್ರೀಧರ್, ಎಚ್.ಆರ್.ಬಸವರಾಜಪ್ಪ, ಎಸ್ ಮೀನಾಕ್ಷಿ ಸುಂದರಂ, ಡಾ.ಸಿದ್ದನಗೌಡ ಪಾಟೀಲ್, ಗುರುಪ್ರಸಾದ್ ಕೆರಗೋಡು, ಯು ಬಸವರಾಜ, ಚುಕ್ಕಿ ನಂಜುಂಡಸ್ವಾಮಿ, ವಿ ನಾಗರಾಜ್, ಪಿ ಪಿ ಅಪ್ಪಣ್ಣ, ಡಿ.ಎಚ್.ಪೂಜಾರ್, ಕೆ.ವಿ.ಭಟ್, ಮಾವಳ್ಳಿ ಶಂಕರ್, ರಾಷ್ಟ್ರೀಯ ನಾಯಕಾರ ದರ್ಶನ್ ಪಾಲ್, ಯುದ್‌ವೀರ್ ಸಿಂಗ್, ರಾಕೇಶ್ ಟಿಕಾಯತ್, ಡಾ.ಸುನೀಲಮ್, ವಿಜು ಕೃಷ್ಣನ್, ಪಿ,ಟಿ.ಜಾನ್, ನಟ ಪ್ರಕಾಶ್ ರಾಜ್, ಪತ್ರಕರ್ತ ಇಂದೂಧರ ಹೊನ್ನಾಪುರ, ಚಿಂತಕ ಎಸ್.ಆರ್.ಹಿರೇಮಠ್ ಉಪಸ್ಥಿತರಿದ್ದರು.


